ಯಾರ ಒಲವು ಯಾರಿಗೋ?
ಅಲಮೇಲುವಿಗೆ ಬೆಳಗಿಂದಲೂ ಒಂದು ನಿಮಿಷವೂ ಪುರುಸೊತ್ತು ಇರಲಿಲ್ಲ. ಗಂಡನನ್ನು ಆಫೀಸಿಗೆ ಸಿದ್ಧ ಮಾಡಿ ಕಳುಹಿಸಿದ ...
ಅಲಮೇಲುವಿಗೆ ಬೆಳಗಿಂದಲೂ ಒಂದು ನಿಮಿಷವೂ ಪುರುಸೊತ್ತು ಇರಲಿಲ್ಲ. ಗಂಡನನ್ನು ಆಫೀಸಿಗೆ ಸಿದ್ಧ ಮಾಡಿ ಕಳುಹಿಸಿದ ಮೇಲೆ ಕೈನೆಟಿಕ್ ಚಲಾಯಿಸಿಕೊಂಡು ಬಜಾರ್ ಸ್ಟ್ರೀಟಿಗೆ ಬಂದವಳು ಅಂಗಡಿಯಿಂದ ಅಂಗಡಿಗೆ ಅಲೆಯುತ್ತಲೇ ಇದ್ದಾಳೆ.
ಮೊದಲು ತನ್ನ ಮೀನುಗಳ ತೊಟ್ಟಿಗಾಗಿ ವಿವಿಧ ಆಹಾರಗಳನ್ನು ಕೊಂಡುಕೊಂಡಳು. ಪೆಟ್ ಶಾಪಿಗೆ ಬಂದು ತನ್ನ ಮುದ್ದಿನ ನಾಯಿಗಳಿಗೆ ನಾಯಿ ಬಿಸ್ಕತ್ತು, ಪೆಡಿಗ್ರೀ ದೊಡ್ಡ ಮೂಟೆ ಕೊಂಡಳು. ಅಲ್ಲಿಂದ ಸಗಟು ದಿನಸಿ ಅಂಗಡಿಯ ಸರತಿಯಲ್ಲಿ ನಿಂತು ತನ್ನ ಮುದ್ದಿನ ಪಾರಿವಾಳಗಳಿಗೆ, ಗಿಳಿಗಳಿಗೆ, ಲವ್ ಬರ್ಡ್ಸ್‌ಗಳಿಗೆ ಹಲವು ಕಾಳುಗಳನ್ನು ಕಟ್ಟಿಸಿಕೊಂಡಳು.
ಮನೆ ತಿರುವಿನವರೆಗೂ ಬಂದವಳಿಗೆ, ತಟ್ಟನೆ ಜೂಜೂ ನೆನಪಾಯಿತು. ಅದು ಎಲ್ಲೆಲ್ಲೋ ಹುಡುಕಿ ಆಸೆಯಿಂದ ತಂದು ಸಾಕಿಕೊಂಡ ಬೆಕ್ಕಿನ ಮರಿ. ಅದಕ್ಕೆ ಏನೂ ತರಲಿಲ್ಲವಲ್ಲ ಎಂದು ಮಂಕಾದಳು.
ಗೇಟು ತೆರೆದು ಒಳ ಬಂದು ಗಾಡಿ ನಿಲ್ಲಿಸುವುದಕ್ಕಿಂತಲೂ ಮುಂಚೆಯೇ ಇಂಕು-ಮಿಂಕು-ಪಿಂಕು-ಟಿಂಕು ಮುತ್ತಿಕೊಂಡವು. ಅವುಗಳಿಗೆ ನಾಯಿ ಬಿಸ್ಕತ್ ಹಂಚಿದಳು. ಅದಾಗಲೇ ಮಾಲೀ ರಂಗಪ್ಪನೂ ಸಿಕ್ಕ. ಅವನನ್ನು ಮಾತನಾಡಿಸಿ ಇಲ್ಲೇ ಇರಪ್ಪ ಎಂದು ಹೇಳಿ ಮನೆ ಒಳಗೆ ಬಂದು ಡೈನಿಂಗ್ ಟೇಬಲ್ಲಿನ ಮೇಲಿದ್ದ ಅಷ್ಟೂ ಬಿಸಿಬೆಳೆ ಬಾತ್ ಒಂದು ತಟ್ಟೆಗೆ ಸುರುವಿಕೊಂಡು ಅವನಿಗೆ ಕೊಟ್ಟಳು.
ಆ ಮೇಲೆ ಮೀನುಗಳ ತೊಟ್ಟಿಗೆ ಆಹಾರ ಹಾಕಿದಳು. ಗಂಡ ಆಫೀಸಿಗೆ ಹೋದ ಮೇಲೆ ಸಂತೆ ಸುತ್ತಿ ಆಕೆ ಮನೆಗೆ ಬರುವಷ್ಟರಲ್ಲಿ ಮದ್ಯಾಹ್ನ ಒಂದು ಗಂಟೆಯೇ ಆಗಿಹೋಗಿತ್ತು. ಆಕೆಗೂ ಹೊಟ್ಟೆ ಚುರುಗುಟ್ಟಿದಂತಾಗಿ, ಅಡುಗೆ ಮನೆ ಕಡೆ ಹೊರಟಳು. ಅಲ್ಲಿ ಅವಳ ಅತ್ತೆ ತೊಂಬತ್ತರ ಹಣ್ಣು ಹಣ್ಣು ಮುದುಕಿ ಅಡುಗೆ ಮನೆಯ ನೆಲದ ಮೇಲೆ ಗೋಡೆಗಾತುಕೊಂಡು ಕುಳಿತು ಅಲ್ಲೇ ನಿದ್ದೆಗೆ ಜಾರಿದ್ದರು. ಅವರ ಕೈಯಲ್ಲಿ ಒಂದು ಖಾಲೀ ತಟ್ಟೆ.
ಅಲಮೇಲುವಿಗೆ ಆಗ ನೆನಪಾಯಿತು ಬೆಳಿಗ್ಗೆ ತನ್ನ ಅತ್ತೆಯನ್ನು 'ಇಲ್ಲೇ ಕೂತಿರಿ, ಈಗ ತಿಂಡಿ ತಂದು ಬಡಿಸುತ್ತೇನೆ' ಎಂದು ಹೊರಬಂದವಳಿಗೆ ಜಗವೇ ಮರೆತು ಹೋಗಿ ತನ್ನ ಸಾಕು ಪ್ರಾಣಿಗಳಿಗೆ ಆಹಾರ ತರಲು ಹೊರಟೇ ಹೋಗಿದ್ದಳು!
-ಬದರಿನಾಥ ಪಳವಳ್ಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.