ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತೋರು ಬೆರಳು

Lingaraj Badiger
Updated On : 15 Apr 2014, 5:00 am

ಮತದಾನ ಕೂಡ ಒಂದು ಫ್ಯಾಷನ್ ವಿಷಯವಾ? ರಾಜಕೀಯ ಪ್ಯಾಷನ್ ಆಗಬಹುದು, ಆದರೆ ಮತದಾನ ಫ್ಯಾಷನ್ ಆಗಲು ಸಾಧ್ಯವಾ? ಮೊನ್ನೆಮೊನ್ನೆ ತನಕ ಈ ಥರದ ಒಂದು ಪ್ರಶ್ನೆ  ಹುಟ್ಟೋದಕ್ಕೂ ಸಾಧ್ಯ ಇರಲಿಲ್ಲ. ಆದರೆ ಫೇಸ್‌ಬುಕ್ ಎಂಬ ಮಾಯೆ ಅದನ್ನು ಸಾಧ್ಯವಾಗಿಸಿದೆ.
ಜನ ಯಾಕೆ ವೋಟು ಹಾಕ್ತಾರೆ ಅಂತ ಒಂದು ಸರ್ವೇ ಮಾಡಿದ್ರೆ ಇಷ್ಟು ದಿನ ಹತ್ತಾರು ಜವಾಬ್ದಾರಿಯುತ ಉತ್ತರಗಳು ಬರುತ್ತಿದ್ದವು. ಇನ್ನು ಕೆಲವು ಉಗ್ರ ರಾಜಕೀಯ ಉತ್ತರಗಳೂ ಬರುತ್ತಿದ್ದವು. ಜೊತೆಯಲ್ಲೇ ಪರಮ ಸಿಲ್ಲಿ ಉತ್ತರಗಳೂ ಬರುತ್ತಿದ್ದವು. ಆದರೆ 'ಫೇಸ್‌ಬುಕ್ಕಲ್ಲಿ ಫೋಟೋ ಹಾಕಬೇಕು. ಅದಕ್ಕೋಸ್ಕರ ವೋಟು ಮಾಡ್ತಿದ್ದೇನೆ' ಎಂಬ ಒಂದು ಪ್ರತಿಕ್ರಿಯೆ ಕೇಳಿದರೆ ಏನನಿಸುತ್ತದೆ? ಇದು ಉತ್ಪ್ರೇಕ್ಷೆಯಲ್ಲ. ಸತ್ಯ!
ಈ ವರ್ಷ ಸುಮಾರು ಮೂರು ಕೋಟಿ ಯುವ ಮತದಾರರ ಸೇರ್ಪಡೆಯಾಗಿದೆ. ಆ ಯುವ ಮತದಾರರಲ್ಲಿ ಶೇಕಡಾ ಮೂವತ್ತಕ್ಕೂ ಹೆಚ್ಚಿನವರು ಸಾಮಾಜಿಕ ಜಾಲಗಳಲ್ಲಿ ಸಕ್ರಿಯರು. ಟ್ವಿಟ್ಟರ್, ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಹೀಗೆ ಹತ್ತು ಹಲವು ಅಡ್ಡೆಗಳಲ್ಲೇ ಇವರ ದಿನದ ಹೆಚ್ಚಿನ ಅವಧಿಯ ವಾಸ. ತಮ್ಮ ದಿನಚರಿಗಳನ್ನು, ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿ ಲೈಕು ಕಾಮೆಂಟುಗಳನ್ನು ಗಿಟ್ಟಿಸುವಲ್ಲಿ ಅದೇನೋ ಪರಮಾನಂದ ಅನುಭವಿಸುತ್ತಾರೆ. ಸಾಮಾಜಿಕ ತಾಣ ಎಂದು ಕರೆಸಿಕೊಳ್ಳುವ ಭ್ರಮಾಲೋಕವದು!
ಅದೇ ಕಾರಣಕ್ಕೆ ಇಂದಿನ ಯುವಜನತೆಗೆ ರಾಜಕೀಯದ ಆಸಕ್ತಿ ಧಿಡೀರ್ ಹೆಚ್ಚಾಗಿ ಹೋಗಿದೆ. ಇನ್ನೂ ವೋಟರ್ ಐಡಿ ಕಾರ್ಡ್‌ಗೋಸ್ಕರ ಕಾಯುತ್ತಿರೋ ಮೊದಲ ಸಲದವರೂ ಕೂಡ ರಾಜಕೀಯದಲ್ಲಿ ನುರಿತವರ ರೇಂಜಿಗೆ ಪೋಸ್ಟು-ಕಮೆಂಟು ಹಾಕಿ ತಮ್ಮ ಇರುವಿಕೆ ತೋರುತ್ತಿದ್ದಾರೆ. ಇಷ್ಟೇ ಸಾಕೆ? ವೋಟು ಮಾಡಿದೀವಿ ಅನ್ನೋ ಪ್ರೂಫ್ ತೋರಿಸೋದು ಬೇಡವೇ? ಹಾಗಾಗಿ ಶ್ರದ್ಧೆಯಿಂದ ಬೆಳ್ಳಂಬೆಳಿಗ್ಗೆ ಮತಗಟ್ಟೆಗೆ ಹೋಗಿ ಮತ ಹಾಕಿ ಕೈಬೆರಳಿಗೆ ಇಂಕು ಹಾಕಿಸಿಕೊಂಡು, ಇಂಕು ಆರುವ ಮೊದಲೇ ಮತಗಟ್ಟೆ ಎದುರು ನಿಂತು ತಮ್ಮ ಬೆರಳನ್ನು ಮುಖದ ಪಕ್ಕ ನಿಲ್ಲಿಸಿ ಪೋಸು ಕೊಡಿಸಿ ತಮ್ಮದೇ ಮೊಬೈಲಿನಿಂದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಫೋಟೋ ತಮ್ಮ ಮೊಬೈಲ್ ಕ್ಯಾಮರಾದಲ್ಲಿದ್ದರೆ ಸಾಕೇ? ಉಹೂಂ.. ತಕ್ಷಣ ಅದನ್ನು ಫೇಸ್‌ಬುಕ್ ಗೋಡೆಗೆ ಏರಿಸೇ ಬಿಡ್ತಾರೆ. ಅಲ್ಲಿಗೆ ಅವರಲ್ಲೊಂದು ಸಾರ್ಥಕ ಭಾವ!
ಬೇಕಿದ್ರೆ ಒಮ್ಮೆ ಫೇಸ್‌ಬುಕ್ ಹಣುಕಿ ನೋಡಿ. ಅದೆಷ್ಟು ಕಲೆಬೆರಳುಗಳ ಫೋಟೋ ಸಿಕ್ಕಿತೆಂದು ಲೆಕ್ಕಹಾಕಿರಿ.  ಈಗಾಗಲೇ ಹಲವು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ. ಕಳೆದ ಮೂರು ದಿನಗಳಲ್ಲಿ ಕನಿಷ್ಠ ಮೂವತ್ತು ಸಾವಿರ ಮತದಾರರು ಫೇಸ್‌ಬುಕ್ ಗೋಡೆಯ ಮೇಲೆ ತಮ್ಮ ಶಾಯಿಬೆರಳಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಫೇಸ್‌ಬುಕ್ ಸಮೀಕ್ಷೆಯೊಂದು ಹೇಳುತ್ತದೆ.
ತಮ್ಮ ಫೋಟೋ ತಾವೇ ಕ್ಲಿಕ್ಕಿಸಿಕೊಳ್ಳೋದಕ್ಕೆ ಇಂದಿನ ಇಂಗ್ಲಿಷಿಗರ ಭಾಷೆಯಲ್ಲಿ 'ಸೆಲ್ಫೀ' ಅನ್ನುತ್ತಾರೆ. ಈಗ ಆ ಪದ ಎಲೆಕ್ಷನ್ ಪ್ರಯುಕ್ತ ಇನ್ನಷ್ಟು ರೂಪಾಂತರವಾಗಿದೆ. ತಮ್ಮ ಹಾಗೂ ತಮ್ಮ ಮಸಿಬೆರಳಿನ ಫೋಟೋವನ್ನು ತಾವೇ ಕ್ಲಿಕ್ಕಿಸಿಕೊಳ್ಳೋದಕ್ಕೆ ವೋಲ್ಫೀ(ವೋಟರ್ಸ್ ಸೆಲ್ಫೀ), ಫಿಂಗೀ(ಫಿಂಗರ್ ಸೆಲ್ಫೀ), ಎಲೆಫೀ(ಎಲೆಕ್ಷನ್ ಸೆಲ್ಫೀ) ಎಂಬೆಲ್ಲಾ ಹೊಸ ಪದಗಳನ್ನು  ಸೃಷ್ಟಿಸಿ ಡಿಕ್ಷನರಿಗೆ ಸೇರಿಸಲು ನೆಟಿಜನ್‌ಗಳು ಸಜ್ಜಾಗಿದ್ದಾರೆ.
ಈ ಮೊದಲು ಹೀಗಿರಲಿಲ್ಲ. ಇಂಕು ಹಚ್ಚಿದ ಉಗುರು ಕಪ್ಪಾಗಿ ತಿಂಗಳುಗಟ್ಟಲೆ ಗಲೀಜಾಗಿ ಕಾಣುತ್ತದೆ ಅನ್ನೋ ಕಾರಣಕ್ಕೆ ಎಷ್ಟೋ ಹುಡುಗೀರು ಮತದಾನದಿಂದ ದೂರ ಉಳಿದದ್ದು ಇದೆ. ಮತದಾನ ಮಾಡಿ ಆಚೆ ಬಂದ ಮರುಕ್ಷಣವೇ ಕೋಟಾ ವೋಟಿಂಗ್ ಮಾಡೋ ಆಸೆಯಿಂದ ಹಚ್ಚಿರೋ ಮಸಿಯನ್ನು ಅಳಿಸುವ ಬಗೆ ಹುಡುಕಿದ ಕ್ರಿಮಿನಲ್ ಉದಾಹರಣೆಗಳೂ ಇವೆ. ಮತದಾನ ಮಾಡೋಕೆ ಹೋದವರನ್ನು, ಬೇರೆ ಕೆಲಸ ಇಲ್ವಾ ನಿಂಗೆ ಅಂತ ಗೇಲಿ ಮಾಡುತ್ತಿದ್ದ ನಿದರ್ಶನಗಳೂ ಇವೆ. ಆಗ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳು, ಆದರ್ಶ ವ್ಯಕ್ತಿಗಳು, ಹಿರಿಯರು 'ನಾವು ಮತದಾನ ಮಾಡಿದ್ದೇವೆ. ನೀವೂ ಮಾಡಿ' ಎಂಬ ಸಂದೇಶದೊಂದಿಗೆ ತಮ್ಮ ಮಸಿಬೆರಳನ್ನು ಫೋಟೋಗ್ರಾಫರನ ಕ್ಯಾಮೆರಾಗೆ ತೋರಿಸುತ್ತಿದ್ದರು. ಬಹುಶಃ ಆಗಲೇ ಯುವಜನತೆಗೆ ಇಂಕು ಅಂಟಿದ ಬೆರಳು ಇಷ್ಟು ಚೆಂದ ಕಾಣುತ್ತೆ ಎಂಬ ಅರಿವಾಗಿದ್ದೋ ಏನೋ!
ಎಷ್ಟೋ ಮಂದಿ ವೋಟು ಮಾಡಲಾಗದಿದ್ದರೂ ಮನೆಯಲ್ಲಿರೋ ಪೆನ್ನಿನ ಇಂಕು ಬೆರಳಿಗೆ ಬಳಿದುಕೊಂಡು ಫೋಟೋ ಕ್ಲಿಕ್ ಮಾಡಿಕೊಂಡು ಫೇಸ್‌ಬುಕ್ಕಲ್ಲಿ ಛಾಪಿಸಿಕೊಂಡಿದ್ದೂ ಆಯ್ತು. ಆದರೆ ಕೆಲವೊಮ್ಮೆ ತೋರಿಕೆಗಾಗಿ ಮಾಡುವ ಕೆಲಸಗಳೇ ನಿಜಕ್ಕೂ ಬದಲಾವಣೆಗಳನ್ನು ತರುತ್ತವೆ. ಹಾಗಾಗಿ ಸಾಮಾಜಿಕ ಜಾಲ ಪರೋಕ್ಷವಾಗಿ  ಒಟ್ಟು ಮತದಾನದ ಸಂಖ್ಯೆಯ ಏರಿಕೆಗೆ ಕಾರಣವಾಗಿದೆ ಅನ್ನೋದು ಅತಿಶಯವಾಗೇನೂ ಅನಿಸುತ್ತಿಲ್ಲ ಅಲ್ಲವೇ?
ಆದರೆ ಪ್ರತಿಯೊಂದರಲ್ಲೂ ಸಾಧಕ ಬಾಧಕಗಳು ಇರುವಂತೆ  ಸಾಮಾಜಿಕ ಜಾಲದಲ್ಲಿ ಗುಂಪುಗಾರಿಕೆಗೂ ಈ ರಾಜಕೀಯ ಉತ್ಸಾಹಗಳು ಕಾರಣವಾಗುತ್ತಿವೆ. ಮತದಾನ ಎಂಬುದು ಗೌಪ್ಯವಾಗಿರಬೇಕು ಎಂಬ ಮಾತಿಗೆ ಈಗ ಬೆಲೆ ಇಲ್ಲದಂತಾಗಿದೆ. ತಾವು ಯಾವ ಬೂತ್‌ನಲ್ಲಿ ಯಾವ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂಬುದನ್ನು ಕೂಡ ತಮ್ಮ ಮೊಬೈಲ್ ಕ್ಯಾಮರದಲ್ಲಿ ಫೋಟೋ ತೆಗೆದುಕೊಂಡು ಅಪ್‌ಲೋಡ್ ಮಾಡೋ ಅವಿವೇಕಿಗಳಿದ್ದಾರೆ. ಇದು ತಿಳುವಳಿಕೆಯ ಕೊರತೆಯೋ ಅಥವಾ ತಮ್ಮ ಮತದಾನದ ಮೂಲಕ ಬೇರೆಯವರ ಮೇಲೆ ಪರಿಣಾಮ ಬೀರುವ ಹುನ್ನಾರವೋ ಅಥವಾ ತಾವು ಯಾರಿಗೆ ಮತ ನೀಡಿದ್ದಾರೋ ಅವರಿಗೆ ಪ್ರೂಫ್ ಕೊಟ್ಟು ಅವರಿಂದ ಲಾಭ ಪಡೆಯುವ ತಂತ್ರವೋ ಗೊತ್ತಿಲ್ಲ. ಒಟ್ಟಾರೆ ಮತಗಟ್ಟೆಗೆ ಮೊಬೈಲ್, ಟ್ಯಾಬ್ಲೆಟ್ ಇವುಗಳನ್ನು ತರುವುದನ್ನು ನಿಷೇಧಿಸುವ ಸಮಯ ದೂರವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಒಟ್ಟಾರೆಯಾಗಿ ಈ ಬಾರಿ ಸಾಮಾಜಿಕ ತಾಣಗಳು ಜನತೆಯಲ್ಲಿ ರಾಜಕೀಯ ಆಸಕ್ತಿ ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸಿರೋದಂತೂ ಸತ್ಯ. ಇದೇ ಹದಿನೇಳರಂದು ಕರ್ನಾಟಕದ ಫೇಸ್‌ಬುಕ್ ಬಳಕೆದಾರರ ಲಕ್ಷಾಂತರ ಫೋಟೋಗಳು ಇಂಟರ್‌ನೆಟ್ಟಲ್ಲಿ ರಾರಾಜಿಸಲಿವೆ. ನೀವೂ ಅವರಲ್ಲೊಬ್ಬರಾ? ಬೇಗ ಮತ ಹಾಕಿ, ನಿಮ್ಮ ಬೆರಳಿಗೂ ಫೇಸ್‌ಬುಕ್ ಲೈಕ್‌ಗಳನ್ನು ಗಿಟ್ಟಿಸೋ ಯೋಗ ಬರಲಿ.

ಈ ಫೋಟೋ ಕ್ರೇಜ್ ಬಗ್ಗೆ ಪ್ರಶ್ನಿಸಿದಾಗ ಯುವಜನತೆ ನೀಡಿದ ಉತ್ತರಗಳು ಮಜವಾಗಿದ್ದವು.
ಪ್ರೀತು( ಬಿಎಸ್ಸಿ) : ಅರೇ... ಮತದಾನ ಎಷ್ಟು ಕಡ್ಡಾಯವೋ ಮತ ಹಾಕಿದ ನಂತರ ಸೆಲ್ಫೀ ಕೂಡ ಅಷ್ಟೇ ಕಡ್ಡಾಯ!
ವಿಜೇತ್(ಮಾಡೆಲ್) : ಇಂಕ್ ಹಚ್ಚಿರೋ ಬೆರಳಿನ ಫೋಟೋ ಇದ್ರೇನೆ ನಾವು ಮತ ಹಾಕಿದೀವಿ ಅಂತ ಅರ್ಥ. ಅದಿಲ್ದೆ ಹೋದ್ರೆ ಮತ ಹಾಕಿದ್ದೇ ವೇಸ್ಟು.
ಸುನಿಲ್ ವಿ.ಜಿ.(ವಿದ್ಯಾರ್ಥಿ) : ನಾನು ನನ್ನ ಫೋಟೋ ಮಾತ್ರ ಅಲ್ಲ, ಇಡೀ ಕುಟುಂಬದ ಫೋಟೋ ಅಪ್‌ಲೋಡ್ ಮಾಡಿದೀನಿ. ಇದು ಶೋಕಿಗಲ್ಲ. ಮನೆಮಂದಿಯೆಲ್ಲಾ ಮತದಾನ ಮಾಡಿ ಎಂಬ ಮೆಸೇಜು!
ದೀಕ್ಷಾ ಅಶೋಕ್: ನಾನು ನನ್ನ ಪತಿ ಇಬ್ಬರೂ ಜೊತೆಯಲ್ಲಿ ಮತದಾನ ಮಾಡಿ ಬಂದ ಫೋಟೋ ಹಾಕಿದ್ದೇನೆ.  ಬಲಿಷ್ಠ ಭಾರತ ನಿರ್ಮಾಣಕ್ಕೆ ಕುಟುಂಬದ ಒಗ್ಗಟ್ಟು ಮುಖ್ಯ ಅನ್ನೋದು ನಮ್ಮ ಫೋಟೋದ ಸಂದೇಶ!

-ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments