ಸ್ಥಳೀಯ ವ್ಯಕ್ತಿಯನ್ನು ಆರಿಸಿ
ಈ ಲೋಕಸಭೆಗೆ ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸಿದರೆ ಹೆಚ್ಚು ಅನುಕೂಲ. ಏಕೆಂದರೆ ಇವರಿಗೆ ಕ್ಷೇತ್ರದ ಸಮಗ್ರ ಮಾಹಿತಿ ಇರುತ್ತದೆ. ಜತೆಗೆ ತನ್ನ ಮತದಾರರ ಮನೆ-ಮನಸ್ಸುಗಳನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಅಲ್ಲದೆ ಪ್ರತಿನಿತ್ಯ ತನ್ನ ಮತದಾರರ ಮುಖಗಳನ್ನು ನೋಡಲೇಬೇಕಾಗಿರುವುದರಿಂದ ಕೆಲಸವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಮಾಡಲು ಶ್ರಮಪಡುತ್ತಾನೆ. ನಾವು ಪ್ರಧಾನಿ ಅಭ್ಯರ್ಥಿಯನ್ನು ಗಮನಿಸಿ ಮತ ನೀಡಿದಲ್ಲಿ ಆ ಅಭ್ಯರ್ಥಿ ಗೆದ್ದು ಗದ್ದುಗೆ ಏರಿದ ಮೇಲೆ ಆ ಪಕ್ಷದ ಸ್ಥಳೀಯ ಅಭ್ಯರ್ಥಿ ಅಸಮರ್ಥನಾಗಿದ್ದರೆ ಕ್ಷೇತ್ರದ ಅಭಿವೃಧ್ಧಿಯೂ ಅಸಾಧ್ಯವಾಗುತ್ತದೆ. ಹಾಗಾಗಿ ಸ್ಥಳೀಯ ಪ್ರಾಮಾಣಿಕ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸುವುದೇ ಸಮಂಜಸ.
-ಜಯಶ್ರೀ ವಿ. ಅಳ್ಳಾಳಸಂದ್ರ, ದೊಡ್ಡಬಳ್ಳಾಪುರ
ಕ್ರಿಯಾಶೀಲ ವ್ಯಕ್ತಿತ್ವವನ್ನು ಬೆಂಬಲಿಸಿ
ಕ್ರಿಯಾಶೀಲ, ಸೃಜನಶೀಲ, ವ್ಯಕ್ತಿತ್ವದ ಸದಾ ಅಭಿವೃದ್ಧಿಗೆ ಮಿಡಿಯುವ, ಜನರ ಮಧ್ಯೆ ಇದ್ದು ಅವರ ಕಷ್ಟ-ಸುಖಗಳನ್ನು ಆಲಿಸಿ ಪರಿಹರಿಸುವ ಮನೋಭಾವವುಳ್ಳ ವ್ಯಕ್ತಿಗೆ ಹಾಕುವ ಮತ ಸಾರ್ಥಕವಾದಂತೆ. ಯಾವುದೋ ಆಶೆ-ಆಮಿಷಗಳಿಗೆ ಬಲಿಯಾಗಿ ಅನರ್ಹ ವ್ಯಕ್ತಿಗೆ ಮತ ಚಲಾಯಿಸಿದರೆ ನಮ್ಮನ್ನು ನಾವು ಮಾರಿಕೊಂಡಂತೆಯೇ ಸರಿ. ಬಲಿಷ್ಠ ಭಾರತವನ್ನು ಮುನ್ನಡೆಸಿಕೊಂಡು ಹೋಗುವ, ಪಾರದರ್ಶಕ ಆಡಳಿತ ನೀಡಿ ದೇಶವನ್ನು ಪ್ರಕಾಶಿಸುವಂತೆ ಮಾಡುವ ಶಕ್ತಿ ಸಾಮರ್ಥ್ಯವುಳ್ಳ ಅಭ್ಯರ್ಥಿ ಪ್ರಧಾನಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಹಿತದೃಷ್ಟಿಯಿಂದ ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸುವಾಗ ಅವರ ಹಿನ್ನೆಲೆ, ದೂರದೃಷ್ಟಿ ಮತ್ತು ಪ್ರಾಮಾಣಿಕತೆ ಅರಿತು ಆಯ್ಕೆ ಮಾಡಿದಾಗಲೇ ನಮ್ಮ ಮತಕ್ಕೆ ಒಂದು ಅರ್ಥ.
-ಮುರುಗೇಶ ಸಂಗಮ, ವಿಜಾಪುರ
ಸ್ಥಳೀಯ ಅಭ್ಯರ್ಥಿ ಆಯ್ಕೆಯೇ ಸೂಕ್ತ
ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಬಳಸಿಕೊಳ್ಳುವಾಗ ಸ್ಥಳೀಯ ಅಭ್ಯರ್ಥಿಯನ್ನು ನೇಮಕ ಮಾಡುವುದು ಸೂಕ್ತ. ನಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವವರು ನಮ್ಮ ಕ್ಷೇತ್ರದ ನಾಯಕರೇ ಹೊರತು ಪ್ರಧಾನಿಯಲ್ಲ. ನಾವು ಪ್ರತಿಯೊಂದು ಸಮಸ್ಯೆಗಳಿಗೆ ಪ್ರಧಾನಿಯ ಬಳಿ ಹೋಗಲು ಸಾಧ್ಯವಿಲ್ಲ. ನಮ್ಮ ಕ್ಷೇತ್ರದ ಕುಂದು-ಕೊರತೆಗಳನ್ನು ನೀಗಿಸಿ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುವವರು ಇವರು. ಗ್ರಾಮಗಳ ಅಭಿವೃದ್ಧಿಯಾದಾಗ ದೇಶ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಕ್ಷೇತ್ರಗಳಿಂದ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ಅವರ ಮುಖೇನ ಪ್ರಧಾನಿ ನೇಮಕವು ಉತ್ತಮವಾಗಿಯೇ ಇರುವುದರಲ್ಲಿ ಸಂಶಯವಿಲ್ಲ. ಹೀಗಾದಲ್ಲಿ ಹಳ್ಳಿಯಿಂದ-ದಿಲ್ಲಿಯವರೆಗೆ ದೇಶ ಅಭಿವೃದ್ಧಿಯ ಪಥದೆಡೆಗೆ ಸಾಗಲು ಸಾಧ್ಯ.
- ಶಿವಶರಣ ವಿ. ವಾಡೆಕರ್, ಹುಮನಾಬಾದ್
'ಜಗುಲಿ'ಯಲ್ಲಿ ಈ ಸಲದ ವಿಷಯ 'ಪೂರ್ಣ ಬಹುಮತದ ಸರ್ಕಾರ ಒಳ್ಳೆಯದೋ? ಸಮ್ಮಿಶ್ರ ಸರ್ಕಾರ ಒಳ್ಳೆಯದೋ?' ಈ ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com