ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಂದ್ರು ಸಿಎಮ್ಮು!

Mainashree
Updated On : 7 Feb 2014, 11:42 am

ಜೆಡಿಎಸ್ ದೊರೆ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 'ಹಳ್ಳಿಗಳಲ್ಲಿ ಆಡಳಿತ' ಎನ್ನುವ ಸಿದ್ಧಾಂತದೊಂದಿಗೆ 'ಗ್ರಾಮ ವಾಸ್ತವ್ಯ' ಆರಂಭಿಸಿದ್ದು ಹಳೇಕಥೆ. ಇದೇ ವಾಸ್ತವ್ಯದ ಮೇಲೆ ಕುಂವೀ ಹಿಂದೊಮ್ಮೆ 'ನಂಜು' ಅಂತ ಕಥೇನೂ ಬರೆದಿದ್ದರು. ಈಗ ಗ್ರಾಮ ವಾಸ್ತವ್ಯ ಬಗ್ಗೆ ಸಿನಿಮಾನೇ ಆಗಿದೆ. ಚಿತ್ರದ ಹೆಸರು 'ಡಿಸೆಂಬರ್ 1'. ನಿರ್ದೇಶಕರು ಪಿ. ಶೇಷಾದ್ರಿ.
ಹಾಗಂತ ಇದು ಪಕ್ಕಾ ಕುಮಾರಸ್ವಾಮಿ ಆಡಳಿತ ನೆರಳನ್ನು ಆಧರಿಸಿದ ಚಿತ್ರವಲ್ಲ. 'ಡಿಸೆಂಬರ್ 1ರಂದು ಈ ರಾಜ್ಯದ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಹಳ್ಳಿವೊಂದರಲ್ಲಿ ಅತ್ಯಂತ ಕಡುಬಡತನದಲ್ಲಿರುವ ಮನೆಯಲ್ಲಿ ವಾಸ್ತವ್ಯ ಹೂಡುವ ಮೂಲಕ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡುತ್ತಾರೆ. ಬಡವನ ಮನೆಗೆ ಸಿಎಂ ಬರುವ ವಿಚಾರ ತಿಳಿದ ಊರಿನ ಜನ, ಆ ಮನೆಯವರಿಗೆ ಊರಿನಲ್ಲಿ ಹೇಗೆ ಮಹತ್ವ ಸಿಗುತ್ತದೆ ಎನ್ನುವ ಒಂದು ಮುಖವಾದರೆ, ಸಿಎಂ ಬಂದು ಹೋದ ನಂತರ ನಡೆಯುವ ಘಟನೆಗಳು, ಸಿಎಂ ವಾಸ್ತವ್ಯ ಮಾಡಿದ ಮನೆಯ ಪರಿಸ್ಥಿತಿ ಮುಂದೇನಾಗುತ್ತದೆ' ಎನ್ನುವುದರ ಬಗ್ಗೆ ಈ ಚಿತ್ರ ಹೇಳುತ್ತದೆ' ಎನ್ನುತ್ತಾರೆ ನಿರ್ದೇಶಕ ಪಿ. ಶೇಷಾದ್ರಿ.
ರೊಟ್ಟಿ ಮಾರಿ ಜೀವನ ಮಾಡುವ ಕುಟುಂಬ ಚಿತ್ರದ ಕೇಂದ್ರಬಿಂದು. ರೊಟ್ಟಿ ಮಾರುವ ಹೆಣ್ಣು ಮಗಳ ಪಾತ್ರದಲ್ಲಿ ನಟಿ ನಿವೇದಿತಾ ಅಭಿನಯಿಸಿದ್ದಾರೆ. ಸಿಎಂ ಪಾತ್ರದಲ್ಲಿ ದತ್ತಣ್ಣ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಉತ್ತರ ಕರ್ನಾಟಕದ 80ಕ್ಕೂ ಹೆಚ್ಚು ಕಲಾವಿದರು ಇಲ್ಲಿ ನಟಿಸಿದ್ದಾರೆ. ಅಶೋಕ್ ವಿ. ರಾಮನ್ ಕ್ಯಾಮೆರಾ, ವಿ. ಮನೋಹರ್ ಸಂಗೀತ, ಚಂದ್ರಕಾಂತ್ ವಸ್ತ್ರದ್ ಸಂಭಾಷಣೆ. 'ಯಾಕಪ್ಪ ನಮ್ ಮನೆಗೆ ಈ ಸಿಎಮ್ಮು ಬಂದ್ರು' ಎಂದು ವ್ಯಥೆ ಪಡುವ ಒಂದು ಕುಟುಂಬದ ಕಥೆಯನ್ನು ಒಳಗೊಂಡು ಈ ಚಿತ್ರವನ್ನು ಬಸಂತ್‌ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ. ಹಾಗಾದರೆ ಈ ಚಿತ್ರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಲಿದೆಯೇ? ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.


= ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement