ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಧರ್ಮ ವಿವಾಹ

1972ನೇ ಇಸವಿಯ ಒಂದು ದಿನ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮುಂದೆ ...

Rashmi Kasaragodu
Updated On : 30 Apr 2014, 2:57 am

1972ನೇ ಇಸವಿಯ ಒಂದು ದಿನ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮುಂದೆ ಕ್ಷೇತ್ರದ ಕೆಲಸಗಾರನೊಬ್ಬ ಚಿಂತಾಕ್ರಾಂತನಾಗಿ ನಿಂತಿದ್ದಾನೆ. 'ಸ್ವಾಮಿ, ನನ್ನ ಮದುವೆ ನಿಶ್ಚಯವಾಗಿದೆ. ನನ್ನ ಒಬ್ಬನ ದುಡಿಮೆಯಿಂದ ನಾಲ್ಕಾರು ಹೊಟ್ಟೆಗಳ ಹಸಿವು ಕಳೆಯುತ್ತದೆ. ಖಾವಂದರು ಕ್ಷೇತ್ರದಿಂದ ಸಾಲ ಸಹಾಯ ಮಾಡಿದರೆ ಈ ಮದುವೆ ಸಾಧ್ಯ' ಎಂದು ವಿನೀತಭಾವದಿಂದ ನುಡಿದ.
ಇನ್ನೊಂದು ದಿನ ವಯಸ್ಸಾದ ಹೆಂಗಸೊಬ್ಬಳು ಕಣ್ಣೀರು ಸುರಿಸುತ್ತಾ, 'ನನ್ನ ಇದ್ದ ತುಂಡು ಭೂಮಿ ಬೆಳೆಯದೆ ಬಂಜರಾಗಿ ಬಿದ್ದಿದೆ. ಇಬ್ಬರು ಗಂಡು ಮಕ್ಕಳನ್ನು ಅವರ ಮದುವೆಗೆ ಮಾಡಿದ ಸಾಲಕ್ಕಾಗಿ ತೋಟದ ಯಜಮಾನರಿಗೆ ಒತ್ತೆಯಿಡಬೇಕಾಯಿತು. ನೀವು ಸಾಲ ನೀಡಿ ನನ್ನ ಹಸಿದ ಹೊಟ್ಟೆಗೆ ಹಿಟ್ಟು ಕಾಣಿಸಬೇಕು' ಎಂದು ಗೋಳಾಡಿದಳು.
ಮತ್ತೊಂದು ದಿನ ದಲಿತ ಕುಟುಂಬದವರು ಬಂದು 'ಮದುವೆಗೆ ನಮಗೆ ಸಾಲ ಬೇಕು' ಅಂದರು. ಎಷ್ಟು ಅಂದಾಗ ಒಬ್ಬೊಬ್ಬರಿಗೆ ಎರಡೆರಡು ಸಾವಿರ ಅಂದರು. ಆಗ ಎರಡು ಸಾವಿರ ದೊಡ್ಡ ಮೊತ್ತ. ಹೆಗ್ಗಡೆ ಧರ್ಮ ಸಂಕಟಕ್ಕೆ ಒಳಗಾದರು. ಕ್ಷೇತ್ರದ ಸಂಪ್ರದಾಯದಂತೆ ಸಾಲ ಕೊಡುವುದು, ವಸೂಲಿ ಎರಡೂ ನಿಷಿದ್ಧ. ಪವಿತ್ರವಾದ ಉದ್ದೇಶದ ಮದುವೆ ಪ್ರತಿಷ್ಠೆ, ಅಂತಸ್ತುಗಳಿಂದ ಬಡವರ, ದುರ್ಬಲರ ಬದುಕಿಗೆ ಬೆಂಕಿ ಇಟ್ಟಿದೆ. ಇದಕ್ಕೆ ಪರಿಹಾರ ಕಂಡುಹಿಡಿಯಲೇ ಬೇಕು ಎಂದುಕೊಂಡರು. ಹಾಗೆ ಚಿಂತನೆಯಿಂದ ಹುಟ್ಟಿಕೊಂಡದ್ದೇ ಸಾಮೂಹಿಕ ವಿವಾಹ.
1972ರಿಂದ ನಿರಂತರ
ಹೇಗೂ ಧರ್ಮಸ್ಥಳದಲ್ಲಿ ವಿಶಾಲ ಸ್ಥಳವಿದೆ. ಮದುವೆಗೆ ಚಪ್ಪರ, ಊಟ, ವಸತಿ, ಪುರೋಹಿತರು, ಮಂಗಲ ವಾದ್ಯಗಳೆಲ್ಲವನ್ನೂ ಕ್ಷೇತ್ರದಲ್ಲೇ ಪೂರೈಸಲು ಸಾಧ್ಯ. ಧರ್ಮಸ್ಥಳದಲ್ಲೇ ವಿವಾಹ ಕಾರ್ಯ ನಡೆಸಿದರೆ ಹೇಗೆ ಎಂದು ಆಲೋಚಿಸಿ 1972 ಮಾ.29ರಂದು ಜನಮಂಗಲ ಕಾರ್ಯಕ್ರಮ ಆರಂಭಿಸಿದರು.
11,465 ಜೋಡಿ ವಿವಾಹ
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮೊದಲ ವರ್ಷ 88 ಜೋಡಿ ಮದುವೆಯಾದರು. ಕಳೆದ 42 ವರ್ಷಗಳಲ್ಲಿ 11,465 ಜೋಡಿಗಳು ಇಲ್ಲಿ ಸಪ್ತಪದಿ ತುಳಿದಿದ್ದಾರೆ. ನಾಡಿನ ವಿವಿಧ ಜಿಲ್ಲೆಗಳಿಂದ, ಹಿಂದೂ ಸಮಾಜದ ಅನ್ಯಾನ್ಯ ಪಂಥ, ಪಂಗಡ, ಜಾತಿ, ವರ್ಗದ ವಧೂವರರು ಕ್ಷೇತ್ರದಲ್ಲಿ ಹಸೆಮಣೆ ಏರಿದ್ದಾರೆ. ಅಂತರ್ಜಾತಿ ವಿವಾಹದ ಉದಾಹರಣೆಗಳು ಇವೆ.  ವಿವಾಹಕ್ಕೆ ಎರಡು ತಿಂಗಳ ಮೊದಲಿನಿಂದಲೇ ಪೂರ್ವ ಸಿದ್ಧತೆಗೆ ತೊಡಗಿಕೊಳ್ಳುತ್ತಾರೆ. ಈ ಬಾರಿ ಮೇ 2ರಂದು ಗೋಧೂಳಿ ಲಗ್ನದಲ್ಲಿ ವಿವಾಹ ನೆರವೇರಲಿದೆ.
ವಧೂವರರಿಗೆ ಕ್ಷೇತ್ರದಿಂದ ಕರಿಮಣಿ ತಾಳಿ, ಸೀರೆ, ರವಿಕೆ, ಕಣ, ಶಾಲು, ಧೋತಿ, ಶರ್ಟ್ ಪೀಸ್ ನೀಡಲಾಗುತ್ತದೆ. ಅವರವರ ಜಾತಿ, ಮತ, ಪಂಗಡಗಳಿನುಸಾರವಾಗಿ ಧಾರ್ಮಿಕ ವಿಧಿ ನೆರವೇರಿಸಲು ಅವಕಾಶ. ಈ ಹಿಂದೆ ಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ಮಕ್ಕಳ ವಿವಾಹಗಳು ಇಲ್ಲಿಯೇ ಮತ್ತೆ ನಡೆದಿರುವ ಉದಾಹರಣೆಗಳಿವೆ. ವೆಚ್ಚ ಕಡಿತದ ಜೊತೆಗೆ ಧಾರ್ಮಿಕ ವಿಧಿಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಲಾಗುತ್ತದೆ. ದುಂದುಗಾರಿಕೆ ತೊಡೆಯುವಲ್ಲಿ ಹೆಗ್ಗಡೆಯವರ ಚಿಂತನೆ ಯಶಸ್ಸು ಕಂಡಿದೆ. ನಾಡಿನ ಅನೇಕ ಸಂಘ ಸಂಸ್ಥೆಗಳು ಇದರಿಂದ ಪ್ರೇರಣೆ ಪಡೆದಿವೆ.


ನಾತಿಚರಾಮಿ
'ಇಂದು ಮಂಗಲ ಮುಹೂರ್ತದಲ್ಲಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮಗಳಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಬದುಕುತ್ತೇವೆ' ಎಂದು ವಧು ವರರಿಂದ ಪ್ರಮಾಣ ವಚನ ಮಾಡಿಸಲಾಗುತ್ತದೆ.
ಹೊಸ ಬಾಳಿನ ಹಾಡು
ಡಾ.ರಾಜ್ ನಟಿಸಿದ ಶ್ರಾವಣ ಬಂತು ಚಿತ್ರದ 'ಹೊಸಬಾಳಿನ ಹೊಸಿಲಲಿ ನಿಂತಿರುವ...' ಹಾಡಿನ ಚಿತ್ರೀಕರಣ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹ ಸಂದರ್ಭ ನಡೆದಿತ್ತು.

- ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments