ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಸುಬಾತ್

Lingaraj Badiger
Updated On : 15 Apr 2014, 4:58 am

ಚುನಾವಣೆ ಕಣದಲ್ಲಿ ಒಟ್ಟು ಹರಿಯುತ್ತಿರುವ ಹಣದ ಹೊಳೆಯಲ್ಲಿ ನಮ್ಮ ಲೆಕ್ಕಕ್ಕೆ ಸಿಗುತ್ತಿರುವುದು ಒಂದು ತಂಬಿಗೆಯಷ್ಟೇ! ಇಲ್ಲಿದೆ ರಿಯಲ್ ಲೆಕ್ಕಾಚಾರ.

ಕಳೆದೆಲ್ಲ ಬಾರಿಗಿಂತ ಈ ಬಾರಿ ಚುನಾವಣೆ ಹೆಚ್ಚು 'ಝಣಝಣ' ಸದ್ದು ಮಾಡುತ್ತಿದೆ. ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ, ರಾಹುಲ್ ಅಲೆ ಹುಡುಕಲು ಪ್ರಯಾಸಪಡುತ್ತಿರುವ ಕಾಂಗ್ರೆಸ್, ಮೊನ್ನೆ ತಾನೇ ಹುಟ್ಟಿಕೊಂಡು ಅತ್ಯಂತ ವೇಗದಲ್ಲಿ ಪೈಪೋಟಿ ನೀಡುತ್ತಿರುವ ಆಪ್... ಯಾರೇನೇ ಇದ್ದರೂ ಇಲ್ಲಿ ಹಣ ಹರಿಸಲೇಬೇಕು. ಚುನಾವಣಾ ಆಯೋಗ ಎಷ್ಟೇ ಕಟ್ಟೆಚ್ಚರ ವಹಿಸಿದರೂ ಕಪ್ಪುಹಣ ಕತ್ತಲಿನಲ್ಲಿ ಕಳೆದುಹೋಗುತ್ತದೆ.
ಒಂದು ಅಂದಾಜು ಅಂಕಿಅಂಶದ ಪ್ರಕಾರ ಈ ಚುನಾವಣೆಯಲ್ಲಿ 18000 ಕೋಟಿ ಖರ್ಚಾಗಬಹುದು. ಈ ಮೊತ್ತ ತೀರಾ ಕಡಿಮೆ ಅಂದಾಜೂ ಇರಬಹುದು. ಆದರೆ ಈ ಮೊತ್ತದ ಹಿಂದಿನ ಲೆಕ್ಕಾಚಾರ ಹೀಗಿದೆ. ಈ ವರ್ಷದ ಫೆ.17ರಂದು ಪಿ.ಚಿದಂಬರಂ ಅವರು ಮಂಡಿಸಿದ ಬಜೆಟ್‌ನಲ್ಲಿ ಚುನಾವಣೆ ಮತ್ತು ಚುನಾವಣಾ ಆಯೋಗದ ಖರ್ಚೆಂದು 594.63 ಕೋಟಿಗಳನ್ನು ತೋರಿಸಿದ್ದರು. ಈ ಮೊತ್ತದಲ್ಲಿ ಚುನಾವಣೆ ಘೋಷಣೆಯಾದಂದಿನಿಂದ ಮುಗಿಯುವ ತನಕ(ಮೇ.16) ದೇಶಾದ್ಯಂತ ನೇಮಕವಾಗುವ ಸಿಬ್ಬಂದಿ ವೆಚ್ಚ, ಭದ್ರತಾ ವ್ಯವಸ್ಥೆಗೆ ಕೈಗೊಳ್ಳುವ ವೆಚ್ಚಗಳು ಸೇರ್ಪಡೆಯಾಗಿಲ್ಲ. ಇದರೊಂದಿಗೆ ಸುಮ್ಮನೆ ಚುನಾವಣೆಯೊಂದನ್ನು ಭಾರತದ 2000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ನಡೆಸುವುದೆಂದರೆ ಕಡಿಮೆ ಎಂದರೂ 1000 ಕೋಟಿ ಖರ್ಚಾಗುವುದಿಲ್ಲವೇ?
ಆದರೆ ನಿಜವಾದ ದೊಡ್ಡ ಮೊತ್ತದ ಖರ್ಚುವೆಚ್ಚಗಳು ಇವಲ್ಲವೇ ಅಲ್ಲ. ಪ್ರತಿ ಪಕ್ಷ ಹಾಗೂ ಅದರ ಪ್ರತಿ ಅಭ್ಯರ್ಥಿ ಪ್ರಚಾರಕ್ಕಾಗಿ ಮಾಡುವ ಖರ್ಚಿನ ಮುಂದೆ ಇದೇನೂ ಅಲ್ಲ. ಕಳೆದ ವರ್ಷ ಬಿಜೆಪಿ ಎಂಪಿ ಗೋಪಿನಾಥ್ ಮುಂಡೆ ತಾವು ಪ್ರಚಾರಕ್ಕಾಗಿ 8 ಕೋಟಿ ಖರ್ಚು ಮಾಡಿರುವುದಾಗಿ, ಹಣ ನೀಡುವಂತೆ ಬಿಜೆಪಿಗೆ ಕೋರಿದ್ದರು! ಅದೇನೋ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿತ್ತು.
ಕೆಲವು ಅತಿ ಹೆಚ್ಚಿನ ಸ್ಪರ್ಧೆ ಏರ್ಪಟ್ಟ ಕ್ಷೇತ್ರಗಳಲ್ಲಿ ಈ ಮೊತ್ತ ಇನ್ನೂ ಹೆಚ್ಚಿರಬಹುದು. ಒಬ್ಬ ಅಭ್ಯರ್ಥಿಯ ಸರಾಸರಿ ಮೊತ್ತವೇ 5- 8 ಕೋಟಿ ಬೀಳುತ್ತದೆ. ಒಂದು ಕ್ಷೇತ್ರದಲ್ಲಿ ಮೂರೇ ಅಭ್ಯರ್ಥಿಗಳೆಂದರೂ ಅಭ್ಯರ್ಥಿಗಳ ಪ್ರಚಾರಕ್ಕೇ 8,145ರಿಂದ 13000 ಕೋಟಿಯಾಗುತ್ತದೆ. ಅಲ್ಲದೆ ಬಿಜೆಪಿ, ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳು ಕೇವಲ ಜಾಹಿರಾತಿಗಾಗಿ 400- 500 ಕೋಟಿ ಖರ್ಚು ಮಾಡುತ್ತಿವೆ. ಪಕ್ಷದ ಸಂಘಗಳು ಅಲ್ಲಲ್ಲಿ ಕಾರ್ಯಕ್ರಮ ಆಯೋಜಿಸಲು, ಹೋರ್ಡಿಂಗ್, ಬ್ಯಾನರ್, ಹೆಲಿಕಾಪ್ಟರ್‌ಗಳಲ್ಲಿ ಬರುವ ಪಕ್ಷದ ಮುಖಂಡರಿಂದ ಹಿಡಿದು ಅಭ್ಯರ್ಥಿಗಳ ಪ್ರಯಾಣ ವೆಚ್ಚ ಇತ್ಯಾದಿಗಳಿಗಾಗಿ ಮಾಡುವ ವೆಚ್ಚ 500- 1000 ಮುಟ್ಟುತ್ತದೆ. ಇನ್ನುಳಿದ ಚಿಕ್ಕಪುಟ್ಟ ಪಕ್ಷಗಳೆಲ್ಲದರ ಒಟ್ಟು ವೆಚ್ಚ ಕಾಂಗ್ರೆಸ್, ಬಿಜೆಪಿಯಂಥ ದೊಡ್ಡ ಪಕ್ಷಗಳ ಒಟ್ಟು ವೆಚ್ಚದಷ್ಟಾಗಬಲ್ಲದು. ಅಂದರೆ ಸುಮಾರು 2000- 4000 ಕೋಟಿ.
