ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಳಿಗೆ ಬರುವ ನಲ್ಲೆ

ಭರತನ ನಾಟ್ಯವೇದದಲ್ಲಿ ಅಭಿವರ್ಣಿತವಾಗಿರುವ ನಾಯಿಕೆಯರಿಗೆಲ್ಲ ಶಿಖರಪ್ರಾಯವಾಗಿರುವವಳು 'ಅಭಿಸಾರಿಕೆ'. ಈ ಪದದ ಅರ್ಥ...

Rashmi Kasaragodu
Updated On : 14 Feb 2014, 4:00 am

ಭರತನ ನಾಟ್ಯವೇದದಲ್ಲಿ ಅಭಿವರ್ಣಿತವಾಗಿರುವ ನಾಯಿಕೆಯರಿಗೆಲ್ಲ ಶಿಖರಪ್ರಾಯವಾಗಿರುವವಳು 'ಅಭಿಸಾರಿಕೆ'. ಈ ಪದದ ಅರ್ಥ 'ಹೊರಟವಳು' ಎಂಬುದು. ಈಕೆ ತನ್ನ ನಲ್ಲನ ಪ್ರತೀಕ್ಷೆಯಲ್ಲಿ ಹೊರಟವಳು. ಈಕೆಯ ಪ್ರಿಯಕರ ಅಲ್ಲೆಲ್ಲೋ ಕತ್ತಲಲ್ಲಿ, ಹೊಲಗಳ ನಡುವೆ, ಮರಗಳ ಎಡೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಬೆಳಗ್ಗಿನಿಂದ ಕಾದು ಕೆಂಡವಾದ ಆಕೆಯ ಕಾಯ ಆತನನ್ನು ಕಂಡು ಸರಸವಾಡಲು ಕಾತರಿಸುತ್ತಿದೆ. ಅಭಿಸಾರಿಕೆಯರಲ್ಲಿ ಕದ್ದು ಬೇಟವಾಡುವ ಹರೆಯದ ತುಡುಗೆಯರೇ ಹೆಚ್ಚು. ಆದರೀಕೆಗೆ ಸಮಾಜದ ಭಯವಿಲ್ಲ, ಯಾರು ಏನೆಂದಾರೆಂಬ ಮಾತಿನ ಹಂಗೂ ಇಲ್ಲ. ಯಾರ ಕಣ್ಣಿಗೂ ಬೀಳದಂತೆ ಕತ್ತಲಿನಲ್ಲಿ ಜಪ್ಪಿಸಿ ಹೋಗುವ ಕಲೆಯೂ ಈಕೆಗೆ ಕರಗತ. ಕಾಲ ಕೆಳಗಿರಬಹುದಾದ ಹಾವು, ಬಡಿಯುವ ಸಿಡಿಲು, ಅಪ್ಪಳಿಸುವ ಮಳೆಗಳೂ ಈಕೆಯ ಕಾಮದ ಕಾವಿನ ಮುಂದೆ ನಿಸ್ತೇಜ. ಕೃಷ್ಣನನ್ನು ನೋಡಪೋಗುವ ರಾಧೆ ಇದಕ್ಕೆ ಉದಾಹರಣೆ. ಬಹೂಲಿ ಮತ್ತು ಸೌರಾಷ್ಟ್ರಿಗಳು ಈಕೆಯ ಅಭಿಮಾನಿ ರಾಗಗಳು.

ಕ್ವಪ್ರಸ್ತಿತಾಸಿ ಕರಭೋರು! ಘನೇ ನಿಶೀಥೇ
ಪ್ರಾಣಾಧಿಕೋ ವಸತಿ ಯತ್ರ ಜನಃ ಪ್ರಿಯೋ ಮೇ
ಏಕಾಕಿನೀ ಬತ ಕಥಂ ನ ಬಿಭೇಷಿ ಬಾಲೇ!
ಲಲ್ವಸ್ತಿ ಪುಂಖಿತಶರೋ ಮದನಃ ಸಹಾಯಃ

ನಲ್ಲನಲ್ಲಿ ಭೇಟಿಯಾಗಲು ಭರದಿಂದ ಹೋಗುತ್ತಿರುವ ಅಭಿಸಾರಿಕೆಯನ್ನು ತಡೆದು ಸಖಿ ಪ್ರಶ್ನಿಸುತ್ತಿದ್ದಾಳೆ: 'ಸುಂದರಿ, ಆನೆಯ ಸೊಂಡಿಲಿನಂಥ ತೊಡೆಗಳನ್ನು ಅಲುಗಾಡಿಸುತ್ತ ಎಲ್ಲಿಗೆ ಹೋಗುತ್ತಿರುವೆ?'  
'ನನ್ನ ಪ್ರಾಣಕ್ಕಿಂತ ಹೆಚ್ಚಾದ ನನ್ನ ಪ್ರಿಯಕರನಿದ್ದಲ್ಲಿಗೆ'
'ಈ ಅಪರಾತ್ರಿಯಲ್ಲಿ ಒಬ್ಬಳೇ ಹೋಗುತ್ತಿರುವೆಯಲ್ಲ! ನಿನಗೆ ಭಯವಾಗುವುದಿಲ್ಲವೆ?'
'ನಾನೇನು ಒಂಟಿಯಲ್ಲ! ಮನ್ಮಥನು ಸುಂದರ ಹೂವುಗಳ ಬಿಲ್ಲುಬಾಣಗಳನ್ನು ಹಿಡಿದು ನನ್ನ ನೆರವಿಗೆ ಇದ್ದಾನೆ!'


-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement