ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪುಟ್ಟದೊಂದು ಕೋಶ ತರಬಹುದು ವಿನಾಶ

Vishwanath S
Updated On : 2 Feb 2014, 3:18 am

ಕ್ಯಾನ್ಸರ್ ಎಂದರೆ ಗುಣಪಡಿಸಲಾಗದ ರೋಗ, ಈ ಕಾಯಿಲೆ ಬಂದರೆ ಸಾವೇ ಗತಿ ಎನ್ನುವ ಭಾವನೆ ಹಿಂದೆ ಇತ್ತು. ಅದು ಬಹುಮಟ್ಟಿಗೆ ನಿಜವೂ ಆಗಿತ್ತು. ಏಕೆಂದರೆ ಆಗ ವೈದ್ಯಕೀಯ ಜಗತ್ತು ಈಗಿನಷ್ಟು ಮುಂದುವರಿದಿರಲಿಲ್ಲ. ಕ್ಯಾನ್ಸರ್ ಶರೀರದ ಯಾವ ಭಾಗದಲ್ಲಿ ಶುರುವಾಗಿದೆ ಎನ್ನುವುದನ್ನು ಅಂದಾಜು ಮಾಡುವಷ್ಟರಲ್ಲಿಯೇ ಅದು ನಿಯಂತ್ರಣ ತಪ್ಪಿ ಸಿಕ್ಕಾಪಟ್ಟೆ ವ್ಯಾಪಿಸಿಬಿಡುತ್ತಿತ್ತು. ಗೆಡ್ಡೆಯನ್ನು ಸಂಪೂರ್ಣ ನಾಶಗೊಳಿಸುವಂಥ ಆಧುನಿಕ ಚಿಕಿತ್ಸಾ ವಿಧಾನಗಳಿರಲಿಲ್ಲ. 'ಅತ್ಯಂತ ಪರಿಣಾಮಕಾರಿ' ಎನ್ನುವಂಥ ಔಷಧಗಳಿರಲಿಲ್ಲ. ಇವೆಲ್ಲವುಗಳ ಪರಿಣಾಮವಾಗಿ ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ ಎನ್ನುವ ನಂಬಿಕೆ ಬಹಳ ವರ್ಷಗಳ ಕಾಲ ಭದ್ರವಾಗಿ ಜನಮಾನಸದಲ್ಲಿ ನೆಲೆಯೂರಿತ್ತು. ಈಗ ಅಂಥ ಪರಿಸ್ಥಿತಿ ಇಲ್ಲ. ಆರಂಭದಲ್ಲಿಯೇ ಪತ್ತೆಯಾದರೆ ಶಸ್ತ್ರಚಿಕಿತ್ಸೆಯೂ ಸೇರಿದಂತೆ ವಿವಿಧ ಚಿಕಿತ್ಸೆಗಳ ಮೂಲಕ ಯಾವುದೇ ಬಗೆಯ ಕ್ಯಾನ್ಸರ್ ಅನ್ನೂ ಸಂಪೂರ್ಣ ಗುಣಪಡಿಸಬಹುದು.
ಇಷ್ಟಕ್ಕೂ ಕ್ಯಾನ್ಸರ್ ಎಂದರೆ ಏನು? ಸ್ವತಃ ಈ ರೋಗಕ್ಕೆ ತುತ್ತಾದವರಿಗಾಗಲೀ, ಅವರ ಆರೈಕೆ ಮಾಡುವ ಕುಟುಂಬ ಸದಸ್ಯರಿಗಾಗಲೀ ಗೊತ್ತಿರುವುದಿಲ್ಲ. ನನ್ನ ಪರಿಚಯದ ಬಹಳಷ್ಟು ವೈದ್ಯರಿಗೆ ಒತ್ತಾಯಪೂರ್ವಕ ಮನವಿ ಮಾಡುತ್ತಿರುತ್ತೇನೆ, 'ಕಾಯಿಲೆ ಯಾವುದೇ ಇರಲಿ. ನಿಮ್ಮ ರೋಗಿಗಳಿಗೆ ಏನನ್ನೂ ಮುಚ್ಚಿಡಬೇಡಿ. ಅವರಿಗೆ ಆ ಆರೋಗ್ಯ ಸಮಸ್ಯೆಯ ಮೂಲವೇನು? ಮತ್ತೆ ಇಂಥ ತೊಂದರೆ ಎದುರಾಗದಂತೆ ಆಹಾರ ಮತ್ತು ಜೀವನಶೈಲಿಯಿಂದ ಹೇಗೆ ಮುನ್ನೆಚ್ಚರಿಕೆ ವಹಿಸಬಹುದು ಎನ್ನುವುದನ್ನು ದಯವಿಟ್ಟು ತಿಳಿಸಿಕೊಡಿ' ಎಂದು. ರೋಗಿಗಳೂ ಏಕೆ ಇಂಥ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೇಳುವುದಿಲ್ಲ, ವೈದ್ಯರೂ ಹೇಳುವುದಿಲ್ಲ. ಕ್ಯಾನ್ಸರ್ ಚಿಕಿತ್ಸೆಗಾಗಿ ವಾರಗಟ್ಟಳೇ ಆಸ್ಪತ್ರೆಯಲ್ಲೇ ಇದ್ದರೂ ಆ ಕುರಿತು ತಿಳಿಸಿಕೊಡುವ ಪ್ರಯತ್ನವನ್ನೂ ವೈದ್ಯಕೀಯ ಸಿಬ್ಬಂದಿ ಮಾಡುವುದಿಲ್ಲ ಮಾಡುವುದಿಲ್ಲ ಎನ್ನುವುದನ್ನು ಕೇಳಿ ಬಲ್ಲೆ.
ಸರಳವಾಗಿ ಹೇಳುವುದಾದರೆ ಕ್ಯಾನ್ಸರ್ ಎಂದರೆ ನಿಯಂತ್ರಣವಿಲ್ಲದೆ ಕೋಶಗಳು ಬೆಳೆಯುವುದು. ಈವರೆಗೆ 100ಕ್ಕೂ ಅಧಿಕ ಬಗೆಯ ಕ್ಯಾನ್ಸರ್‌ಗಳನ್ನು ಗುರುತಿಸಲಾಗಿದೆ. ಆರಂಭದಲ್ಲಿ ಯಾವ ಅಂಗ ಹಾನಿಗೆ ಒಳಗಾಗಿದೆ ಎನ್ನುವುದನ್ನು ಆಧರಿಸಿ ಅದೇ ಹೆಸರು ನೀಡಲಾಗುತ್ತಿದೆ. ಉದಾ ಹರಣೆಗೆ ಶ್ವಾಸಕೋಶ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಸ್ತನ ಕ್ಯಾನ್ಸರ್ ಇತ್ಯಾದಿ. ಕೋಶಗಳು ಸಂಖ್ಯೆಯಲ್ಲಿ ಅನಿಯಂತ್ರಿತವಾಗಿ ಬೆಳೆಯುತ್ತ ಉಂಡೆಗಳನ್ನು, ಗೆಡ್ಡೆಗಳನ್ನು ಉಂಟುಮಾಡುತ್ತವೆ. ಉಂಡೆಗಳು, ಗೆಡ್ಡೆಗಳು ದೊಡ್ಡದಾಗಿ ಜೀರ್ಣಾಂಗ ವ್ಯವಸ್ಥೆ, ನರವ್ಯೂಹ, ದೇಹದೊಳಗಿನ ಪರಿಚಲನಾ ವ್ಯವಸ್ಥೆಗಳನ್ನು ಹಾಳುಗೆಡವುತ್ತವೆ ಅಥವಾ ಅವುಗಳ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿ ಉಂಟುಮಾಡುತ್ತವೆ. ಕೆಲವು ಸಮಯದ ಬಳಿಕ ಆ ಗೆಡ್ಡೆಗಳು ಒಂದು ಸ್ಥಳದಲ್ಲಿ ನಿಲ್ಲುತ್ತವೆ ಮತ್ತು ಆಗ ಅವುಗಳ ಬೆಳವಣಿಗೆ ನಿಯಮಿತವಾಗಿರುತ್ತದೆ. ಈ ಹಂತವನ್ನು ಕ್ಯಾನ್ಸರ್‌ನ ಆರಂಭಿಕ ಹಂತ ಎಂದು ಗುರುತಿಸಲಾಗುತ್ತದೆ. ಆದರೂ ಕ್ಯಾನ್ಸರ್ ಕೋಶಗಳ ಪಯಣ ಮುಂದುವರಿದೇ ಇರುತ್ತದೆ.



-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement