ಗೋಡೆ ಬರಹ
ಆಕೆಗೆ ಆಫೀಸ್‌ಗೆ ಹೊತ್ತಾಯ್ತು ಎಂದು ಆತುರವಾದರೆ ಆತನಿಗೆ ಕ್ಯಾಬ್ ಮಿಸ್ ಆದರೆ ಏನಪ್ಪಾ ಗತಿ ಎನ್ನುವ ಆತಂಕ...
ಆಕೆಗೆ ಆಫೀಸ್‌ಗೆ ಹೊತ್ತಾಯ್ತು ಎಂದು ಆತುರವಾದರೆ ಆತನಿಗೆ ಕ್ಯಾಬ್ ಮಿಸ್ ಆದರೆ ಏನಪ್ಪಾ ಗತಿ ಎನ್ನುವ ಆತಂಕ ಹೀಗೆ ತಮ್ಮ ಎಂದಿನ ವೀಕ್‌ಡೇಸ್‌ನ ತಾಪತ್ರಯದಲ್ಲಿ ರೆಡಿಯಾಗುತ್ತಿದ್ದರು. 'ಸರಿ ಡಿಯರ್, ಬರ್ತೀನಿ ಫೇಸ್ ಬುಕ್‌ನಲ್ಲಿ ಎಂದಿನಂತೆ ಚಾಟ್ ಮಾಡೋಣಾ. ಹೇಗಿದ್ರೂ ಅಲ್ಲಿ ಇಬ್ಬರೂ ಫ್ರೀನೇ ಅಲ್ವಾ' ಎನ್ನುತ್ತಾ ಸುಂದರೇಶ್ ಬಾಕ್ಸ್ ಹಿಡಿದು ತನ್ನ ಲ್ಯಾಪ್‌ಟ್ಯಾಪ್ ಹಿಡಿದು ಹೊರಟೇಬಿಟ್ಟ. 'ರೀ ಸಂಜೆ ನಾನು ಬರೋದು ಲೇಟ್ ಆಗುತ್ತೆ ನನ್ನ ಕಾಯಬೇಡಿ ಈಗಲೇ ಮನೆ ಕೀ ತೆಗೆದುಕೊಂಡು ಹೋಗಿ ಎಂದಳು.' 'ಹೌದೂ, ಮರೆತಿದ್ದೆ ಸಂಜೆ ನಮಗೆ ಯುಎಸ್ ಕ್ಲೈಂಟ್‌ನ ಜೊತೆ ಆನ್ ಲೈನ್ ಮೀಟಿಂಗ್ ಇದೆ ನಂದೂ ಲೇಟ್ ಆಗಬಹುದು ಸರಿ ಕೊಡು ಯಾತಕ್ಕೂ ಇರಲಿ.' ಎಂದು ಕೀ ಪಡೆದು ಓಟ ಕಿತ್ತ.
ಈ ಸುಂದರೇಶ್ ಮತ್ತು ಸುನೀತಾ ಇಬ್ಬರೂ ತಮ್ಮ ತಮ್ಮ ದಿನದ ವಿಚಾರಗಳನ್ನು ತಮ್ಮ ಫೇಸ್ ಬುಕ್‌ನ ಚಾಟ್‌ನಲ್ಲಿ ಹಂಚಿಕೊಳ್ತಾರೆ. ಹಿಂದೆಲ್ಲಾ ಗಂಡ ಹೆಂಡತಿಯರ ಮನದಾಳದ ಮಾತುಗಳು ಖಾಸಗಿಯ ಕೋಣೆಯ ಗೋಡೆಗೂ ಕೇಳಿಸದಂತೆ ವಿನಿಮಯವಾಗುತ್ತಿದ್ದ ಕಾಲವು ಬದಲಾಗಿ ಈಗೆಲ್ಲ ಫೇಸ್ ಬುಕ್‌ನ ಗೋಡೆಗಳಿಗೆ ಮೆತ್ತಿ, ಅದೇ ಗೋಡೆಗಳ ಮೂಲಕವೇ ಮಾತಾಡುವ ಕಾಲ ಬಂದಾಗಿದೆ. ಹೀಗೆ ಇಬ್ಬರೂ ಪ್ರತಿದಿನ ಚಾಟ್ ಮಾಡುವುದು ಮಾಮೂಲಾಗಿತ್ತು.
ಆದರೆ ಈ ಸುನೀತಾಗೆ ತನ್ನ ಆಫೀಸ್‌ನಲ್ಲಿಯೇ ಇದ್ದ ಕೊಲೀಗ್ ರಮೇಶ್ ಎಂದರೆ ಅಚ್ಚುಮೆಚ್ಚು. ಅವನಿಗೆ ಸುಂದರಿಯರ ಖಯ್ಯಾಲಿ ಅಷ್ಟೆ. ಅದು ಸುನೀತಾಗೆ ತಿಳಿಯದು. ನಿಜವಾಗಿಯೂ ತನ್ನನ್ನು ಇಷ್ಟ ಪಡುತ್ತಾನೆಂದು ಅವನ ಹಿಂದೆ ತಿರುಗುವುದು ಇವಳಿಗೆ ಖುಷಿಯ ಸಂಗತಿ. ಇದೆಲ್ಲ ವಿಷಯವು ಈಕೆಯ ಆಪ್ತ ಗೆಳತಿ ಸುಮತಿಗೆ ಗೊತ್ತು. ತಾನು ಮದುವೆಯಾಗದೇ ಇದ್ದರೂ ಗಂಡನಿಗೆ ಮೋಸ ಮಾಡುವುದು ಸರಿಯಲ್ಲವೆಂದು ಸಾರಿ ಸಾರಿ ಸುನೀತಾಗೆ ಹೇಳಿದರೂ ಆಕೆ ಕೇಳುವ ಹಂತ ಮೀರಿ ಮುಂದುವರೆದಿದ್ದಳು. ಗಂಡ ನೊಂದಿಗೆ ಸ್ವಲ್ಪ ಚಾಟ್ ಮಾಡಿ ನಂತರದಲ್ಲಿ ತನ್ನಂತೆಯೇ ತನ್ನ ಗಂಡನೊಂದಿಗೆ ಚಾಟ್ ಮಾಡಿ ಮ್ಯಾನೇಜ್ ಮಾಡಲು ಸುನೀತಾಗೆ 'ಪವರ್ ಆಫ್ ಅಟಾರ್ನಿ' ಕೊಟ್ಟು ತಾನು ರಮೇಶ್‌ನ ಜತೆ ಹರಟುತ್ತಾ ಅವನೊಂದಿಗೆ ಹೊರಗೆಲ್ಲ ಸುತ್ತುತ್ತಿದ್ದಳು. ಇದು ಹೀಗೆ ಮುಂದುವರೆದಿತ್ತು. ಸುನೀತಾಳ ಪರವಾಗಿ ಸುಮತಿ ಚಾಟ್ ಮಾಡಿದರೂ ತನ್ನ ಮನದ ಮಾತುಗಳನ್ನೇ ಬರೆಯಬೇಕಲ್ಲಾ? ಹಾಗಾಗಿ ಎಲ್ಲವನ್ನು ಹೇಳಿಕೊಳ್ಳುತ್ತಿದ್ದಳು. ಆತನು ತನ್ನ ಹೆಂಡತಿಯಲ್ಲವೇ ಎಂದು ತನ್ನ ಎಲ್ಲ ಒಳಹರಿವನ್ನೂ, ಅವನ ನೈಜ ರಸಿಕತೆಯನ್ನು ಹಂಚಿಕೊಳ್ಳುತ್ತಿದ್ದ. ಇದೆಲ್ಲವನ್ನು ಗಮನಿಸಲು ಟೈಮ್ ಇರದ ಸುನೀತಾ ಎಂದಿನಂತೆ ಇದ್ದಳು. ಆದರೆ ಒಮ್ಮೆ ಗಂಡನಿಂದ ಇಂದಿನ 'ಚಾಟ್‌ನಲ್ಲಿ ನಿನ್ನ ರಸಿಕತೆ ಮಿತಿಮೀರಿತ್ತು' ಎಂದು ಅಂದಾಗಲೇ ತನ್ನ ತಪ್ಪಿನ ಅರಿವಾಯ್ತು. ಆದರೆ ಅದನ್ನ ತೋರಗೊಡದೆ ಮಾರನೆಯ ದಿನ ಆಫೀಸ್‌ಗೆ ಬಂದು ಸುಮತಿಯನ್ನು ತರಾಟೆ ತೆಗೆದುಕೊಂಡಳು. ಗೆಳತಿಗೆ ಸಹಾಯ ಮಾಡು ಎಂದರೆ ಇಂತಹ ಮನೆಮುರಕ ಕೆಲಸ ಮಾಡುವೆಯಾ ಎಂದೆಲ್ಲ ಮೂದಲಿಸಿದಳು. ಅಷ್ಟು ಹೊತ್ತಿಗಾಗಲೇ ಸುಮತಿಯು ತನ್ನ ಮನಸ್ಸನ್ನು ಸುಂದರೇಶ್‌ಗೆ ಒಪ್ಪಿಸಿ ಆಗಿತ್ತು. ಹಾಗಾಗಿ ಯಾವುದೇ ಮುಲಾಜಿಲ್ಲದೇ 'ನಾನು ನಿನ್ನ ಗಂಡನನ್ನು ಮದುವೆಯಾಗ್ತೀನಿ ನೀನು ನಿನ್ನ ರಮೇಶ್‌ನ ಹಿಂದೆ ಸುತ್ತು' ಎನ್ನುವ ಮಾತು ಸುನೀತಾಳಿಗೆ ಬರಸಿಡಿಲಂತೆ ಬಡಿದಿತ್ತು.
-ಚಿತ್ತಾ ಆರಿದ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.