ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪೂರ್ಣದೃಷ್ಟಿಯ ಸರ್ವೋದಯ ಮಂತ್ರ

Mainashree
Updated On : 9 Feb 2014, 11:44 am

ಸ್ವಾಮಿ ವಿವೇಕಾನಂದರು ಪ್ರೇಮದ ಮೂರ್ತರೂಪವೇ ಆಗಿದ್ದರು. ಸಕಲರೂ ಅವರ ಕೃಪೆಗೆ ಪಾತ್ರರಾಗುತ್ತಿದ್ದರು. ತಮ್ಮ ಬಳಿ ಬಂದ ಯಾರನ್ನೂ ಆಶೀರ್ವದಿಸದೆ ಕಳಿಸುತ್ತಿರಲಿಲ್ಲ. ಇದರ ಪರಿಣಾಮವಾಗಿ ಪಾಪಿಷ್ಠ ಜೀವನ ನಡೆಸುತ್ತಿದ್ದ ಎಷ್ಟೋ ಜನರು ಅಧ್ಯಾತ್ಮ ಜಗತ್ತನ್ನು ಪ್ರವೇಶಿಸುವಂತಾಯಿತು. ಆದರೆ ಇದರಿಂದ ಅನೇಕ ವದಂತಿಗಳು ಹುಟ್ಟಿಕೊಂಡವು.
'ಸ್ವಾಮೀಜಿಯನ್ನು ಹೊಗಳಿದರೆ ಸಾಕು, ಅವರು ಸಂತೋಷಗೊಳ್ಳುತ್ತಾರೆ. ಮನುಷ್ಯನ ಅಂತರಾಳದೊಳಗಿನ ಹುಳುಕನ್ನು ಕಾಣುವ ಸಾಮರ್ಥ್ಯ ಅವರಿಗಿಲ್ಲ, ಪಕ್ಕಾ ಪ್ರಾಪಂಚಿಕರ ಮೇಲೂ ಅವರು ಕೃಪೆ ತೋರುತ್ತಾರೆ!' ಇದನ್ನೆಲ್ಲ ಕೇಳಿದ ಒಬ್ಬ ಶಿಷ್ಯ ಈ ವಿಷಯವನ್ನು ಸ್ವಾಮೀಜಿಗೆ ನೇರವಾಗಿ ಹೇಳಬೇಕೆಂದು ನಿಶ್ಚಯಿಸಿಕೊಂಡು ಬಂದು,
ಸ್ವಾಮೀಜಿ, ನಿಮ್ಮನ್ನೊಂದು ಪ್ರಶ್ನೆ ಕೇಳಬಹುದೆ? ಎಂದ. ಸ್ವಾಮೀಜಿ, ಆಗಬಹುದು ಎಂದರು. ಶಿಷ್ಯ ತಾನು ಕೇಳಿದ ವಿಷಯಗಳನ್ನೆಲ್ಲ ಸ್ವಾಮೀಜಿಗೆ ವಿವರಿಸಿದ. ಶಿಷ್ಯನ ಮಾತುಗಳನ್ನು ಸುಮ್ಮನೆ ಕೇಳುತ್ತಿದ್ದ ಸ್ವಾಮೀಜಿ,  ಭಾವಾವೇಶಭರಿತರಾಗಿ ನುಡಿದರು, 'ಮಗು, ನಾನು ಒಬ್ಬ ಮನುಷ್ಯನನ್ನು ನೋಡಿದಾಗ ಅವನ ಒಳಗಿರುವುದನ್ನೆಲ್ಲ ಅರಿಯಬಲ್ಲೆನಲ್ಲದೆ, ಅವನ ಪೂರ್ವಜನ್ಮವನ್ನೂ ತಿಳಿಯಬಲ್ಲೆ. ಅವನ ಸುಪ್ತಮನಸ್ಸಿನಲ್ಲಿ ಅಡಗಿರುವ ವಿಚಾರಗಳನ್ನು ತಿಳಿದುಕೊಳ್ಳಬಲ್ಲೆ. ಹೀಗಿದ್ದರೂ ಅಂಥವರ ಮೇಲೆ ನಾನೇಕೆ ಕೃಪೆ ಮಾಡುತ್ತೇನೆ ಬಲ್ಲೆಯಾ? ಪಾಪ  ಆ ಬಡಜೀವಿಗಳು ಸ್ವಲ್ಪ ಮನಶ್ಶಾಂತಿಗಾಗಿ ಎಲ್ಲಾಕಡೆ ಅಲೆದಾಡಿಬಿಟ್ಟಿದ್ದಾರೆ. ಆದರೆ ಎಲ್ಲರೂ ಅವರನ್ನು ತಿರಸ್ಕರಿಸಿದ್ದಾರೆ. ಇನ್ನು ಅವರಿಗೆ ದಿಕ್ಕು ತೋರುವವರು ಯಾರು? ಆದ್ದರಿಂದಲೇ ನಾನು ಭೇದ ಮಾಡಲಾರೆ' ಎಂದುತ್ತರಿಸಿದರು. ಸಮಸ್ತ ವಿಶ್ವವನ್ನೇ ಪ್ರೀತಿಸುವ ವಿಶ್ವಮಾನವ ವಿವೇಕಾನಂದರ ಔದಾರ್ಯದ ಅಗಾಧತೆಯನ್ನು ಇಲ್ಲಿ ಕಾಣಬಹುದು.ಟಿ

ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement