ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜಾತಿ ಮತ ಧರ್ಮ

Lingaraj Badiger
Updated On : 13 Apr 2014, 3:54 am

ನಮ್ಮ ಸಂವಿಧಾನ ಹೇಳುತ್ತದೆ ನಾವು ಜಾತ್ಯತೀತ ರಾಷ್ಟ್ರ ಎಂದು. ಆದರೆ ಸಂವಿಧಾನ ರಚನೆಯಾದ ಅರವತ್ನಾಲ್ಕು ವರ್ಷಗಳ ನಂತರವೂ ಜಾತಿಯನ್ನು ಮೀರಲು ನಮ್ಮ ದೇಶಕ್ಕೆ ಸಾಧ್ಯವಾಗಿಲ್ಲ. ಯಾಕಂದ್ರೆ ಇದು ನೂರಾರು ವರ್ಷಗಳಿಂದ ಅಂಟಿಕೊಂಡು ಬಂದಿರುವ ಮುಕ್ತಿಯೇ ಇಲ್ಲದ ಶಾಪ. ಜನನ ಪ್ರಮಾಣ ಪತ್ರದಿಂದ ಶುರುವಾಗಿ ಮರಣ ಪ್ರಮಾಣ ಪತ್ರದ ತನಕ ಎಲ್ಲೆಡೆ ಜಾತಿ ಪ್ರಸ್ತಾಪ ಆಗಲೇಬೇಕು. ಗಾಂಧೀಜಿಯವರು  ದಲಿತರನ್ನು ಹರಿಜನ ಎಂದು ಕರೆಯೋ ಮೂಲಕ  ಅವರನ್ನು ಎಲ್ಲರೂ  ದೈವಸಮಾನರನ್ನಾಗಿ ನೋಡಲೆಂದು ಆಶಿಸಿದ್ದೇನೋ ಹೌದು.

ಆದರೆ ಹರಿಜನ ಎಂಬುದು ದಲಿತ ಅನ್ನೋದಕ್ಕೆ ಪರ್ಯಾಯ ಪದವಾಗಿ ಹೋಯ್ತೆ ವಿನಹ ಅವರನ್ನು ಸಮಾನತೆಯಿಂದ ನೋಡುವ ದಿನ ಬರಲೇ ಇಲ್ಲ. ದಲಿತರು ಅಲ್ಪಸಂಖ್ಯಾತರು ಹಿಂದುಳಿದವರು ಎಂದು ವಿಭಜಿಸಿ ಅವರಿಗೆ ಹೆಚ್ಚಿನ ಸೌಲಭ್ಯ ನೀಡಿ ಅವರನ್ನು ಮೇಲ್ವರ್ಗ ಎಂದು ಕರೆಸಿಕೊಳ್ಳುವವರ ಸಮಾನಕ್ಕೆ ತರುವ ಉದ್ದೇಶ ಹಳ್ಳ ಹಿಡಿದು ಅವರಿಬ್ಬರ ನಡುವೆ ಇನ್ನಷ್ಟು ಕಂದರ ಏರ್ಪಟ್ಟಿತು. ಈಗ ಈ ಜಾತ್ಯಾತೀತ ದೇಶದ ಭವಿಷ್ಯ ನಿರ್ಧರಿಸುವುದೇ ಜಾತಿ ಎಂಬಂತಾಗಿ ಹೋಗಿದೆ.

ಚುನಾವಣೆಯ ಫಲಿತಾಂಶ  ಹಣ ಹೆಂಡ ಈ ಎಲ್ಲವುಗಳಿಗಿಂತ ಹೆಚ್ಚಾಗಿ ಅವಲಂಬಿತವಾಗಿರುವುದು ಜಾತಿ ಹಾಗೂ ಧರ್ಮದ ಮೇಲೆಯೇ. ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಯ ಘೋಷಣೆಯೂ ಜಾತಿ ಮತ್ತು ಧರ್ಮದ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ. ಮತದಾನ ಕೂಡ ಆ ಆಧಾರದ ಮೇಲೆ ನಡೆಯುತ್ತದೆ.
ಪ್ರತಿ ಪ್ರಜೆಯೂ ಈತ ನಮ್ಮ ಜಾತಿಯವ, ನಮ್ಮ ಕೋಮಿನವ, ನಮ್ಮ ಧರ್ಮದವ ಎಂಬ ವ್ಯಾಮೋಹದಿಂದಲೇ ಮತ ಒತ್ತುತ್ತಾನೆ. ಕಳೆದೆಲ್ಲಾ ಚುನಾವಣೆಗಿಂತ ಈ ಬಾರಿ ಜಾತಿ ರಾಜಕಾರಣ ತಾರಕಕ್ಕೇರಿದೆ. ಇದನ್ನು ಅರಿಯಲು ಅಂಕಿ ಅಂಶಗಳೇ ಅಗತ್ಯವೇ ಇಲ್ಲ. ನಿಮ್ಮ ನಿಮ್ಮ ಕ್ಷೇತ್ರದ ಅಭ್ಯರ್ಥಿಗಳನ್ನು ಗಮನಿಸಿದರೆ, ಹಾಗೂ ನಿಮ್ಮ ಮನೆ ಸುತ್ತಲಿನ ಮತದಾರರ ಅಭಿಪ್ರಾಯಗಳನ್ನು ಒಟ್ಟುಗೂಡಿಸಿದರೆ ಈ ಬಗ್ಗೆ ಚಿತ್ರಣ ಸಿಗುತ್ತದೆ. ಆದರೂ ದೇಶಾದ್ಯಂತ ವ್ಯಾಪಿಸಿರುವ ಈ ಜಾತಿ ಆಧಾರಿತ ಚುನಾವಣಾ ರಾಜಕಾರಣದ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಉತ್ತರ ಪ್ರದೇಶ
ಉತ್ತರಪ್ರದೇಶದಲ್ಲಿ ಜಾತಿ ಒಂದೇ ಗಣನೆಗೆ ಬರುವುದಿಲ್ಲ. ಇಲ್ಲಿ ರಾಜಕಾರಣಕ್ಕೆ  ಧರ್ಮಕಾರಣ ಎಂಬುದು ರಾಮಮಂದಿರ ವಿವಾದದ ನಂತರ ಒದಗಿರುವ ಸ್ಥಿತಿ. ಮುಸ್ಲಿಂ ಮತಗಳು ಇಲ್ಲಿ ನಿರ್ಣಾಯಕವಾಗುವುದರಿಂದ, ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್‌ನ ಅಲ್ಪಸಂಖ್ಯಾತರನ್ನು ಸೆಳೆಯುವ ತಂತ್ರಗಳು ಕ್ಲಿಕ್ಕಾಗುವ ಸಾಧ್ಯತೆ ಹೆಚ್ಚು.

ಒಟ್ಟು ಸ್ಥಾನಗಳು  80
ಒಟ್ಟು ಜನಸಂಖ್ಯೆ 19.95 ಕೋಟಿ
ಒಟ್ಟು ಮತದಾರರು 14.43 ಕೋಟಿ

ಜಾತಿ ಲೆಕ್ಕಾಚಾರ
ಹಿಂದುಳಿದ ವರ್ಗ ಶೇ.39.7
ಪರಿಶಿಷ್ಟ ಜಾತಿ  ಶೇ.21.1
ಜನರಲ್ ಶೇ.19.2
ಮುಸ್ಲಿಂ  ಶೇ. 18.5
ಇತರೆ ಶೇ. 1.5

ಬಿಹಾರ
ಬಿಹಾರದ ರಾಜಕಾರಣ ಅವಲಂಬಿಸಿರೋದೇ ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು. ಅದೇ ಕಾರಣಕ್ಕೆ ಬಿಹಾರ ಯಾವತ್ತಿಗೂ ಬಿಜೆಪಿಯ ಕೈವಶ ಆಗಲೇ ಇಲ್ಲ. ಹಾಗಂತ ಬಿಜೆಪಿ ಹಿಂದುಳಿದವರ ಅಥವಾ ಪರಿಶಿಷ್ಟರ ವಿರೋಧಿಯಾ? ಬಿಜೆಪಿ ವಿರೋಧಿಗಳನ್ನು ಕೇಳಿದರೆ ಹೂಂ ಅನ್ನಬಹುದು.  
ಒಟ್ಟು ಸ್ಥಾನಗಳು  40
ಒಟ್ಟು ಜನಸಂಖ್ಯೆ 10.50 ಕೋಟಿ
ಒಟ್ಟು ಮತದಾರರು  6.11 ಕೋಟಿ

ಜಾತಿ ಲೆಕ್ಕಾಚಾರ
ತೀವ್ರ ಹಿಂದುಳಿದ ವರ್ಗ ಶೇ. 27.0
ಹಿಂದುಳಿದ ವರ್ಗ  ಶೇ.22.5
ಪರಿಶಿಷ್ಟ ಜಾತಿ ಶೇ.22.5
ಮಹಾ ದಲಿತರು ಶೇ.17.0
ಮುಸ್ಲಿಂ-ಇತರೆ ಶೇ.20.5
ಜನರಲ್ ಶೇ.13

ತಮಿಳುನಾಡು
ಹಿಂದುಳಿದ ವರ್ಗಗಳ ಮತದಾರರ ಭದ್ರಕೋಟೆ. ಇಲ್ಲಿ ಗ್ಲಾಮರ್ ರಾಜಕಾರಣಕ್ಕೆ ಬೆಲೆ ಇದ್ದದ್ದು,  ಡಿಎಂಕೆ, ಎಐಎಡಿಎಂಕೆ ಪಕ್ಷಗಳ ನಡುವೆ ಅಧಿಕಾರ ಮ್ಯೂಸಿಕಲ್  ಛೇರ್ ಆಡುತ್ತಿರೋದು ಹೌದಾದರೂ, ಈ ಪಕ್ಷಗಳು ನೆಚ್ಚಿಕೊಂಡಿರೋದು ಹಿಂದುಳಿದ ವರ್ಗವನ್ನೇ. ಅಲ್ಲದೆ ಕಾಂಗ್ರೆಸ್ ಬೆಂಬಲಿಸುವ ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳೂ ಸೇರಿಕೊಳ್ಳುವುದು ಬೋನಸ್ ಪಾಯಿಂಟ್.

ಒಟ್ಟು ಸ್ಥಾನಗಳು  39
ಒಟ್ಟು ಜನಸಂಖ್ಯೆ 7.21 ಕೋಟಿ
ಒಟ್ಟು ಮತದಾರರು 5.30 ಕೋಟಿ

ಜಾತಿ ಲೆಕ್ಕಾಚಾರ
ಹಿಂದುಳಿದ ವರ್ಗ ಶೇ.53
ಪರಿಶಿಷ್ಟ ಜಾತಿ  ಶೇ.20
ಜನರಲ್ ಶೇ. 6
ಮುಸ್ಲಿಂ ಶೇ.9
ಕ್ರೈಸ್ತರು ಶೇ.12

