ಕೈಲಾಸವಾಸಿಯ ಕಾಣಲು ಕಾಲ್ನಡಿಗೆ
ಅದು ಬರೋಬ್ಬರಿ ಒಂಬತ್ತು ದಿನಗಳ ಪಯಣ. ಭರ್ತಿ ಮುನ್ನೂರೈವತ್ತು ಕಿಲೋಮೀಟರ್. ಬೆವರು ಕಿತ್ತುಬರುವಂತೆ, ಕಾಲುಗಳು ಸುಸ್ತಾಗುವಂತೆ ...
ಅದು ಬರೋಬ್ಬರಿ ಒಂಬತ್ತು ದಿನಗಳ ಪಯಣ. ಭರ್ತಿ ಮುನ್ನೂರೈವತ್ತು ಕಿಲೋಮೀಟರ್. ಬೆವರು ಕಿತ್ತುಬರುವಂತೆ, ಕಾಲುಗಳು ಸುಸ್ತಾಗುವಂತೆ ದಿನಕ್ಕೆ ಮೂವತ್ತು- ನಲುವತ್ತು ಕಿಲೋಮೀಟರ್ ನಡಿಗೆ. ಮನದಲ್ಲಿ ಮಾತ್ರ ನಮೋ ಮಂಜುನಾಥ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಿಂದ ಧರ್ಮಸ್ಥಳದ ಮಂಜುನಾಥ ದೇವರ ದರ್ಶನಕ್ಕೆ ಹೊರಡುವ ಪಾದಯಾತ್ರೆಗೆ ಈಗ 27 ವರ್ಷ. ಮೊದಲು ಇದನ್ನು ಪ್ರಾರಂಭಿಸಿದವರು ಹನುಮಂತಪ್ಪ. ಈಗ ಮುಂದುವರಿಸುತ್ತಿರುವವರು ಚೆನ್ನಶೆಟ್ಟರು ಹಾಗೂ ಶಂಭಯ್ಯ. ಎಲ್ಲರೂ ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ನ ನಿವೃತ್ತ ನೌಕರರು. ಹೊರಡುವ ದಿನ ಆರಂಭದಲ್ಲಿ ಕೆಲವೇ ಕೆಲವರಿರುವ ಗುಂಪು, ಧರ್ಮಸ್ಥಳ ತಲುಪುವ ಹೊತ್ತಿಗೆ ನಾಲ್ಕು ಸಾವಿರ ಮುಟ್ಟಿರುತ್ತದೆ. ಕಡಲು ಸೇರುವ ನದಿ ದಾರಿಯಲ್ಲಿ ತೊರೆಗಳನ್ನು ಸೇರಿಸಿಕೊಂಡಂತೆ ಇದಕ್ಕೂ ಭಕ್ತಾದಿಗಳು ಸೇರುತ್ತಾರೆ. ನದಿ ತೊರೆಗಳಲ್ಲಿ ಸ್ನಾನ, ಪ್ರಕೃತಿ ಮಧ್ಯೆಯೇ ಊಟ, ನಿಶ್ಚಿಂತ ನಿದ್ದೆ. ಮನಮೋಹಕ ಪ್ರಕೃತಿಯ ಜತೆ ಸಹವಾಸ, ಆರೋಗ್ಯ ಸುಧಾರಣೆ ಹಾಗೂ ದುಶ್ಚಟಗಳ ನಿವಾರಣೆ ಈ ಯಾತ್ರೆಯ ಲಕ್ಷ್ಯ. ಈ ವರ್ಷದ ಯಾತ್ರೆಗೂ ವೇಳಾಪಟ್ಟಿ ನಿಗದಿಯಾಗಿದೆ. ಫೆ.17ರ ಬೆಳಗ್ಗೆಯಿಂದ ಶುರುವಾಗಲಿರುವ ನಡಿಗೆಗೆ ನೀವೂ ಸೇರುತ್ತೀರಾ? ಸಂಪರ್ಕ: 9945435618, 9844701158.
ಚಿತ್ರಗಳು: ಕೆ.ರವಿ