ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಎಲ್ಲೂ ಊಟ ಸಿಗದಿದ್ದಾಗ ನಮ್ಮನೆಗೆ ಬಾ

ಒಂದು ದಿನ ಮಧ್ಯಾಹ್ನ ಮೈಸೂರಿನ ಬೀದಿಗಳಲ್ಲಿ ಅಲೆಯುತ್ತಿದ್ದಾಗ, ಹಸಿವೆಯನ್ನು ತಾಳಲಾರದೆ ಅಲ್ಲಿಯೇ ಮರಿ ಮಲ್ಲಪ್ಪ ...

Rashmi Kasaragodu
Updated On : 11 Feb 2014, 3:58 am

ಒಂದು ದಿನ ಮಧ್ಯಾಹ್ನ ಮೈಸೂರಿನ ಬೀದಿಗಳಲ್ಲಿ ಅಲೆಯುತ್ತಿದ್ದಾಗ, ಹಸಿವೆಯನ್ನು ತಾಳಲಾರದೆ ಅಲ್ಲಿಯೇ ಮರಿ ಮಲ್ಲಪ್ಪ ಹೈಸ್ಕೂಲು ಎದುರಿಗೆ ಇದ್ದ ಚಲುವಾಂಬಾ ಅಗ್ರಹಾರದಲ್ಲಿ ಒಬ್ಬರ ಮನೆಗೆ ಹೋಗಿ, 'ನಾನೊಬ್ಬ ವಿದ್ಯಾರ್ಥಿ, ಮೂರು ದಿನಗಳಿಂದ ಊಟವಿಲ್ಲ, ತುಂಬಾ ಹಸಿವಾಗಿದೆ ಊಟಕ್ಕೆ ಹಾಕುತ್ತೀರಾ?' ಎಂದು ಧೈರ್ಯದಿಂದ ಕೇಳಿದೆ. ತಕ್ಷಣ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತೆ. ಆ ಮನೆಯಲ್ಲಿದ್ದ ಮಧ್ಯ ವಯಸ್ಸಿನ ಮಹಿಳೆ ನನ್ನನ್ನು ಕುಳಿತುಕೊಳ್ಳಲು ಹೇಳಿ, ಎಲೆ ತಂದು ಹಾಕಿ ಅನ್ನ ಸಾರು ಬಡಿಸಿದರು. ಮಜ್ಜಿಗೆ ಅನ್ನವನ್ನೂ ಹಾಕಿದರು. ಊಟ ಮುಗಿಸಿ, ಎಲೆ ತೆಗೆದು ಹೊರಗೆ ಹಾಕಿ, ಅಂಗಳದಲ್ಲಿದ್ದ ನಲ್ಲಿಯಲ್ಲಿ ಕೈ ತೊಳೆದುಕೊಂಡು, ಅವರಿಗೆ ನಮಸ್ಕಾರ ಹೇಳಲು ಬಂದಾಗ, ಆ ತಾಯಿ 'ನಿನಗೆ ಎಲ್ಲಿಯೂ ಊಟ ಸಿಗದಿದ್ದಾಗ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗು' ಎಂದು ಹೇಳಿದರು. ನನ್ನ ಕಣ್ಣಲ್ಲಿ ನೀರು ಬಂತು. ಹೃದಯ ತುಂಬಿ ಬಂತು. ಮನಸ್ಸಿನಲ್ಲೇ ಅವರಿಗೆ ವಂದನೆ ಸಲ್ಲಿಸಿ  ಹೊರಟು ಬಂದೆ. ಆ ಮನೆ ಇಂದಿಗೂ ಇದೆ. ಆದರೆ ಮನೆಯವರು ಮಾತ್ರ ಇದ್ದಂತಿಲ್ಲ. ನಾನು ಯಾವಾಗಲಾದರೂ ಮೈಸೂರಿಗೆ ಹೋಗಿದ್ದಾಗ ಚಲುವಾಂಬಾ ಅಗ್ರಹಾರದ ಕಡೆಗೆ ಹೋಗಿ, ಆ ಮನೆಯನ್ನು ನೋಡಿ ಬರುತ್ತೇನೆ. ಅರವತ್ತು ವರ್ಷದ ಹಿಂದಿನ ಆ ಘಟನೆಯನ್ನು ಜ್ಞಾಪಿಸಿಕೊಳ್ಳುತ್ತೇನೆ.