ಮಧ್ಯ ಪ್ರದೇಶ
ಮಧ್ಯ ಪ್ರದೇಶದಲ್ಲಿ ಜಾತಿವಾರು ಸಂಖ್ಯೆಯಲ್ಲಿ ತೀವ್ರ ಏರುಪೇರು ಕಾಣದಿದ್ದರೂ ಇಲ್ಲಿಯೂ ಹಿಂದುಳಿದ ವರ್ಗದ ಮತಗಳೇ ಡಿಸೈಡಿಂಗ್ ಫ್ಯಾಕ್ಟರ್.
ಒಟ್ಟು ಸ್ಥಾನಗಳು  29
ಒಟ್ಟು ಜನಸಂಖ್ಯೆ 7.25 ಕೋಟಿ
ಒಟ್ಟು ಮತದಾರರು 4.75 ಕೋಟಿ
ಜಾತಿ ಲೆಕ್ಕಾಚಾರ
ಹಿಂದುಳಿದ ವರ್ಗ ಶೇ.35
ಪರಿಶಿಷ್ಟ ಪಂಗಡ    ಶೇ.21
ಜನರಲ್ ಶೇ.20
ಪರಿಶಿಷ್ಟ ಜಾತಿ ಶೇ.15
ಮುಸ್ಲಿಂ ಶೇ.9

ಕರ್ನಾಟಕ
ಕರ್ನಾಟಕದ ಪರಿಸ್ಥಿತಿ ಕೂಡ ಭಿನ್ನವಾಗೇನೂ ಇಲ್ಲ. ಆದರೆ ಮೇಲ್ವರ್ಗ ಎಂದು ವಿಂಗಡಿತವಾಗಿರೋ ಮತದಾರರಲ್ಲಿ ಕೂಡ ಬ್ರಾಹ್ಮಣ ಲಿಂಗಾಯತ ಎಂದು ಮತ ಹಂಚಿ ಹೋಗುವುದು, ಒಕ್ಕಲಿಗರ ಹಾಗೂ ಅಹಿಂದದ ಮತಗಳೇ ಹೆಚ್ಚು ನಿರ್ಣಾಯಕ ಪಾತ್ರ ವಹಿಸುವುದಕ್ಕೆ ಸಹಕಾರಿಯಾಗಿದೆ.   
ಒಟ್ಟು ಸ್ಥಾನಗಳು  28
ಒಟ್ಟು ಜನಸಂಖ್ಯೆ 5.80 ಕೋಟಿ
ಒಟ್ಟು ಮತದಾರರು 4.40 ಕೋಟಿ
ಜಾತಿ ಲೆಕ್ಕಾಚಾರ
ಹಿಂದುಳಿದ ವರ್ಗ ಶೇ.39.8
ಪ.ಜಾ./ಪಂ. ಶೇ. 29.6
ಮುಸ್ಲಿಂ ಶೇ. 18.5
ಜನರಲ್ ಶೇ. 12.1

ಗುಜರಾತ್
ಗುಜರಾತ್‌ನಲ್ಲಿ ಮೋದಿ ಅಲೆಯ ನಡುವೆಯೂ ಅಲ್ಪಸಂಖ್ಯಾತರ ಅಲ್ಪಸಂಖ್ಯೆಯ ನಡುವೆಯೂ ಮುಸ್ಲಿಂ ಮತಗಳು ನಿರ್ಣಾಯಕ ಎನಿಸಲಿವೆ. ಅದೇ ಕಾರಣಕ್ಕೆ ಕೇವಲ ಶೇ.9ರಷ್ಟು ಮತಗಳಿರುವ ಮುಸ್ಲಿಮರನ್ನು ಓಲೈಸಲು ಸರ್ವ ಪಕ್ಷಗಳು ಪೈಪೋಟಿ ನಡೆಸಲಿವೆ.

ಒಟ್ಟು ಸ್ಥಾನಗಳು  26
ಒಟ್ಟು ಸ್ಥಾನಗಳು  6.10 ಕೋಟಿ
ಒಟ್ಟು ಮತದಾರರು  3.90 ಕೋಟಿ
ಜಾತಿ ಲೆಕ್ಕಾಚಾರ
ಹಿಂದುಳಿದ ವರ್ಗ ಶೇ.39.7
ಪ.ಜಾ./ಪಂ. ಶೇ.29.4
ಜನರಲ್ ಶೇ.21.8
ಮುಸ್ಲಿಂ ಶೇ.9.1

-ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments