ಕಿರುತೆರೆ ಗಿರಣಿ ಸುವರ್ಣ ಪರ್ವ
ನಿರ್ದೇಶಕ ರವಿ ಗರಣಿ ಕಿರುತೆರೆಯ ಬ್ಯುಸಿ ವ್ಯಕ್ತಿ. ಒಂದೆರಡು ಧಾರಾವಾಹಿಗಳಿಗೆ ಅಂಟಿಕೊಳ್ಳದ ಮನುಷ್ಯ. ಪ್ರೈಮ್ ಟೈಮ್ ನಿರ್ದೇಶಕ...
ನಿರ್ದೇಶಕ ರವಿ ಗರಣಿ ಕಿರುತೆರೆಯ ಬ್ಯುಸಿ ವ್ಯಕ್ತಿ. ಒಂದೆರಡು ಧಾರಾವಾಹಿಗಳಿಗೆ ಅಂಟಿಕೊಳ್ಳದ ಮನುಷ್ಯ. ಪ್ರೈಮ್ ಟೈಮ್ ನಿರ್ದೇಶಕ ಎನ್ನುವ ಪಟ್ಟ ಕೂಡ ಇವರ ಹೆಸರಿಗಿದೆ. ಏಕಕಾಲದಲ್ಲೇ ಮೂರು ಧಾರಾವಾಹಿಗಳನ್ನು ಮಾಡುತ್ತಿರುವ ಗರಣಿ, ನಮ್ಮ 'ಕಿರುಕ್ಷೇತ್ರ'ಕ್ಕೆ ಬಂದಾಗ...
ಸದ್ಯಕ್ಕೆ ಎಷ್ಟು ಧಾರಾವಾಹಿಗಳು ನಿಮ್ಮ ನಿರ್ದೇಶನದ ಪಡಸಾಲೆಯಲ್ಲಿವೆ?
ಸುವರ್ಣ ವಾಹಿನಿಯೊಂದರಲ್ಲೇ ಮೂರು ಧಾರಾವಾಹಿಗಳನ್ನು ಮಾಡುತ್ತಿದ್ದೇನೆ. 'ಅಮೃತ ವರ್ಷಣಿ', 'ಪ್ರಿಯದರ್ಶನಿ', 'ಅರಗಿಣಿ'. ಎಲ್ಲ ಧಾರಾವಾಹಿಗಳು ಟಾಪ್ ಒನ್ನಲ್ಲೇ ಇದ್ದಾವೆ. ಒಂದು ರೀತಿಯಲ್ಲಿ ಸುವರ್ಣ ವಾಹಿನಿಯಲ್ಲಿ ನಮ್ಮದೇ ಪ್ರಾಬಲ್ಯ.
ಈ ಯಶಸ್ಸಿನ ಗುಟ್ಟೇನು? ನಿಮ್ಮನ್ನು ಕಿರುಕ್ಷೇತ್ರದ ಡಾನ್ ಅನ್ನಬಹುದೇ?
ಮೋಡಿಯಂತೂ ಮಾಡಿಲ್ಲ, ಅಂತಹದ್ದೇನೂ ಇಲ್ಲಿ ನಡೆಯೋಲ್ಲ. ಹಾಗೇನಾದ್ರು ಮಾಡಿದ್ರೆ ಅದು ತಾತ್ಕಾಲಿಕ ಮಾತ್ರ. ಬದಲಿಗೆ ಪ್ರತಿ ಪಾತ್ರಕ್ಕೂ ಒಂದು ಮಹತ್ವ ಇರುತ್ತದೆ. ಆ ಪಾತ್ರದ ಹಿಂದೆ ಅಚ್ಚರಿ ಎನಿಸುವ ಕಥೆಗಳಿರುತ್ತವೆ. ಅವುಗಳನ್ನು ಎಷ್ಟು ನೇರವಾಗಿ ನಿರೂಪಿಸುತ್ತೇವೋ ಅದು ಧಾರಾವಾಹಿಗೆ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಮಾಡಿದ್ದೇವೆ. ತಾಂತ್ರಿಕತೆ, ಲೊಕೇಷನ್, ಭಾಷೆಯ ಶೈಲಿ, ಕಲಾವಿದರ ಆಯ್ಕೆಯಲ್ಲೂ ಸಾಮ್ಯತೆ ಇಲ್ಲ. ಆದರೆ, ಕಿರುತೆರೆ ಡಾನ್ ಪಟ್ಟವಂತೂ ಬೇಡಪ್ಪ.
ನಿಮ್ಮ ಹಿಂದಿನ 'ಕಿರು'ಹಾದಿಯತ್ತ ನೋಡಿದಾಗ?
'ಕಾವ್ಯಾಂಜಲಿ' ಮೂಲಕ ನಾನು ಕಿರುತೆರೆಗೆ ಕಾಲಿಟ್ಟಿದ್ದು. ಅದನ್ನು ಒಂದು ವಿಭಿನ್ನವಾದ ಧಾಟಿಯಲ್ಲಿ ನಿರ್ದೇಶಿಸಿದೆ. ಈ ಧಾರಾವಾಹಿ ನನಗೆ ಮಾತ್ರವಲ್ಲ, ಕಿರುತೆರೆಗೇ ಮೈಲಿಗಲ್ಲಾಯಿತು. ಅಲ್ಲಿಂದ ಇಲ್ಲಿವರೆಗೂ ನನ್ನದೇ ಹಾದಿಯಲ್ಲಿ ಬರುತ್ತಿದ್ದೇನೆ.
ಸಿದ್ಧಸೂತ್ರಗಳ ಹೊರತಾದ ಹೊಸ ಕಥೆಗಳನ್ನು ಕಂಡುಕೊಂಡಿದ್ದು ಹೇಗೆ?
ನನ್ನ ನಿರ್ದೇಶನದ 'ಶುಭಂ' ಗೆಲುವು ಕಾಣಲಿಲ್ಲ. 7 ವರ್ಷ ಅಜ್ಞಾತವಾಸದಲ್ಲಿದ್ದೆ. ಒಂದು ದಿನ ನನ್ನ ಮಗಳು, 'ಪಪ್ಪ, ನೀವು ಯಾವಾಗ ಮತ್ತೆ ಧಾರಾವಾಹಿ ಮಾಡ್ತೀರಾ' ಎಂದು ಭಾವುಕನಾಗಿ ಯೋಚಿಸುವಂತೆ ಪ್ರಶ್ನೆ ಮಾಡಿದಳು. ಏನಾದರು ಮಾಡಿ ಇಲ್ಲಿ ಗುರುತಿಸಿಕೊಳ್ಳಬೇಕು, ಚಲಾವಣೆಯಲ್ಲಿರಬೇಕೆಂಬ ಹಠಕ್ಕೆ ಬಿದ್ದೆ. ಸುವರ್ಣವಾಹಿನಿಯಲ್ಲಿ ಅವಕಾಶ ಬಂದು 'ಕೃಷ್ಣ ರುಕ್ಮಿಣಿ' ಶುರುವಾಯ್ತು. ಕಿರುತೆರೆಯ ಇತಿಹಾಸದಲ್ಲಿಯೇ ಇದು ಚಿತ್ರೀಕರಣದಲ್ಲಿ ದಾಖಲೆ ಮಾಡಿದ ಸೀರಿಯಲ್. ನನ್ನ ಪ್ರತಿ ಧಾರಾವಾಹಿಯಲ್ಲೂ ಕಥೆ, ಕಲಾವಿದರು, ಲೊಕೇಷನ್, ಸೆಟ್ ಈ ಎಲ್ಲ ವಿಚಾರದಲ್ಲಿ ನನ್ನ ಜೊತೆ ದೊಡ್ಡ ತಂಡವೇ ಇದೆ. ಈ ತಂಡವೇ ಹೊಸ ದಾರಿಗೆ ಕಾರಣ.
ಧಾರಾವಾಹಿಗಳೆಂದರೆ ಅತ್ತೆ, ಸೊಸೆಯಂದಿರ ನಡುವಿನ ಜಗಳ, ಕಣ್ಣೀರ ಕಥೆಗಳಿಂದ ಕಿರುತೆರೆ ಹೊರ ಬರಲು ಸಾಧ್ಯವಿಲ್ಲವೇ?
ಭಾರತದಲ್ಲಿರುವ ಕೌಟುಂಬಿಕ ವ್ಯವಸ್ಥೆಯಲ್ಲಿ ಭಾವನೆಗಳಿಗೆ ಬೆಲೆ. ಇದು ಇರುವ ತನಕ, ಅತ್ತೆ, ಸೊಸೆ, ಜಗಳ, ಗಂಡ- ಹೆಂಡತಿ ನಡುವಿನ ವಿರಸ ಇದ್ದೇ ಇರ್ತಾವೆ. ಇದನ್ನ ಹೇಳೋದ್ರಲ್ಲಿ ತಪ್ಪೇನಿದೆ? ಆದರೂ ನಾನು ವಿಭಿನ್ನತೆ ಕಾಯ್ದುಕೊಂಡಿದ್ದೇನೆ. 'ಅಮೃತ ವರ್ಷಿಣಿ' ಅಕ್ಕ-ತಂಗಿಯ ಭಾವನೆಗಳ ಸಂಘರ್ಷಗಳನ್ನು ಬಿತ್ತರಿಸಿದರೆ, 'ಅರಗಿಣಿ' ಬ್ಯುಸಿನೆಸ್ ಎಳೆಯೊಂದನ್ನು ಹಿಡಿದು ಸಾಗುತ್ತದೆ. 'ಪ್ರಿಯದರ್ಶಿನಿ' ಹಳೆಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.
ಮುಂದೆ ಐತಿಹಾಸಿಕತೆಗೆ ಕೈ ಹಾಕುತ್ತೀರಿ ಎನ್ನುವ ಸುದ್ದಿ ಇದೆಯಲ್ಲ?
ಕರ್ನಾಟಕವನ್ನಾಳಿದ ಯಾವುದಾದರೂ ಒಂದು ಸಂಸ್ಥಾನದ ರಾಜನ ಕುರಿತು ಮೆಗಾ ಧಾರಾವಾಹಿ ಮಾಡುವುದು ನನ್ನ ಮಹತ್ವಾಕಾಂಕ್ಷೆಯ ಯೋಚನೆ. ಅದರಲ್ಲಿ ಐತಿಹಾಸಿಕ ಘಟನೆಗಳು, ಸೆಂಟಿಮೆಂಟ್ ಸನ್ನಿವೇಶಗಳ ಜೊತೆಗೆ ತುಂಬ ರಿಯಲಿಸ್ಟಿಕ್ ಆಗಿ ತರುವ ಕನಸು ಇದೆ. ಮುಂದೆ ನೋಡೋಣ.
- ಆರ್.ಕೇಶವಮೂರ್ತಿ