ಸಂಯುಕ್ತ ಕರ್ನಾಟಕಕ್ಕೆ ಕಾಲಿಟ್ಟ ಆ ಸುದಿನ...
ಭಾಗ -10
ಚಿತ್ರದುರ್ಗದಲ್ಲಿ ನಮ್ಮ ದೊಡ್ಡಪ್ಪನ ಮನೆ ವಾತಾವರಣ ಅಸಹನೀಯವಾಗಿತ್ತು. ದೊಡ್ಡಪ್ಪ ದೊಡ್ಡ ವಕೀಲರು. ಅವರ ಕಚೇರಿಯಲ್ಲಿ ಯಾವಾಗಲೂ ವಕೀಲರು ಮತ್ತು ಕಕ್ಷಿದಾರರು ತುಂಬಿರುತ್ತಿದ್ದರು. ಮನೆಯವರನ್ನು ಮಾತನಾಡಿಸುವುದಕ್ಕೆ ಸಮಯವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದರು. ಮೈಸೂರಿನಿಂದ ಬಂದ ಮೇಲೆ ಎರಡು ದಿನ ಆ ಮನೆಯಲ್ಲಿದ್ದೆ. ದೊಡ್ಡಪ್ಪ ಒಮ್ಮೆಯೂ ನನ್ನನ್ನು ಮಾತನಾಡಿಸಲಿಲ್ಲ. ದೊಡ್ಡಮ್ಮ ನೋಡಿದರೂ ನೋಡದಂತಿದ್ದರು. ವಾರದ ಹುಡುಗನ ಜೊತೆಗೆ ನನಗೂ ಊಟ ಹಾಕುತ್ತಿದ್ದರು. ನನ್ನ ಬಗ್ಗೆ ಏನೇನೂ ಕೇಳಲಿಲ್ಲ.
ಇದರಿಂದ ನನಗೆ ತುಂಬಾ ಬೇಸರವಾಯಿತು. ಅಲ್ಲಿ ಇರಬಾರದೆಂದು ನಿರ್ಧರಿಸಿ, ದಾವಣಗೆರೆಗೆ ಹೋಗಬೇಕೆಂದು ಯೋಚಿಸಿದೆ. ದಾವಣಗೆರೆಯಲ್ಲಿ ನನ್ನ ಇನ್ನೊಬ್ಬ ಚಿಕ್ಕಪ್ಪ ಇದ್ದರು. ಅವರ ಸಹಾಯವನ್ನಾದರೂ ಕೇಳುವ ಆಸೆ ನನಗಿತ್ತು. ಆದರೆ ದಾವಣಗೆರೆಗೆ ಹೋಗಲು ಬಸ್ ಚಾರ್ಜ್ಗೆ ಹಣ ಇರಲಿಲ್ಲ. ಆದರೂ ದೊಡ್ಡಪ್ಪನ ಮನೆಯಲ್ಲಿ ಒಂದು ಕ್ಷಣವೂ ಇರಬಾರದೆಂದು ಯೋಚಿಸಿ, ಮಧ್ಯಾಹ್ನ ಹನ್ನೆರಡು ಗಂಟೆಗೆ ದಾವಣಗೆರೆ ರಸ್ತೆಯಲ್ಲಿ ನಡೆದುಕೊಂಡೇ ಹೊರಟೆ. ನಾನು ಏನು ಮಾಡುತ್ತಿದ್ದೇನೆಂಬುದರ ಅರಿವು ಸಹ ನನಗಿರಲಿಲ್ಲ. ಆದರೂ ಹೊರಟೆ. ಸಾಯಂಕಾಲದ ಹೊತ್ತಿಗೆ ಸುಮಾರು ಇಪ್ಪತ್ತು ಮೈಲಿ ನಡೆದು, ಭರಮಸಾಗರ ಎಂಬ ಹಳ್ಳಿಯನ್ನು ತಲುಪಿದೆ. ಅಲ್ಲಿ ನನ್ನ ಸೋದರತ್ತೆಯ ಮಗ (ಈಗ ನನ್ನ ಭಾವಮೈದುನ) ಪೊಲೀಸ್ ಇಲಾಖೆಯಲ್ಲಿದ್ದ. ಅಂದು ಆತ ಬಸ್ಸ್ಟ್ಯಾಂಡ್ ಹತ್ತಿರವೇ ನಿಂತಿದ್ದ. ನನ್ನನ್ನು ದೂರದಿಂದಲೇ ನೋಡಿ, ಓಡಿ ಬಂದು, ನನ್ನ ಯೋಗಕ್ಷೇವು ವಿಚಾರಿಸಿದ. ಹತ್ತಿರದಲ್ಲಿಯೇ ಇದ್ದ ಹೊಟೇಲಿನಲ್ಲಿ ಕಾಫಿ ಕುಡಿಸಿ, ಬಸ್ಸಿನಲ್ಲಿ ದಾವಣಗೆರೆಗೆ ಕಳುಹಿಸಿದ.
