ಸೌಂದರ್ಯದ ಅಂತರಂಗ
ಸುಂದರವಾದುದೆಲ್ಲವೂ ಸತ್ಯ ಎನ್ನುವುದಕ್ಕಾಗುವುದಿಲ್ಲ. ಹಾಗೆಯೇ ರುಚಿಯಾದುದೆಲ್ಲವೂ ಹಿತವಲ್ಲ. ಮೃದುವಾದುದು ಮನಕ್ಕೊಪ್ಪಬಹುದು. ಆದರದು ಮಾರಕವಾಗಿಯೂ ಇರಬಹುದು. ಜೀವನದ ವೈರುಧ್ಯ ಅಂದರೆ ಇದೇ ಇರಬಹುದು. ಮೇಲ್ನೋಟಕ್ಕೆ ಕಂಡದ್ದೇ ಸತ್ಯ, ಅದೇ ನಿತ್ಯ ಎಂಬ ಭ್ರಮೆಗೆ ಬಿದ್ದಂತೆ ಬಹುತೇಕ ಸಂದರ್ಭದಲ್ಲಿ ನಾವು ವರ್ತಿಸುತ್ತಿರುತ್ತೇವೆ. ವಾಸ್ತವ ಬೇರೆಯದೇ ಇರುತ್ತದೆ. ಯಾವತ್ತೂ ಹಾಗೆಯೇ ಭೌತಿಕವಾಗಿ ಗೋಚರಕ್ಕೆ ಸಿಗುವುದೆಲ್ಲವನ್ನೂ ಸರ್ವ ಸತ್ಯ ಎನ್ನಲಿಕ್ಕಾಗುವುದೇ ಇಲ್ಲ. ಸನ್ನಿವೇಶಕ್ಕನುಗುಣವಾಗಿಯೂ ಗುಣಾವಗುಣಗಳನ್ನು ಅರ್ಥೈಸಬೇಕಾಗುತ್ತದೆ. ಎಲ್ಲ ಸಂದರ್ಭದಲ್ಲಿಯೂ ಎಲ್ಲವೂ ಒಂದೇ ತೆರನಾಗಿಯೇ ಇದ್ದುಬಿಡುತ್ತದೆ ಎಂದು ಹೇಳಲೂ ಆಗುವುದಿಲ್ಲ. ಹೀಗಂದರೆ ಬಹುಶಃ ಅರ್ಥವಾಗಲಿಕ್ಕಿಲ್ಲ. ಒಂದು ಪುಟ್ಟ ಉದಾಹರಣೆಯನ್ನು ತೆಗೆದುಕೊಳ್ಳಬಹುದಾದರೆ, ಕಳ್ಳಿ ಗಿಡದಲ್ಲಿ ಅತ್ಯಂತ ಸುಂದರವಾದ ಹೂವು ಅರಳುತ್ತದೆ. ಫಕ್ಕನೆ ನೋಡಿದರೆ ತಾವರೆಯಂತೆಯೇ ಕಂಗೊಳಿಸುತ್ತದೆ. ಸ್ವಲ್ಪ ಮಟ್ಟಿಗೆ ಸುವಾಸನೆಯನ್ನೂ ಹೊಂದಿರುತ್ತದೆ. ಆದರೆ ಅದನ್ನು ಎಂದಿಗೂ ನಾವು ಪೂಜಾ ಪುಷ್ಪವಾಗಿ ಆದರಿಸುವುದೇ ಇಲ್ಲ. ಹೆಚ್ಚೆಂದರೆ ಅಲಂಕಾರಕ್ಕೆ ಇಟ್ಟುಕೊಳ್ಳಬಹುದು. ಪೂಜಾರ್ಹವಲ್ಲ ಎಂಬಷ್ಟಕ್ಕೆ ಅದು ಸೀಮಿತಗೊಳ್ಳುವುದಿಲ್ಲ. ಗಿಡದಿಂದ ಕಿತ್ತ ಮರುಕ್ಷಣವೇ ಅದು ಬಾಡಲಾರಂಭಿಸುತ್ತದೆ. ಒಂದು ನಿಮಿಷದ ಹಿಂದೆ ಗಿಡದ ಮೇಲಿದ್ದಾಗ ಇದ್ದ ಸೌಂದರ್ಯ ಹಾಗೆಯೇ ಕಮರಿಹೋಗುತ್ತದೆ. ಬಾಡುವುದು ಹೂವಿನ ಸಹಜ ಗುಣವೆಂದುಕೊಂಡರೂ ಅದು ಇದ್ದಷ್ಟು ಹೊತ್ತು ಆಸ್ವಾದನೆಗೆ ಸಿಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅಂಥ ಹೂವಿನಿಂದ ಒಡಮೂಡುವ ಹೀಚು ವಿಷಕಾರಕ ಫಲವೊಂದಕ್ಕೆ ಬುನಾದಿಯಾಗುತ್ತದೆ. ಹೀಗಾಗಿಯೇ ಹೂವು ಎಷ್ಟೇ ಸುಂದರವಾಗಿದ್ದರೂ ಅದನ್ನು ಆದರಿಸುವುದಿಲ್ಲ. ಸೌಂದರ್ಯವೆಂಬುದು ಗುಣಗ್ರಾಹಿಯಾಗಿರಬೇಕು. ಆಂತರ್ಯ ಸುಖದ ಉದ್ದೇಶವನ್ನು ಹೊಂದಿದ್ದಾಗಲೇ ಸೌಂದರ್ಯ ಸಾರ್ಥಕ ಎನ್ನಿಸಿಕೊಳ್ಳುವುದು. ಅಂಥ ಸೌಂದರ್ಯ ನಮ್ಮೊಳಗೆ ಅಡಗಿದೆಯೇ? ಅವಲೋಕಿಸಿಕೊಳ್ಳುವುದು ಒಳ್ಳೆಯದಲ್ಲವೆ?
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.