ಸೈಕ್ಲರ್ ಸಿಟಿ!
ಟ್ರಾಫಿಕ್ ರಗಳೆಯಿಂದ ಬೆಂಗಳೂರಲ್ಲಿ ಪ್ರಯಾಣ ಜಟಿಲ. ಮನೆಗೆ ತುರ್ತಾಗಿ ಏನೋ ಸಾಮಾನು ಕೊಂಡೊಯ್ಯಬೇಕು. ತರದಿದ್ದರೆ ಮನೆಯಾಕೆಯಿಂದ ಮಂಗಳಾರತಿ. ಅಂಗಡಿಗೆ ಹೋದರೆ ಕಚೇರಿಗೆ ತಡವಾಗುತ್ತದೆ, ಬಾಸ್ನಿಂದ ಬೆಳ್ಳಂಬೆಳಗ್ಗೆ ಬೈಗುಳ ತಿನ್ನಬೇಕು. ಇಂಥ ಸಂದರ್ಭದಲ್ಲಿ 'ನಂಬಿಗಸ್ಥ ಮಧ್ಯವರ್ತಿಗಳಿರುತ್ತಿದ್ದರೆ...' ಎಂದು ಎಷ್ಟೋ ಸಲ ನೀವೂ ಹಲುಬಿಕೊಂಡಿರಬಹುದು. ಇನ್ನು ಚಿಂತೆ ಬೇಕಿಲ್ಲ. ಫೋನ್ ಮಾಡಿ ನಿಮ್ಮ ಅಗತ್ಯಗಳನ್ನು ಹೇಳಿದರಾಯಿತು. ಕೆಲವೇ ಸಮಯದಲ್ಲಿ ನೀವು ಆರ್ಡರ್ ಮಾಡಿದ ಸಾಮಾನು ಮನೆ ತಲುಪುತ್ತದೆ!
ಇದು ಬೆಂಗಳೂರಿನಲ್ಲಿ 'ಸೈಕ್ಲರ್ ಸಿಟಿ' ಸದ್ದಿಲ್ಲದೇ ಮಾಡುತ್ತಿರುವ, ಬಹುಮಟ್ಟಿಗೆ ಯಶಸ್ಸನ್ನೂ ಗಳಿಸಿರುವ ಪ್ರಯೋಗ.
ವಿದೇಶಗಳಲ್ಲಿ ಜನಪ್ರಿಯವಾಗಿರುವ ಬೈಕ್ ಮೆಸೆಂಜರ್ಸ್ ಮಾದರಿಯಲ್ಲಿ ಹುಟ್ಟಿಕೊಂಡಿರುವ ಸಂಸ್ಥೆ ಇದು. ಭಾರತದಲ್ಲಿ ಹೊಸ ಪ್ರಯೋಗ. ನಗರವಾಸಿಗಳಿಗೆ ಮಹದುಪಕಾರಿ. ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿರುವ ಸೈಕ್ಲರ್ ಸಿಟಿ ಎರಡು ಹಂತಗಳಲ್ಲಿ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗಿದೆ. ಮೊದಲನೇ ಹಂತ- ಬೆಂಗಳೂರಿನ ಹೃದಯ ಭಾಗ ಮಹಾತ್ಮಗಾಂಧಿ ರಸ್ತೆಯಿಂದ 10 ಕಿ.ಮೀ. ವಿಸ್ತಾರದಲ್ಲಿ ಸೇವೆ ನೀಡುತ್ತಿದೆ. ಎರಡನೇ ಹಂತದಲ್ಲಿ ಪೂರ್ತಿ ಬೆಂಗಳೂರನ್ನು ಆವರಿಸಲಿದೆ. ಪ್ರಸ್ತುತ ಅತ್ಯಾಧುನಿಕ ಸೈಕಲ್ಗಳೊಂದಿಗೆ 12 ಜನ ಮೆಸೆಂಜರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜೀವ್ ಸಿಂಗ್ ಮತ್ತು ಮೇಜರ್ ನಿರಂತ್ ಬೈಮನ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನ ಪರಿಚಯ ಚೆನ್ನಾಗಿರುವ ಯುವಕರಿಗೆ ಉದ್ಯೋಗ ಕೊಡಲು ಸಂಸ್ಥೆ ಮುಂದಾಗಿದೆ.
ಪ್ರಸ್ತುತ ಬತೇಜಾ ಅಸ್ಪತ್ರೆ, 'ಪುಮಾ' ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ಸೈಕ್ಲರ್ ಸಿಟಿಯೊಂದಿಗೆ ಕೈಜೋಡಿಸಿವೆ. ಅಗತ್ಯ ವಸ್ತುಗಳನ್ನು ಹೇಳಿದ ಸ್ಥಳಕ್ಕೆ ತಲುಪಿಸುವ, ಕೊಂಡುಹೋಗುವ ಕೆಲಸ ನಿಗದಿತ ಸಮಯದಲ್ಲಿ ಮಾಡುತ್ತಿದೆ. ಭಾನುವಾರ ಹೊರತುಪಡಿಸಿ ಎಲ್ಲ ದಿನಗಳಲ್ಲಿ ಹಗಲು 9ರಿಂದ ರಾತ್ರಿ 9ರವರೆಗೆ ಸೇವೆ.