ಮತ್ತೊಂದು ದಿನ ಶಿವರಾಂಪೇಟೆಯಲ್ಲಿರುವ ಎಂ.ಕೆ. ಹಾಸ್ಟೆಲ್ ಎಂಬ ವಿದ್ಯಾರ್ಥಿ ನಿಲಯದ ಬೋರ್ಡು ನೋಡಿದೆ. ಒಳಗೆ ಹೋದೆ. ಅಲ್ಲಿ ಅಕಸ್ಮಾತಾಗಿ ನಮ್ಮ ಗ್ರಾಮದವರೇ ಆದ, ನನ್ನ ಸಂಬಂಧಿಕರಾಗಿದ್ದ ರಾಜಣ್ಣ ಎಂಬವರನ್ನು ನೋಡಿದೆ. ಅವರು ಮೈಸೂರಿನಲ್ಲಿ ಓದುತ್ತಿರುವುದಾಗಿ ಕೇಳಿದ್ದೆ. ಇದೇ ಹಾಸ್ಟೆಲಿನಲ್ಲಿರುವುದಾಗಿ ತಿಳಿಯಿತು. ಅವರು ಸಹ ನನ್ನನ್ನು ಸಂತೋಷದಿಂದ, ಆತ್ಮೀಯತೆಯಿಂದ ಮಾತನಾಡಿಸಿದರು. ಇಷ್ಟೇ ಅಲ್ಲ, ನಾನು ಬೇರೆ ವ್ಯವಸ್ಥೆ ಮಾಡಿಕೊಳ್ಳುವವರೆಗೆ ತಮ್ಮ ರೂಮಿನಲ್ಲಿ ಇರಬಹುದೆಂದೂ ಹೇಳಿದರು. ಇದರಿಂದ ನನಗೆ ಸ್ವರ್ಗ ಸಿಕ್ಕಷ್ಟು ಸಂತೋಷವಾಯಿತು. ಕೂಡಲೇ ನನ್ನ ವಾಸವನ್ನು ಛತ್ರದ ಕಟ್ಟೆಯಿಂದ, ಎಂ.ಕೆ. ಹಾಸ್ಟೆಲಿಗೆ ವರ್ಗಾಯಿಸಿದೆ. ರಾಜಣ್ಣನ ರೂಮಿನಲ್ಲೇ ಇರುತ್ತಿದ್ದೆ. ಇದರಿಂದ ರಾಜಣ್ಣನ ಜೊತೆಗೆ ಕಾಫಿ ತಿಂಡಿ ಮತ್ತು ಊಟವೂ ಮಾಡುತ್ತಿದ್ದುದರಿಂದ ಅನುಕೂಲವಾಗುತ್ತಿತ್ತು. ಆದರೆ ಇದು ಕಾಯಂ ವ್ಯವಸ್ಥೆಯಲ್ಲ ಎಂಬುದರ ಅರಿವೂ ಇತ್ತು. ಆದ್ದರಿಂದ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದೆ. ಒಂದು ದಿನ ಚಿತ್ರದುರ್ಗದಲ್ಲಿ ನಾನು ಓದುತ್ತಿದ್ದಾಗ ನನ್ನ ಉಪಾಧ್ಯಾಯರಾಗಿದ್ದ ಶ್ರೀನಿವಾಸರಾಯರೆಂಬವರು ಸಿಕ್ಕರು. ನನ್ನ ಯೋಗಕ್ಷೇವು ವಿಚಾರಿಸಿದರು. ನನ್ನ ಪರಿಸ್ಥಿತಿಯನ್ನು ಹೇಳಿದೆ. ಅವರೂ ದುಃಖಪಟ್ಟರು. ವಾರದಲ್ಲಿ ಒಂದು ದಿನ ನಮ್ಮ ಮನೆಗೆ ಊಟಕ್ಕೆ ಬಾ ಎಂದು ಪ್ರೀತಿಯಿಂದ ಕರೆದರಲ್ಲದೆ, ತಮ್ಮ ಮನೆಯ ವಿಳಾಸವನ್ನೂ ಕೊಟ್ಟರು ಮತ್ತು ತಮ್ಮ ಮನೆಯ ಹತ್ತಿರದಲ್ಲಿಯೇ ಇದ್ದ ವೆಂಕಣ್ಣಯ್ಯನವರನ್ನೂ ನೋಡು ಎಂದು ಹೇಳಿದರು. ಅದರಂತೆ ವೆಂಕಣ್ಣಯ್ಯನವರನ್ನು ಕಂಡೆ. ವೆಂಕಣ್ಣಯ್ಯನವರು ಮಹಾರಾಜ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಾಗಿದ್ದರಲ್ಲದೆ, ಅನೇಕ ಸಾಹಿತಿಗಳಿಗೆ, ಕವಿಗಳಿಗೆ ಮತ್ತು ಲೇಖಕರಿಗೆ ಮಾರ್ಗದಶಕರಾಗಿದ್ದರು; ಗುರುಗಳಾಗಿದ್ದರು. ಅವರ ಬಗ್ಗೆ ಕೇವಲ ಕಾಲೇಜಿನಲ್ಲಷ್ಟೇ ಅಲ್ಲ, ಇಡೀ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಗೌರವವಿತ್ತು. ಬಿ.ಎಂ. ಶ್ರೀಕಂಠಯ್ಯ, ತೀ.ನಂ.ಶ್ರೀ., ನಾ. ಕಸ್ತೂರಿ, ಎ.ಎನ್. ಮೂರ್ತಿರಾವ್, ಜಿ.ಪಿ. ರಾಜರತ್ನಂ, ಜಿ. ವೆಂಕಟಸುಬ್ಬಯ್ಯ ಮೊದಲಾದ ಅಂದಿನ ಸಾಹಿತಿಗಳು ವೆಂಕಣ್ಣಯ್ಯನವರನ್ನು ತಮ್ಮ ಗುರುಗಳೆಂದೇ ಭಾವಿಸಿದ್ದರು ಮತ್ತು ಆಗಾಗ್ಗೆ ಅವರ ಮನೆಗೆ ಬಂದು, ಚರ್ಚಿಸುತ್ತಿದ್ದರು. ವೆಂಕಣ್ಣಯ್ಯನವರ ನೆರವಿನಿಂದ ನನಗೆ 3-4 ಸಾಹಿತಿಗಳ ಮನೆಯಲ್ಲಿ ಊಟಕ್ಕೂ ವ್ಯವಸ್ಥೆಯಾಯಿತು. ಅಂತೂ, ವಾರದಲ್ಲಿ ಏಳೂ ದಿನದ ಊಟದ ವ್ಯವಸ್ಥೆಯಾಯಿತು. ವಾರದಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ಊಟ. ಇಂಟರ್ ಮೀಡಿಯಟ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಬಿ. ನಾಗೇಶರಾವ್ ಎಂಬವರ ಮನೆಯಲ್ಲಿ ಒಂದು ವಾರ ಸಿಕ್ಕಿತು. ಪ್ರತಿ ಶುಕ್ರವಾರ ಅವರ ಮನೆಯಲ್ಲಿ ಊಟ, ಯಾರ ಮನೆ ತಪ್ಪಿಸಿದರೂ ಅವರ ಮನೆಗೆ ಮಾತ್ರ ತಪ್ಪದೆ ಹೋಗುತ್ತಿದ್ದೆ. ಏಕೆಂದರೆ ಅವರ ಮಗಳು ಸುಮಾರು 10-12 ವರ್ಷದ ಹುಡುಗಿ, ದೇವರ ನಾಮಗಳನ್ನು, ಅದರಲ್ಲಿಯೂ ಲಕ್ಷ್ಮಿ ಮೇಲಿನ ಹಾಡುಗಳನ್ನು ಬಹಳ ಸುಶ್ರಾವ್ಯವಾಗಿ, ಇಂಪಾಗಿ ಹಾಡುತ್ತಿದ್ದಳು. ಆ ಹುಡುಗಿ ಹೇಳುತ್ತಿದ್ದ, 'ರಮಾ ಸಮುದ್ರನ ಕುಮಾರಿ..', 'ನಿನ್ನ ಸರಿಸಮನರಾರಮ್ಮ...' ಎಂಬ ಹಾಡು ನನ್ನ ತಲೆಯಲ್ಲಿ ಇನ್ನೂ ಇದೆ. ಎಷ್ಟೋ ಸಲ ಈ ಹಾಡನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಇನ್ನು ವಾಸದ ಪ್ರಶ್ನೆ. ಒಂದು ದಿನ ವೆಂಕಣ್ಣಯ್ಯನವರ ಮನೆಗೆ ಎಚ್.ಎಂ. ಶಂಕರನಾರಾಯಣರಾವ್ ಎಂಬವವರು ಬಂದಿದ್ದರು. ಅವರು ಹರಿಹರದವರು. ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದರು. 'ವೀವರ್ಸ್ ಲೈನ್‌' ಬಡಾವಣೆಯಲ್ಲಿ (ಈಗ ಅದನ್ನು ಕೃಷ್ಣಮೂರ್ತಿಪುರಂ ಎಂದು ಕರೆಯುತ್ತಾರೆ) ಒಂದು ಕೊಠಡಿಯಲ್ಲಿ ಇರುತ್ತಿದ್ದರು. ನಾನು ದಾವಣಗೆರೆಯವನೆಂದೂ, ವೆಂಕಣ್ಣಯ್ಯನವರ ಪರಿಚಯದವನೆಂದೂ ತಿಳಿದು ನನಗೂ ಅವರ ಕೊಠಡಿಯಲ್ಲಿರಲು ಹೇಳಿದರು. ವೆಂಕಣ್ಣಯ್ಯನವರೂ ಒಪ್ಪಿದರು. ಮುಂದೆ ಮೂರು ನಾಲ್ಕು ದಿನಗಳಲ್ಲಿ ನಾನು ಎಂ.ಕೆ. ಹಾಸ್ಟೆಲಿನಿಂದ, ವೀವರ್ಸ್ ಲೈನ್‌ನಲ್ಲಿದ್ದ ಶಂಕರನಾರಾಯಣರಾಯರ ಕೊಠಡಿಗೆ ವರ್ಗಾವಣೆಯಾದೆ. ನಾನು ಮೈಸೂರಿನಲ್ಲಿ ಇದ್ದಷ್ಟು ದಿನ, ಅಂದರೆ ಸುಮಾರು ಒಂದುವರೆ ವರ್ಷ ಇಲ್ಲಿಯೇ ನನ್ನ ವಾಸ. ಶಂಕರನಾರಾಯಣರಾಯರ ಜೊತೆ ಅವರ ಮಿತ್ರರೊಬ್ಬರು ಅದೇ ಕೊಠಡಿಯಲ್ಲಿದ್ದರು. ಅವರಿಬ್ಬರೂ ನನ್ನನ್ನು ತುಂಬಾ ಸಹೃದಯತೆಯಿಂದ ನೋಡಿಕೊಳ್ಳುತ್ತಿದ್ದರು.
ಮೈಸೂರಿನಲ್ಲಿ ಯಾವುದಾದರೊಂದು ಕೆಲಸಕ್ಕೆ ಸೇರಬೇಕೆಂದು ಪ್ರಯತ್ನಿಸಿದೆ. ಅನೇಕ ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಕೇಳಿದೆ. ಕನಿಷ್ಠ ಹೋಟೆಲ್‌ನಲ್ಲಿ ಕೆಲಸ ಮಾಡಲು ಪ್ರಯತ್ನಿಸಿದೆ. ಅದೂ ಸಾಧ್ಯವಾಗಲಿಲ್ಲ. ಕಾಲೇಜು ವಿದ್ಯಾಭ್ಯಾಸ ನನ್ನ ಗುರಿಯಾಗಿತ್ತು. ಅದು ನನ್ನ ಛಲವೂ ಆಗಿತ್ತು. ಆದ್ದರಿಂದ ನೌಕರಿಗೆ ಮಹತ್ವ ಕೊಡದೆ ಕಾಲೇಜು ವಿದ್ಯಾಭ್ಯಾಸದ ಕಡೆಗೆ ಗಮನಕೊಟ್ಟೆ.
ಮೈಸೂರಿಗೆ ಬಂದ ಮೇಲೆ ಕೆಲವೇ ದಿನಗಳಲ್ಲಿ ಊಟ ವಸತಿಗಳ ವ್ಯವಸ್ಥೆಗಾಗಿ ಅಲೆದೆ. ಆದರೆ, ಕಾಲೇಜಿಗೆ ಸೇರುವುದು ಮಾತ್ರ ಆಗಿರಲಿಲ್ಲ. ಏಕೆಂದರೆ, ಕಾಲೇಜಿಗೆ ಸೇರಲು ಕನಿಷ್ಠ 100-120 ರು. ಬೇಕಾಗಿತ್ತು. ಅದನ್ನು ಕಳಿಸುವಂತೆ ಚಿತ್ರದುರ್ಗದಲ್ಲಿದ್ದ ನನ್ನ ದೊಡ್ಡಪ್ಪನಿಗೆ ಕಾಗದ ಬರೆದೆ. ಚಳ್ಳಕೆರೆಯಲ್ಲಿದ್ದ ನನ್ನ ಚಿಕ್ಕಪ್ಪನಿಗೂ ಬರೆದೆ. ಇಬ್ಬರಿಂದಲೂ ಹಣ ಬರಲಿಲ್ಲ. ಕಾಗದವೂ ಬರಲಿಲ್ಲ. ಪ್ರತಿದಿನ ಅರಮನೆಯ ಹತ್ತಿರದಲ್ಲಿಯೇ ಇದ್ದ ಹೆಡ್‌ಪೋಸ್ಟ್ ಆಫೀಸಿಗೆ ಹೋಗಿ ಬರುತ್ತಿದ್ದೆ. ಪ್ರಯೋಜನವಾಗಲಿಲ್ಲ. ನನ್ನ ಸಂಬಂಧಿಕರು ಆಗಲೇ ನನ್ನನ್ನು ಪೂರ್ತಿಯಾಗಿ ಮರೆತಿದ್ದಾರೆಂಬ ಭಾವನೆ ಬಂದು ಎಷ್ಟೋ ಸಲ ದುಃಖಿಸಿದ್ದೇನೆ. ಹತ್ತಿರವೇ ಇದ್ದ ನಿಷದ್‌ಬಾಗ್ ತೋಟದಲ್ಲಿ ಒಬ್ಬನೇ ಕುಳಿತುಕೊಂಡು ಅತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯೂ ಬರುತ್ತಿತ್ತು. ಆದರೆ ಅದು ಹೇಡಿಯ ಕೆಲಸ, ಹಠ ಹಿಡಿದು, ಕಾಲೇಜು ವಿದ್ಯಾಭ್ಯಾಸ ಮಾಡಬೇಕೆಂಬ ಛಲ ನನ್ನನ್ನು ಬಡಿದೆಬ್ಬಿಸುತ್ತಿತ್ತು.
ಅಂತೂ ಕಾಲೇಜಿಗೆ ಸೇರಿದೆ!
ಒಂದು ದಿನ ಮಧ್ಯಾಹ್ನ ವೆಂಕಣ್ಣಯ್ಯನವರ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಅವರು, 'ಕಾಲೇಜಿಗೆ ಸೇರಿದೆಯಾ? 'ಯಾವ ತರಗತಿ?' ಎಂದು ಕೇಳಿದರು. ನಿಜಸಂಗತಿ ಹೇಳಲೇ ಬೇಕಾಯಿತು. ಕೂಡಲೇ ಅವರು ತಮ್ಮ ರೂಮಿಗೆ ಹೋಗಿ ನೂರರ ನೋಟು ತಂದು, ನನಗೆ ಕೊಟ್ಟು 'ನಾಳೆಯೇ ಕಾಲೇಜಿಗೆ ಸೇರು, ಪ್ರಿನ್ಸಿಪಾಲರಿಗೆ ನಾನು ಹೇಳುತ್ತೇನೆ' ಎಂದು ಹೇಳಿದರು. ಆ ಪ್ರಿನ್ಸಿಪಾಲರ ಹೆಸರು ಬಿ. ನಾಗೇಶರಾಯರೆಂದು. ನಾನು ಕಾಲೇಜಿಗೆ ಸೇರಿದ ದಿನವೇ ಪ್ರಿನ್ಸಿಪಾಲರು ನನ್ನನ್ನು ಕರೆಸಿ, ನನ್ನ ಬಗ್ಗೆ ವಿಚಾರಿಸಿ, 'ವೆಂಕಣ್ಣಯ್ಯನವರು ಎಲ್ಲಾ ಹೇಳಿದ್ದಾರೆ. ಚೆನ್ನಾಗಿ ಓದು, ನಾನು ಸಹಾಯ ಮಾಡುತ್ತೇನೆ' ಎಂದು ಹೇಳಿದರು ಮತ್ತು 'ವಾರದಲ್ಲಿ ಒಂದು ದಿನ ನಮ್ಮ ಮನೆಗೂ ಊಟಕ್ಕೆ ಬಾ' ಎಂದು ತಿಳಿಸಿದರು. ಪ್ರತಿ ಶುಕ್ರವಾರ ಅವರ ಮನೆಗೆ ಹೋಗುತ್ತಿದ್ದೆ.
ಮರುದಿನ ಕಾಲೇಜಿಗೆ ಸೇರಿದೆ. ನಾನು ಸೇರಿದ್ದು ಇಂಟರ್ ಮೀಡಿಯೆಟ್ ಕಾಲೇಜಿನ ಮೊದಲನೆಯ ತರಗತಿಗೆ. ಅದು ಈಗಿನ ಪಿಯುಸಿ ಪರೀಕ್ಷೆಗೆ ಸಮಾನ. ಪ್ರಿನ್ಸಿಪಾಲರು ಹಬ್ಬದ ದಿನಗಳಲ್ಲಿ ನನ್ನನ್ನು ಊಟಕ್ಕೆ ಕರೆದು, ಬಟ್ಟೆ, ಪುಸ್ತಕ ಕೊಟ್ಟು ಒಂದು ರು. ದಕ್ಷಿಣೆ ಸಹ ಕೊಡುತ್ತಿದ್ದರು.
ನಾನು ಮೈಸೂರಿನಲ್ಲಿ ಓದುತ್ತಿದ್ದಾಗ, ನಾಲ್ವಡಿ ಕೃಷ್ಣರಾಜ ಒಡೆಯರೆಂಬವರು ಮಹಾರಾಜರಾಗಿದ್ದರು. ಅವರ ಆಳ್ವಿಕೆಯನ್ನು, ಅವರ ವೈಯುಕ್ತಿಕ ಸದ್ಗುಣಗಳನ್ನು ಮತ್ತು ಜನೋಪಕಾರಿ ಕಾರ್ಯಗಳನ್ನು ಸಂಸ್ಥಾನದ ಜನ ಮೆಚ್ಚಿ ಹೊಗಳುತ್ತಿದ್ದರು. ಆ ಕಾಲದಲ್ಲಿ ಮೈಸೂರು ದಸರಾ ಉತ್ಸವ ಇಡೀ ದೇಶದ ಆಕರ್ಷಣೆಯಾಗಿತ್ತು. ದಸರಾ ಉತ್ಸವ ನೋಡಲು ಪ್ರತಿ ವರ್ಷ ಲಕ್ಷಾಂತರ ಜನ ಮೈಸೂರಿಗೆ ಬರುತ್ತಿದ್ದರು. ದೇಶ ವಿದೇಶಗಳಿಂದ ಅನೇಕರನ್ನು ಅತಿಥಿಗಳಾಗಿ ಕರೆಸಲಾಗುತ್ತಿತ್ತು. ಹತ್ತು ದಿನಗಳವರೆಗೆ ನಡೆಯುತ್ತಿದ್ದ ಮಹಾರಾಜರ ದರ್ಬಾರು, ಸಂಗೀತೋತ್ಸವ, ದೀಪೋತ್ಸವ, ವಸ್ತು ಪ್ರದರ್ಶನ ಮತ್ತು ವಿಜಯದಶಮಿ ದಿನ ಆನೆ ಮೇಲೆ ಮಹಾರಾಜರ ಜಂಬೂ ಸವಾರಿ ಇತ್ಯಾದಿಗಳನ್ನು ಎಷ್ಟು ನೋಡಿದರೂ ಇನ್ನೂ ನೋಡಬೇಕೆನಿಸುತ್ತಿತ್ತು. ಇಂದು ಅದೆಲ್ಲ ಕೇವಲ ಕನಸಿನಂತಾಗಿದೆ. ಇಂದಿನ ದಸರಕ್ಕೂ, ಅಂದಿನ ದಸರಾ ಉತ್ಸವಕ್ಕೂ ಸಂಬಂಧವೇ ಇಲ್ಲ. ಅಂದಿನ ದಸರಾ ಉತ್ಸವ ನೋಡಿದವರು ಇಂದಿನ ದಸರಾ ಸಮಯದಲ್ಲಿ ಮೈಸೂರಿನಲ್ಲಿ ಇರುವುದಕ್ಕೂ ಅಸಹ್ಯ ಪಟ್ಟುಕೊಳ್ಳುತ್ತಾರೆ. ಇಂದಿನದು ಉತ್ಸವವಲ್ಲ, ಪುಢಾರಿಗಳ, ರಾಜಕಾರಣಿಗಳ ಒಂದು ಸಂತೆ ಎಂದರೆ ತಪ್ಪಾಗದು.
ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರ ತಮ್ಮ ಹಾಗೂ ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರರ ಹಿರಿಯ ಮಗ ಜಯಚಾಮರಾಜ ಒಡೆಯರನ್ನು ದತ್ತು ತೆಗೆದುಕೊಂಡಿದ್ದರು. ಅರಸು ಮನೆತನದ ಎಲ್ಲ ಮಕ್ಕಳಿಗಾಗಿ ಅರಮನೆ ಆವರಣದಲ್ಲೇ ಒಂದು ಶಾಲೆಯನ್ನು ನಡೆಸುತ್ತಿದ್ದರು. ಇಲ್ಲಿ ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಈ ಶಾಲೆಯ ಉಪಾಧ್ಯಾಯರೆಲ್ಲ ಇಂಗ್ಲಿಷರು. ಟಾಡ್ ಹಂಟರ್ ಎಂಬವರು ಮುಖ್ಯೋಪಧ್ಯಾಯರಾಗಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರು ಬಹಳ ಒಳ್ಳೆಯವರು. ದೇಶಪ್ರೇಮಿಗಳು ಮತ್ತು ದೂರದೃಷ್ಟಿಯುಳ್ಳವರು. ದೇಶದಲ್ಲಿ ಆಗುತ್ತಿರುವ ಬದಲಾವಣೆ ಸೂಕ್ಷ್ಮವಾಗಿ ಗ್ರಹಿಸಿ, ಮುಂದೆ ಮಹಾರಾಜನಾಗಬೇಕಾದ ತಮ್ಮ ದತ್ತು ಮಗನನ್ನು ನಗರದ ಇಂಟರ್ ಮೀಡಿಯಟ್ ಕಾಲೇಜಿಗೆ ಸೇರಿಸಿದರು. ಅವರೊಂದಿಗೆ ಸಿ.ಎಸ್. ಶೇಷಾದ್ರಿ ಎಂಬೊಬ್ಬ ಸಹಪಾಠಿಯೂ ಇದ್ದರು. ಅದೇ ಕಾಲೇಜಿನಲ್ಲಿ ಅದೇ ತರಗತಿಯಲ್ಲಿ ನಾನೂ ಓದುತ್ತಿದ್ದೆ. ಒಂದು ವರ್ಷ ಕಾಲೇಜಿನಲ್ಲಿ ಭಾವಿ ಮಹಾರಾಜರ ಸಹಪಾಠಿಯಾಗಿದ್ದೇನೆಂಬ ಹೆಮ್ಮೆ ನನ್ನದು. ಜಯಚಾಮರಾಜ ಒಡಯರೇ ಮೈಸೂರಿನ ಕೊನೆ ಮಹಾರಾಜರು. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದ ಐನೂರಕ್ಕೂ ಹೆಚ್ಚು ರಾಜ ಮನೆತನಗಳು ರದ್ದಾದವು. ಅವುಗಳಲ್ಲಿ ಮೈಸೂರು ಸಂಸ್ಥಾನವೂ ಒಂದು. ಆದರೆ ಮೈಸೂರು ಮಹಾರಾಜರ ಮೇಲೆ ಕೇಂದ್ರ ಸರ್ಕಾರಕ್ಕೆ ಬಹಳ ಗೌರವವಿತ್ತು. ಆದ್ದರಿಂದ ಅವರನ್ನು ಮೈಸೂರು ಸಂಸ್ಥಾನದಲ್ಲಿಯೇ ರಾಜ ಪ್ರಮುಖರನ್ನಾಗಿ ನೇಮಿಸಿದರು. ನಂತರ ಅವರನ್ನು ತಮಿಳುನಾಡಿನಲ್ಲಿ ರಾಜ್ಯಪಾಲರನ್ನಾಗಿ ನೇಮಿಸಿದರು. ಮುಂದೆ ಒಂದೆರಡು ವರ್ಷಗಳಲ್ಲಿ ಜಯಚಾಮರಾಜ ಒಡೆಯರು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಕೊಟ್ಟು, ಮೈಸೂರಿಗೆ ಬಂದು ವಿಶ್ರಾಂತಿ ಜೀವನ ನಡೆಸುತ್ತಿದ್ದರು.
 (ಮುಂದುವರಿಯುವುದು)


-ಕೆ.ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement