ಅಗ್ನಿ ಶ್ರೀಧರ್ ಮನಸ್ಸು
ತಮಸ್ಸು ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ತಮ್ಮ ಚಿತ್ರಕ್ಕೆ ಪ್ರಶಸ್ತಿಯ ರೂಪದಲ್ಲಿ ಬರಲಿರುವ ಸುಮಾರು ಒಂದೂಮುಕ್ಕಾಲು ಲಕ್ಷ ರುಪಾಯಿಗಳ ಮೊತ್ತವನ್ನು ಅಗ್ನಿ ಶ್ರೀಧರ್, ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಅವರ ಕುಟುಂಬಕ್ಕೆ ಗೌರವಪೂರ್ವಕವಾಗಿ ಕೊಡಲು ನಿರ್ಧರಿಸಿದ್ದಾರೆ.
ಅಗ್ನಿ ಶ್ರೀಧರ್ ನಿರ್ದೇಶನದ ಶಿವರಾಜ್ಕುಮಾರ್ ನಾಯಕತ್ವದ ತಮಸ್ಸು ಚಿತ್ರಕ್ಕೆ ದ್ವಿತೀಯ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಬಂದಿತ್ತು. ಅದಲ್ಲದೆ ಸ್ವತಃ ಶ್ರೀಧರ್ ತಮ್ಮ ಚಿತ್ರಕಥೆಗಾಗಿಯೂ ಪ್ರಶಸ್ತಿ ಗಳಿಸಿದ್ದರು. ಈ ಚಿತ್ರಕ್ಕೆ ಸುಂದರ್ನಾಥ್ ಸುವರ್ಣ ಅವರ ಛಾಯಾಗ್ರಹಣವಿತ್ತು. ಈಗ ನಿರ್ಮಾಪಕರಾದ ಸೈಯದ್ ಅಮಾನ್ ಬಚ್ಚನ್ ಮತ್ತು ರವೀಂದ್ರ ಅವರು ಪ್ರಶಸ್ತಿಯ ಮೂಲಕ ಗಳಿಸಿರುವ ಹಣ ಮತ್ತು ತಮ್ಮ ಚಿತ್ರಕಥೆಗಾಗಿ ಬಂದ ಪ್ರಶಸ್ತಿಯ ಹಣ ಎರಡನ್ನೂ ಸೇರಿಸಿ ಸುಂದರನಾಥ್ ಸುವರ್ಣ ಕುಟುಂಬಕ್ಕೆ ನೀಡಲಿದ್ದಾರೆ ಶ್ರೀಧರ್.
ಹಾಗೆ ನೋಡಿದರೆ ಅಗ್ನಿ ಶ್ರೀಧರ್ ಅವರ ಬ್ಯಾನರ್ನಲ್ಲಿ ಸುಂದರ್ನಾಥ್ ಸುವರ್ಣ ಕೆಲಸ ಮಾಡಿದ್ದು ಕೇವಲ ಎರಡು ಚಿತ್ರಗಳಿಗೆ, ಕಳ್ಳರ ಸಂತೆ ಮತ್ತು ತಮಸ್ಸು. ಆದರೂ ಶ್ರೀಧರ್ ಸುವರ್ಣ ಅವರ ಜೊತೆಗಿನ ತಮ್ಮ ಒಡನಾಟಕ್ಕೆ ಬೆಲೆಕೊಟ್ಟು ಇಂಥದೊಂದು ಅಪರೂಪದ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಸುವರ್ಣ ಕನ್ನಡ ಚಿತ್ರರಂಗದ ಅನೇಕ ಬ್ಯಾನರ್ಗಳ ಸುಮಾರು ಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ್ದು, ಅನೇಕ ನಟನಟಿಯರಿಗೆ ಮಾರ್ಗದರ್ಶಕರೂ ಆಗಿದ್ದರು. ಆ ಎಲ್ಲರೂ ಕೂಡ ಅಗ್ನಿಶ್ರೀಧರ್ರಂತೆ ದೊಡ್ಡ ಮನಸ್ಸು ಮಾಡಿದರೆ ಮೂವರು ಹೆಣ್ಣುಮಕ್ಕಳಿರುವ ಸುಂದರನಾಥ್ ಸುವರ್ಣ ಅವರ ಕುಟುಂಬಕ್ಕೆ ಒಂದಿಷ್ಟು ಆರ್ಥಿಕವಾಗಿ ಸಹಾಯವಾಗಬಹುದೇನೋ.