ಬದುಕು ಆರ್ಡಿನರಿ
'ಬದುಕು ಈಗ ಸುಲಭ' ಅನ್ನೋದು ಚಿನ್ನ ಅಡವಿಡುವ ಆ್ಯಡ್ಗೆ ಮಾತ್ರ ಚೆಂದ. ಲೈಫೀಗ ಮಲ್ಟಿಪ್ಲೆಕ್ಸ್ ಲೆವೆಲ್ಲಿಗೆ ದುಬಾರಿಯಾಗಿದೆ...
'ಬದುಕು ಈಗ ಸುಲಭ' ಅನ್ನೋದು ಚಿನ್ನ ಅಡವಿಡುವ ಆ್ಯಡ್ಗೆ ಮಾತ್ರ ಚೆಂದ. ಲೈಫೀಗ ಮಲ್ಟಿಪ್ಲೆಕ್ಸ್ ಲೆವೆಲ್ಲಿಗೆ ದುಬಾರಿಯಾಗಿದೆ. ಗಾಂಧೀನೋಟು ಗಾಂಧಿಕ್ಲಾಸನ್ನೇ ಇಲ್ಲದಂತೆ ಮಾಡಿ ಹಾಕಿದೆ. ಕನಸುಗಳು ಬಾಲ್ಕನಿಯ ಎತ್ತರಕ್ಕೆ ವಿಸ್ತಾರಗೊಂಡರೂ ವಾಸ್ತವಗಳು ಮಾತ್ರ ಮಿಡ್ಲ್ ಕ್ಲಾಸಿನಲ್ಲಿ ಗಟ್ಟಿಯಾಗಿ ಬೇರೂರಿ ಕೂತಿವೆ.
ಹೌದು ಮಿಡ್ಲ್ ಕ್ಲಾಸ್ ಎಂಬ ಬಹುಸಂಖ್ಯಾತರ ನಾಡು ನಮ್ಮ ಭಾರತ. ಮಿಡ್ಲ್ಕ್ಲಾಸ್ ಅಲಿಯಾಸ್ ಮಧ್ಯಮ ವರ್ಗ ಎಂಬುದೇ ಹಾಗೆ. ಹಂಸಲೇಖ ಹೇಳುವಂತೆ 'ಆರಕ್ಕೇರದ ಮೂರಕ್ಕಿಳಿಯದ ಮಾನಕೆ ಅಂಜುವ ಮಾನವರು' ಈ ಮಧ್ಯಮ ವರ್ಗದವರು. ಇವರ ಬದುಕು ಬದಲಾಗುವುದೇ ಇಲ್ಲ. ಇಲ್ಲಿ ಮಧ್ಯಮ ವರ್ಗ ಎಂಬುದು ಅನುಭವಿಸುವ ಮಂದಿಗೆ ಯಾವತ್ತಿಗೂ ಆಕರ್ಷಕವಲ್ಲ. ಆದರೆ ನೋಡುಗರ ಕಣ್ಣಿಗೆ ಮಾತ್ರ ಇದು ಸದಾ ಕೌತುಕ ಹಾಗು ಆಕರ್ಷಕ. ಯಾಕಂದ್ರೆ ಇದು ಬಡವರಲ್ಲದೆಯೂ ಬಡವರಂತೆ ತೋರಿಸಿಕೊಳ್ಳುತ್ತದೆ. ಸಿರಿವಂತರಲ್ಲದಿದ್ದರೂ ಹೈ ಲೆವೆಲ್ಲಿನಂತೆ ಪೋಸ್ ಕೊಡುತ್ತದೆ. ಬಣ್ಣದ ಬದುಕು ಈ ಮಧ್ಯಮವರ್ಗದ್ದು. ಅದೇ ಕಾರಣಕ್ಕೆ ಚಿತ್ರರಂಗದಲ್ಲಿಯೂ ಮಧ್ಯಮವರ್ಗ ಎಂಬುದು ಎಲ್ಲರನ್ನೂ ಸೆಳೆಯುವ ಸಬ್ಜೆಕ್ಟು. ಚಿತ್ರರಂಗ ಬದಲಾಗಿದೆ. ಬಾಲಿವುಡ್ನಲ್ಲಿ ಹಾಲಿವುಡ್ ಶೈಲಿ ಚಿತ್ರಗಳು ಬರುತ್ತಿವೆ. ಅದನ್ನ ಅನುಕರಿಸುವ ಭಾರತದ ಇತರೆ ಪ್ರಾದೇಶಿಕ ಚಿತ್ರರಂಗಗಳೂ ಪ್ರಯೋಗಗಳನ್ನು ಮಾಡುತ್ತಿವೆ. ಆದರೆ ಜನರನ್ನು ಸೆಳೆಯುತ್ತಿರುವುದು ಮಾತ್ರ ಆಗೊಂದು ಈಗೊಂದು ಎಂಬಂತೆ ಬರುತ್ತಿರುವ ಮಧ್ಯಮವರ್ಗದ ಬದುಕನ್ನು ಬಿಂಬಿಸುವ ಚಿತ್ರಗಳೇ.
ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಕೆಲವು ಹಿಂದಿ ಚಿತ್ರಗಳನ್ನು ಗಮನಿಸಿ. ಇಂಗ್ಲೀಷ್ ವಿಂಗ್ಲಿಷ್, ಲಂಚ್ ಬಾಕ್ಸ್, ರೈನ್ಕೋಟ್, ಕ್ವೀನ್, ಸಿಲ್ಕ್ ಜೀವನಗಾಥೆ ಎನ್ನಲಾಗಿದ್ದ ಡರ್ಟಿಪಿಕ್ಚರ್ ಇವೆಲ್ಲವೂ ಒಂದರ್ಥದಲ್ಲಿ ಮಧ್ಯಮವರ್ಗದ ಬದುಕನ್ನು ತೆರೆದಿಟ್ಟ ಚಿತ್ರಗಳೇ. ಮಧ್ಯಮವರ್ಗದ ಹೆಣ್ಣು ಉನ್ನತ ಬದುಕಿಗಾಗಿ ಹಂಬಲಿಸಿದ ಕಥೆ, ಮಧ್ಯಮವರ್ಗದ ಹೆಣ್ಣಿನ ಸ್ವಾಭಿಮಾನದ ಕಥೆ, ಈ ಥರದ ಸಂಘರ್ಷಗಳನ್ನು ಒಳಗೊಂಡ ಕಥೆಗಳೇ ಪ್ರೇಕ್ಷಕರನ್ನು ಸೆಳೆದಿದ್ದು.
ಪಾಶ್ಚಾತ್ಯ ಉಡುಗೆ ತೊಡುಗೆಗಳು, ಲೈಫ್ಸ್ಟೈಲು ಇಂಥವೇ ತುಂಬಿ ಹೋಗಿರುವ ಚಿತ್ರಗಳ ನಡುವೆ ತುಂಬುಡುಗೆ ತೊಟ್ಟ ಅಪ್ಪಟ ಭಾರತ ನಾರಿಯ ಗೆಟಪ್ಪುಗಳು ಅಪರೂಪ ಆಗಿರುವ ಕಾರಣ ಅಂಥ ಚಿತ್ರಗಳು ಜನರಿಗೆ ನಾಸ್ಟಾಲ್ಜಿಕ್ ಎನಿಸುತ್ತಿವೆ. ಹೀರೋಯಿನ್ ದೊಡ್ಡಬೊಟ್ಟು, ಉದ್ದ ಜಡೆ, ಹೂವು, ಕಾಟನ್ಸೀರೆ, ಆಭರಣ ಇವುಗಳಲ್ಲಿ ಕಂಡರೆ ಇದು ಅಪ್ಪಟ ಇಂಡಿಯನ್ ಸಿನಿಮಾ ಎಂಬ ಫೀಲು ಹುಟ್ಟುವಂತಾಗಿದೆ.
ಅಂದಿನ ಥಂಡರ್ಥೈಸ್ ಕ್ವೀನ್ಶ್ರೀದೇವಿ ದಶಕದ ನಂತರ ಇಂಗ್ಲಿಷ್ ವಿಂಗ್ಲಿಷ್ ಮೂಲಕ ತೆರೆಮೇಲೆ ಬಂದಿದ್ದು ಆಗಿನ ಗ್ಲಾಮರ್ ವೇಷದಲ್ಲಲ್ಲ, ದಕ್ಷಿಣ ಭಾರತದ ಸದ್ಗೃಹಿಣಿಯ ಗೆಟಪ್ಪಿನಲ್ಲಿ. ಆಕೆ ಇಂಗ್ಲೀಷ್ ಬಾರದೆ ಪಡಿಪಾಟಲು ಅನುಭವಿಸುವುದು, ಮನಸು ಮಾಡಿದರೆ ಏನು ಬೇಕಾದರೂ ಕಲಿತೇನು, ಇಂಗ್ಲೀಷ್ ಯಾವ ಲೆಕ್ಕ ಎಂಬಂತೆ ಭಾಷೆ ಕಲಿಯೋದು ಇವೆಲ್ಲವೂ ಮಧ್ಯಮವರ್ಗದ ಆ ಥರದ ಗೃಹಿಣಿಯರ ಮನಸುಗಳಿಗೆ ತುಂಬಾ ಆಪ್ತವೆನಿಸಿತ್ತು.
