ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೈಸೂರಿನ ಆಕರ್ಷಣೆ

ನನ್ನ ಕಾಲೇಜು ವಿದ್ಯಾಭ್ಯಾಸ ಅರ್ಧಕ್ಕೆ ನಿಂತರೂ ನಾನು ಮೈಸೂರಿನಿಂದ ನಿರಾಶನಾಗಿ ಹಿಂತಿರುಗಿದರೂ ನನಗೆ ಮಾತ್ರ ಮೈಸೂರು ನಗರದ ...

Rashmi Kasaragodu
Updated On : 14 Feb 2014, 4:10 am

ನನ್ನ ಕಾಲೇಜು ವಿದ್ಯಾಭ್ಯಾಸ ಅರ್ಧಕ್ಕೆ ನಿಂತರೂ ನಾನು ಮೈಸೂರಿನಿಂದ ನಿರಾಶನಾಗಿ ಹಿಂತಿರುಗಿದರೂ ನನಗೆ ಮಾತ್ರ ಮೈಸೂರು ನಗರದ ಮೇಲೆ ಏನೋ ಒಂದು ವ್ಯಾಮೋಹ, ಏನೋ ಒಂದು ಬಗೆಯ ಪ್ರೀತಿ ಅಭಿಮಾನ ಇತ್ತು. ಈಗಲೂ ಇದೆ. ಬೆಂಗಳೂರಿನ ವಾಸ ಹಾಗೂ ವಾತಾವರಣ ಅಸಹ್ಯ ಎನಿಸಿದಾಗಲೆಲ್ಲಾ ಮೈಸೂರಿಗೆ ಹೋಗಿ ಅಲ್ಲಿ 3-4 ದಿನ ಇದ್ದು ವಿಶ್ರಾಂತಿ ಪಡೆದು ಬರುತ್ತಿದ್ದೆ. ಮೈಸೂರಿನಲ್ಲಿ ನನ್ನ ವಾಸ ದಾಸಪ್ರಕಾಶ್ ಹೋಟೆಲ್‌ನಲ್ಲಿ. ಮೈಸೂರಿನಲ್ಲಿ ಇತ್ತೀಚೆಗೆ ಅನೇಕ ಅತ್ಯಾಧುನಿಕ ಹೋಟೆಲ್‌ಗಳಾಗಿದ್ದರೂ ನಾನು ಹೋಗುತ್ತಿದ್ದು ಮಾತ್ರ ದಾಸ್‌ಪ್ರಕಾಶ್ ಹೋಟೆಲ್‌ಗೆ. ಅಲ್ಲಿ ಮ್ಯಾನೇಜರ್ ಆಗಿದ್ದ ತಂತ್ರಿ ಎಂಬುವವರು ನನ್ನ ಸ್ನೇಹಿತರು. ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನು 1950ರಲ್ಲಿ ದಾವಣಗೆರೆಯಲ್ಲಿದ್ದಾಗ ಒಮ್ಮೆ ವರ್ತಕರ ಕೈಪಿಡಿ ಎಂಬ ಪುಸ್ತಕವನ್ನು ಪ್ರಕಟಿಸಿದ್ದೆ. ಅದಕ್ಕೆ ಜಾಹೀರಾತುಗಳನ್ನು ಪಡೆಯಲು ಮೈಸೂರಿಗೂ ಹೋಗಿದ್ದೆ. ದಾಸ್‌ಪ್ರಕಾಶ್‌ದಲ್ಲಿ ಸುಮಾರು ಒಂದು ತಿಂಗಳು ಇದ್ದೆ. ಅದೇ ಸಮಯದಲ್ಲಿ ಮೈಸೂರಿನಲ್ಲಿಯೇ ತಯಾರಾಗುತ್ತಿದ್ದ ಜಗನ್ಮೋಹಿನಿ ಎಂಬ ಕನ್ನಡ ಚಲನಚಿತ್ರದ ನಾಯಕಿ  ಹರಿಣಿ ಅವರು ಸಹ ನನ್ನ ರೂಮಿನ ಪಕ್ಕದಲ್ಲಿದ್ದರು. ಅವರನ್ನು ನೋಡಲು ಅನೇಕ ಕನ್ನಡ ನಟನಟಿಯರು ಮತ್ತು ಅಭಿಮಾನಿಗಳು ಬರುತ್ತಿದ್ದರು. ಕನ್ನಡ ಚಲನಚಿತ್ರೋದ್ಯಮ ಅದೇ ತಾನೇ ಪ್ರಾರಂಭವಾಗಿತ್ತು. ಎಚ್.ಎಲ್.ಎನ್. ಸಿಂಹ, ಅರಸೀಕೆರೆ ಶಂಕರ್‌ಸಿಂಗ್, ಪ್ರತಿಮಾ ದೇವಿ, ಬಿ.ಆರ್. ಪಂತುಲು, ಎಂ.ವಿ. ರಾಜಮ್ಮ ಮೊದಲಾದ ಕನ್ನಡ ಚಿತ್ರರಂಗದ ದಿಗ್ಗಜಗಳನ್ನು ನಾನು ಮೊದಲು ನೋಡಿದ್ದು ಇಲ್ಲಿಯೇ.     
ಮೈಸೂರು ನಗರ ಕೇವಲ ಅರಮನೆಗಳು ಮತ್ತು ಉದ್ಯಾನವನಗಳಿಗೆ ಪ್ರಸಿದ್ಧಿಯಾಗಿರಲಿಲ್ಲ. ಸಂಸ್ಕೃತಿ, ಕಲೆಗಳಿಗೂ ಪ್ರಸಿದ್ಧಿಯಾಗಿತ್ತು. ಸಂಗೀತ ಸಾಹಿತ್ಯ, ನೃತ್ಯ, ಚಿತ್ರಕಲೆ ಹಾಗೂ ಶಿಲ್ಪಕಲೆಗಳಿಗೆ ಪ್ರಸಿದ್ಧರಾದ ಅನೇಕ ಮಹನೀಯರುಗಳು ಮತ್ತು ಮಹಿಳೆಯರು ಈ ನಗರದಲ್ಲಿದ್ದರು ಮತ್ತು ತಮ್ಮ ಕಲೆಗಳನ್ನು ಹೇಳಿಕೊಡುವ ಶಾಲೆ ಅಥವಾ ಕೇಂದ್ರಗಳನ್ನು ಸಹ ನಡೆಸುತ್ತಿದ್ದರು. ಜಗನ್ಮೋಹನ ಪ್ಯಾಲೇಸ್ ಎಂಬ ಚಿತ್ರಶಾಲೆ ಬಹಳ ಪ್ರಸಿದ್ಧಿಯಾದುದು. ಮೂರು ಅಂತಸ್ತುಗಳ ಈ ಚಿತ್ರಶಾಲೆಯನ್ನು ಒಮ್ಮೆ ಸುತ್ತಿ ಹಾಕಿ ಬರಲು ಕನಿಷ್ಟ ಮೂರು ಗಂಟೆಗಳಾದರೂ ಬೇಕು. ಜಗನ್ಮೋಹನ ಅರಮನೆಯಲ್ಲಿ ಅನೇಕ ಅಪೂರ್ವ ಹಾಗೂ ಪುರಾತನ ಕಲಾ ವಸ್ತುಗಳನ್ನು ಈಗಲೂ ನೋಡಬಹುದು. ಪುರಾತನ ಗಡಿಯಾರಗಳಿಂದ ಹಿಡಿದ ವಿಶ್ವವಿಖ್ಯಾತ ವಾದ್ಯಗಳವರೆಗೆ ಅನೇಕ ವಿಚಿತ್ರ ವಸ್ತುಗಳನ್ನು ಕಾಣಬಹುದು. ಅದೇ ರೀತಿ ಸಯ್ಯಾಜಿ ರಾವ್ ರಸ್ತೆ ಕೊನೆಯಲ್ಲಿರುವ  ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆಯೂ ನೋಡುವಂತಹದು. ಸುಪ್ರಸಿದ್ಧ ಸಂಗೀತಗಾರರಾದ ವಾಸುದೇವಾಚಾರ್, ವೀಣೆ ಶೇಷಣ್ಣನವರು, ಬಿಡಾರಂ ಕೃಷ್ಣಪ್ಪನವರು ಪಿಟೀಲ್ ವಿದ್ಯಾನ್ ಚೌಡಯ್ಯನವರು, ಸಂಗೀತ ವಿದ್ವಾನ್ ದೇವೇಂದ್ರಪ್ಪನವರು ಮೈಸೂರಿನಲ್ಲಿಯೇ ಬದುಕಿ ಬಾಳಿದವರು. ಅವರುಗಳಿಗೆ ಮಹಾರಾಜರ ಆಶ್ರಯ ಮತ್ತು ಪ್ರೋತ್ಸಾಹ ಪೂರ್ತಿಯಾಗಿತ್ತು. ಅವರುಗಳಲ್ಲಿ ನಾನು ಕೆಲವರನ್ನು ನೋಡಿ ಮಾತನಾಡಿದ್ದೇನೆ. ಅವರಲ್ಲಿ ಮುಖ್ಯರಾದವರೆಂದರೆ ಚೌಡಯ್ಯನವರು ಮತ್ತು  ದೇವೇಂದ್ರನವರು. ಒಂದೆರಡು ಬಾರಿ ಅವರ ಸಂಗೀತ ಕಛೇರಿಗಳಿಗೂ ಹೋಗಿದ್ದೆ. ಈಗಲೂ ಶಿವರಾಂ ಪೇಟೆಯ ಅಡ್ಡರಸ್ತೆಯಲ್ಲಿರುವ ಬಿಡಾರಂ ಕೃಷ್ಣಪ್ಪನವರ ಸ್ಮಾರಕ ಮಂದಿರದಲ್ಲಿ ಆಗಾಗ್ಗೆ ಸುಪ್ರಸಿದ್ಧ ಸಂಗೀತಗಾರರ ಕಛೇರಿಗಳಾಗುತ್ತವೆ. ಮೈಸೂರಿಗೆ ಹೋದಾಗ ಅಲ್ಲಿಗೆ ಹೋಗಿ ಬರುತ್ತೇನೆ.
ಮೈಸೂರು ವಿಶ್ವವಿದ್ಯಾಲಯ ಇಡೀ ರಾಜ್ಯದಲ್ಲಿ ಮೊಟ್ಟಮೊದಲನೇ ವಿಶ್ವವಿದ್ಯಾಲಯ ಎಂದು ಹೇಳಿದರೆ ತಪ್ಪಾಗಲಾರದು. ಬೇರೆ ಎಲ್ಲಾ ವಿಶ್ವವಿದ್ಯಾಲಯಗಳು ರಾಜ್ಯ ಸ್ಥಾಪನೆಯಾದ ನಂತರ ಅಸ್ತಿತ್ವಕ್ಕೆ ಬಂದರೆ ಮೈಸೂರು ವಿಶ್ವವಿದ್ಯಾಲಯ ಮಾತ್ರ ಮಹಾರಾಜರ ಕಾಲದಲ್ಲಿಯೇ ಅಸ್ತಿತ್ವಕ್ಕೆ ಬಂದಿತು. ಅದೇ ರೀತಿ ಮೈಸೂರು ಮೆಡಿಕಲ್ ಕಾಲೇಜ್ ಸಹ ರಾಜ್ಯದ ಪ್ರಪ್ರಥಮ ಮೆಡಿಕಲ್ ಕಾಲೇಜು ಎಂದು ಹೇಳಬಹುದು. ನಾನು ಇಂಟರ್‌ಮಿಡಿಯೇಟ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅದರ ಪಕ್ಕದಲ್ಲಿಯೇ ಪದವಿ ತರಗತಿಯವರೆಗಿನ ಮಹಾರಾಜ ಕಾಲೇಜು ಕಟ್ಟಡ ಸಹ ಇತ್ತು. ಆ ಕಾಲದಲ್ಲಿ ಆ ಕಾಲೇಜಿನಲ್ಲಿ ಇಂಗ್ಲೆಂಡಿನ ಅನೇಕ ಪ್ರೊಫೆಸರ್‌ಗಳು ಕೆಲಸ ಮಾಡುತ್ತಿದ್ದರು. ಪ್ರೊಫೆಸರ್ ಜೆ.ಸಿ. ರಾಲೋ ಎಂಬುವವರು ಪ್ರಾಂಶುಪಾಲರಾಗಿದ್ದರು. ಪ್ರೊ.ಮೆಕಿನ್‌ಟಾಶ್, ಪ್ರೊ. ಮೆಕಾಲ್‌ಪೈನ್ ಮೊದಲಾದವರು ಸಹ ಈ ಕಾಲೇಜಿನಲ್ಲಿದ್ದರು.
ಮಹಾರಾಜ ಕಾಲೇಜಿನ ಆವರಣದಲ್ಲಿ ಹೆಲ್ತ್ ಕಿಚನ್ ಎಂಬ ಕ್ಯಾಂಟೀನ್ ಇತ್ತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊಟ ತಿಂಡಿಗಳಿಗಾಗಿ ಇಲ್ಲಿಗೆ ಬರುತ್ತಿದ್ದರು, ಆದರೆ ಇದು ಸ್ವಲ್ಪ ದುಬಾರಿ ಕ್ಯಾಂಟೀನ್. ನನ್ನಂತಹ ಬಡ ವಿದ್ಯಾರ್ಥಿಗಳು ಇಲ್ಲಿ ಹೋಗಲು ಸಾಧ್ಯವಿರಲಿಲ್ಲ. ಯಾರಾದರೂ ಶ್ರೀಮಂತ ಸ್ನೇಹಿತರು ಕರೆದುಕೊಂಡು ಹೋದರೆ ಹೋಗುತ್ತಿದ್ದೆ. ಅದೂ ಬಹಳ ಅಪರೂಪ.
ಮೈಸೂರಿಗೆ ಬರುವ ದೇಶ ವಿದೇಶಗಳ ಗಣ್ಯ  ವ್ಯಕ್ತಿಗಳನ್ನು ಮತ್ತು ವಿದ್ಯಾಂಸರುಗಳನ್ನು ಕಾಲೇಜಿಗೆ ಆಮಂತ್ರಿಸಿ ಅವರ ಉಪನ್ಯಾಸಗಳನ್ನು ಏರ್ಪಡಿಸುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಕೆಲವರಿಂದ ವಿಶೇಷ ದತ್ತಿ ಉಪನ್ಯಾಸಗಳನ್ನು  ಮಾಡಿಸುತ್ತಿದ್ದರು. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಡಾ.ರಾಧಾಕೃಷ್ಣನ್, ಸರ್ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್, ತಿರುವಾಂಕೂರು ಸಂಸ್ಥಾನದ ದಿವಾನರಾಗಿದ್ದ ಸರ್ ಸಿ.ಪಿ. ರಾಮಸ್ವಾಮಿ ಅಯ್ಯರ್, ಸರ್ ಪಿ.ಸಿ. ಶಿವಸ್ವಾಮಿ ಅಯ್ಯರ್ ಮೊದಲಾದವರ ಉಪನ್ಯಾಸಗಳನ್ನು ಕೇಳಿದೆ. ಅವರ ಭಾಷಣ ಅಥವಾ ಉಪನ್ಯಾಸ ಅರ್ಥವಾಗದಿದ್ದರೂ ಅವರನ್ನು ಪ್ರತ್ಯಕ್ಷವಾಗಿ ನೋಡುವ ಮತ್ತು ಅವರ ಭಾಷಣಗಳನ್ನು ಕೇಳುವ ಅವಕಾಶ ಸಿಕ್ಕದ್ದೇ ನನ್ನ ಭಾಗ್ಯ. ಆದರೆ ಕಾಲೇಜು ಅಧಿಕಾರಿಗಳು ಕಾಂಗ್ರೆಸ್ ಮುಖಂಡರುಗಳನ್ನು ಮಾತ್ರ ಕರೆಸುತ್ತಿರಲಿಲ್ಲ. ಏಕೆಂದರೆ ಆಗ ಸ್ವಾತಂತ್ರ್ಯ ಸಂಗ್ರಾಮ ಬಹಳ ಜೋರಿನಿಂದ ನಡೆಯುತ್ತಿದ್ದು, ಮೈಸೂರು ಸಂಸ್ಥಾನದಲ್ಲಿಯೂ ಜವಾಬ್ದಾರಿ ಸರ್ಕಾರಕ್ಕೆ ಚಳವಳಿ ನಡೆಯುತ್ತಿತ್ತು.
ಕನ್ನಡ ಪತ್ರಿಕೋದ್ಯಮದ ಪಿತಾಮಹರೆನಿಸಿದ  ವೆಂಕಟಕೃಷ್ಣಯ್ಯನವರು ಮೈಸೂರಿನವರು, ಅವರನ್ನು ತಾತಯ್ಯನವರೆಂದು ಕರೆಯುತ್ತಿದ್ದರು. ನಾನು ಮಾತ್ರ ಅವರನ್ನು ನೋಡಲಿಲ್ಲ. ಆದರೆ ಅವರು ಕಟ್ಟಿ ಬೆಳೆಸಿದ ಅನಾಥಾಲಯವನ್ನು ನೋಡಿದ್ದೇನೆ. ಅವರ ಪತ್ರಿಕೆಯ ಕೆಲವು ಹಳೆಯ ಸಂಚಿಕೆಗಳನ್ನು ಓದಿದ್ದೇನೆ ಮತ್ತು ಅನಾಥಾಲಯದಲ್ಲಿ ಪ್ರದರ್ಶಿಸಿದ್ದ ಅವರ ಸಾಧನೆಯ ಚಿತ್ರಗಳನ್ನು ನೋಡಿದ್ದೇನೆ. ಮೈಸೂರಿನ ಸಾಧ್ವಿ ಪತ್ರಿಕೆಯ ಸಂಪಾದಕರಾಗಿದ್ದ ಅಗರಂ ರಂಗಯ್ಯನವರು ಮತ್ತು ಮೈಸೂರು ಪತ್ರಿಕೆಯ ಸಂಪಾದಕರಾಗಿದ್ದ  ಟಿ. ನಾರಾಯಣರವರು ನನಗೆ  ವೆಂಕಟ ಕೃಷ್ಣಯ್ಯನವರ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಿದ್ದರು. ನಾರಾಯಣ್ ಮತ್ತು ನಾನು ಆತ್ಮೀಯ ಸ್ನೇಹಿತರಾಗಿದ್ದೆವು. ಅವರ ಸರಳ ಸ್ವಭಾವ ಮತ್ತು ಬಿಚ್ಚುನುಡಿ ನನ್ನ ಮೇಲೆ ವಿಶೇಷ ಪರಿಣಾಮವನ್ನುಂಟು ಮಾಡಿತ್ತು.
ಸುಪ್ರಸಿದ್ಧ ವಿದ್ವಾಂಸರು, ಶಿಕ್ಷಣ ತಜ್ಞರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನ ಸಂಸ್ಥಾಪಕರು ಆಗಿದ್ದ ಎಂ.ಪಿ.ಎಲ್. ಶಾಸ್ತ್ರಿಯವರು ನಾನು ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದರು. ಡಿ. ಸುಬ್ಬಯ್ಯ ರಸ್ತೆಯಲ್ಲಿ ಒಂದು ಕೊಠಡಿಯಲ್ಲಿ ವಾಸಿಸುತ್ತಿದ್ದರು. ನಾನು ಮೈಸೂರಿನಲ್ಲಿದ್ದಾಗ ಆಗಾಗ್ಗೆ ಸಾಧ್ವಿ ಪತ್ರಿಕೆಯ ಕಚೇರಿಗೂ,  ಎಂ.ಪಿ.ಎಲ್. ಶಾಸ್ತ್ರಿಯವರ ಕೊಠಡಿಗೂ ಹೋಗುತ್ತಿದ್ದೆ. ಅವರೊಡನೆ ಅನೇಕ ವಿಷಯಗಳನ್ನು ತಿಳಿದು ಕೊಳ್ಳುತ್ತಿದ್ದೆ.
ಕೊನೆಗೆ ನಿರಾಶನಾಗಿ ಕಾಲೇಜು ವಿದ್ಯಾಭ್ಯಾಸದ ಆಸೆ ಕೈಬಿಟ್ಟು ಮೈಸೂರಿಗೆ ಕೈ ಮುಗಿದು ಚಿತ್ರದುರ್ಗಕ್ಕೆ ವಾಪಸ್ಸು ಹೊರಟೆ. ಮಂಡ್ಯದ ಸಂಪಾದನೆಯಲ್ಲಿ ಇನ್ನೂ 2-3 ರು. ಉಳಿದಿದ್ದರಿಂದ ಟಿಕೆಟ್ ಖರೀದಿ ಮಾಡಿ ರೈಲಿನಲ್ಲಿ ಚಿತ್ರದುರ್ಗಕ್ಕೆ ಬಂದೆ.
(ಮುಂದುವರಿಯುವುದು)


-ಕೆ.ಶಾಮರಾವ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement