ಹಣ್ಣು, ತರಕಾರಿಗಳೇ ನಿಮ್ಮಲ್ಲಿನ ರಾಮಬಾಣ
ಆಹಾರ ಮತ್ತು ಕ್ಯಾನ್ಸರ್ ನಡುವಿನ ಸಂಬಂಧದ ಕುರಿತು ಸಂಶೋಧನೆಗಳು ಶುರುವಾದದ್ದು ಇಂದು, ನಿನ್ನೆ ಅಲ್ಲ. ಇದರದ್ದು ಸರಿಸುಮಾರು ...
ಆಹಾರ ಮತ್ತು ಕ್ಯಾನ್ಸರ್ ನಡುವಿನ ಸಂಬಂಧದ ಕುರಿತು ಸಂಶೋಧನೆಗಳು ಶುರುವಾದದ್ದು ಇಂದು, ನಿನ್ನೆ ಅಲ್ಲ. ಇದರದ್ದು ಸರಿಸುಮಾರು ಐದು ದಶಕಗಳ ಇತಿಹಾಸ. 1970ರ ದಶಕದಿಂದ ವಿಜ್ಞಾನಿಗಳ ಚಿತ್ತ ಇತ್ತ ಹರಿಯಿತು ಎಂದು ಹೇಳಲಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಅವರ ಗಮನ ಪ್ರಮುಖವಾಗಿ ಕೇಂದ್ರೀಕೃತವಾಗಿರುವುದು ಹಣ್ಣು ಹಾಗೂ ತರಕಾರಿಗಳ ಮೇಲೆ. ಇವು ಬಹಳ ಪರಿಣಾಮಕಾರಿಯಾಗಿ ಕ್ಯಾನ್ಸರ್ ಅನ್ನು ತಡೆಯಬಲ್ಲವು, ಎದುರಿಸಬಲ್ಲವು ಎನ್ನುವ ವಿಚಾರದಲ್ಲಿ ಅಭಿಪ್ರಾಯ ಭೇದವಿಲ್ಲ. ಅಂದರೆ ಎಲ್ಲ ಸಂಶೋಧನೆ, ಪ್ರಯೋಗಗಳೂ ಇದನ್ನು ರುಜುವಾತುಪಡಿಸಿವೆ ಅಂತ ಆಯಿತು. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ತಜ್ಞ ಡಾ.ಪೀಟರ್ ಗಿನ್ವಾಲ್ಡ್ ಹೇಳುವಂತೆ, ಹಣ್ಣು ಮತ್ತು ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವವರಲ್ಲಿ ಕಡಿಮೆ ಪ್ರಮಾಣದ ಹಣ್ಣು, ತರಕಾರಿ ತಿನ್ನುವವರಿಗಿಂತ ಕ್ಯಾನ್ಸರ್ ಸಾಧ್ಯತೆ ಕಡಿಮೆ. ಕರುಳಿನ ಕ್ಯಾನ್ಸರ್ನಿಂದ ಹಿಡಿದು ಶ್ವಾಸಕೋಸ ಕ್ಯಾನ್ಸರ್ವರೆಗೆ ಎಲ್ಲ ರೀತಿಯ ಕ್ಯಾನ್ಸರ್ಗೂ ಹಣ್ಣು, ತರಕಾರಿಗಳು ಮದ್ದು ಆಗಬಲ್ಲವು.
ಡಾ.ಗಿನ್ವಾಲ್ಡ್ರ ಹೇಳಿಕೆ ಪುಷ್ಟೀಕರಿಸುವಂಥ ವರದಿಯೊಂದನ್ನು ನೀಡಿರುವುದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ.ಗ್ಲಾಡಿಸ್ ಬ್ಲ್ಯಾಕ್ ಅವರು. 17 ದೇಶಗಳ 170 ಪ್ರಕರಣಗಳನ್ನು ಖುದ್ದು ಅಭ್ಯಸಿಸಿದ ಬಳಿಕ ಅವರು ಕಂಡುಕೊಂಡ ಸತ್ಯ ಏನೆಂದರೆ, ಯಾವ ದೇಶವೇ ಆಗಿರಲಿ. ಹಣ್ಣು, ತರಕಾರಿಗಳನ್ನು ಯಾರು ಹೆಚ್ಚೆಚ್ಚು ಸೇವಿಸುತ್ತಾರೆಯೊ ಅವರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಅಧಿಕವಾಗಿದೆ ಹಾಗೂ ಹಣ್ಣು, ತರಕಾರಿಗಳು ಕ್ಯಾನ್ಸರ್ ಸಾಧ್ಯತೆಯನ್ನು ಶೇ 50ರಷ್ಟು ಕಡಿಮೆ ಮಾಡಬಲ್ಲವು ಎನ್ನುವುದು. ಇನ್ನೂ ಕೆಲವು ಸಂಶೋಧನೆಗಳ ಪ್ರಕಾರ ನಿತ್ಯ ಹಣ್ಣು, ತರಕಾರಿ ಸೇವಿಸುವವರಲ್ಲಿ ಕ್ಯಾನ್ಸರ್ ಸಂಭವನೀಯತೆ ಶೇ 75ರಷ್ಟು ಕಡಿಮೆ. ಅಡುಗೆಯಲ್ಲಿ ನಿತ್ಯ ತರಕಾರಿ ಬಳಸಿಯೇ ಬಳಸುತ್ತೇವೆ. ಆದರೆ ಹಣ್ಣು? ವಾರಕ್ಕೆ ಒಮ್ಮೆಯೊ, ಎರಡು ಸಲವೊ ಹಣ್ಣು ತಿನ್ನುವುದಕ್ಕಿಂತ ನಿತ್ಯ ಎರಡು ಸಲ ಯಾವುದಾದರೂ ಹಣ್ಣು ತಿನ್ನುವುದು ಉತ್ತಮ. ಎಷ್ಟು ತಿನ್ನಬೇಕು ಎಂದು ಕೇಳಿದರೆ, ಇಂತಿಷ್ಟೇ ತಿನ್ನಬೇಕು ಎನ್ನುವ ಅಳತೆಗೋಲು ಏನಿಲ್ಲ. ಜಾಸ್ತಿ ತಿಂದರೆ ಒಳ್ಳೆಯದು ಎನ್ನುವುದು ನಿಜ. ಎಷ್ಟೇ ತಿನ್ನಿ, ಅದರಲ್ಲಿ ವೈವಿಧ್ಯ ಇರಲಿ. ಅಂದರೆ ಒಂದೇ ರೀತಿಯ ನಿತ್ಯ ಎರಡು ಬಾರಿಯಂತೆ ವಾರವಿಡೀ ಸೇವಿಸುವುದು ಬೇಡ. ಕಡೇಪಕ್ಷ ವಾರದಲ್ಲಿ 2-3 ರೀತಿಯ ಹಣ್ಣುಗಳನ್ನಾದರೂ ಸೇವಿಸಿ. ಅದೇರೀತಿ ತರಕಾರಿಯಲ್ಲೂ ವೆರೈಟಿ ಇರಲಿ.
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com