ಪತ್ರಿಕೋದ್ಯಮದ ನನ್ನ ಗುರುಗಳು
ಭಾಗ 11
ಪತ್ರಕರ್ತನಾಗಬೇಕೆಂಬ ಆಸೆ ನನಗೆ ಇರಲಿಲ್ಲ. ಪತ್ರಿಕೋದ್ಯಮ ಏನೆಂಬುದೂ ಗೊತ್ತಿರಲಿಲ್ಲ. 1935ರಲ್ಲಿ ನಾನು ಬೆಳಗಾವಿಗೆ ಹೋದದ್ದು ಯಾವುದಾದರೊಂದು ಕೆಲಸ ಅಥವಾ ಉದ್ಯೋಗ ಪಡೆಯುವುದಕ್ಕಾಗಿ. ಆದರೆ ಸುದೈವದಿಂದ ನನಗೆ ಕೆಲಸ ಸಿಕ್ಕಿದ್ದು ಪತ್ರಿಕಾಲಯದಲ್ಲಿ. ಆದ್ದರಿಂದ ಪತ್ರಿಕೋದ್ಯಮಿಯಾದೆ. ಪತ್ರಿಕಾಲಯದಲ್ಲಿ ವಿವಿಧ ವಿಭಾಗಗಳಿರುತ್ತವೆಂದು ಸಹ ನನಗೆ ತಿಳಿದಿರಲಿಲ್ಲ. ಆ ಸಮಯದಲ್ಲಿ ಪತ್ರಿಕೆಯ ಆಡಳಿತ ವರ್ಗದವರು, 'ನೀನು ಪ್ರಸಾರಾಂಗ ವಿಭಾಗದಲ್ಲಿ ಅಥವಾ ಜಾಹಿರಾತು ವಿಭಾಗದಲ್ಲಿ ಕೆಲಸ ಮಾಡು' ಎಂದು ಹೇಳಿದ್ದರೆ ಖಂಡಿತ ಒಪ್ಪಿಕೊಳ್ಳುತ್ತಿದ್ದೆ. ಆದರೆ ಒಂದು ದಿನ ಮೊಹರೆ ಹನುಮಂತರಾಯರು, 'ನೀನು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತೀಯಾ' ಎಂದು ಕೇಳಿದರು. ನನಗೆ ಸಂಪಾದಕೀಯ ವಿಭಾಗದ ಕೆಲಸವೇನೆಂಬದೂ ಗೊತ್ತಿರಲಿಲ್ಲ. ಆದರೂ ಧೈರ್ಯದಿಂದ 'ಆಗಲಿ' ಎಂದು ಹೇಳಿದೆ. ಇದರಿಂದ ಭವಿಷ್ಯವೇ ಬದಲಾಯಿತು. ಅಂದಿನಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಒಬ್ಬನಾದೆ. ಈ ವಿಭಾಗದಲ್ಲಿ ಇನ್ನೂ ಆರೇಳು ಜನರಿದ್ದರು. ಅವರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಅವರಲ್ಲಿ ಕೆಲವರು ಸಂಬಳ ಪಡೆಯದೆ ಉಚಿತವಾಗಿ ಕೆಲಸ ಮಾಡುತ್ತಿದ್ದರು. ಇನ್ನು ಕೆಲವರಿಗೆ ತಿಂಗಳಿಗೆ 10-12 ರೂ. ಕೊಡಲಾಗುತ್ತಿತ್ತು. ಆದರೆ ನನಗೆ ಮಾತ್ರ ತಿಂಗಳಿಗೆ 15 ರೂ ಕೊಡುತ್ತಿದ್ದರು. ಆದರೆ ಅಷ್ಟೂ ಹಣವನ್ನು ಒಟ್ಟಿಗೆ ಕೊಡಲು ಹಣವಿರುತ್ತಿರಲಿಲ್ಲ. ಅದನ್ನು ಮೂರು ನಾಲ್ಕು ಕಂತುಗಳಲ್ಲಿ ಕೊಡುತ್ತಿದ್ದರು. ಸಂಯುಕ್ತ ಕರ್ನಾಟಕ ಕಚೇರಿಯೇ ನನ್ನ ವಾಸ ಸ್ಥಳವಾಯಿತು. ಮಲಗಿಕೊಳ್ಳಲು ಕಚೇರಿಯ ಒಂದು ಭಾಗವನ್ನು ಹಾಗೂ ಕಂಬಳಿ, ದುಪ್ಪಳಿ ಮತ್ತು ತಲೆದಿಂಬನ್ನು ಕೊಡಿಸಿದರು. ಒಂದು ದಿನ ಮೊಹರೆಯವರು ಸ್ವತಃ ನನ್ನನ್ನು ಖಾದಿ ಭಂಡಾರಕ್ಕೆ ಕರೆದುಕೊಂಡು ಹೋಗಿ, ನನಗೆ ಬೇಕಾದ ಬಟ್ಟೆಗಳನ್ನು ಕೊಡಿಸಿದರು. ಮೊಹರೆಯವರ ಪಟ್ಟ ಶಿಷ್ಯನಾಗಿದ್ದ ಬಬಲೇಶ್ವರ ಎಂಬುವವರ ನೆರವಿನಿಂದ ಸುವರ್ಣ ಮಂದಿರ ಎಂಬ ಹೊಟೇಲಿನಲ್ಲಿ ಒಂಬತ್ತು ರೂಪಾಯಿಗೆ 70 ಊಟದ ಟಿಕೆಟ್ ಸಿಗುವಂತೆಯೂ ಅನುಕೂಲ ಮಾಡಿಸಿಕೊಟ್ಟರು. ಏನೂ ತೊಂದರೆಯಾಗಲಿಲ್ಲ. ಅಂತೂ ನನ್ನ ಪೂರ್ವಜನ್ಮದ ಪುಣ್ಯದಿಂದಲೋ ಏನೋ, ನನಗೆ 1935 ನೇ ಆಗಸ್ಟ್ ಐದನೇ ತಾರೀಖು ಬೆಳಗಾವಿಯಲ್ಲಿ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಕೆಲಸ ಸಿಕ್ಕಿತು. ಅದೂ ಆ ಪತ್ರಿಕೆಯ ಉಪಸಂಪಾದಕನಾಗಿ. ಇಂಥ ಸುದೈವವನ್ನು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.
ಸಂಪಾದಕೀಯ ವಿಭಾಗದಲ್ಲಿ ಕೇವಲ ಆರೇಳು ಜನ ಮಾತ್ರ ಕೆಲಸ ಮಾಡುತ್ತಿದ್ದರು. ಅವರಲ್ಲಿ ಮೊಹರೆ ಹನುಮಂತರಾಯರೇ ಮುಖ್ಯಸ್ಥರು. ಅವರು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರೂ ಆಗಿದ್ದರು. ಅವರ ನಂತರ ಹ.ರಾ.ಪುರೋಹಿತ, ವಿ.ಬಿ.ಕುಲಕರ್ಣಿ, ಚಿಕ್ಕೋಡಿ ಅನಂತರಾವ್ ಮೊದಲಾದವರು ಸಂಪಾದಕೀಯ ವಿಭಾಗದಲ್ಲಿ ಹಿರಿಯ ಸಂಪಾದಕರುಗಳಾಗಿದ್ದರು. ಗಮನಾರ್ಹ ಸಂಗತಿಯೆಂದರೆ ಇವರಲ್ಲಿ ಯಾರಿಗೂ ತಿಂಗಳಿಗೆ 25 ರೂ.ಗಿಂತ ಹೆಚ್ಚು ಸಂಬಳವಿರುತ್ತಿರಲಿಲ್ಲ. ಅದನ್ನು 3-4 ಕಂತುಗಳಲ್ಲಿ ಪಡೆಯಬೇಕಾಗಿತ್ತು. ಕಚೇರಿಯಲ್ಲಿ ಕೆಲಸದ ವೇಳೆ ಎಂಬುದಿರಲಿಲ್ಲ. ಬೆಳಿಗ್ಗೆ ಬಂದರೆ, ರಾತ್ರಿ ಪತ್ರಿಕೆಯ ಎಲ್ಲ ಪುಟಗಳನ್ನು ಸಿದ್ಧಪಡಿಸಿ, ಮುದ್ರಣಕ್ಕೆ ಕೊಟ್ಟು ಮನೆಗೆ ಹೋಗಬೇಕಾಗಿತ್ತು. ಒಮ್ಮೊಮ್ಮೆ ಮುದ್ರಣಯಂತ್ರವನ್ನೂ ತಿರುಗಿಸಿ ಪತ್ರಿಕೆಯನ್ನು ಮುದ್ರಿಸಬೇಕಾಗಿತ್ತು. ಪ್ರಸಂಗ ಬಂದರೆ ಪತ್ರಿಕೆಯ ಪಾರ್ಸೆಲ್ಗಳನ್ನು ಕಟ್ಟಿ, ರೈಲ್ವೆ ಸ್ಟೇಷನ್ನಿಗೆ ಹೊತ್ತುಕೊಂಡು ಹೋಗಬೇಕಾಗಿತ್ತು. ಆದರೆ ಆ ಎಲ್ಲ ಕೆಲಸಗಳನ್ನು ಉದ್ಯೋಗಿಗಳು ಮನಃಪೂರ್ವಕವಾಗಿ, ಶ್ರದ್ಧೆಯಿಂದ ಮಾಡುತ್ತಿದ್ದರು. ಇದು ನನ್ನ ಕೆಲಸವಲ್ಲ, ನಾನು ಈ ಕೆಲಸ ಮಾಡುವುದಿಲ್ಲ ಎಂದು ಯಾರೂ ಹೇಳುತ್ತಿರಲಿಲ್ಲ. ಒಮ್ಮೆ ಪಾರ್ಸಲ್ ಕಟ್ಟುವ ವಿಭಾಗದಲ್ಲಿ ಕೆಲಸಗಾರರು ಕಡಿಮೆ ಇದ್ದರು. ಆಗ ದಿವಾಕರರು ಸ್ವತಃ ಪಾರ್ಸಲ್ ಕಟ್ಟಿ, ತಲೆಯ ಮೇಲೆ ಹೊತ್ತುಕೊಂಡೇ ರೈಲ್ವೆ ಸ್ಟೇಷನ್ನಿಗೆ ಹೊರಟಿದ್ದರು. ಅವರ ಜೊತೆಯಲ್ಲಿ ನಾನೂ ಇದ್ದೆ. ಪತ್ರಿಕೆಗಾಗಿ ದಿವಾಕರರು ಮತ್ತು ಅವರ ಸಹೋದ್ಯೋಗಿಗಳು ತೋರಿಸುತ್ತಿದ್ದ ಆಸಕ್ತಿ, ನಿಷ್ಠೆ ಮತ್ತೆ ತ್ಯಾಗಮನೋಭಾವ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು. ಸಂಬಳಕ್ಕಾಗಿ ಅವರು ದುಡಿಯುತ್ತಿರಲಿಲ್ಲ. ಹಾಗೆ ನೋಡಿದರೆ ಅವರಿಗೆ ಸಿಗುತ್ತಿದ್ದ ಸಂಬಳ ತೀರ ಕಡಿಮೆಯಾಗಿತ್ತು. ಒಂದು ವಾರಕ್ಕೂ ಸಾಕಾಗುತ್ತಿರಲಿಲ್ಲ. ಎಷ್ಟೋ ತಿಂಗಳು ಅದೂ ಸಿಗುತ್ತಿರಲಿಲ್ಲ. ಏಜೆಂಟರಿಂದ ಮತ್ತು ಚಂದಾದಾರರಿಂದ ಟಪಾಲಿನಲ್ಲಿ ಹಣ ಬಂದ ಮೇಲೆ ಮುದ್ರಣ ಕಾಗದ ಮತ್ತು ಇನ್ನಿತರ ಖರ್ಚುಗಳಿಗೆ ಹಣ ತೆಗೆದಿಟ್ಟು ಉಳಿದುದನ್ನು ಸಿಬ್ಬಂದಿಯವರು ಅವರವರ ಅಗತ್ಯಗಳಿಗನುಸಾರವಾಗಿ ಹಂಚಿಕೊಳ್ಳುತ್ತಿದ್ದರು. ನನಗೆ ಮಾತ್ರ ಹದಿನೈದು ರೂ. ಸಂಬಳ ತಪ್ಪದೆ ಕೊಡುತ್ತಿದ್ದರು. ಖಡೇ ಬಝಾರ್ ಎಂಬ ರಸ್ತೆಯಲ್ಲಿದ್ದ ಸುವರ್ಣ ಮಂದಿರ ಹೊಟೇಲಿನಲ್ಲಿ ನಾನು ಊಟ ಮಾಡುತ್ತಿದ್ದೆ. ತಿಂಗಳಿಗೆ 9 ರೂಪಾಯಿ ಕೊಟ್ಟು ಎಪ್ಪತ್ತು ಊಟದ ಟಿಕೆಟ್ಗಳನ್ನು ಖರೀದಿ ಮಾಡಿ, ಅವನ್ನು ಒಂದೂವರೆ ತಿಂಗಳವರೆಗೆ ಖರ್ಚು ಮಾಡುತ್ತಿದ್ದೆ. ಆದರೆ ವಾರದಲ್ಲಿ ಎರಡು - ಮೂರು ದಿನ ರಾತ್ರಿ ಊಟ ತಪ್ಪಿಸುತ್ತಿದ್ದೆ. ಈ ರೀತಿ ಉಳಿತಾಯ ಮಾಡಿದ ಹಣದಲ್ಲಿ ತಿಂಗಳಿಗೆ ಒಂದೆರಡು ಹೊಸ ಪುಸ್ತಕಗಳನ್ನು ಖರೀದಿಸುತ್ತಿದ್ದೆ. ಖಡೇ ಬಝಾರದಲ್ಲಿ ಸರಸ್ವತಿ ಬುಕ್ ಡಿಪೋ ಎಂಬ ಒಂದು ಪುಸ್ತಕದ ಅಂಗಡಿ ಇತ್ತು. ಈಗಲೂ ಇದೆ. ಅಲ್ಲಿ ಪೆಂಗ್ವಿನ್ - ಪೆಲಿಕನ್ ಗ್ರಂಥಮಾಲೆಯ ಇಂಗ್ಲೀಷ್ ಪುಸ್ತಕಗಳು ಎಂಟಾಣೆಗೆ ಒಂದರಂತೆ ಸಿಗುತ್ತಿದ್ದವು. ತಿಂಗಳಿಗೆ ಒಂದೆರಡು ಪುಸ್ತಕಗಳನ್ನಾದರೂ ಖರೀದಿಸುತ್ತಿದ್ದೆ. ರಾತ್ರಿ ಹತ್ತು ಗಂಟೆಯ ನಂತರ ಮತ್ತು ಬೆಳಗ್ಗೆ ಹತ್ತು ಗಂಟೆಯವರೆಗೆ ಆಫೀಸಿನ ಕೆಲಸ ಕಾರ್ಯಗಳು ಪ್ರಾರಂಭವಾಗುವವರೆಗೆ ಈ ಪುಸ್ತಕಗಳನ್ನು ಓದುವುದೇ ನನ್ನ ಮುಖ್ಯೋದ್ಯೋಗವಾಗಿತ್ತು. ಊಟ, ತಿಂಡಿ, ಬಟ್ಟೆಗಳ ಬಗ್ಗೆ ನನಗೆ ಸ್ವಲ್ಪವೂ ಪರಿವೆ ಇರಲಿಲ್ಲ. ಕಂತಿನ ಮೇಲೆ ಸಿಗುತ್ತಿದ್ದ ಹದಿನೈದು ರೂ. ಸಂಬಳದಲ್ಲಿಯೇ ಸಂತೋಷದಿಂದ, ತೃಪ್ತಿಯಿಂದ ಇರುತ್ತಿದ್ದೆ. ಶ್ರೀಮಂತರು ಮತ್ತು ಕೈಗಾರಿಕೋದ್ಯಮಿಗಳು ನಡೆಸುವ ಹಾಗೂ ವೇತನ ಮಂಡಲಿಗಳ ಶಿಫಾರಸ್ಸಿನಂತೆ, ಯೋಗ್ಯತೆಗೂ ಮೀರಿ, ಕೈತುಂಬ ಸಂಬಳ ಪಡೆಯುತ್ತಿರುವ, ಅದರಲ್ಲಿ ಬಹುಪಾಲನ್ನು ಧೂಮಪಾನ, ಕುಡಿತ ಮುಂತಾದ ದುಶ್ಚಟಗಳಿಗೆ ಖರ್ಚು ಮಾಡುತ್ತಿರುವ ಇಂದಿನ ಹಲವು ಪತ್ರಕರ್ತರು, ಅಂದಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಆದರೆ ಅಂದಿನ ಪರಿಸ್ಥಿತಿಯೇ ಹಾಗಿತ್ತು. ಇದಲ್ಲದೆ ಅಂದು ಪತ್ರಿಕಾಲಯಗಳಲ್ಲಿ ಈಗಿನಂತೆ ಪಾಳಿ ಎಂಬುದಿರಲಿಲ್ಲ. ಸುದ್ದಿಗಳನ್ನು ಬರೆಯುವುದು, ಲೇಖನಗಳನ್ನು ಸಿದ್ಧಪಡಿಸುವುದು ಮತ್ತು ಕರಡು ತಿದ್ದುವುದನ್ನು ಸಹ ಸಂಪಾದಕೀಯ ವರ್ಗದವರು ಮಾಡುತ್ತಿದ್ದರು. ವರದಿಗಾರರು ಸಹ ಇದ್ದಿಲ್ಲ. ಸಂಪಾದಕೀಯ ವಿಭಾಗದಲ್ಲಿ ವಿರಾಮವಾಗಿದ್ದವರಲ್ಲಿ ಯಾರಾದರೊಬ್ಬರು ಸಭೆ, ಸಮಾರಂಭಗಳಿಗೆ ಹೋಗಿ ಸುದ್ದಿಗಳನ್ನು ಬರೆಯುತ್ತಿದ್ದರು. ಎಷ್ಟೋ ವೇಳೆ ಅವರೇ ಅಗ್ರ ಲೇಖನಗಳನ್ನು ಬರೆಯಬೇಕಾಗುತ್ತಿತ್ತು. ನಾನು ಇಂಗ್ಲೀಷ್ ಭಾಷೆ ