ಶಸ್ತ್ರಗಳಿಲ್ಲದ ಯುದ್ಧ
ಯುದ್ಧಕಾಲ. ಎದುರಿಗೆ ರಣರಂಗ. ಕಲಹದಿಂದ ಉನ್ಮತ್ತವಾಗಿರುವ ಪಕ್ಷಗಳು. ಇತ್ತ ಬಿಡಾರದಲ್ಲಿ ಯುವಸೈನಿಕನೊಬ್ಬ ವಿರಹತಪ್ತನಾಗಿದ್ದಾನೆ. ಮನೆಯಲ್ಲಿ ಬಿಟ್ಟುಬಂದ ಚೆಲುವೆ ಹೆಂಡತಿ. ಅವಳ ಜತೆ ಕಳೆದ ರತಿಕ್ಷಣಗಳು ಬೇಡಬೇಡವೆಂದರೂ ನೆನಪಾಗುತ್ತಿವೆ. ಕಣ್ಣಿಗೆ ಕಾಣುವ ಯುದ್ಧರಂಗವೂ ಅಂತರಂಗದ ಮಧುಕಲಹವೂ ಕಲಸುಮೇಲೋಗರವಾಗಿ ಅವನಿಗೆ ಕಾಣಿಸುವುದು ಹೀಗೆ.
ಅದ್ಯಾಪಿ ತತ್ಸುರತಕೇಲಿನಿರಸ್ತ್ರಯುದ್ಧಂ
ಬಂಧೋಪಬಂಧಪತನೋತ್ಥಿತ ಶೂನ್ಯಹಸ್ತಂ
ದಂತೋಷ್ಠಪೀಡನನಖಕ್ಷತರಕ್ತಸಿಕ್ತಂ
ತಸ್ಯಾಃ ಸ್ಮರಾಮಿ ರತಿಬಂಧುರನಿಷ್ಠುರತ್ವಂ
ಶಸ್ತ್ರಗಳಿಲ್ಲದೆ ನಾವು ಯುದ್ಧದಲ್ಲಿ ತೊಡಗಿದ್ದೆವು. ಕೈಕಾಲುಗಳಿಂದ ಬಿಗಿಯಾಗಿ ಬಂಧಿಸಿಕೊಂಡಿದ್ದೆವು. ರತಿಕೇಳಿಯ ಉನ್ಮತ್ತತೆಯಲ್ಲಿ ಪರಸ್ಪರ ಹೊಡೆದುಕೊಳ್ಳುತ್ತಿದ್ದೆವು. ಬೀಳುತ್ತ, ಏಳುತ್ತಿದ್ದೆವು. ಹಲ್ಲುಗಳಿಂದ ಕಚ್ಚುತ್ತಿದ್ದೆವು(ದಂತಕ್ಷತ). ಉಗುರಿನಿಂದ ಗೀರಿಕೊಳ್ಳುತ್ತಿದ್ದೆವು(ನಖಕ್ಷತ). ಈ ಗೀರಿನ ಗಾಯಗಳಿಂದ ನೆತ್ತರು ಜಿನುಗಿ ಮೈ ರಣರಂಗದಂತೆ ರಕ್ತರಂಜಿತವಾಗಿತ್ತು.
ರಣರಂಗದ ಸನ್ನಿಧಿಯಲ್ಲಿರುವ ತರುಣನಿಗೆ ಚೆಲುವೆ ಹೆಂಡತಿಯ ನೆನಪಾಗುವುದು ಸಹಜವೇ. ಪ್ರಾಯದ ಕಾವಿನಲ್ಲಿದ್ದಾಗ ಕೇಳಿ ಕೂಡ ಹೀಗೆ ಹಿಂಸಾತ್ಮಕವಾಗಿರುವುದೂ ಸಹಜ. ಹೋಲಿಕೆ ಇಷ್ಟಕ್ಕೇ ಮುಗಿಯುತ್ತದೆ. ವ್ಯತ್ಯಾಸ ಇಷ್ಟೆ: ಯುದ್ಧರಂಗದಲ್ಲಿ ಪಡೆಯುವ ನೋವೇ ಬೇರೆ, ರತಿರಂಗದಲ್ಲಿ ಪಡೆಯುವ ನೋವೇ ಬೇರೆ!ಟಿ
-ಹರಿಹರ