ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಉದುರವ ಮುನ್ನ

Mainashree
Updated On : 18 Apr 2014, 2:58 am

ಪರೀಕ್ಷೆ ಜ್ವರದ ಝಳ ವಿದ್ಯಾರ್ಥಿ, ಟೀಚರ್, ಹೆತ್ತವರು ಎಲ್ಲರನ್ನೂ ತಿಂಗಳುಗಟ್ಟಲೆ ಕಾದ ಹೆಂಚಿನಂತೆ ಕಾಡಿಯಾಯ್ತು. ಕೊನೆಯ ದಿನದ ಎಕ್ಸಾಂ ಮುಗಿಯುತ್ತಿದ್ದಂತೆ 'ಉಸ್ಸಪ್ಪ' ಅಂತ ನಿಟ್ಟುಸಿರು ಬಿಟ್ಟು 'ಜಸ್ಟ್ ಚಿಲ್‌' ಆಗಲು ಎಲ್ಲರ ತವಕ. ಹಾಲಿಡೇಸ್ ಜಾಲಿಡೇಸ್ ಆಗಲು ಪ್ಲಾನಿಂಗ್ ಇದ್ದರೆ ಚೆನ್ನ. ಇದರಿಂದ ಪ್ರತಿ ದಿನ ಮಜವಾಗಿ, ಬೋರ್ ಹೊಡೆಸಿಕೊಳ್ಳದೆ ಎಂಜಾಯ್ ಮಾಡಬಹುದು. ಸೆಕೆಂಡ್ ಪಿ.ಯು, ಫೈನಲ್ ಡಿಗ್ರಿ, ಬಿಬಿಎಂ, ಎಂಬಿಎ, ಎಂಜಿನಿಯರಿಂಗ್ ಮುಂತಾದ ವಿದ್ಯಾರ್ಥಿಗಳು ಅಡ್ವಾನ್ಸ್ ಸ್ಟಡೀಸ್‌ಗಾಗಿ ಎಂಟ್ರೆನ್ಸ್ ಎಕ್ಸಾಂ ತಯಾರಿ ನಡೆಸಬೇಕಾದ್ದು ಅನಿವಾರ್ಯ. ಇದರ ಮಧ್ಯೆ ರಿಲ್ಯಾಕ್ಸ್ ಆಗಲು ಸಮಯ ತೆಗೆದಿಟ್ಟರೆ ಒಳಿತು. ಇನ್ನುಳಿದ ಮಕ್ಕಳು ರಜಾ ಮಜಾ ಅನುಭವಿಸಲು ಇಲ್ಲಿವೆ ಕೆಲವು ಸಲಹೆಗಳು...



ರಜೆಯ ಮಜಾ ಪಡೆಯಲು ಹೀಗೆ ಮಾಡಿ
    ಬೆಂಗಳೂರಿನಂಥ ಸುಡು ಸಿಟಿಯಲ್ಲಿರುವವರಿಗೆ ವರ್ಷಕ್ಕೊಮ್ಮೆಯಾದರೂ ಊರಿಂದ ದೂರ ಪ್ರಶಾಂತವಾದ ತಂಪಾದ ಸ್ಥಳಕ್ಕೆ ಭೇಟಿ ಬೇಕೇ ಬೇಕು.
    ಟ್ರಕ್ಕಿಂಗ್, ಅಡ್ವೆಂಚರ್ ಕ್ಯಾಂಪ್‌ಗಳು, ಸುರಕ್ಷಿತವಾದ ವನ್ಯಜೀವಿ ಕ್ಯಾಂಪ್‌ಗಳನ್ನು ಅರೇಂಜ್ ಮಾಡುತ್ತಿರುತ್ತಾರೆ. ಹೊಸ ಜಾಗ, ಹೊಸ ವ್ಯಕ್ತಿಗಳೊಡನೆ ಒಡನಾಟ, ಹೊಸ ಭಾಷೆ, ಹೊಸ ಆಚಾರ-ವಿಚಾರ ಕಲಿಯುವುದರಲ್ಲಿ ನಿರತರಾಗಿ.
    ನಿಮ್ಮ ಸಂಪರ್ಕ ಕೌಶಲ, ಪರ್ಸನಾಲಿಟಿ ಉತ್ತಮಗೊಳಿಸಿಕೊಳ್ಳಬೇಕಿದ್ದರೆ, ನುರಿತ ಸಾಫ್ಟ್ ಸ್ಕಿಲ್ ಟ್ರೈನರ್ಸ್ ಬಳಿ ಟ್ರೈನಿಂಗ್ ಪಡೆಯಿರಿ.
    ಅನೇಕ ಆನ್‌ಲೈನ್ ಕೋರ್ಸ್‌ಗಳು, ಉಚಿತವಾಗಿ ಅನೇಕ ಕೋರ್ಸ್‌ಗಳನ್ನು ನಡೆಸುತ್ತವೆ. ಅವುಗಳ ಬಗ್ಗೆ ಮಾಹಿತಿ ಪಡೆದು ಸೇರಬಹುದು.
    ಇದ್ಯಾವುದೂ ಬೇಡ, ನಾನೇ ಏನಾದರೂ ವಿಭಿನ್ನವಾಗಿ ಮಾಡಿ, ನನ್ನ ಸಮಯವನ್ನು ಉಪಯುಕ್ತವಾಗಿ ಕಳೆಯಬೇಕೆನ್ನುವವರು ಹೀಗೆ ಮಾಡಿ:
    ನಿಮ್ಮ ಕಾಲೊನಿ/ ಅಪಾರ್ಟ್‌ಮೆಂಟ್‌ನ ಮಕ್ಕಳೆಲ್ಲ ಸೇರಿ, ನಿಮ್ಮ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಚಗೊಳಿಸಿ.
    ಮನೆ ಮುಂದೆ, ಟೆರೇಸ್ ಮೇಲೆ ಗಿಡಗಳನ್ನು ನೆಟ್ಟು, ನೀರೆರೆದು ಬೆಳೆಸಿ.
    ಹತ್ತಿರದ ಓಲ್ಡ್ ಏಜ್ ಹೋಮ್, ಅನಾಥಾಶ್ರಮಕ್ಕೆ ಹೋಗಿ ಅವರೊಡನೆ ಸ್ವಲ್ಪ ಕಾಲ ಕಳೆಯಿರಿ.
    ನಿಮ್ಮ ಫ್ರೆಂಡ್ಸ್‌ಗೆ, ರಿಲೇಟಿವ್ಸ್‌ಗೆ ಲೆಟರ್ ಬರೆಯಿರಿ.
    ನಗರದ ಆಗುಹೋಗುಗಳ ಬಗ್ಗೆ ಫ್ರೆಂಡ್ಸ್ ಜೊತೆ ಚರ್ಚಿಸಿ/ ನೋಟ್ಸ್ ಮಾಡಿ.
    ನಿಮ್ಮ ಫ್ರೆಂಡ್ಸ್, ತಮ್ಮ, ತಂಗಿ, ಅಪ್ಪ, ಅಮ್ಮ ಮುಂತಾದವರಿಗೆ ಬರ್ತ್‌ಡೇ ಕಾರ್ಡ್ ತಯಾರಿಸಿ, ವಿಶ್ ಬರೆಯಿರಿ.
    ಕ್ಲಾಸ್‌ನಲ್ಲಿ ಕಲಿತದ್ದನ್ನು ಬಳಸಿ ಗೆಳೆಯರಿಗೆ ಉಡುಗೊರೆ ಕೊಡಿ.
    ಇಂಟರ್‌ನೆಟ್‌ನಲ್ಲಿ ನಿಮ್ಮದೇ ಬ್ಲಾಗ್ ತೆರೆದು, ನಿಮ್ಮ ಮನದ ಮಾತನ್ನು ಹಂಚಿಕೊಳ್ಳಿ.
    ಇಂಟರ್‌ನೆಟ್‌ನ ಮೂಲಕ, ನಿಮ್ಮ ಪ್ರಾಜೆಕ್ಟ್‌ಗಳಿಗೆ ಬೇಕಾಗಬಹುದಾದ ಫೋಟೋಗಳನ್ನು, ಮಾಹಿತಿಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
    'ಮಾಡಿ ಕಲಿ' ಎಂಬ ಹಂತ ಹಂತದ ವಿವರ ಇರುವ ಪುಸ್ತಕ ಬಳಸಿ, ಸಾಫ್ಟ್ ಟಾಯ್ಸ್, ಕಸೂತಿ, ನಿಟ್ಟಿಂಗ್ ಮುಂತಾದುವನ್ನು ತಯಾರಿಸಿ. ತಿಳಿದವರಿಗೆ ಮಾರಿ ಪಾಕೆಟ್ ಮನಿ ಸಂಪಾದಿಸಿ.
    ನಿಮಗೆ ತಿಳಿದಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಪಠ್ಯ ಪುಸ್ತಕಗಳನ್ನು ರೆಫರ್ ಮಾಡಿ ನೋಟ್ಸ್ ತಯಾರಿಸಿ ಕೊಡಿ.
    ಮನೆ ಮಂದಿಯ ಒಪ್ಪಿಗೆ ಪಡೆದು ನಿಮ್ಮ ಸುತ್ತಮುತ್ತಲಿನಲ್ಲಿರುವ ಬೀದಿ ನಾಯಿಯನ್ನು ತಂದು ಸಾಕಿ ಪೋಷಿಸಿ.
    ನಿಮ್ಮ ಕಾಲೋನಿ/ ಅಪಾರ್ಟ್‌ಮೆಂಟ್‌ನ ಚಿಕ್ಕ ಮಕ್ಕಳನ್ನು ಕಲೆ ಹಾಕಿ ಅವರಿಗೆ ತಮಾಷೆಯಾದ ಆಟ ಆಡಿಸಿ/ ಹೊಸದೇನಾದರೂ ಕಲಿಸಿ.
    ಡೀಸೆಂಟ್ ಆಗಿ ಲೈಕ್ ಮೈಂಡೆಡ್ ಆಗಿರುವ ಫ್ರೆಂಡ್ಸ್ ಜೊತೆ ಸೇರಿ ನಿಮ್ಮ ಹಾಲಿಡೇಸ್‌ನ್ನು ಹ್ಯಾಪಿಡೇಸ್ ಮಾಡಿಕೊಳ್ಳಿ.

ರಜಾ ದಿನಗಳಲ್ಲಿ ಹೀಗೆ ಮಾಡಬೇಡಿ
    ದಯವಿಟ್ಟು ಕಣ್ಣು ಮುಚ್ಚಿಕೊಂಡು ಮಗು 24/7 ಎಂಗೇಜ್ ಆಗಿರಲಿ ಎಂಬ ಭಾವದಿಂದ, ಹಿಂದೆ ಮುಂದೆ ನೋಡದೆ ರೋಡಿಗೊಂದರಂತೆ ತಲೆಯೆತ್ತಿರುವ ಸಮ್ಮರ್ ಕ್ಯಾಂಪ್‌ಗಳಿಗೆ ಸೇರಿಕೊಳ್ಳಬೇಡಿ.
    ಬೆಳಗೆದ್ದು 6 ಗಂಟೆಗೆ ಸ್ವಿಮ್ಮಿಂಗ್, 8 ಗಂಟೆಗೆ ಕ್ರಿಕೆಟ್, 10ಕ್ಕೆ ಡ್ರಾಯಿಂಗ್ ಆ್ಯಂಡ್ ಪೇಂಟಿಂಗ್ ಕ್ಲಾಸ್, ಮಧ್ಯಾಹ್ನ ವೇದಿಕ್ ಮ್ಯಾಥ್ಸ್, ಹಿಂದಿ ಟ್ಯೂಷನ್ಸ್, ಸಂಜೆ 4ಕ್ಕೆ ಡ್ರಾಮಾ/ ಡಾನ್ಸ್/ ಮ್ಯೂಸಿಕ್, ರಾತ್ರಿ ಮನೆಯಲ್ಲಿರುವಾಗ ಮುಂದಿನ ವರ್ಷದ ಬುಕ್ಸ್ ರಿವೈಸ್ ಮಾಡು, ಹೀಗಾದರೆ ಇದನ್ನು ರಜಾ ಎನ್ನುವುದಿಲ್ಲ.
    ರಜಾ ಬಂದ ಕೂಡಲೇ ದಿನ ರಾತ್ರಿ ಟ್ರಾವೆಲ್ ಮಾಡಿ ಸುಸ್ತಾಗುವಂಥ ಹತ್ತಾರು ಜಾಗಗಳನ್ನು ಮುಟ್ಟಿ ಬರುವಂಥ ಟ್ರಿಪ್ ಬೇಡಿ.
    ಅನ್‌ರಿಸರ್ವ್‌ಡ್ ಕಂಪಾರ್ಟ್‌ಮೆಂಟ್‌ನಲ್ಲಿ ಟ್ರಾವೆಲ್ ಮಾಡಿ ದೂರದ ಕಸಿನ್ ಮದುವೆ ಅಟೆಂಡ್ ಮಾಡಿ ಬಂದರೆ, ಎಕ್ಸಾಂ ಬಿಸಿಗಿಂತ ಧಗೆ ಹೆಚ್ಚು, ಬೇಡವೇ ಬೇಡ.


ನೀವು ನೋಡಬೇಕಾದ 5 ಚಿತ್ರಗಳು
ಯಾವುದೋ ಒಂದು ಭಾಷೆಗೆ ಸೀಮಿತವಾಗದೆ ವಿಶ್ವ ಮಟ್ಟದ, ಗುಣಮಟ್ಟದ ಚಿತ್ರಗಳನ್ನು ನೋಡುವುದರಿಂದ ನಿಮ್ಮ ದೃಷ್ಟಿಕೋನ ವಿಶಾಲವಾಗುತ್ತದೆ. ಹಲವು ದೇಶಗಳ ಸಂಸ್ಕೃತಿ, ವೈವಿಧ್ಯತೆಯ ಅರಿವಾಗುತ್ತದೆ.
ಚಿನ್ನಾರಿಮುತ್ತ(ಕನ್ನಡ)
ದಾರಿ ತಪ್ಪಿದ ಅನಾಥ ಹಳ್ಳಿ ಹುಡುಗನೊಳಗಿನ ಪ್ರತಿಭೆ ಹೊರತೆಗೆದು ಆತನನ್ನು ಒಳ್ಳೆ ಹಾದಿಗೆ ತರುವ ಚೆಂದದ ಚಿತ್ರ.
ಲೈಫ್ ಆಫ್ ಪೈ(ಇಂಗ್ಲಿಷ್)
ಪೈ ಪಟೇಲ್ ಎಂಬ ಚಿಕ್ಕ ಹುಡುಗನೊಬ್ಬ ಸಾಗರದ ನಡುವೆ ಹುಲಿಯೊಂದಿಗೆ ಬದುಕು ಕಂಡುಕೊಳ್ಳುವ, ಉಳಿಸಿಕೊಳ್ಳುವ ಕತೆ ಕಣ್ಣಿಗೆ ಹಬ್ಬವಾಗುವುದರಲ್ಲಿ ಅನುಮಾನವಿಲ್ಲ.
ಚಿಲ್ಡ್ರನ್ ಆಫ್ ಹೆವನ್(ಇರಾನಿ)
ಇರಾನ್‌ನ ಹೆಸರಾಂತ ನಿರ್ದೇಶಕ ಮಜೀದ್ ಮಜಿದಿಯ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಈ ಚಿತ್ರದಲ್ಲಿ ಅಣ್ಣ ತಂಗಿಯಿಬ್ಬರು ಒಂದು ಜೊತೆ ಶೂಗಾಗಿ ನಡೆಸುವ ಸಾಹಸಗಳು ಬಲು ರೋಚಕವಾಗಿ ಮನಕಲಕುತ್ತವೆ.
ಬೈಸಿಕಲ್ ಥೀವ್ಸ್(ಇಟಾಲಿಯನ್)
ಕಪ್ಪುಬಿಳುಪಿನ ಈ ಚಿತ್ರದಲ್ಲಿ ಎರಡನೇ ಯುದ್ಧ ನಂತರದಲ್ಲಿ ಯುರೋಪಿಯನ್ ದೇಶಗಳು ಅನುಭವಿಸಿದ ಬಡತನ, ನಿರುದ್ಯೋಗಗಳಂಥ ಸಮಸ್ಯೆಗಳ ಚಿತ್ರಣವಿದೆ. ಕೆಲಸ ಬೇಕೆಂದರೆ ಸೈಕಲ್ ಇರಲೇಬೇಕೆಂಬ ನಿಯಮವಿರುವ ಸಂದರ್ಭದಲ್ಲಿ ಬಡ ತಂದೆಯೊಬ್ಬ ತನ್ನ ಕಳೆದುಹೋದ ಸೈಕಲ್‌ಗಾಗಿ ಹುಡುಕುವ ದೃಶ್ಯಗಳು ನಿಮ್ಮನ್ನು ಭಾವುಕವಾಗಿಸುತ್ತವೆ.

ಗಾಡ್ಸ್ ಮಸ್ಟ್ ಬಿ ಕ್ರೇಜಿ ಭಾಗ1, 2 (ಸೌತ್ ಆಫ್ರಿಕ, ಇಂಗ್ಲಿಷ್)
ಹೊರ ಜಗತ್ತಿನ ಪರಿಚಯವೇ ಇರದ ಮುಗ್ಧ ಬುಡಕಟ್ಟು ಯುವಕನೊಬ್ಬ ನಾಡಿಗೆ ಬಂದಾಗ ನಡೆಯುವ ಕಾಮಿಡಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ.

ನೀವು ಕಲಿಯಬಹುದಾದ 5 ಕೋರ್ಸ್‌ಗಳು
ರಜೆಯಲ್ಲಿ ಮಜವಾಗಿಯೇ ಅನೇಕವನ್ನು ಕಲಿಯಬಹುದು. ಇವು ನಿಮ್ಮ ಹವ್ಯಾಸ, ಮನೋರಂಜನೆ ಮಾತ್ರವಲ್ಲದೆ ಪಾಕೆಟ್ ಮನಿಗೂ ದಾರಿ ಮಾಡಿಕೊಡುತ್ತದೆ.
ಪೇಂಟಿಂಗ್
ಚಿತ್ರಕಲೆಯಲ್ಲಿ ನಿಮಗೆ ಆಸಕ್ತಿ ಇದ್ದರೆ ಒಂದೋ ಎರಡೋ ತಿಂಗಳ ಚಿತ್ರಕಲಾ ಶಿಬಿರಕ್ಕೆ ಸೇರಿಕೊಳ್ಳಿ. ಇದು ನಿಮ್ಮೊಳಗಿನ ಕಲೆಯನ್ನು ಫೈನ್‌ಟ್ಯೂನ್ ಮಾಡುವುದಲ್ಲದೆ ಚಿತ್ರಕಲೆಯ ಭವಿಷ್ಯತ್ತಿನ ಪ್ರಪಂಚವನ್ನೂ, ಹಲವು ಅವಕಾಶಗಳನ್ನೂ ತೆರೆದಿಡುತ್ತದೆ.



ಫ್ರೆಂಚ್/ಜರ್ಮನ್ ಕ್ಲಾಸ್
ಬೇರೆ ದೇಶದ ಭಾಷೆಗಳನ್ನು ಕಲಿಯುವುದರಿಂದ ಬೃಹತ್ ಅವಕಾಶದ ಬಾಗಿಲುಗಳು ತೆರೆದುಕೊಳ್ಳುತ್ತವೆ. ಫ್ರೆಂಚ್, ಜರ್ಮನ್ ಭಾಷೆಗಳ ಕೃತಿ ಅನುವಾದ, ದುಭಾಷಿಯಾಗಿ ಕೆಲಸ ಮಾಡುವುದು ಉತ್ತಮ ಹಣ ತರುವ ದಾರಿಗಳಾಗಿವೆ.
ಸಿನಿಮೆಟೋಗ್ರಫಿ
ಚಲನಚಿತ್ರಗಳ ನಿರ್ಮಾಣ ಕಲೆಗೆ ಈಗ ಎಲ್ಲಿಲ್ಲದ ಬೇಡಿಕೆ. ಯಾರಿಗೆ ಗೊತ್ತು, ಆಸಕ್ತಿಯೂ ಇದ್ದಲ್ಲಿ ಒಂದು ಸಿನಿಮೆಟೋಗ್ರಫಿ ಸರ್ಟಿಫಿಕೇಟ್ ನಿಮ್ಮ ಭವಿಷ್ಯವನ್ನು ಬದಲಿಸಬಹುದು.
ಫೋಟೋಗ್ರಫಿ
ಕ್ಯಾಂಡಿಡ್ ಫೋಟೋಗ್ರಫಿ, ವೈಲ್ಡ್‌ಲೈಫ್ ಫೋಟೋಗ್ರಫಿ ಇತ್ಯಾದಿಗಳ ಕುರಿತ ಮಾಹಿತಿ, ತರಬೇತಿ ನಿಮ್ಮ ಹವ್ಯಾಸಕ್ಕೊಂದು ಹೆಮ್ಮೆಯ ಗರಿಯಾಗಬಹುದು.
ನಿಟ್ಟಿಂಗ್
ಒಮ್ಮೆ ಈ ತರಬೇತಿ ಮುಗಿಸಿ, ದಾರಗಳಲ್ಲಿ, ಬಟ್ಟೆಗಳಲ್ಲಿ ಕಲೆ ಅನಾವರಣಗೊಳಿಸಿ.

ನೀವು ನೋಡಬೇಕಾದ 5 ಸ್ಥಳಗಳು
ದೂರದೂರುಗಳನ್ನು ನೋಡುವ ಮುಂಚೆ ನಮ್ಮ ರಾಜ್ಯದ ಕೆಲ ಸ್ಥಳ ಪರಿಚಯ ನಮಗಿರುವುದೊಳಿತು.
ಹಂಪೆ
ವಿಜಯನಗರ ಸಾಮಾಜ್ಯದ ಗತವೈಭವವನ್ನು ಹೇಳುವ ಪಾಳು ಪಳೆಯುಳಿಕೆಗಳ ಕತೆ- ವ್ಯಥೆ ಒಮ್ಮೆ ಕೇಳಿ ಬನ್ನಿ.
ಚಿಕ್ಕಮಗಳೂರು
ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ಗಳು, ಕುದುರೆಮುಖ, ಕೆಮ್ಮಣ್ಣುಗುಂಡಿ, ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತದಂಥ ತಾಣಗಳ ಸೌಂದರ್ಯ ಸವಿಯದ ಕಂಗಳಿವ್ಯಾತಕೋ...? ಈ ಸ್ಥಳಗಳಿಗೆ ಚಾರಣದ ಮೂಲಕ ಭೇಟಿ ಕೊಟ್ಟರೆ ನಿಮ್ಮ ಅನುಭವ ಅಮೃತವಾಗುವುದರಲ್ಲಿ ಅನುಮಾನವೇ ಬೇಡ.
ನಾಗರಹೊಳೆ, ಬಂಡಿಪುರ
ಈ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ನಡೆಸಿ ಕಾಡಿನ ಜೀವಿಗಳ ಬದುಕನ್ನೊಮ್ಮೆ ನೋಡಿ ಬನ್ನಿ.
ಮಂಗಳೂರು ಬೀಚ್
ಕರಾವಳಿಯ ಸೊಬಗಿನ ಮೂಲಾಧಾರ ಕಡಲ ಒಡಲಲ್ಲಿ ಆಡಿ ನಲಿದಾಡಿ, ಉಪ್ಪಿನ ಸಿಹಿಯನ್ನು ಸವಿಯಿರಿ.
ಊಂಚಳ್ಳಿ ಜಲಪಾತ
ಶಿರಸಿ ಬಳಿಯ ಪ್ರಖ್ಯಾತ ಜಲಪಾತ ಊಂಚಳ್ಳಿಯ ಶ್ವೇತವೈಭೋಗಕ್ಕೆ ಮೈಯೊಡ್ಡಿ ನಲಿದಾಡಲು ರಜೆಯ ಒಂದು ದಿನ ಮೀಸಲಿಡಿ.

ನೀವು ಓದಬೇಕಾದ 5 ಪುಸ್ತಕಗಳು
ಪುಸ್ತಕಗಳೆಲ್ಲವೂ ಓದಬೇಕಾದವೇ ಆದರೂ ಈ ರಜೆಯಲ್ಲಿ ಇಷ್ಟನ್ನಾದರೂ ಓದಿಕೊಂಡರೆ ಅವೇ ಉಳಿದ ಪುಸ್ತಕಗಳತ್ತ ಕೈಹಿಡಿದು ಕರೆದೊಯ್ಯುತ್ತವೆ.
ಜುಗಾರಿ ಕ್ರಾಸ್
ಅಪ್ರತಿಮ ಪ್ರತಿಭೆಯ ಪೂರ್ಣಚಂದ್ರ ತೇಜಸ್ವಿ ಬರೆದ ಜುಗಾರಿ ಕ್ರಾಸ್‌ನಲ್ಲಿ ಒಮ್ಮೆ ಕಳೆದುಹೋದರೆ ಮತ್ತೆ ಅವರೆಲ್ಲ ಪುಸ್ತಕಗಳನ್ನು ಓದುವ ಆಸೆ ನಿಮ್ಮನ್ನು ಕೂಡಿಕೊಳ್ಳುತ್ತದೆ.
ಪುಟ್ಟ ಮನೆ ಮಾಲಿಕೆ
ಮಕ್ಕಳ ಕತೆಗಾರ್ತಿ ಲಾರಾ ಇಂಗಲ್ಸ್‌ಳ ಪ್ರಖ್ಯಾತ ಕಥಾಮಾಲಿಕೆ ಲಿಟಲ್ ಹೌಸ್ ಸೀರೀಸ್‌ಅನ್ನು ಅಂಕಿತ ಪುಸ್ತಕ ಪ್ರಕಾಶನ 'ಪುಟ್ಟ ಮನೆ ಮಾಲಿಕೆ' ಹೆಸರಿನಲ್ಲಿ ಕನ್ನಡಕ್ಕೆ ತಂದಿದೆ. ಇದನ್ನು ಎಸ್. ಅನಂತನಾರಾಯಣ ತರ್ಜುಮೆ ಮಾಡಿದ್ದು ಪುಟ್ಟ ಮಕ್ಕಳ ಸಂಗ್ರಹದಲ್ಲಿ ಇರಲೇಬೇಕಾದ ಪುಸ್ತಕಗಳಿವು.
ಮೆಲುಹದ ಮೃತ್ಯುಂಜಯ
ಅಮೀಶ್ ತ್ರಿಪಾಟಿಯ 'ಇಮ್ಮಾರ್ಟಲ್ಸ್ ಆಫ್ ಮೆಲುಹ' ಪುಸ್ತಕವನ್ನು ಎಸ್. ಉಮೇಶ್ ಕನ್ನಡಕ್ಕೆ ತಂದಿದ್ದಾರೆ. 3 ಸರಣಿಯಲ್ಲಿ ಬಂದಿರುವ ಪುಸ್ತಕದಲ್ಲಿ ಶಿವನನ್ನು ಆಮ್ ಆದ್ಮಿಯಾಗಿ ಚಿತ್ರಿಸಿ ಸುಂದರ ಕತೆ ಹೆಣೆಯಲಾಗಿದೆ.
ಮಲೆಗಳಲ್ಲಿ ಮದುಮಗಳು
ರಾಷ್ಟ್ರಕವಿ ಕುವೆಂಪು ವಿರಚಿತ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ಮಲೆನಾಡ ಬದುಕಿನ ಸಾಮಾನ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟಿಸುತ್ತದೆ.
ಮೂಕಜ್ಜಿಯ ಕನಸುಗಳು
ಶಿವರಾಮ ಕಾರಂತರಿಗೆ ಜ್ಞಾನಪೀಠ ತಂದುಕೊಟ್ಟ ಕೆಂಪು ಸೀರೆ, ಬೋಳು ತಲೆಯ ವಿಧವೆ ಮೂಕಜ್ಜಿಯ ಆಧುನಿಕ ಮನೋಭಾವ, ಏನಾದರೂ ವಸ್ತುವೋ, ಯಾರಾದರೂ ಕಂಡರೆ ಅವರ ಇತಿಹಾಸ ಭವಿಷ್ಯವನ್ನೆಲ್ಲ ತನ್ನಷ್ಟಕ್ಕೆ ಗೊಣಗುವ ಮೂಕಜ್ಜಿಯ ಬೆರಗುಗೊಳಿಸುವ ವಿಶಿಷ್ಠ ವ್ಯಕ್ತಿತ್ವವೇ ಕತೆಯ ಹೂರಣ.


=  ಗೀತಾ ಶ್ರೀನಿವಾಸನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments