ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೃಷಣ ಕ್ಯಾನ್ಸರ್‌ನಿಂದ ಪಾರಾಗುವುದು ಹೇಗೆ?

ಸ್ತ್ರೀಯರಲ್ಲಿ ಗರ್ಭಾಶಯ, ಗರ್ಭಾಶಯ ಕೊರಳ ಕ್ಯಾನ್ಸರ್‌ಗಳು ಕಾಡಿದರೆ ಪುರುಷರಲ್ಲಿ ವೃಷಣ ಕ್ಯಾನ್ಸರ್ (ಪ್ರಾಸ್ಟೇಟ್ ಕ್ಯಾನ್ಸರ್) ...

Rashmi Kasaragodu
Updated On : 22 Apr 2014, 1:38 am

ಸ್ತ್ರೀಯರಲ್ಲಿ ಗರ್ಭಾಶಯ, ಗರ್ಭಾಶಯ ಕೊರಳ ಕ್ಯಾನ್ಸರ್‌ಗಳು ಕಾಡಿದರೆ ಪುರುಷರಲ್ಲಿ ವೃಷಣ ಕ್ಯಾನ್ಸರ್ (ಪ್ರಾಸ್ಟೇಟ್ ಕ್ಯಾನ್ಸರ್) ಕಾಡುತ್ತದೆ. ಸಾಮಾನ್ಯವಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಬಹಳ ನಿಧಾನವಾಗಿ ತನ್ನ ಅಸ್ತಿತ್ವ ತೋರುತ್ತದೆ. ಅಂದರೆ ಕ್ಯಾನ್ಸರ್‌ಕಾರಕ ಕೋಶಗಳು ಕಡ್ಡೆಕಟ್ಟುವ ವೇಗ ಬಹಳ ಕಡಿಮೆ. ತೀರಾ ಅಪರೂಪದ ಕೆಲವು ಪ್ರಕರಣಗಳಲ್ಲಿ ಅತ್ಯಂತ ವೇಗವಾಗಿ ಕಟ್ಟೆಕಟ್ಟಿದ ಉದಾಹರಣೆಗಳು ಸಿಗುತ್ತವೆ. ಪ್ರಾಸ್ಟೇಟ್ ಕ್ಯಾನ್ಸರ್‌ನ ದೊಡ್ಡ ಅಪಾಯ ಎಂದರೆ ಇಲ್ಲಿಂದ ಶರೀರದ ಬೇರೆ ಅಂಗಗಳಿಗೆ ಕ್ಯಾನ್ಸರ್‌ಕಾರಕ ಕೋಶಗಳು ತ್ವರಿತವಾಗಿ ಹರಡುವುದು. ವಿಶೇಷತಃ ಮೂಳೆಗಳನ್ನು ಕೋಶಗಳು ಬಹುಬೇಗ ಆವರಿಸಿಬಿಡುತ್ತವೆ. ಯುರೋಪ್, ಅಮೆರಿಕಗಳಿಗೆ ಹೋಲಿಸಿದರೆ ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಈ ಕ್ಯಾನ್ಸರ್‌ನ ಬಾಧೆ ಕಡಿಮೆ ಎಂದೇ ಹೇಳಬೇಕು. ವೃಷಣದಲ್ಲಿ ನೋವು, ಮೂತ್ರ ಮಾಡುವಾಗ ತೊಂದರೆ, ಲೈಂಗಿಕ ಕ್ರಿಯೆಯಲ್ಲಿ ನೋವು ಅಥವಾ ಕ್ರಿಯೆ ಸಾಧ್ಯವಾಗದೇ ಇರುವುದು ಈ ಕ್ಯಾನ್ಸರ್‌ನ ಮುಖ್ಯ ಲಕ್ಷಣಗಳಾಗಿವೆ.
ವೃಷಣ ಕ್ಯಾನ್ಸರ್‌ಗೆ ಸಂಬಂಧಿಸಿ ಒಂದು ಸಂಗತಿ ಹೇಳಬೇಕು. ಮಾಂಸಾಹಾರಿಗಳಲ್ಲಿ ಈ ತೊಂದರೆ ಹೆಚ್ಚು. ಹಾಗಾದರೆ ಸಸ್ಯಾಹಾರಿಗಳು ಸುರಕ್ಷಿತವೇ? ಡೈರಿ ಉತ್ಪನ್ನಗಳನ್ನು ಕಡಿಮೆ ಸೇವಿಸಿದರೆ ಸಸ್ಯಾಹಾರಿಗಳು ಸುರಕ್ಷಿತ ಎಂದು ಹೇಳಲು ಅಡ್ಡಿ ಇಲ್ಲ. ಕೊಬ್ಬು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಮೂಲ ಎನ್ನುವುದು ಸಂಶೋಧಕರ ಅಭಿಮತ. ದಿನಕ್ಕೆ ಮೂರು ಕಪ್ ಹಾಲು ಕುಡಿಯುವ ಪುರುಷರಲ್ಲಿಯೂ ಈ ಕ್ಯಾನ್ಸರ್ ಸಾಧ್ಯತೆ ಅಧಿಕ ಎನ್ನುತ್ತವೆ ಸಂಶೋಧನೆಗಳು. ಕೆನೆ ತೆಗೆದ ಹಾಲಾದರೆ ಎಷ್ಟು ಕುಡಿದರೂ ಪರವಾಗಿಲ್ಲ. ಏಕೆಂದರೆ ಅದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ವಿಟಮಿನ್ 'ಡಿ' ಹೇರಳವಾಗಿರುವ ಆಹಾರ ಸೇವಿಸುವುದೂ ಮುಖ್ಯ. ಏಕೆಂದರೆ ಕೆಲವು ಪ್ರಕರಣಗಳಲ್ಲಿ ವಿಟಮಿನ್ 'ಡಿ' ಕೊರತೆಯೂ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣ ಎನ್ನುವುದು ಬೆಳಕಿಗೆ ಬಂದಿದೆ. ಕೊಬ್ಬುರಹಿತ (ಕೆನೆ ತೆಗೆದ) ಹಾಲಿನಲ್ಲಿ ವಿಟಮಿನ್ 'ಡಿ' ಸಿಗುತ್ತದೆ.
ಆಹಾರದಿಂದ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುವುದು ಸಾಧ್ಯವಿದೆ ಎಂದಾಯಿತು. ಕ್ಯಾನ್ಸರ್ ತಗುಲಿದ್ದರೂ, ಚಿಕಿತ್ಸೆಗೆ ಪೂರಕವಾಗಿಯೂ ಆಹಾರ ಕಾರ್ಯ ನಿರ್ವಹಿಸಬಲ್ಲದು. ಹೀಗಾಗಿ ಆಹಾರದಲ್ಲಿ ಎಲ್ಲ ಪೌಷ್ಟಿಕ ಅಂಶಗಳ ಸಮತೋಲನ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಅದರ ಜತೆಯಲ್ಲಿ ಆರೋಗ್ಯಕರವಾದ ಜೀವನಶೈಲಿ ಸಹ ಅಷ್ಟೇ ಮುಖ್ಯ.


(ಮುಂದುವರಿಯುವುದು)

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement