ಪೊಲಿಟಿಕಲ್ ಟಾಕೀಸ್
ಶಿವಮೊಗ್ಗ ಲೋಸಕಭಾ ಕ್ಷೇತ್ರದಲ್ಲಿ ಸಿನಿ ತಾರೆಗಳ ಪ್ರಚಾರದ ಅಬ್ಬರ ಜೋರಾಗಿದೆ. ತೆರೆ ಮೇಲಿನ ತಾರೆಗಳನ್ನು ಎಂದೂ ನೋಡದ ಅಲ್ಲಿನ ಗಾಂಧಿಪಾರ್ಕ್ ಕೂಡ ಪುನೀತಗೊಂಡಿದೆ. ಪ್ರಚಾರದ ಭರಾಟೆಯಲ್ಲಿ ಟಾಕ್ವಾರ್ ಕೂಡ ಮಲೆನಾಡಿನ ಬಿಸಿಲ ಧಗೆ ಜೊತೆ ಸ್ಪರ್ಧೆಯೊಡ್ಡುತ್ತಿದೆ. ಕೆಲವರಿಗೆ ಇದು 'ಲೂಸ್' ಟಾಕ್ ಅಂತಲೂ ಅನಿಸಿರಬೇಕು. ಆದರೆ, ಬಣ್ಣದ ಲೋಕದ ಮಂದಿ ತೆರೆ ಮೇಲೂ ಅದ್ಭುತವಾಗಿ ರಾಜಕೀಯ ನೇತಾರರಾಗಬಲ್ಲ ಶಕ್ತಿ ಇದೆ. ನಿಜ ರಾಜಕಾರಣಿಗಳಲ್ಲೂ ಇಲ್ಲದ ಕುತಂತ್ರ, ಚಾಣಾಕ್ಷ, ಒಳ ಮರ್ಮಗಳು, ಪರಸ್ಪರ ಕೆಸರು ಎರೆಚುವ ಕಾಯಕವನ್ನು ಕಣ್ಣಿಗೆ ಕಟ್ಟಿದಂತೆ ಮಾಡಬಲ್ಲ ನಟನಾ ಕೌಶಲ್ಯ ಇವರಲ್ಲಿ ಅಡಗಿದೆ.
ರಾತ್ರೋರಾತ್ರಿ ತಮ್ಮ ಬಂಗಲೆಯಲ್ಲಿ ಕೂತು ಕರಾಮತ್ತು ಮಾಡುತ್ತಾರೆ; ನಡು ರಸ್ತೆಯಲ್ಲಿ ಅಮಾಯಕ ಕುಟುಂಬವನ್ನು ಅಮಾನುಷವಾಗಿ ಹಿಂಸಿಸಿ ಕೊಲ್ಲುತ್ತಾರೆ; ಪೊಲೀಸ್ ವ್ಯವಸ್ಥೆ ಇವರ ಪರ. ತಮ್ಮ ದೌರ್ಜನ್ಯಕ್ಕೆ ಅಡ್ಡಬಂದವರನ್ನು ಅಡ್ಡಡ್ಡ ಮಗಿಸಬಲ್ಲ ಕ್ರೂರಿಗಳಾಗಿರುವ ಸಂದರ್ಭದಲ್ಲೇ ಅಧಿಕಾರದ ಕುರ್ಚಿಯಲ್ಲಿ ಕೂತು ಗಹಗಹಿಸಿ ನಗುತ್ತಾರೆ. ರಾಜಕೀಯ ನೇತಾರರಾಗುತ್ತಾರೆ. ಇದ್ದಕ್ಕಿದಂತೆ ಮಂತ್ರಿಯೋ, ಮುಖ್ಯಮಂತ್ರಿಯೋ ಆಗಿಬಿಡುವ ಸಾಮರ್ಥ್ಯ ಇವರಿಗೆ. ಇವರು ಕ್ರಿಮಿನಲ್ಗಳಾಗಿದ್ದರೂ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ಇವರನ್ನು ಕ್ರಿಮಿನಲ್ಗಳ ಪಟ್ಟಿಗೆ ಸೇರಿಸುವುದಿಲ್ಲ. ಏಕೆಂದರೆ, ಇದು ರಿಯಲ್ ಅಲ್ಲ, ರೀಲ್ ರಾಜಕಾರಣ! ಹೀಗಾಗಿ ತೆರೆ ಮೇಲಿನ ಖಾದಿ ತಾರೆಗಳ ದರ್ಬಾರೇ ಹಾಗಿರುತ್ತದೆ. ಚಂದನವನದ ಅಂಥ ಖಾದಿ ನಟನರನ್ನು ನೆಪಿಸಿಕೊಂಡರೆ ಹತ್ತಾರು ಮುಖಗಳು ನೆನಪಾಗುತ್ತವೆ. ಆದರೆ, ಈ ಮುಖಗಳು ನಾಯಕರ ಹೊರತಾಗಿವೆ. ಅಂದರೆ ಪೋಷಕ ಕಲಾವಿದರೇ ಇಲ್ಲಿ ಹೆಚ್ಚು ರಾಜಕೀಯ ತಾರೆಗಳಾಗಿ ಮಿಂಚಿದ್ದಾರೆ.
ಅಂಕಲ್ ಲೋಕನಾಥ್, ದತ್ತಣ್ಣ, ರಂಗಾಯಣ ರಘು, ಸಿ.ಆರ್. ಸಿಂಹ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು
ಶೋಭರಾಜ್, ಅವಿನಾಶ್, ಜಿ.ಕೆ. ಗೋವಿಂದರಾವ್, ಶರತ್ ಲೋಹಿತಾಶ್ವ, ಪಲ್ಲಕ್ಕಿ ರಾಧಾಕೃಷ್ಣ, ಅನಂತನಾಗ್, ಬ್ಯಾಂಕ್ ಜನಾರ್ಧನ್- ಹೀಗೆ ಸಾಕಷ್ಟು ಹೆಸರುಗಳು ನೆನಪಾಗುತ್ತವೆ. ಅದರಲ್ಲೂ ಮುಖ್ಯಮಂತ್ರಿ ಚಂದ್ರು ಅವರನ್ನು ಬರೀ ಕಲಾವಿದ ಚಂದ್ರು ಎಂದರೆ ಯಾರಿಗೂ ನೆನಪಾಗೋದಿಲ್ಲ. ಅವರ ಹೆಸರಿನೊಂದಿಗೆ 'ಮುಖ್ಯಮಂತ್ರಿ' ಎನ್ನುವ 'ಐಡೆಂಟಿಟಿ' ಸೇರಿಕೊಂಡಿದ್ದರೇನೆ ನಮ್ಮ ಚಂದ್ರು ಅವರ ಪೂರ್ಣ ಪರಿಚಯವಾಗುವುದು. ನಿಜ ಜೀವನದಲ್ಲಿ ಎಂದೂ ಮುಖ್ಯಮಂತ್ರಿಯಾಗದಿದ್ದರೂ ಎಲ್ಲರಿಂದಲೂ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ದೇಶದ ಏಕೈಕ ವ್ಯಕ್ತಿ ಎಂದರೆ ಅದು ಮುಖ್ಯಮಂತ್ರಿ ಚಂದ್ರು ಅವರೇ ಇರಬೇಕು. ಅಷ್ಟರ ಮಟ್ಟಿಗೆ ಅವರು ತೆರೆ ಮೇಲೆ ಖಾದಿ ತಾರೆಯಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಂದಹಾಗೆ ಚಂದ್ರು ಅವರಿಗೆ ಕಾಯಂ ಆಗಿ 'ಮುಖ್ಯಮಂತ್ರಿ' ಬಿರುದು ಅಂಟಿಕೊಂಡಿದ್ದು ಅದೇ ಹೆಸರಿನ ನಾಟಕದಿಂದ. ಈ 'ಮುಖ್ಯಮಂತ್ರಿ' ನಾಯಕದ ಹೀರೋ ಚಂದ್ರು ಅವರೇ. ಹೀಗಾಗಿ ಅವರ ಹೆಸರಿಗೆ ಸಿಎಂ ಪಟ್ಟ ಅಲಂಕರಿಸಿಕೊಂಡಿದೆ.