ಇದೀಗ ದೇಶಾದ್ಯಂತ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿರೋ ಕ್ವೀನ್ ಚಿತ್ರವಾದರೂ ಅಷ್ಟೇ, ಅದರಲ್ಲಿನ ಕಂಗನಾ ರೌನತ್ ಕೂಡ ನಮ್ಮ ನಡುವಿನ ಮಧ್ಯಮ ವರ್ಗದ ಹೆಣ್ಣನ್ನೇ ಪ್ರತಿನಿಧಿಸುತ್ತಾಳೆ. ಸವಾಲು ಎದುರಿಸೋ ಸಂದರ್ಭ ಬಂದರೆ ಎಷ್ಟು ಬೇಕಾದರೂ ದಿಟ್ಟತನ ತೋರಬಲ್ಲಳು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸುವ ಚಿತ್ರ ಕ್ವೀನ್. ಅಷ್ಟೇ ಅಲ್ಲ, ಹೆಣ್ಣು ಕೂಡ ಮನಸು ಮಾಡಿದರೆ ಏಕಾಂಗಿಯಾಗಿ ಬದುಕನ್ನು ಕಟ್ಟಿಕೊಳ್ಳಬಲ್ಲಳು ಹಾಗೂ ಅದ್ಭುತವಾಗಿ ಎಂಜಾಯ್ ಮಾಡಬಲ್ಲಳು ಅಂತ ಕಂಗನಾ ಕ್ವೀನ್ ಪಾತ್ರದ ಮೂಲಕ ನಿರೂಪಿಸುತ್ತಾಳೆ. ಮಧ್ಯಮ ವರ್ಗದ ಹೆಣ್ಣು, ತನಗೆ ಮ್ಯಾಚ್ ಅಲ್ಲ ಎಂಬ ಕಾರಣಕ್ಕೆ ಮದುವೆಗೆ ಎರಡು ದಿನ ಮುನ್ನ ಗಂಡು ಈಕೆಯನ್ನು ತಿರಸ್ಕರಿಸಿದಾಗ, ಈಕೆ ಧೃತಿಗೆಡದೆ ಏಕಾಂಗಿಯಾಗಿ ಸವಾಲು ಸ್ವೀಕರಿಸಿ, ಒಬ್ಬಳೇ ಹನಿಮೂನ್ ಟ್ರಿಪ್ ಹೋಗುತ್ತಾಳೆ. ಅಲ್ಲಿಂದ ಮುಂದೆ ಅವಳ ಕ್ವೀನ್ ಸೈಜ್ ಬದುಕಿನ ವಿಶ್ವರೂಪದರ್ಶನ. ತನ್ನ ಪಾತ್ರದ ಮೂಲಕ ಕಂಗನಾ ಪ್ರತಿ ಭಾರತೀಯ ಯುವತಿಯಲ್ಲೂ ಒಬ್ಬ ಕ್ವೀನನ್ನು ಜಾಗೃತಗೊಳಿಸುತ್ತಾಳೆ.
ಎರಡು ವರ್ಷ ಹಳೆಯ ಡರ್ಟಿಪಿಕ್ಚರ್ನ ವಿದ್ಯಾ ಬಾಲನ್ ಆದರೂ ಅಷ್ಟೇ. ಚಿತ್ರದ ಹೆಚ್ಚಿನ ಭಾಗ ಆಕೆಯ ಮಧ್ಯಮವರ್ಗದ ಬದುಕಿನ ಹೋರಾಟಗಳು ಮತ್ತು ಸಿನಿಮಾ ರಂಗದಲ್ಲಿ ನೆಲೆಯೂರುವ ಕನಸಿನ ಚಿತ್ರಣವಿದೆ. ಅವಳ ಬದುಕು ಮಧ್ಯಮ ವರ್ಗದ ಹೆಣ್ಮಕ್ಕಳಿಗೆ ಎಚ್ಚರಿಕೆ, ಕನಸು, ಹುರುಪು, ಜಿಗುಪ್ಸೆ ಎಲ್ಲವನ್ನೂ ಪ್ಯಾಕೇಜಿನಂತೆ ನೀಡುತ್ತದೆ. ಸಿನಿಮಾ ರಂಗವನ್ನು ಮಾಯಾಲೋಕದಂತೆ ಕಾಣುವ ಎಲ್ಲ ಮಧ್ಯಮ ವರ್ಗದ ಹೆಣ್ಮಕ್ಕಳಿಗೆ ವಿದ್ಯಾಬಾಲನ್ ಚಿತ್ರ ಹೆಜ್ಜೆ ಹೆಜ್ಜೆಗೂ ರಿಲೇಟ್ ಆಗುತ್ತದೆ.
ರೈನ್ ಕೋಟ್ ಚಿತ್ರದ ಐಶ್ವರ್ಯ ರೈಳನ್ನು ಯಾರು ಮರೆಯಲು ಸಾಧ್ಯ? ವಿಶ್ವಸುಂದರಿ ಹೀಗೂ ಕಾಣಲು ಸಾಧ್ಯವಾ ಎಂಬಷ್ಟು ಸಿಂಪಲ್ ಲುಕ್ಕಿನಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದ ಚಿತ್ರ ರೈನ್ಕೋಟ್. ಧನಿಕ ಕುಟುಂಬಕ್ಕೆ ಸೊಸೆಯಾಗಿ ಕಳಿಸೋ ಆಸೆಯಿಂದ ಆಕೆಯ ಪ್ರೀತಿಯನ್ನೇ ಬಲಿಕೊಟ್ಟು ಗೊತ್ತಿಲ್ಲದ ವ್ಯಕ್ತಿಗೆ ಮದುವೆ ಮಾಡಿ ಆಕೆಯ ಕನಸುಗಳಿಗೆ ಕೊಳ್ಳಿ ಇಡುತ್ತಾರೆ ಐಶ್ವರ್ಯಳ ಪಾಲಕರು. ವಂಚಕ ಗಂಡನಿಂದ ವೈವಾಹಿಕ ಬದುಕು ನರಕವಾಗುತ್ತದೆ. ಆದರೂ ಸಂಸಾರದ ಗುಟ್ಟು ಬಿಟ್ಟುಕೊಡದಂತೆ, ತನಗೇನು ಕಮ್ಮಿ ಎಂಬಂತೆ ಏಕಾಂಗಿಯಾಗಿ ಬದುಕು ನಿರ್ವಹಿಸುವ ಛಾತಿ ತೋರುವ ಪಾತ್ರದಲ್ಲಿ ಐಶ್ವರ್ಯ ಅಚ್ಚರಿ ಹುಟ್ಟಿಸುತ್ತಾಳೆ. ಈ ಪಾತ್ರವೂ ಕೂಡ ಮಧ್ಯಮವರ್ಗದ ಹೆಣ್ಮಕ್ಕಳಿಗೆ ಒಂದು ಪಾಠ. ಇಲ್ಲಿ ಹಲವು ನೊಂದ ಮಧ್ಯಮವರ್ಗದ ಗೃಹಿಣಿಯರು ಐಶ್ವರ್ಯಳ ಪಾತ್ರದೊಂದಿಗೆ ತಮ್ಮನ್ನು ಕಲ್ಪಿಸಿಕೊಳ್ಳುವುದು ಖಂಡಿತ. 'ಲಂಚ್ಬಾಕ್ಸ್'ನ, ಇನ್ಯಾವುದೋ 'ತೀರ'ದತ್ತ ಹೋಗಲು ಹಂಬಲಿಸುವ ಗೃಹಿಣಿ, ಯಾರ ಕಣ್ಣಂಚನ್ನು ಒದ್ದೆಯಾಗಿಸುವುದಿಲ್ಲ?
ಇದೇ ಮಧ್ಯಮವರ್ಗದ ಚಿತ್ರಗಳ ಯಶಸ್ಸಿನ ಫಾರ್ಮುಲ. ಇದು ಮಧ್ಯಮವರ್ಗದವರು ತಮ್ಮೊಂದಿಗೆ ಹೋಲಿಸಿಕೊಳ್ಳುವಂತೆ ಮಾಡುತ್ತದೆ. ಸಿರಿವಂತರಿಗೆ ನಾವು ಅವರಿಗಿಂತ ಮೇಲು ಎಂಬ ಸಮಾಧಾನ ಕೊಡುತ್ತದೆ. ಬಡವರಿಗೆ ನಾವು ಇಲ್ಲೇ ಬೇಕಾದರೂ ಇರೋಣ, ಮಧ್ಯಮವರ್ಗ ಮಾತ್ರ ಬೇಡ ಎಂಬ ಭಾವ ತರಿಸುತ್ತದೆ. ಹಾಗಿದ್ದೂ ಮಧ್ಯಮವರ್ಗ ಮಾತ್ರ ಎಲ್ಲರ ಪಾಲಿಗೂ ಒಂದು ವಿಸ್ಮಯವೇ. ಅಲ್ಲಿರುವ ಮಂದಿಗೆ ಎಲ್ಲ ಕಷ್ಟಗಳಲ್ಲೂ ಒಂದು ಸುಖಾನುಭೂತಿಯಿದೆ.
-ಸಾಗರಿ