ದಾವಣಗೆರೆಯಲ್ಲಿ ನನಗೆ ಅನೇಕ ಬಂಧುಗಳಿದ್ದರು. ಆದರೆ ಆತ್ಮೀಯರು ಯಾರೂ ಇರಲಿಲ್ಲ. ನೇರವಾಗಿ ನನ್ನ ಚಿಕ್ಕಪ್ಪನ ಮನೆಗೆ ಹೋದೆ. ಅಲ್ಲಿ ನನ್ನ ಅಜ್ಜಿ (ತಂದೆಯ ತಾಯಿ) ಇದ್ದರು. ನನ್ನ ಚಿಕ್ಕಪ್ಪನಿಗೆ ಮದುವೆಯಾಗಿರಲಿಲ್ಲ. ತಾಯಿ, ಮಗ ಮಾತ್ರ ಮನೆಯಲ್ಲಿದ್ದರು. ಅಜ್ಜಿ ನನ್ನನ್ನು ಸ್ವಾಗತಿಸಿದರೂ, ಚಿಕ್ಕಪ್ಪ ಮಾತ್ರ ಮಾತನಾಡಿಸಲಿಲ್ಲ. ಇದರಿಂದ ಬೇಸರಗೊಂಡ ನಾನು ಮರುದಿನ ಅಲ್ಲಿಂದ ಹೊರಟು ಹೋಗಲು ಮತ್ತೆ ಉದ್ದೇಶಿಸಿದೆ. ಯಾರಿಗೂ ಹೇಳಲಿಲ್ಲ. ನೇರವಾಗಿ ರೈಲ್ವೆ ಸ್ಟೇಷನ್ನಿಗೆ ಬಂದೆ.
ಆ ಕಾಲದಲ್ಲಿ ಹುಬ್ಬಳ್ಳಿಯಿಂದ ದಾವಣಗೆರೆಗೆ ಮಾತ್ರ ಒಂದು ಲೋಕಲ್ ಗಾಡಿ ಓಡಾಡುತ್ತಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ಹುಬ್ಬಳ್ಳಿಯನ್ನು ಬಿಟ್ಟು, ಮಧ್ಯಾಹ್ನ ಎರಡು ಗಂಟೆಗೆ ದಾವಣಗೆರೆಗೆ ಬಂದು, ತಕ್ಷಣ ಹಿಂತಿರುಗುತ್ತಿತ್ತು. ಅಂದು ನಾನು ರೈಲ್ವೇ ಸ್ಟೇಷನ್ನಿಗೆ ಬಂದಾಗ ಆ ಗಾಡಿ ನಿಲ್ದಾಣದಲ್ಲಿ ನಿಂತಿತ್ತು. ತಕ್ಷಣ ಹೋಗಿ ಕುಳಿತೆ. ರೈಲು ಹೊರಟಿತು. ನನ್ನ ಹತ್ತಿರ ಟಿಕೆಟ್ ಇರಲಿಲ್ಲ. ಆದರೆ ಯಾರೂ ನನ್ನನ್ನು ವಿಚಾರಿಸಲಿಲ್ಲ. ರೈಲು ಸವಣೂರು ನಿಲ್ದಾಣದಲ್ಲಿ ನಿಂತಿದ್ದಾಗ, ಒಬ್ಬ ಟಿಕೆಟ್ ಕಲೆಕ್ಟರ್ ಪಕ್ಕದ ಬೋಗಿಗೆ ಹತ್ತುವುದನ್ನು ನೋಡಿದೆ. ಹೆದರಿಕೆಯಿಂದ ಮುಂದಿನ ಯಲವಗಿ ಸ್ಟೇಷನ್ನಲ್ಲಿ ನಾನಾಗಿ ಇಳಿದೆ. ಆಗ ಸಂಜೆ ಆರು ಗಂಟೆ. ಮಳೆ ಬರುತ್ತಿತ್ತು. ನಿಲ್ದಾಣದಲ್ಲಿ ಜನರೇ ಇರಲಿಲ್ಲ. ಕಳ್ಳತನದಿಂದ ಇಳಿದು, ನಿಲ್ದಾಣದಲ್ಲಿದ್ದ ಒಂದು ಕಲ್ಲುಬೆಂಚಿನ ಮೇಲೆ ಒಬ್ಬನೇ ಕುಳಿತಿದ್ದೆ. ಮಳೆ ನಿಂತಿದ್ದರೂ ಹನಿ ಬೀಳುತ್ತಿತ್ತು. ಮೈಮೇಲಿನ ಬಟ್ಟೆಗಳೆಲ್ಲ ಒದ್ದೆಯಾಗಿದ್ದವು. ರಾತ್ರಿ ಒಂಬತ್ತು ಗಂಟೆಗೆ ಹುಬ್ಬಳ್ಳಿಗೆ ಹೋಗುವ ಇನ್ನೊಂದು ರೈಲು ಬಂತು. ಮತ್ತೆ ಅದರಲ್ಲಿ ಕುಳಿತೆ. ಆದರೆ ಹುಬ್ಬಳ್ಳಿಯವರೆಗೆ ಹೋಗಲು ಹೆದರಿ, ಕುಂದಗೋಳ ಸ್ಟೇಷನ್ನಿನಲ್ಲಿ ಮತ್ತೆ ಇಳಿದೆ. ಕುಂದಗೋಳದಲ್ಲಿ ನನ್ನ ಸೋದರತ್ತೆಯ ಹಿರಿಯ ಮಗ ವೇದಾಧ್ಯಯನ ಮಾಡುತ್ತಿದ್ದ. ಅವನ ವಿಳಾಸ ಹುಡುಕಿಕೊಂಡು ಹೋಗಿ, ರಾತ್ರಿ ಅಲ್ಲಿಯೇ ಕಳೆದೆ. ಮರುದಿನ ಬೆಳಿಗ್ಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಮತ್ತೆ ಪ್ರಯಾಣ ಮಾಡಿ ಹುಬ್ಬಳ್ಳಿಗೆ ಬಂದು ಕಾಂಗ್ರೆಸ್ ಮುಖಂಡ ಸರದಾರ ವೀರನಗೌಡ ಪಾಟೀಲರ ಹರಿಜನಾಶ್ರಮದಲ್ಲಿ ಕೆಲಸ ಕೇಳಿದೆ. ಯಾವ ಕೆಲಸವೂ ಇಲ್ಲ ಎಂದರು. ಮತ್ತೆ ಧಾರವಾಡದ ಕಡೆಗೆ ನಡೆದುಕೊಂಡು ಹೊರಟೆ. ಧಾರವಾಡದಲ್ಲಿ ಪ್ರದೇಶ ಕಾಂಗ್ರೆಸ್ ಕಛೇರಿ ಇರುವುದು ನನಗೆ ಗೊತ್ತಿತ್ತು. ಅಲ್ಲಿ ಏನಾದರೂ ಕೆಲಸ ಸಿಗಬಹುದೆಂಬ ಆಸೆಯಿಂದ ಹುಬ್ಬಳ್ಳಿಯಲ್ಲಿ ನಿಲ್ಲದೆ, ಧಾರವಾಡ ರಸ್ತೆಯಲ್ಲಿ ನಡೆದುಕೊಂಡು ಹೊರಟೆ. ಧಾರವಾಡದ ಹತ್ತಿರ ಬಂದಾಗ ಭಾರಿ ಮಳೆ ಬರಲಾರಂಭಿಸಿತು. ಅಲ್ಲಿಯೇ ಒಂದು ಮರದ ಕೆಳಗೆ ನಿಂತಿದ್ದಾಗ, ಮಳೆ ಜೋರಾಗಿ, ಗುಡುಗು ಮಿಂಚುಗಳ ಆರ್ಭಟ ಸಹ ಹೆಚ್ಚಾಗಿ, ಒಮ್ಮೆ ನನ್ನ ಎದುರಿನಲ್ಲಿಯೇ ಇದ್ದ ಒಂದು ಮರಕ್ಕೆ ಸಿಡಿಲು ಹೊಡೆದು, ಭಾರಿ ಬೆಂಕಿ ಕಾಣಿಸಿಕೊಂಡು, ಮರ ಉರಿಯಲಾರಂಭಿಸಿತು. ಈ ಅನುಭವದಿಂದ ನಾನು ತತ್ತರಿಸಿದೆ. ಕೆಳಗೆ ಬಿದ್ದೆ. ಆದರೆ ಸಾಯಲಿಲ್ಲ. ಒಂದು ಗಂಟೆಯವರೆಗೂ ಹಾಗೆಯೇ ಮಳೆಯಲ್ಲಿಯೇ ಮಲಗಿದ್ದು, ಅದು ನಿಂತ ಮೇಲೆಯೇ ಎದ್ದು, ನಿಧಾನವಾಗಿ ಊರೊಳಗೆ ಹೋದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿ ವಿಳಾಸ ಕೇಳಿದರೆ ಯಾರೂ ಹೇಳುತ್ತಿರಲಿಲ್ಲ. ಏಕೆಂದರೆ ಅದು ಚಳುವಳಿಯ ಕಾಲ. ಕಾಂಗ್ರೆಸ್ಸಿಗರ ಹೆಸರು ಅಥವಾ ವಿಳಾಸವನ್ನು ಹೇಳಲು ಜನ ಅಂಜುತ್ತಿದ್ದರು. ಬಹಳ ಹೊತ್ತಿನ ಮೇಲೆ ಯಾರೋ ಒಬ್ಬರು ದೂರದಿಂದ ಅದನ್ನು ತೋರಿಸಿದರು. ಧೈರ್ಯದಿಂದ ಒಳಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ ಮತ್ತು ಅದು ಕಚೇರಿಯಂತೆಯೂ ಇರಲಿಲ್ಲ. ಒಂದು ಹಳೆಯ ಹತ್ತಿ ಗಿರಣಿಯಂತಿತ್ತು. ಅಲ್ಲಿ ಹಾಸಿದ್ದ ಜಮಖಾನೆಯ ಮೇಲಿದ್ದ ಧೂಳನ್ನು ಕಸವನ್ನು ತೆಗೆದು ಎಷ್ಟೋ ವರ್ಷಗಳಾಗಿದ್ದಿರಬೇಕು. ಮೂಲೆಯಲ್ಲಿ ಒಬ್ಬ ಮುದುಕ ದೀಪದ ಬಳಿ ಕುಳಿತು, ಊಟ ಮಾಡುತ್ತಿದ್ದ. ಅವನನ್ನೇ ಕೇಳಿದೆ. ಈಗ ಇಲ್ಲಿ ಯಾರೂ ಇರುವುದಿಲ್ಲ. ಬೆಳಿಗ್ಗೆ ಹತ್ತು ಗಂಟೆ ಮೇಲೆ ಬನ್ನಿ ಎಂದ. ಏನು ಮಾಡುವುದೆಂದು ತಿಳಿಯದೆ, ರಾತ್ರಿ ಅಲ್ಲೇ ಮಲಗುವೆನೆಂದು ಹೇಳಿದೆ. ಮೊದಲು ಒಪ್ಪಲಿಲ್ಲ. ಆಮೇಲೆ, ಬಹುಶಃ ನನ್ನ ಅಸಹಾಯಕ ಸ್ಥಿತಿಯನ್ನು ಕಂಡು, ಗೊಣಗುತ್ತಾ, ಒಂದು ಮೂಲೆ ತೋರಿಸಿದ. ಧೂಳು, ಕಸ, ಸೊಳ್ಳೆ, ಚಿಕ್ಕಾಡಗಳಿಂದ ತುಂಬಿದ್ದ ಅದೇ ಮೂಲೆಯಲ್ಲಿ, ಅದೇ ಜಮಖಾನೆ ಹೊದ್ದುಕೊಂಡು ಮಲಗಿದೆ. ಅಂಥ ಪರಿಸ್ಥಿತಿಯಲ್ಲಿಯೂ ನನಗೆ ಗಾಢವಾದ ನಿದ್ದೆ ಬಂದಿತ್ತೆಂದು ಹೇಳಿದರೆ ಯಾರೂ ನಂಬಲಿಕ್ಕಿಲ್ಲ.
ಮರುದಿನ ಬೆಳಿಗ್ಗೆ ಎದ್ದು, ಅಲ್ಲಿಯೇ ಇದ್ದ ನಳ (ನಲ್ಲಿ) ದಲ್ಲಿ ಮುಖ ತೊಳೆದುಕೊಂಡು, ಕಚೇರಿಯ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದೆ. ಸುಮಾರು ಒಂಬತ್ತೂವರೆ ಗಂಟೆ ಹೊತ್ತಿಗೆ ಗಾಂಧಿ ಟೋಪಿ ಹಾಕಿಕೊಂಡಿದ್ದ ಒಬ್ಬ ಮುದುಕರು ಬಂದರು. ಅವರೇ ಹುಕ್ಕೇರಿಕರರೆಂದೂ, ಅವರೇ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳೆಂದೂ ನಂತರ ತಿಳಿಯಿತು. ಅವರ ಬಳಿ ಹೋಗಿ, ನಮಸ್ಕಾರ ಮಾಡಿ, 'ನಾನು ಮೈಸೂರಿನಿಂದ ಬಂದಿದ್ದೇನೆ. ಏನಾದರೂ ಕೆಲಸ ಕೊಡಿ' ಎಂದು ದೈನ್ಯದಿಂದ ಕೇಳಿದೆ. ಆದರೆ ಅವರು ನನ್ನ ಕಡೆಗೆ ಸಹ ನೋಡದೆ 'ನಮ್ಮಲ್ಲಿ ಏನೂ ಕೆಲಸವಿಲ್ಲ. ಹೊರಟು ಹೋಗು' ಎಂದು ಸ್ವಲ್ಪ ಒರಟಾಗಿಯೇ ಹೇಳಿದರಲ್ಲದೇ 'ಏ ಸಾಬ ಇವನನ್ನು ಹೊರಗೆ ಹಾಕೋ' ಎಂದು ಕಾವಲುಗಾರನಿಗೆ ಕೂಗಿ ಹೇಳಿದರು. ಮುಂದೆ ಏನು ಮಾಡಬೇಕೆಂಬುದನ್ನು ತಿಳಿಯದೆ, ಅಲ್ಲಿ ಸ್ಪಲ್ಪ ಹೊತ್ತು ನಿಂತಿದ್ದು, ನಂತರ ಹೊರಗೆ ಬಂದೆ. ಯೋಚನೆ ಮಾಡುತ್ತಾ ನಿಂತಿದ್ದಾಗ 'ಜಯ ಕರ್ನಾಟಕ' ಮಾಸ ಪತ್ರಿಕೆಯ ನೆನಪಾಯಿತು. ನಾನು ಮೈಸೂರಿನಲ್ಲಿದ್ದಾಗ ಆ ಪತ್ರಿಕೆಗೆ ಒಂದೆರಡು ಲೇಖನಗಳನ್ನು ಕಳಿಸಿದ್ದೆ. ಅವು ಪ್ರಕಟವಾಗಿರಲಿಲ್ಲ. ಆದರೂ ಪತ್ರಿಕೆಯಲ್ಲಿ ಕೆಲಸ ಸಿಗಬಹುದೆಂಬ ಆಸೆಯಿಂದ ಅದನ್ನು ಹುಡುಕಿಕೊಂಡು ಹೋದೆ. ಆಗ ಪತ್ರಿಕೆಗೆ ಬೆಳಗಾವಿ ರಾಮಚಂದ್ರ ಎಂಬುವರು ಸಂಪಾದಕರಾಗಿದ್ದರು. ಅವರು ತುಂಬಾ ಒಳ್ಳೆಯವರು, ಮೃದು ಸ್ವಭಾವದವರು. ಸುಮಾರು ಅರ್ಧ ಗಂಟೆ ನನ್ನ ವಿಷಯವನ್ನೆಲ್ಲ ಕೇಳಿ, ತಮ್ಮ ಕಚೇರಿಯಲ್ಲಿ ಏನೂ ಕೆಲಸವಿಲ್ಲವೆಂದು ವಿಷಾದದಿಂದ ಹೇಳಿ, 'ನೀವು ಬೆಳಗಾವಿಗೆ ಹೋಗಿ, ಅಲ್ಲಿ ದಿವಾಕರರು ಇದೀಗ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಲ್ಲಿ ನಿಮಗೆ ಕೆಲಸ ಸಿಗಬಹುದು' ಎಂದು ಹೇಳಿದರು ಮತ್ತು ಅಲ್ಲಿಗೆ ಹೋಗಲು ನನ್ನಲ್ಲಿ ಹಣ ಇರಲಿಕ್ಕಿಲ್ಲವೆಂದು ತಾವೇ ಊಹಿಸಿ, ಎರಡು ರೂಪಾಯಿ ಕೊಟ್ಟರು. ಇದರಿಂದ ನನ್ನ ಹೃದಯದ ಭಾರ ಬಹುಮಟ್ಟಿಗೆ ಕಡಿಮೆಯಾಯಿತು.
ಸಂಯುಕ್ತ ಕರ್ನಾಟಕ ಪತ್ರಿಕೆಯೊಡನೆ ನನ್ನ ಸಂಬಂಧ ಪ್ರಾರಂಭವಾಗಲು, ಸುಮಾರು 62 ವರ್ಷಗಳ ಹಿಂದೆ ಬೆಳಗಾವಿ ರಾಮಚಂದ್ರರಾಯರು ಮಾಡಿದ ಉಪಕಾರ, ಸಹಾಯ ಮತ್ತು ಮಾರ್ಗದರ್ಶನವೇ ಮುಖ್ಯ ಕಾರಣವೆಂದು ಹೇಳಿದರೆ ತಪ್ಪಾಗದು. ಅವರಿಗೆ ನಾನು ಚಿರಋಣಿ. ರಾಮಚಂದ್ರರಾಯರಿಗೆ ನಮಸ್ಕಾರ ಹೇಳಿ, ಅಂದೇ ಮಧ್ಯಾಹ್ನದ ಬಸ್ಸಿಗೆ ಬೆಳಗಾವಿಗೆ ಹೊರಟೆ. ಜೇಬಿನಲ್ಲಿ ಎರಡು ರೂಪಾಯಿ ಇದ್ದುದರಿಂದ ಬಸ್ ಚಾರ್ಜಿಗೆ ಯೋಚನೆ ಮಾಡುವಂತಿರಲಿಲ್ಲ. ಧಾರವಾಡದಿಂದ ಬೆಳಗಾವಿಗೆ ಬಸ್ ಚಾರ್ಜ್ ಕೇವಲ ಹತ್ತಾಣೆ ಇತ್ತು.
ಬೆಳಗಾವಿಗೆ ಬಂದಿಳಿದಾಗ ಸಾಯಂಕಾಲ ಆರು ಗಂಟೆಯಾಗಿತ್ತು. ಮಳೆ ಬರುತ್ತಿತ್ತು. ಸಂಯುಕ್ತ ಕರ್ನಾಟಕ ಕಚೇರಿ ಎಲ್ಲಿದೆ ಎಂದು ಕೇಳುತ್ತಾ ಹೊರಟೆ. ಬೀದಿ ಬೀದಿಗಳಲ್ಲಿ ಅಲೆದೆ. ಕೊನೆಗೆ ಮಾರುತಿ ಗಲ್ಲಿಯ ಬಳಿ, ಒಂದು ಅಂಗಡಿಯ ಬಳಿ ಬಂದಾಗ 'ಕಥಾ ಕುಂಜ' ಕನ್ನಡ ಮಾಸ ಪತ್ರಿಕೆ ಎಂಬ ಬೋರ್ಡು ನೋಡಿದೆ. ಈ ಪತ್ರಿಕೆಯ ಹೆಸರು ನಾನು ಕೇಳಿದ್ದೆ. ಅದು ಕನ್ನಡ ಕಥೆಗಳ ಮಾಸಪತ್ರಿಕೆ. ಪ್ಯಾಟಿ ಶ್ಯಾಮರಾಯರೆಂಬುವರು ಅದರ ಸಂಪಾದಕರಾಗಿದ್ದರು. ಅವರು ಸಹ ತುಂಬಾ ಒಳ್ಳೆಯವರು. ನಾನು ಅವರ ಅಂಗಡಿಗೆ ಹೋಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿ ವಿಳಾಸ ಕೇಳಿದಾಗ, ಅವರು ನನ್ನನ್ನು ಆದರದಿಂದ ಸ್ವಾಗತಿಸಿ, ಕುಳಿತುಕೊಳ್ಳಲು ಹೇಳಿದರಲ್ಲದೇ ನನ್ನ ಬಗ್ಗೆ ವಿವರಗಳನ್ನು ಕೇಳಿದರು. ಹೇಳಿದೆ. ಆಗ, 'ಸ್ವಲ್ಪ ಹೊತ್ತು ಇಲ್ಲೇ ಇರಿ, ಸಂಯುಕ್ತ ಕರ್ನಾಟಕದವರೇ ಇಲ್ಲಿಗೆ ಬರುತ್ತಾರೆ. ಪರಿಚಯ ಮಾಡಿಕೊಡುತ್ತೇನೆ' ಎಂದರು. ನನಗೆ ತುಂಬಾ ಸಂತೋಷವಾಯಿತು. ಅಲ್ಲೇ ಇದ್ದೆ. ಸುಮಾರು ಏಳು ಗಂಟೆ ಹೊತ್ತಿಗೆ, 35 - 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬಂದರು. ಆಗ ಪ್ಯಾಟಿ ಶ್ಯಾಮರಾಯರು, 'ಇವರೇ ನೋಡಿ ಸಂಯುಕ್ತ ಕರ್ನಾಟಕದವರು. ಇವರ ಹೆಸರು ಚಿಕ್ಕೋಡಿ ಅನಂತರಾಯರು ಎಂದು. ಹಿರಿಯ ಉಪಸಂಪಾದಕರಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿ, ಅವರಿಗೂ ನನ್ನ ಬಗ್ಗೆ ಸ್ವಲ್ಪ ಹೇಳಿದರು. ನಂತರ ಚಿಕ್ಕೋಡಿಯವರು ನನ್ನ ಜೊತೆ ಸ್ವಲ್ಪ ಹೊತ್ತು ಮಾತನಾಡಿ, 'ಈಗ ಕಚೇರಿಯಲ್ಲಿ ಯಾರೂ ಇರುವುದಿಲ್ಲ. ವ್ಯವಸ್ಥಾಪಕ ಸಂಪಾದಕರಾದ ಮೊಹರೆ ಹನುಮಂತರಾಯರು ಊರಿನಲ್ಲಿ ಇಲ್ಲ, ನಾಳೆ ಬರಬಹುದು. ಈಗ ನಮ್ಮ ಮನೆಗೆ ಹೋಗೋಣ ಬನ್ನಿ' ಎಂದು ಕರೆದುಕೊಂಡು ಹೋದರು. ಅವರ ಮನೆ ಮಹದೇವ ಗಲ್ಲಿಯಲ್ಲಿತ್ತು. ಮಹಡಿ ಮೇಲೆ. ಅದು ಮನೆಯಾಗಿರಲಿಲ್ಲ. ಕೇವಲ ಒಂದು ಕೊಠಡಿಯಾಗಿತ್ತು. ಚಿಕ್ಕೋಡಿಯವರು ಬ್ರಹ್ಮಚಾರಿಗಳು. ತಾವೇ ಅಡಿಗೆ ಮಾಡಿಕೊಂಡು ಅಲ್ಲಿರುತ್ತಿದ್ದರು. ಅಂದು ರಾತ್ರಿ ನನ್ನನ್ನು ಕರೆದುಕೊಂಡು ಹೋದ ಮೇಲೆ ಅನ್ನ ಮಾಡಿ ಬಡಿಸಿದರು. ಅನೇಕ ದಿನಗಳವರೆಗೆ ಸರಿಯಾದ ಊಟ ತಿಂಡಿ ಇಲ್ಲದೆ ಕಷ್ಟಪಡುತ್ತಿದ್ದ ನನಗೆ ಅಂದು ರಾತ್ರಿ ಮಾಡಿದ ಊಟ ಮೃಷ್ಟಾನ್ನ ಭೋಜನವಾಗಿತ್ತು. ಉಂಡು ಮಲಗಿದೆ. ಗಾಢ ನಿದ್ರೆ ಬಂದಿತು.
ಮರುದಿನ ಬೆಳಿಗ್ಗೆ ಎದ್ದು ಮುಖ ತೊಳೆದುಕೊಳ್ಳುವ ಹೊತ್ತಿಗೆ ಚಿಕ್ಕೋಡಿಯವರು ಚಹಾ ಮಾಡಿ, ನನಗೂ ಒಂದು ಕಪ್ ತೆಗೆದಿಟ್ಟಿದ್ದರು. ಇಬ್ಬರೂ ಚಹಾ ಕುಡಿದು, ಒಂಬತ್ತು ಗಂಟೆ ಹೊತ್ತಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿಗೆ ಹೋದೆವು. ಅಂದು 1935 ನೇ ಇಸವಿ ಆಗಸ್ಟ್ ತಿಂಗಳು ಐದನೇ ತಾರೀಖು. ಅದು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿಯಲ್ಲಿ ನಾನು ಕಾಲಿಟ್ಟ ದಿನ. ಅಂದು ನನ್ನ ಸುದೈವದಿಂದ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದ ಮೊಹರೆ ಹನುಮಂತರಾಯರು ಕಚೇರಿಯಲ್ಲಿದ್ದರು. ಅಂದೇ ಅವರು ವಿಜಾಪುರದಿಂದ ಬಂದಿದ್ದರು. ಚಿಕ್ಕೋಡಿಯವರು ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಿ 'ಇವರು ಮೈಸೂರಿನಿಂದ ಬಂದಿದ್ದಾರೆ. ಕಾಲೇಜು ಓದಿದ್ದಾರಂತೆ, ಬೇಕಾದರೆ ಕೆಲಸಕ್ಕೆ ತೆಗೆದುಕೊಳ್ಳಬಹುದು' ಎಂದರು. ಆದರೆ ಮೊಹರೆಯವರು ತಕ್ಷಣ 'ಆಗಲಿ' ಎನ್ನಲಿಲ್ಲ. 'ನೋಡೋಣ, ಪರೀಕ್ಷೆ ಮಾಡಿ ಆಮೇಲೆ ಯೋಚಿಸೋಣ' ಎಂದರು. ನನ್ನ ಪರಿಚಯ ಮಾಡಿಕೊಂಡು, 'ಮೈಸೂರಿನಲ್ಲಿ ನಿನ್ನ ಬಗ್ಗೆ ಪರಿಚಯಸ್ಥರು ಯಾರಿದ್ದಾರೆ' ಎಂದು ಕೇಳಿದರು. ಆಗ ನಾನು ಕಾಲೇಜು ಪ್ರಿನ್ಸಿಪಾಲರ ಹೆಸರು, ವಿಳಾಸ ಹೇಳಿದೆ. ಆಮೇಲೆ, 'ಆಗಲಿ ಎಂಟು ದಿನ ಇಲ್ಲೇ ಇರು. ನಂತರ ಹೇಳುತ್ತೇನೆ' ಎಂದರು ಮತ್ತು ನನಗೆ ಆಫೀಸಿನಲ್ಲಿಯೇ ಇರಲು, ಹೊಟೇಲಿನಲ್ಲಿ ಊಟ ಮಾಡಲು ವ್ಯವಸ್ಥೆ ಮಾಡಿಕೊಟ್ಟರು. ಆಗ ಮೊಹರೆಯವರ ಜೊತೆಗೆ ವಿಜಾಪುರದ ಅವರ ಶಿಷ್ಯ ಬಬಲೇಶ್ವರ ಎಂಬುವವರೊಬ್ಬರು ಇರುತ್ತಿದ್ದರು. ಅವರ ಮುಖಾಂತರ ನನ್ನ ಊಟ, ವಸತಿಗಳ ವ್ಯವಸ್ಥೆಯಾಯಿತು.
(ಮುಂದುವರಿಯುವುದು)
ಕೆ.ಶಾಮರಾವ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.