ಇದರಲ್ಲಿ ಅದೆಷ್ಟೋ ವೆಚ್ಚಗಳು ಬಿಟ್ಟು ಹೋಗಿರಬಹುದು. ಅವೆಲ್ಲವನ್ನು ಬಿಟ್ಟರೂ ಕನಿಷ್ಠ 15000ದಿಂದ 18000 ಕೋಟಿ ವೆಚ್ಚವಾಗುವುದರಲ್ಲಿ ಅನುಮಾನವಿಲ್ಲ. ನಮಗೆ ನಿಜವಾಗಿಯೂ ಅಭ್ಯರ್ಥಿಗಳು ಎಷ್ಟು ಖರ್ಚು ಮಾಡಿದರೆಂಬ ಬಗ್ಗೆ ದಾಖಲೆಗಳು ಸಿಗುವ ಚಾನ್ಸ್ ಇಲ್ಲದ್ದರಿಂದ ಇದನ್ನು ಒಂದು ಅಂದಾಜು ವೆಚ್ಚ ಎಂದು ಪರಿಗಣಿಸಬಹುದು. ಅಂದಾಜಿಗೆ ನಿಲುಕದೆ ಇನ್ನೂ ಅದೆಷ್ಟೋ ಕೋಟಿಗಳು ವಾಮಮಾರ್ಗ ಹಿಡಿದಿರಬಹುದು.
ಫೆ.28ರಂದು ಯುಪಿಎ ಮಂತ್ರಿಮಂಡಲವು ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚನಿಗದಿಯನ್ನು ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ. ಇದರಂತೆ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರದಂಥ ದೊಡ್ಡ ರಾಜ್ಯಗಳಲ್ಲಿ 40 ಲಕ್ಷವಿದ್ದ ವೆಚ್ಚ ನಿಗದಿಯನ್ನು 70 ಲಕ್ಷಕ್ಕೆ ಏರಿಸಲಾಗಿದೆ. ಗೋವಾದಂಥ ಚಿಕ್ಕ ರಾಜ್ಯಗಳಲ್ಲಿ 22 ಲಕ್ಷದಿಂದ 54 ಲಕ್ಷಕ್ಕೆ ಏರಿಸಲಾಗಿದೆ. ಆದರೆ ಈ ಏರಿಕೆಯಾದ ಹಣ ಕಪ್ಪು ಹಣ ಬಳಕೆಯನ್ನು ತಪ್ಪಿಸುವುದು ಮಾತ್ರ ಅಸಂಭವವೇ. ಏಕೆಂದರೆ ಮುಂಡೆ ಹೇಳಿದ ವೆಚ್ಚಕ್ಕೂ ಈ ಕಾನೂನು ನಿಗದಿತ ವೆಚ್ಚಕ್ಕೂ 10 ಪಟ್ಟು ವ್ಯತ್ಯಾಸವಿದೆ. ಈ ವೆಚ್ಚವನ್ನು ಸರಿತೂಗಿಸುವುದು ಕಪ್ಪುಹಣವಲ್ಲದೆ ಮತ್ತೇನು?

ಚುನಾವಣೆಯ ಅಂದಾಜುವೆಚ್ಚ 18000 ಕೋಟಿ
ಚುನಾವಣೆ ನಡೆಸಲು ಆಗುವ ವೆಚ್ಚ1000 ಕೋಟಿ -  ಶೇ.5.5
ಪ್ರಚಾರ ವೆಚ್ಚ 8000 ಕೋಟಿ- 12000 ಕೋಟಿ ಶೇ.44 -  ಶೇ.72
ಪ್ರತಿ ಅಭ್ಯರ್ಥಿಯ ಸರಾಸರಿ ವೆಚ್ಚ 5ಕೋಟಿ- 8 ಕೋಟಿಯಂತೆ
ಜಾಹಿರಾತು ವೆಚ್ಚ 2000ಕೋಟಿ- 4000 ಕೋಟಿ ಶೇ.10 - ಶೇ.20
ಇತರೆ  1000 ಕೋಟಿ  ಶೇ.5.5


-ರೇಶ್ಮಾರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments