ಮನ ಮಿದುಗೊಳಿಸುವ ಭಕ್ತಿ
'ಭಕ್ತಿಯೆಂಬುದ ಮಾಡಬಾರದು, ಅದು ಗರಗಸದಂತೆ, ಹೋಗುತ್ತ ಕೊಯ್ಯುತ್ತದೆ, ಬರುತ್ತ ಕೊಯ್ಯುತ್ತದೆ' ಅನ್ನುತ್ತಾನೆ ಅಲ್ಲಮ ಪ್ರಭು. ಹಾಗೆಂದರೇನು? ಜೀವನದಲ್ಲಿ ಭಕ್ತಿ ಮಾಡಲೇಬಾರದು ಎಂಬುದು ಆತನ ಅಭಿಪ್ರಾಯವಲ್ಲ. ಹಾಗಿದ್ದರೆ ಆತ ಶರಣ ಚಳವಳಿಯ ಅಗ್ರೇಸರನೆನಿಸಿಕೊಳ್ಳುತ್ತಿರಲಿಲ್ಲ. ಭಕ್ತನೆನಿಸಿಕೊಳ್ಳಬೇಕು, ಭಕ್ತಿ ತೋರಿಸಬೇಕು, ನಿಜ. ಆದರೆ ಯಾರಿಗೆ ಎಂಬುದೇ ಪ್ರಶ್ನೆ.
ಹುಲುಮಾನವರನ್ನು ಬಣ್ಣಿಸಿ ಕಾವ್ಯ ಬರೆದದ್ದಕ್ಕೆ ರಾಘವಾಂಕನನ್ನು ಹರಿಹರ ತರಾಟೆಗೆ ತೆಗೆದುಕೊಂಡಿದ್ದನಂತೆ. ಮಾನವರು ನಮ್ಮ ಗೌರವ, ಪ್ರೀತಿ, ವಿಶ್ವಾಸಗಳಿಗಷ್ಟೇ ಅರ್ಹರು, ಭಕ್ತಿಗಲ್ಲ. ಇದು ಎಲ್ಲ ಬಗೆಯ ದೇವಮಾನವರಿಗೂ ಅನ್ವಯ. ನೈಜವಾದ ಭಕ್ತಿಯು ಮಾತಿನಿಂದ, ಕಾಯದಿಂದ ತೃಪ್ತಗೊಳ್ಳುವುದಿಲ್ಲ. ಅದು ಭಕ್ತನ ಸರ್ವ ಸಮರ್ಪಣೆಯನ್ನೂ ಬೇಡುತ್ತದೆ. ಸಾಮಾನ್ಯ ಮಾನವರು ಇಂಥ ಸಮರ್ಪಣೆಯನ್ನು ಮಾಡುವುದು ಮಾತ್ರವಲ್ಲ, ಒಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ದೇವರ ಮೇಲೆ ಪಾರವಿಲ್ಲದ ಭಕ್ತಿಯನ್ನಿಟ್ಟುಕೊಂಡವನಿಗೂ ಸಂಕಟಗಳ ಸಮಯದಲ್ಲಿ, ತಾನು ದೇವರನ್ನು ನಂಬಿದ್ದೇ ತಪ್ಪಾಯಿತೇನೋ ಅನ್ನಿಸುವ ಭಾವವೂ ಬರುವುದುಂಟು. ಆಗೆಲ್ಲ, ದೇವರಿದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವಲ್ಲ, ಆತನಿದ್ದಾನೋ ಇಲ್ಲವೋ ಎಂಬ ಅನುಮಾನವೂ ಕಾಡುವುದುಂಟು. ಭಕ್ತಿಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಆರಾದರೆ ಹೆಚ್ಚು, ಮೂರಾದರೆ ಕಡಿಮೆ. ತಾನು ನಂಬಿದ ದೈವ, ನಂಬಿದ ವ್ಯಕ್ತಿತ್ವಗಳು ತನ್ನ ಭಕ್ತಿಗೆ ಅರ್ಹರಲ್ಲ ಎಂಬ ಅನುಮಾನ ಸ್ವಲ್ಪವೇ ಕಾಡಿದರೂ ದೊಡ್ಡ ಅವಘಡ ಖಾತ್ರಿ. ಹೀಗಾಗಿಯೇ ಅಲ್ಲಮ 'ಭಕ್ತಿಯೆಂಬುದ ಮಾಡಬಾರದು' ಎಂದದ್ದಿರಬೇಕು. ಇಂಥ ಭಕ್ತಿಯು ಮನಸ್ಸನ್ನು ಸಂಪೂರ್ಣ ನಾದಿ, ಎಲ್ಲಿ ಒತ್ತಿದರೆ ಅಲ್ಲಿ ಮಿಡಿಯುವಂತೆ ಮೃದುಗೊಳಿಸುತ್ತದೆ.
- ಸಹನೆ