ಮಾತೃಭಾಷೆ ಮಾಧ್ಯಮಶಕ್ತಿಯಾಗಬೇಕು
ವಿವೇಕಾನಂದರು ಕೊಲ್ಕತ್ತಾದಲ್ಲೊಂದು ಬಂಗಾಳೀ ದಿನಪತ್ರಿಕೆ ಹೊರಡಿಸಬೇಕೆಂದು ಇಚ್ಛಿಸಿದರು. ಆದರೆ ಹಣದ ಅಭಾವ, ಚಂದಾದಾರರ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆಗ ಸ್ವಾಮೀಜಿ ತಮ್ಮ ಸೋದರ ಸಂನ್ಯಾಸಿಗಳಿಗೆ 'ಮನೆಮನೆಗೂ ಹೋಗಿ ಚಂದಾದಾರರನ್ನು ಹಿಡಿಯಬೇಕು' ಎಂದು ಪ್ರೋತ್ಸಾಹಿಸಿದರು. ಹೀಗಿರುವಾಗ ಉತ್ತರ ಭಾರತದ ಪ್ರವಾಸವನ್ನು ಮುಗಿಸಿಕೊಂಡು ಬಂದ ಸ್ವಾಮೀಜಿಯ ವಿದೇಶಿ ಶಿಷ್ಯೆ ಜೊಸೆಫಿನ್ 800 ಡಾಲರ್ ಹಣವನ್ನು ಸ್ವಾಮೀಜಿಗೆ ನೀಡಿ, 'ಉದ್ಬೋಧನ' ಪಾಕ್ಷಿಕ ಪತ್ರಿಕೆ ಪ್ರಾರಂಭಿಸಲು ಸಹಕರಿಸಿದಳು.
ನಮ್ಮ ಜನತೆಯ ಶಾರೀರಿಕ, ಬೌದ್ಧಿಕ, ಅಧ್ಯಾತ್ಮಿಕ ಬೆಳವಣೆಗೆಗೆ ಸಂಬಂಧಪಟ್ಟ ರಚನಾತ್ಮಕ ವಿಷಯಗಳಲ್ಲದೆ ಇತರ ಯಾವ ವಿಷಯಗಳಿಗೂ ಇದರಲ್ಲಿ ಅವಕಾಶವಿರಬಾರದು. ವಿವಿಧ ಮತಪಂಥಗಳ ಶಾಸ್ತ್ರಗಳು, ಸಾಹಿತ್ಯತತ್ವ, ಕಾವ್ಯಕಲೆ ಮೊದಲಾದವುಗಳಲ್ಲಿ ದೋಷ ಹುಡುಕಿ ಟೀಕಿಸುವುದರ ಬದಲು ಅವುಗಳ ಪ್ರಗತಿಗೆ ಸಹಾಯವಾಗುವಂತೆ ಏನು ಮಾಡಬಹುದು ಎಂಬುದನ್ನು ಪತ್ರಿಕೆ ತೋರಿಸಿಕೊಡಬೇಕು. ವೇದವೇದಾಂತಗಳ ಅತ್ಯುನ್ನತ ತತ್ವಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಜನರ ಮುಂದಿಡಬೇಕು. ಹೀಗೆ ನಮ್ಮ ಸಂಸ್ಕೃತಿ ಹಾಗೂ ಜ್ಞಾನರಾಶಿಯನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡಬೇಕು ಎಂಬುದು ಸ್ವಾಮೀಜಿ ಅಭಿಪ್ರಾಯ.
ಸ್ವಾಮಿ ವಿವೇಕಾನಂದರು ಆಂಗ್ಲಭಾಷೆಯಲ್ಲಿ 'ಬ್ರಹ್ಮವಾದಿನ್', ಆಲ್ಮೋರಾದಿಂದ 'ಪ್ರಬುದ್ಧ ಭಾರತ' ಪತ್ರಿಕೆ ಪ್ರಕಟಿಸುವ ವ್ಯವಸ್ಥೆ ಮಾಡಿದ್ದರು. ಈಗ ಮಾತೃಭಾಷೆ ಬಂಗಾಳಿಯಲ್ಲಿ ಪತ್ರಿಕೆ ಆರಂಭಿಸಿ ಅದರಂತೆ ಭಾರತದ ಇತರೆಲ್ಲಾ ದೇಸೀಯ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಬೇಕೆಂದು ಪ್ರೋತ್ಸಾಹಿಸಿದರು.
-ಆನಂದ ಎಸ್.ಎನ್.
anandsn193@gmail.com