ಸ್ವಾಮೀಜಿಯಿಂದ ಸ್ಫೂರ್ತಿಗೊಂಡ ಯುವಕರು
ಸ್ವಾಮಿ ವಿವೇಕಾನಂದರ ಭಾಷಣಗಳಿಂದ ಪ್ರೇರಿತರಾದ ಬಂಗಾಳಿ ಯುವಕರು ವಾರಾಣಸಿಯಲ್ಲಿ ಒಂದು ಸಂಘವನ್ನು ಸ್ಥಾಪಿಸಿದರು. ಇವರ ಉದ್ದೇಶ ಕಾಶೀ ಕ್ಷೇತ್ರಕ್ಕೆ ಆಗಮಿಸುವ ಬಡ ಯಾತ್ರಿಕರಿಗೆ ಆಶ್ರಯ ಒದಗಿಸುವುದು. ನಿರ್ಗತಿಕ ವಿಧವೆಯರಿಗೆ, ರೋಗಪೀಡಿತರಿಗೆ, ವೃದ್ಧರಿಗೆ ಆಹಾರ, ಆಶ್ರಯ ಮತ್ತು ವೈದ್ಯಕೀಯ ನೆರವು ನೀಡುವುದು.
ಈ ಸಂಸ್ಥೆಯ ಮಾದರಿಯಲ್ಲೇ ಹರಿದ್ವಾರದ ಸಮೀಪ ಸೇವಾಶ್ರಮವೊಂದನ್ನು ಸ್ಥಾಪಿಸಿದರು. ಹೀಗೆ ಸ್ವಾಮೀಜಿಯವರ ತ್ಯಾಗ ಮತ್ತು ಸೇವೆ ಎಂಬ ಅವಳಿ ಆದರ್ಶಗಳು ಅನುಷ್ಠಾನಗೊಳ್ಳುತ್ತಿರುವುದು ಅವರಿಗೆ ಸಮಾಧಾನ ತಂದಿತು.
ಸ್ವಲ್ಪ ದಿನಗಳಲ್ಲಿ ಕಾಶಿಯ ಸೇವಾಕೇಂದ್ರದ ತರುಣರಿಂದ ಸ್ವಾಮೀಜಿಗೆ ಒಂದು ಪತ್ರ ಬಂತು. 'ನಮಗೆ ಅಧ್ಯಾತ್ಮಿಕ ಮಾರ್ಗದರ್ಶನ ನೀಡಲು ಹಿರಿಯ ಸನ್ಯಾಸಿಗಳನ್ನು ಕಳಿಸಿಕೊಡಿ' ಎಂದು ಬರೆದಿದ್ದರು. ಕೂಡಲೇ ಸ್ವಾಮೀಜಿ ಸ್ವಾಮಿ ಶಿವಾನಂದರನ್ನು ವಾರಣಾಸಿಗೆ ಕಳುಹಿಸಿಕೊಟ್ಟರು. ಸ್ವಾಮಿ ಶಿವಾನಂದರು 1902ರ ಜೂನ್ 26ರಂದು ಕಾಶಿಗೆ ಬಂದರು. ದೊಡ್ಡದೊಂದು ತೋಟದ ಮನೆಯನ್ನು ಬಾಡಿಗೆಗೆ ಪಡೆದು 'ರಾಮಕೃಷ್ಣ ಅದ್ವೈತಾಶ್ರಮ'ವನ್ನು ಸ್ಥಾಪಿಸಿದರು. ಅಲ್ಲಿ 1902ರ ಜುಲೈ 4ರಂದು ರಾಮಕೃಷ್ಣರ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಯಿತು. ಮರುದಿನವೇ ತಂತಿ ಸಂದೇಶ ಬಂತು, 'ಸ್ವಾಮೀಜಿ ದೇಹತ್ಯಾಗ ಮಾಡಿದರು' ಎಂದು.
ಸ್ವಾಮೀಜಿ ತಮ್ಮ ಕೊನೆಯ ಉಸಿರಿರುವವರೆಗೂ ಕರ್ತವ್ಯನಿಷ್ಠೆಯಿಂದ ತಮ್ಮ ಸೋದರ ಸನ್ಯಾಸಿಗಳನ್ನು ಕಾರ್ಯರಂಗಕ್ಕಿಳಿಸಿ ಚಾಲನೆಕೊಟ್ಟ ಮೇಲೆ ಇಹಜೀವನಕ್ಕೆ ಮುಕ್ತಾಯಹಾಡಿದ್ದನ್ನು ಕಾಣುತ್ತೇವೆ.
ಆನಂದ ಎಸ್.ಎನ್.
anandsn193@gmail.com