ಕೂಪಮಂಡೂಕ ಕಥೆ
ಕೂಪಮಂಡೂಕ ಪ್ರವೃತ್ತಿ ಎಂದರೆ ಬಾವಿಯೊಳಗಿನ ಕಪ್ಪೆಯ ಸ್ವಭಾವ. ರೂಪ, ವಿದ್ಯೆ, ಧನ, ಯೌವ್ವನ ಇವುಗಳ ಅಹಂಕಾರದಿಂದ 'ನಾನು' ಎಂಬ ಪ್ರತಿಷ್ಠೆಯನ್ನು ನೆತ್ತಿಗೇರಿಸಿಕೊಂಡು ಬದುಕುವ ಪ್ರವೃತ್ತಿ ಹೆಚ್ಚಾಗಿದೆ. ಇಂತಹ ಸ್ವಭಾವದ ಜನರನ್ನು ಕುರಿತು ಒಮ್ಮೆ ಸ್ವಾಮಿ ವಿವೇಕಾನಂದರು ಈ ಕತೆಯನ್ನು ಹೇಳಿದರು.
ಸಮುದ್ರದ ಸಮೀಪದ ಬಾವಿಯಲ್ಲಿ ಒಂದು ಕಪ್ಪೆ ವಾಸವಾಗಿತ್ತು. ಅದು ಹುಟ್ಟಿ ಬೆಳೆದಿದ್ದು ಆ ಬಾವಿಯಲ್ಲೇ ಅದೇ ಅದರ ಪ್ರಪಂಚವಾಗಿತ್ತು. ಹೀಗಿರುವಾಗ ಒಮ್ಮೆ ಸಮುದ್ರದಲ್ಲಿ ಅಲೆಗಳ ಹೊಯ್ದಾಟ ಹೆಚ್ಚಾಗಿ ಅಲ್ಲಿಯ ಕಪ್ಪೆಯೊಂದು ಬಾವಿಯೊಳಗೆ ಬಿತ್ತು. ತಕ್ಷಣ ಬಾವಿಕಪ್ಪೆ ನೆಗೆದು ಹಿಡಿಯಲು ಹೋದಾಗ ನೋಡುತ್ತದೆ, ತನ್ನಂತೆಯೇ ಇರುವ ಇನ್ನೊಂದು ಕಪ್ಪೆ! ಆಶ್ಚರ್ಯದಿಂದ ಕೇಳಿತು, ಏನಯ್ಯಾ, ನೀನು ಯಾರು? ಇಲ್ಲಿಗೇಕೆ ಬಂದೆ? ಸಮುದ್ರ ಕಪ್ಪೆಯು, ಅಯ್ಯಾ, ನಾನು ಸಮುದ್ರದಿಂದ ಬಂದೆ ಎಂದಿತು. ಬಾವಿಕಪ್ಪೆ ಕುತೂಹಲದಿಂದ, ಸಮುದ್ರ ಏನದು? ಅದು ನನ್ನ ಬಾವಿಯಷ್ಟು ದೊಡ್ಡದೆ? ಎಂದಿತು. ಸಮುದ್ರ ಕಪ್ಪೆ, ನಕ್ಕಿತು. ಬಾವಿಕಪ್ಪೆಗೆ ರೇಗಿ, ಬಾವಿಯ ನೀರಿನಲ್ಲಿ ಒಂದು ಸುತ್ತುಬಂದು ಕೇಳಿತು, ಈಗ ಹೇಳು, ನಿನ್ನ ಸಮುದ್ರ ಇಷ್ಟು ದೊಡ್ಡದೋ? ಸಮುದ್ರಕಪ್ಪೆಯು, ಅಯ್ಯಾ, ಸಮುದ್ರವು ಬಾವಿಗಿಂತ ಸಾವಿರ ಸಾವಿರ ಪಾಲು ದೊಡ್ಡದು ಎಂದಿತು.
ಬಾವಿಕಪ್ಪೆ, ಇಲ್ಲ, ಸಮುದ್ರ ನನ್ನ ಬಾವಿಗಿಂತ ದೊಡ್ಡದಿರಲು ಸಾಧ್ಯವಿಲ್ಲ. ನಿನಗೆ ಅಷ್ಟು ಅನುಮಾನವಿದ್ದರೆ, ನನ್ನ ಜತೆ ಬಾ, ಎಂದಿತು ಸಮುದ್ರ ಕಪ್ಪೆ. ಆಗ ಬಾವಿಕಪ್ಪೆಯು, ಇಲ್ಲ ನಾನು ನಿನ್ನೊಂದಿಗೆ ಬರಲಾರೆ. ನೀನೊಬ್ಬ ದೊಡ್ಡ ಸುಳ್ಳುಗಾರ. ನನಗೆ ಗೊತ್ತು. ನನ್ನ ಬಾವಿಗಿಂತಲೂ ದೊಡ್ಡದು ಯಾವುದೂ ಇರಲು ಸಾಧ್ಯವಿಲ್ಲ ಎಂದಿತು. ನನ್ನನ್ನು ಮೂರ್ಖನನ್ನಾಗಿಸಲು ಬಂದಿದ್ದೀಯ ಹೊರಡು ಇಲ್ಲಿಂದ ಎಂದು ಗದರಿಸಿತು. ಈ ಮೂರ್ಖ ಕಪ್ಪೆಯೊಂದಿಗೆ ವಾದಿಸಿ ಪ್ರಯೋಜನವಿಲ್ಲವೆಂದು ಸಮುದ್ರಕಪ್ಪೆಯು ಅಲ್ಲಿಂದ ಹೊರಟಿತು. ಟಿ
-ಆನಂದ ಎಸ್.ಎನ್.
anandsn193@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.