ಇನ್ನು ದೊಡ್ಡಣ್ಣ ವಿಜಯ್ ಮಲ್ಯರ ಪಕ್ಷದಿಂದ ಚುನಾವಣೆ ಕಣಕ್ಕಿಳಿದರೂ ಗೆಲುವು ಸಿಗಲಿಲ್ಲ. ಆದರೆ, ತೆರೆ ಮೇಲೆ ಮಾತ್ರ ಸಾಕಷ್ಟು ಬಾರಿ ಮಂತ್ರಿ, ಮುಖ್ಯಮಂತ್ರಿ, ಶಾಸಕರಾಗಿದ್ದಾರೆ. ಅಷ್ಟರ ಮಟ್ಟಿಗೆ ದೊಡ್ಡ ಅದೃಷ್ಟವಂತರು. 'ದೇವನಹಳ್ಳಿ' ಚಿತ್ರದಲ್ಲಿ ಪಲ್ಲಕ್ಕಿ ರಾಧಾಕೃಷ್ಣ ಮಾಡಿದ ರಾಜಕಾರಣಿ ಪಾತ್ರವನ್ನು ನೋಡಿದಾಗ ಹತ್ತಾರು ನೈಜ ರಾಜಕಾರಣಿಗಳು ನೆನಪಾದರೂ ಅಚ್ಚರಿ ಇಲ್ಲ. ಅವಿನಾಶ್, ಶೋಭರಾಜ್, ಶರತ್ ಲೋಹಿತಾಶ್ವ ಈ ತಲೆಮಾರಿನ ಹೊಸ ಖಾದಿ ತಾರೆಗಳು. ಜಿ.ಕೆ. ಗೋವಿಂದರಾವ್ 'ಕಂಬಾಲಹಳ್ಳಿ' ಚಿತ್ರದಲ್ಲಿ ನಿರ್ವಹಿಸಿದ ಜಾತಿ ಭ್ರಷ್ಟ ರಾಜಕಾರಣಿ ಪಾತ್ರವನ್ನೂ ನಿಜ ರಾಜಕಾರಣಿಗಳನ್ನೂ ನಾಚಿಸುವಂತಿತ್ತು! ಬ್ಯಾಂಕ್ ಜನಾರ್ಧನ್ ಫಿಟ್ಟಿಂಗ್ ಇಡುವ ರಾಜಕಾರಣಿಯಾಗಿ ಬಲು ಫೇಮಸ್. ರಾಜಕೀಯ ಪಾತ್ರಗಳಲ್ಲಿ ಅನಂತನಾಗ್ ಹೆಚ್ಚು ಕಾಣಿಸಕೊಳ್ಳದಿದ್ದರೂ ತೆರೆ ಮೇಲೆ ಅನಂತ್ ರಾಜಕೀಯ ನೇತಾರರಾಗಲು ಬೇಕಾದ ಲಕ್ಷಣಗಳಿವೆ. ಇವರು ರಿಯಲ್ಲಾಗಿಯೂ ಮಂತ್ರಿಯಾಗಿದ್ದವರು.
ಒಟ್ಟಿನಲ್ಲಿ ತೆರೆ ಮೇಲಿನ ನಮ್ಮ ಖಾದಿ ನಟರ ರಾಜಕೀಯ ಅವತಾರವನ್ನು ಒಮ್ಮೆ ನೋಡಿದರೆ ನೈಜ ರಾಜಕಾರಣ ಕೆಲವೊಮ್ಮೆ ಏನೂ ಅಲ್ಲ ಅಂತನ್ನಿಸುತ್ತದೆ.
-ಆರ್. ಕೇಶವಮೂರ್ತಿ