ಸಿಎಫ್ಎಲ್ ಯಮ!
ಬಲ್ಬು ಮನೆಯೊಳಗಿನ ಸೂರ್ಯ! ನಾವೀಗ ಬಳಸುತ್ತಿರುವ ಆ ಬಲ್ಬು ಹೆಚ್ಚೂಕಮ್ಮಿ ಅಂದು ಥಾಮಸ್ ಆಲ್ವಾ ಎಡಿಸನ್ ರೂಪಿಸಿದ ರೀತಿಯಲ್ಲೇ ಇದೆ. ವಿನ್ಯಾಸದಲ್ಲೂ ಅಂಥ ಬದಲಾವಣೆ ಆಗಿಲ್ಲ. ಅದರ ನಂತರದ ರೂಪವನ್ನು 'ಸಿಎಫ್ಎಲ್' (ಕಾಂಪ್ಯಾಕ್ಟ್ ಫ್ಲೋರೆಸೆಂಟ್ ಲೈಟ್) ಎಂದು ಕರೆದೆವು. ಸಿಎಫ್ಎಲ್ ಬೆಳಕಿನ ಲೋಕದ ಕ್ರಾಂತಿ.
ಸಾಂಪ್ರದಾಯಿಕ ಬಲ್ಬುಗಳ ಸರಾಸರಿ ಆಯುಷ್ಯ 750ರಿಂದ 1,000 ಗಂಟೆಗಳಷ್ಟೇ. ಅದೇ ಸಿಎಫ್ಎಲ್ಗಳದ್ದು 6,000- 15,000 ಗಂಟೆಗಳು! ಸ್ವಿಚ್ಚನ್ನು ಪದೇಪದೇ ಆನ್- ಆಫ್ ಮಾಡುವೆಡೆ ಈ ಆಯುಸ್ಸು ತುಸು ತಗ್ಗುತ್ತದೆ. ಶೀತ ವಾತಾವರಣದಲ್ಲಿ ಇದರ ಬೆಳಕಿನ ಪ್ರಖರತೆ ಕುಗ್ಗುತ್ತದೆ. ಇವು ಹಳತಾದಂತೆ, ನೀಡುವ ಬೆಳಕಿನ ಪ್ರಮಾಣ ಶೇ.100ರಿಂದ 70ಕ್ಕೆ ಇಳಿಯುತ್ತದೆ.
ಕ್ಯಾನ್ಸರ್ ಬರುತ್ತೆ!
ಸಿಎಫ್ಎಲ್ ತಯಾರಿಕೆಯಲ್ಲೇನಾದರೂ ದೋಷಗಳಾದರೆ ಬಹಳ ಅಪಾಯಗಳು ಎದುರಾಗುತ್ತವೆ. ಒಳಗೆ ಲೇಪಿಸಿದ ಫಾಸ್ಫರ್ ಕೋಟಿಂಗ್ನ ನಡುವೆ ಬಿರುಕುಗಳಾದರೆ ಅತಿನೇರಳೆ ಮತ್ತು ನೀಲಿ ಬೆಳಕು ಸೋರಿಕೆಯಾಗುತ್ತದೆ. ಇದರಿಂದ ಅಲರ್ಜಿ ಅಥವಾ ಚರ್ಮದ ಕ್ಯಾನ್ಸರ್, ಕಣ್ಣಿನ ಸಮಸ್ಯೆ ಕಟ್ಟಿಟ್ಟಬುತ್ತಿ ಅಂತಾರೆ ವಿಜ್ಞಾನಿಗಳು. ಆದರೆ ಈ ತಿರುಚು ಬಲ್ಬಿನ ವಿನ್ಯಾಸದಲ್ಲಿ, ಇದರ ತಯಾರಿಕೆಯ ಹಂತದಲ್ಲಿ, ಈ ಬಗೆಯ ನ್ಯೂನತೆಗಳು ಕಾಮನ್. ವಾಸ್ತವದಲ್ಲಿ ಇದರಿಂದ 1-2 ಅಡಿ ಅಂತರದಲ್ಲಿ ಅತಿನೇರಳೆ ಕಿರಣಗಳು ಬಹಳ ಇರುತ್ತವೆ. ಹೀಗಾಗಿ, ಬಳಕೆದಾರರು ಕನಿಷ್ಠಪಕ್ಷ 5-6 ಅಡಿ ಗ್ಯಾಪ್ ಕೊಡುವುದು ಒಳ್ಳೆಯದು.
ಕರೆಂಟು ಉಳಿಯುತ್ತೆ...
ಮಾಮೂಲಿ ಬಲ್ಬುಗಳಿಗೆ ಹೋಲಿಸಿದರೆ, ಈ ಸಿಎಫ್ಎಲ್ ಶೇ.75ರಷ್ಟು ಕಡಿಮೆ ವಿದ್ಯುತ್ ಬಳಸಿಕೊಳ್ಳುತ್ತವೆ. ಅಲ್ಲದೆ ಇವು ವಾತಾವರಣಕ್ಕೆ ಬಿಡುಗಡೆ ಮಾಡುವ ಶಾಖದ ಪ್ರಮಾಣವೂ ಕಡಿಮೆ. ಸಿಎಫ್ಎಲ್ಗಳ ಕ್ಷಮತೆಯೂ ಹೆಚ್ಚು. ಇವು ಪರಿಸರವನ್ನು ತಂಪಾಗಿಡುತ್ತವೆ ಎನ್ನುತ್ತದೆ ಒಂದು ಅಧ್ಯಯನ. ಆದರೆ, ಇವು ಒಡೆಯದೇ ಇದ್ದರಷ್ಟೇ ಪರಿಸರಕ್ಕೆ ಹಾನಿಯಿಲ್ಲ. ಒಂದುವೇಳೆ ಫಳ್ ಅಂದರೆ ಅಪಾಯ ತಲೆಮೇಲೆ ಕೂತಂತೆ.
ಅಕಸ್ಮಾತ್ ಒಡೆದರೆ...
* ಸಿಎಫ್ಎಲ್ಗಳು ಒಡೆದ ಕೋಣೆಯಿಂದ, ಮನೆಯ ಸದಸ್ಯರು ಹಾಗೂ ಸಾಕು ಪ್ರಾಣಿಗಳನ್ನು ಹೊರಕ್ಕೆ ಕಳುಹಿಸುವುದು.
* ಕೋಣೆಯ ಎಲ್ಲ ಬಾಗಿಲು, ಕಿಟಕಿಗಳನ್ನು 5-10 ನಿಮಿಷ ತೆರೆದು ಗಾಳಿಯ ಸುಲಲಿತ ಸಂಚಾರಕ್ಕೆ ಅನುವು ಮಾಡಿ ಕೊಡುವುದು.
* ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯನ್ನು (ಮನೆಯೊಳಗಿದ್ದರೆ) ಸ್ವಿಚ್ ಆಫ್ ಮಾಡುವುದು.
ಶುದ್ಧಿಯ ವೇಳೆ...
* ಮೊದಲಿಗೆ ಯಾವುದೇ ಕಾರಣಕ್ಕೂ ವ್ಯಾಕ್ಯೂಮ್ ಕ್ಲೀನರ್ ಬಳಸಬೇಡಿ. ಏಕೆಂದರೆ, ವಾತಾವರಣಕ್ಕೆ ಸೋರಿಕೆಯಾಗಿರುವ ಮರ್ಕ್ಯುರಿ ಮತ್ತು ಮರ್ಕ್ಯುರಿ ಆಕ್ಸೈಡ್ ಇನ್ನೂ ಬೇಗ ಕೋಣೆಯೆಲ್ಲ ಹರಡಿ, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ.
* ವೈಯಕ್ತಿಕ ಸುರಕ್ಷಾ ಸಾಧನಗಳಾದ ಗ್ಲೌಸ್, ಮೂಗಿನ ಫಿಲ್ಟರ್, ಕಣ್ಗವಚ ಮತ್ತು ದೇಹವನ್ನು ರಕ್ಷಿಸಬಲ್ಲ ಹಳೇ ದಿರಿಸುಗಳನ್ನು ಧರಿಸಿ. ಈ ಸಿಎಫ್ಎಲ್ ಬಲ್ಬು ಒಡೆದು ವಾತಾವರಣಕ್ಕೆ ಸೋರಿಕೆಯಾದ ಮರ್ಕ್ಯುರಿ ಧೂಳು ಮತ್ತು ಮರ್ಕ್ಯುರಿ ಆಕ್ಸೈಡ್ ವೇಪರ್ ಅನ್ನು ಉಸಿರಾಡದಂತೆ ಎಚ್ಚರ ವಹಿಸುವುದು.
* ಸ್ಥಳ ಶುದ್ಧಿ ವೇಳೆ ರಟ್ಟಿನಂತಿರುವ ದಪ್ಪನೆಯ ಕಾಗದ, ಸೆಲ್ಫ್ ಅಢೆಸಿವ್ ಟೇಪ್, ಒದ್ದೆಯಾದ ಕಾಗದದ ಟವೆಲ್, ಸೀಲ್ ಮಾಡಬಹುದಾದ ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಳ್ಳಿ.
* ರಟ್ಟಿನ ಕಾಗದದಿಂದ ಒಡೆದ ಬಲ್ಬಿನ ಚೂರುಗಳನ್ನು ಗುಡಿಸಿ. ಇನ್ನೂ ಅತಿ ಸೂಕ್ಷ್ಮಚೂರುಗಳನ್ನು ಅಢೆಸಿವ್ ಟೇಪ್ ಮೂಲಕ ನೆಲದಿಂದ ಬಿಡಿಸಿಕೊಳ್ಳುವುದು. ನಂತರ ಇದೆಲ್ಲವನ್ನೂ ಮೇಲೆ ತಿಳಿಸಿದ ಸೀಲ್ ಮಾಡಬಹುದಾದ ಪ್ಲಾಸ್ಟಿಕ್ ಕವರ್ಗೆ ವರ್ಗಾಯಿಸಿ.
* ಸಾಧ್ಯವಿದ್ದರೆ ಕೋಣೆಯ ಬಾಗಿಲು- ಕಿಟಕಿಗಳನ್ನು, ಸಾಕಷ್ಟು ಸಮಯ ತೆರೆದಿಟ್ಟು, ಹವಾ ನಿಯಂತ್ರಣ ವ್ಯವಸ್ಥೆಯನ್ನು ಗಂಟೆಗಟ್ಟಲೆ ಸ್ವಿಚ್ ಆಫ್ ಮಾಡಿ.
ವಿಷವೋ ವಿಷ
ಸಿಎಫ್ಎಲ್ ಬಲ್ಬಿನಲ್ಲಿ 4-5 ಮಿ.ಗ್ರಾಂ. ಮರ್ಕ್ಯುರಿ ಇರುತ್ತದೆ. ಇದು ಬಲ್ಬಿನೊಳಗೆ ಬಂಧಿಯಾಗಿರುವುದರಿಂದ ಪರಿಸರಕ್ಕೆ ಹಾನಿಯಾಗದು. ಅಕಸ್ಮಾತ್ ಇದು ಹೊರಗಿನ ವಾತಾವರಣಕ್ಕೆ ಬಂದರೆ ನಿಜಕ್ಕೂ ಕಂಟಕ. ಒಡೆದ ಅಥವಾ ಕೆಟ್ಟುಹೋದ ಸಿಎಫ್ಎಲ್ ಅನ್ನು ಬೇಜವಾಬ್ದಾರಿಯಿಂದ ಹೊರ ಪ್ರದೇಶದಲ್ಲಿ ಬಿಸಾಡಬಾರದು. ಅದು ಒಡೆದು ಪಾದರಸದ ವಿಷ, ಮಳೆ, ಇತ್ಯಾದಿ ಮೂಲಕ ಹತ್ತಿರದ ನೀರಿನ ಹೊಂಡವನ್ನೋ, ಸಮೀಪದ ನದಿ ಪಾತ್ರವನ್ನೋ ಇಲ್ಲಾ ಅಂತರ್ಜಲವನ್ನೋ ಸೇರಿದರೆ ಕಥೆ ಮುಗಿಯಿತು. ಕುಡಿವ ನೀರಿನ ಮೂಲಕ ಪುನಃ ನಮ್ಮ ಹೊಟ್ಟೆ ಸೇರುತ್ತದೆ. ಈ ವಿಷಕಾರಿ ಪಾದರಸ ವಾತಾವರಣದಲ್ಲಿ ವಿಲೀನವಾಗುವುದು ನಿಧಾನ. ಈ ಬಲ್ಬುಗಳು ಒಡೆದ ನಂತರ ಅದರ ಮುಕ್ತಿಯ ನಿರ್ವಹಣೆಯನ್ನು ಸರ್ಕಾರವೋ, ಬಲ್ಬಿನ ಸಂಸ್ಥೆಯವರೋ ವಹಿಸಿಕೊಂಡರೆ ಇಷ್ಟೆಲ್ಲ ತಲೆನೋವೇ ಇರುವುದಿಲ್ಲ.
-ನಾಗಮಂಗಲ ನರಸಿಂಹಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.