ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಳಪೆ ನಿರ್ಧಾರಗಳು

'ಅವ್ನು ಹಾಗೇ ಬಿಡು' ಅನ್ನುತ್ತೇವೆ; 'ಅವ್ಳು ಸರಿಯಿಲ್ಲ' ಅನ್ನುತ್ತೇವೆ. ನೋಡಲು ಬಹಳ ನಿರಪಾಯಕಾರಿಯಾದ ಈ ಪದಗಳು...

Rashmi Kasaragodu
Updated On : 14 Feb 2014, 3:56 am

'ಅವ್ನು ಹಾಗೇ ಬಿಡು' ಅನ್ನುತ್ತೇವೆ; 'ಅವ್ಳು ಸರಿಯಿಲ್ಲ' ಅನ್ನುತ್ತೇವೆ. ನೋಡಲು ಬಹಳ ನಿರಪಾಯಕಾರಿಯಾದ ಈ ಪದಗಳು, ಜತೆಗೂಡಿದರೆ ಎಷ್ಟು ಅನಾಹುತಕಾರಿ ಆಗಿಬಿಡುತ್ತವೆ ಅಲ್ಲವೆ? ಈ ಪದಗಳು ಬಂದದ್ದು ಎಲ್ಲಿಂದ? ಅವು ನಮ್ಮ ಮನಸ್ಸಿನಿಂದಲೇ ಉಕ್ಕಿರಬೇಕು. ಅದಕ್ಕೆ ಕಾರಣ ಏನು? ನಾವು ರೂಢಿಸಿಕೊಂಡ ಅಭಿಪ್ರಾಯ. ನಮ್ಮ ಅಭಿಪ್ರಾಯಗಳು ನಮ್ಮಲ್ಲಿ ನೆಲೆಯಾಗುವುದಕ್ಕೆ ಮೊದಲ ನೋಟ ಸಹಾಯಕ. ದುರದೃಷ್ಟವೆಂದರೆ, ಅನೇಕರ ಪಾಲಿಗೆ ಮೊದಲ ನೋಟವೇ ಅಂತಿಮ ನೋಟವೂ ಆಗಿಬಿಡುತ್ತದೆ. ಅಂದರೆ, ಮೊದಲ ನೋಟದಲ್ಲೇ, ಈ ವ್ಯಕ್ತಿ ಇಂತಿಂಥವನೇ ಎಂಬ ನಿರ್ಧಾರಕ್ಕೆ ನಾವು ಬಂದಿರುತ್ತೇವೆ. ಮಾತ್ರವಲ್ಲ ಅದನ್ನು ಹಾಗೇ ಹೇಳಿಬಿಟ್ಟಿರುತ್ತೇವೆ ಕೂಡ.
ಮೊದಲ ನೋಟದ ನಿರ್ಧಾರ, ಮೊದಲ ನೋಟದ ಪ್ರೀತಿಯಂತೆ. ಅದು ಸರಿಯಾಗಿರಬಹುದು, ಇಲ್ಲದೆಯೂ ಇರಬಹುದು. ಸುಮ್ಮನೆ ಒಂದು ಬಾರಿ ನೋಡಿದ ಹುಡುಗಿ, ನನ್ನನ್ನು ಪ್ರೀತಿಸಿಯೇಬಿಟ್ಟಳು ಎಂದು ಡಂಗುರ ಸಾರುತ್ತಾ ಹೋಗುವ ಹುಡುಗ ಎಲ್ಲರ ಮುಂದೆ ನಗೆಪಾಟಲಿಗೆ ಈಡಾಗುತ್ತಾನೆ ಅಷ್ಟೇ. ಹಾಗೇ ಇತರರ ಬಗ್ಗೆ ನಾವು ತಾಳುವ ನಿರ್ಧಾರಗಳು ಕೂಡ. ನಿಮ್ಮ ಬಾಸ್ ಸಿಡುಕ ಅಂತ ಕಾಣ್ಸುತ್ತೆ, ನಿಮ್ಮ ಗಂಡ ಕೊಂಚ ನಾಚಿಕೆ ಸ್ವಭಾವದವರು ಅಲ್ವಾ, ನಿನ್ನ ಫ್ರೆಂಡ್ ಚಾಳಿ ಸರಿಯಿದ್ದಂತಿಲ್ಲ... ಮುಂತಾದ ಕಮೆಂಟ್‌ಗಳನ್ನು ನೀವು ಸಾಕಷ್ಟು ಬಾರಿ ಕೇಳಿರಬಹುದು. ನೀವೂ ಅದಕ್ಕೆ ಬಲಿಯಾಗಿರಬಹುದು. ಇವೆಲ್ಲ ಪರಿಸ್ಥಿತಿ ಹಾಗೂ ವ್ಯಕ್ತಿಗಳ ಕುರಿತು ಸರಿಯಾದ ಅರಿವು ಇಲ್ಲದೆ ಮೂಡಿಬರುವ ಮಾತುಗಳು.ನಿಮ್ಮಲ್ಲಿ ಸಂಕೋಚ ಜಾಸ್ತಿ ಅನ್ನಿ, ಅದನ್ನೇ ಇನ್ಯಾರೋ ಒಬ್ಬರು 'ಅವನಿಗೆ ಸಿಕ್ಕಾಪಟ್ಟೆ ಜಂಭ' ಎಂದು ಹೇಳಿದರೆ ಹೇಗಿರುತ್ತದೆ? 'ಕಳಪೆ ಜಡ್ಜ್‌ಮೆಂಟ್‌' ಅಂದುಕೊಂಡು ಸುಮ್ಮನಾಗುತ್ತೀರಾ? ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಹಳತಾಗಿರಬಹುದು, ಆದರೆ ಅದರ ಅರ್ಥ ನವನವೀನಗೊಳ್ಳುತ್ತಲೇ ಇದೆ.
ಹಾಗಿದ್ದರೆ ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು? ನಮಗೆ ಸರಿಯಾಗಿ ತಿಳಿಯದ ವ್ಯಕ್ತಿ ಅಥವಾ ಸಂಗತಿಗಳ ಬಗ್ಗೆ ದಿಡೀರ್ ತೀರ್ಮಾನ ಕೈಗೊಳ್ಳುವ ಚಾಳಿಯನ್ನೇ ಬಿಡಬೇಕು. ಏನಾದರೂ ಹೇಳಲೇಬೇಕೆಂದಿದ್ದರೆ, ಸಮರ್ಪಕ ಜ್ಞಾನ ಪಡೆದುಕೊಳ್ಳದೆ ಆ ಬಗ್ಗೆ ಮಾತನಾಡಕೂಡದು. ಅಪರಿಗ್ರಹದಂತೆಯೇ ಇದು ಕೂಡ ಒಂದು ಮೌಲ್ಯ.


-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement