ಕೂಲ್ ಕೊಲೆ
ಬಾಯಾರಿದೆಯಾ? ಕೂಲ್‌ಡ್ರಿಂಕ್ಸ್ ಅಂಗಡಿ ನಿಮ್ಮನ್ನು ಕರೆಯುತ್ತಿದೆಯಾ? ಹ್ಞಾಂ, ನಿಲ್ಲಿ... ಈ ತಂಪು ಪಾನೀಯಗಳು ...
ಬಾಯಾರಿದೆಯಾ? ಕೂಲ್‌ಡ್ರಿಂಕ್ಸ್ ಅಂಗಡಿ ನಿಮ್ಮನ್ನು ಕರೆಯುತ್ತಿದೆಯಾ? ಹ್ಞಾಂ, ನಿಲ್ಲಿ... ಈ ತಂಪು ಪಾನೀಯಗಳು ತಂದೊಡ್ಡುವ ದುರಂತ ಭೀಕರ. ಇವು ತಂಪೆರೆಯುವುದು ಕ್ಷಣಿಕ. ಹೆಚ್ಚೆಚ್ಚು ತಂಪಾಗಬೇಕೆಂದು ಸಿಕ್ಕಾಪಟ್ಟೆ ಕೂಲ್‌ಡ್ರಿಂಕ್ಸ್ ಕುಡಿದರೆ ನಿಮ್ಮ ದೇಹ ಪರ್ಮನೆಂಟಾಗಿ ತಣ್ಣಗಾಗುತ್ತದೆ!
ಈಗಂತೂ ಸೂರ್ಯನಿಗೆ ಸಿಕ್ಕಾಪಟ್ಟೆ ಸಿಟ್ಟು. ಧಗಧಗನೆ ಉರಿಯುತ್ತ ದೇಹದ ನೀರಿನ ಅಂಶವನ್ನೆಲ್ಲ ಹೀರುತ್ತಿದ್ದಾನೆ. ಹಾಗಾಗಿ ಆಗಾಗ್ಗೆ ದಾಹ ಆಗುವುದಂತೂ ಗ್ಯಾರಂಟಿ. ಹಾಗಂತ ಅತ್ತಿತ್ತ ಕಣ್ಣು ಹಾಯಿಸಿದರೆ ಬಣ್ಣ ಬಣ್ಣದ ತಂಪು ಪಾನೀಯಗಳು ಆಕರ್ಷಿಸುತ್ತವೆ. ಎಷ್ಟಾದರೂ ಸರಿ ಟೆನ್ಷನ್ ಇಲ್ಲದೆ ಕೊಂಡು ಕುಡಿಯುವುದು ವಾಡಿಕೆ. 'ಕುಡಿಯಬೇಕು ಎಂದಾಗೆಲ್ಲ ಬಣ್ಣ ಬಣ್ಣದ ಜ್ಯೂಸ್ ಸಿಗುವಾಗ ಸಪ್ಪೆ ನೀರನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುವುದಾ?' ಎಂಬ ಮೂರ್ಖತನದ ಪ್ರಶ್ನೆ ಬರುವುದು ಸಹಜ.
ಆದರೆ, ಟೆನ್ಷನ್ ಮಾಡಬೇಕಾದ ವಿಚಾರವೇ ಬೇರೆ ಇದೆ. ಬಾಯರಿಕೆ ಆದಾಗೆಲ್ಲ ಕುಡಿಯುವ 'ಕೋಲ್ಡ್' ರಕ್ತದೊತ್ತಡ ಹೆಚ್ಚಿಸುತ್ತದೆ. ನೀವು ಬಿಪಿಗೆ ತುತ್ತಾಗುತ್ತೀರಿ. ಸಿಹಿ ಪಾನೀಯ, ಫ್ರಿಜ್ಜಿ ಜ್ಯೂಸು ಹಾಗೂ ಕೆಲವು ಹಣ್ಣಿನ ಜ್ಯೂಸುಗಳು ದೇಹದ ತೂಕದ ಮೇಲೆ ಪರಿಣಾಮ ಬೀರುವುದು ಗೊತ್ತೇ ಇದೆ. ಮಧುಮೇಹ, ಹೃದಯ ಕಾಯಿಲೆಗಳೊಂದಿಗೆ ಇವು ನಿಕಟ ಸಂಬಂಧವನ್ನೂ ಇರಿಸಿಕೊಂಡಿವೆ. ಸದ್ಯ ರಕ್ತದೊತ್ತಡದೊಂದಿಗೂ ವ್ಯವಹಾರ ಇರಿಸಿಕೊಂಡಿರುವುದು ಪತ್ತೆಯಾಗಿದೆ!
ರಕ್ತದೊತ್ತಡ ಹೆಚ್ಚಾಗುವಿಕೆಗೆ ತಂಪು ಪಾನೀಯಗಳು ನೇರ ಕಾರಣ ಎಂಬುದನ್ನು ಅಮೆರಿಕನ್ ಕಾರ್ಡಿಯೋಲಜಿ ಜರ್ನಲ್ ಸಂಶೋಧಿಸಿದೆ. ಗ್ರಿಫಿನ್ ಆಸ್ಪತ್ರೆಯ ಸದಸ್ಯರು 12 ವಿಧದಲ್ಲಿ ಅಧ್ಯಯನ ನಡೆಸಿದ್ದರು. 4,10,000 ಜನರನ್ನು ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿತ್ತು. ಪ್ರತಿಯೊಬ್ಬರಲ್ಲೂ ಅವರು ತೆಗೆದುಕೊಳ್ಳುವ ಸಿಹಿ ಪಾನೀಯ ಮತ್ತು ರಕ್ತದೊತ್ತಡದ ಪ್ರಮಾಣ ಪರೀಕ್ಷೆಗೊಳಪಡಿಸಿದ್ದರು. ಫಿಜ್ಜಿ ಡ್ರಿಂಕ್ಸ್ ಹೆಚ್ಚು ಕುಡಿಯುವವರಲ್ಲಿ ರಕ್ತದೊತ್ತಡದ ಪ್ರಮಾಣ ಹೆಚ್ಚಾಗಿತ್ತು.
ಅಧ್ಯಯನ ಹೇಳುವಂತೆ ರಕ್ತದೊತ್ತಡ ಮತ್ತು ಸಿಹಿ ಪಾನಿಯಗಳ ನಡುವೆ ನೇರ ಸಂಬಂಧವಿದೆ. ಸಿಹಿ ಜ್ಯೂಸ್ ಕುಡಿಯುವ ಶೇ.70ರಷ್ಟು ಜನರಲ್ಲಿ ರಕ್ತದೊತ್ತಡ ಹೆಚ್ಚಿದೆ. ಹರೆಯದವರಲ್ಲಿ ಶೇ.87ರಷ್ಟಿದೆ.
ತಂಪು ಪಾನೀಯ ದೇಹದಲ್ಲಿರುವ ನೈಟ್ರಿಕ್ ಆ್ಯಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತ ನಾಳಗಳು ಸಂಕುಚಿತಗೊಳ್ಳುತ್ತವೆ. ಹೀಗಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ರಕ್ತದೊತ್ತಡ ಮಿತಿಮೀರಿದರೆ ಎಂಥ ಅನಾಹುತವಾಗುತ್ತದೆ ಎಂಬುದನ್ನು ವಿವರಿಸಬೇಕಿಲ್ಲ!
'ಇದಕ್ಕೆ ಪರಿಹಾರವೇನು?' ಎಂದು ಆಕಾಶ ನೋಡುತ್ತ ಕೂರುವುದಕ್ಕಿಂತ ಅಹಂಕಾರ, ಉದಾಸೀನ ಬಿಟ್ಟು ಹೊರಗೆ ಹೋಗುವಾಗ ಒಂದು ಬಾಟಲಿ ನೀರು ಇಟ್ಟುಕೊಳ್ಳುವುದೇ ಕ್ಷೇಮ.
ಸೇಫ್ ಆಗಲು
ಹೊರಗೆ ಹೋಗುವಾಗ ಮನೆಯಿಂದಲೇ ಕಾದಾರಿದ ನೀರನ್ನು ಒಯ್ಯಿರಿ.
ಹಾಗೂ ಬಾಯಾರುತ್ತಿದ್ದರೆ ಎಳನೀರಿನ ಸಹವಾಸ ಬಯಸಿ.
ಜೇಬಿನಲ್ಲಿ ಒಂದಿಷ್ಟು ಚಾಕೊಲೆಟ್‌ಗಳನ್ನು ಇಟ್ಟುಕೊಂಡಿರಿ. ಪ್ರಯಾಣದ ಮಧ್ಯ ಸವಿದರೆ, ಹೆಚ್ಚು ಬಾಯಾರದು.
ಹೆಚ್ಚು ಒತ್ತಡಕ್ಕೆ ಒಳಗಾಗದಿರಿ. ಒತ್ತಡ ಕೂಡ ಬಾಯಾರಿಕೆಗೊಂದು ಪ್ರಬಲ ಕಾರಣ.
ಮಹಿಳೆಯರು ಛತ್ರಿ ಹಿಡಿದೇ ಹೊರಗೆ ಹೊರಡಿ.
- ಮಂಜು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.