1-4 ಗಂಟೆಗಳಲ್ಲಿ ಸಾಮಗ್ರಿಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸುತ್ತಾರೆ. ಪ್ರತಿ ಮೆಸೆಂಜರ್ಗೆ ಪ್ರತ್ಯೇಕ ಕೋಡ್ ನೀಡಲಾಗಿದೆ. ಎಲ್ಲ ಮೆಸೆಂಜರ್ಗಳ ಸಂಪೂರ್ಣ ವಿಳಾಸ ಮತ್ತು ಇತರ ದಾಖಲೆಗಳನ್ನು ನಾಗರಿಕರ ಭದ್ರತೆಗೆ ಸಂಸ್ಥೆ ಇರಿಸಿಕೊಂಡಿದೆ. 2 ಕೆ.ಜಿ.ಗೊಂದರಂತೆ ಪ್ಯಾಕ್ ಮಾಡಿದ ಸುಮಾರು 8 ಕಿಲೋ ಸಾಗಿಸಬಹುದಾಗಿದೆ. ತಿಂಗಳ ಚಂದಾದಾರರಾದರೆ ದರದಲ್ಲಿ ಶೇ.10 ರಿಯಾಯಿತಿ. ಮಾರುಕಟ್ಟೆಯಿಂದ ಸಾಮಗ್ರಿಗಳನ್ನು ಖರೀದಿಸಿ ಮನೆಗೆ ತಲುಪಿಸುವಲ್ಲೂ ಸೈಕ್ಲರ್ಸಿಟಿ ಮುಂದಿದೆ. 08069999880 ನಂಬರಿಗೆ ಫೋನಾಯಿಸಿದರೆ ತಕ್ಷಣ ಸೇವೆ ಲಭ್ಯ. ದೂರ ಮತ್ತು ತೂಕದ ಆಧಾರದಲ್ಲಿ ದರ ನಿಗದಿ ಮಾಡಲಾಗಿದೆ. ಮೆಸೆಂಜರ್ಗಳು ಸಮವಸ್ತ್ರಧಾರಿಗಳು. ಗ್ರಾಹಕರ ವಸ್ತುಗಳಿಗೆ ಸೂಕ್ತ ಭದ್ರತೆ ವ್ಯವಸ್ಥೆ ಇದೆ. ಸಂಪೂರ್ಣ ಜವಾಬ್ದಾರಿಯನ್ನು ಸೈಕ್ಲರ್ ಸಿಟಿ ನಿಭಾಯಿಸುತ್ತಿದೆ. ಸಂಪರ್ಕಕ್ಕೆ: ಮೊ. 7406343949.
ಸೈಕ್ಲರ್ ಸಿಟಿ ಹಿಂದಿನ ಕಥೆ
ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ಸಿಂಗ್ ಅಲ್ಲಿನ ನಗರವಾಸಿಗಳು ಬೈಕ್ ಮೆಸೆಂಜರ್ಗಳಿಂದ ಅನುಕೂಲ ಪಡೆಯುತ್ತಿದ್ದುದನ್ನು ಗಮನಿಸಿದ್ದರು. ಬೆಂಗಳೂರಿನಲ್ಲಿ ಇಂಥದ್ದೊಂದು ಸೌಲಭ್ಯ ಒದಗಿಸಬೇಕೆಂದು ಮನಸ್ಸು ಮಾಡಿದರು. ರಾಜೀವ್ ಕನಸಿಗೆ ಜೊತೆಯಾಗಿದ್ದು ನಿವೃತ್ತ ಮೇಜರ್ ನಿರಾಂತ್ ಬೈಮನ. ಹೆಚ್ಚಿನ ಶಿಕ್ಷಣ ಪಡೆಯಲಾಗದೆ ನೌಕರಿ ವಂಚಿತ ಯುವಕರನ್ನು ಒಟ್ಟುಗೂಡಿಸಿದರು. ಸೈಕ್ಲರ್ ಸಿಟಿ ಎಂಬ ಯುವ ಪಡೆ ಬೆಂಗಳೂರಿನ ನಾಗರಿಕರಿಗೆ ಸೇವೆ ಒದಗಿಸಲು ಪ್ರಾರಂಭಿಸಿತು.
ನನ್ನ ಸ್ನೇಹಿತರೊಬ್ಬರು ತುರ್ತಾಗಿ ಆಸ್ಪತ್ರೆ ಸೇರಿದರು. ಶೀಘ್ರವಾಗಿ ಹಣ ಬೇಕಿತ್ತು. ಎಟಿಎಮ್ ಕಾರ್ಡ್ ತಂದಿರಲಿಲ್ಲ. ಸೈಕ್ಲರ್ ಸಿಟಿಗೆ ಫೋನ್ ಮಾಡಿ, ಸಹಾಯ ಮಾಡುತ್ತಾರೆ ಎಂದು ಪಕ್ಕದಲ್ಲಿದ್ದವರು ಹೇಳಿದರು. ಒಂದು ಗಂಟೆಯಲ್ಲಿ ಎಟಿಎಮ್ ಕಾರ್ಡ್ ಕೈಸೇರಿತ್ತು.
- ಸದಾಶಿವ, ಉದ್ಯಮಿ
- ಮಂಜುನಾಥ ಎಲ್.ಕೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.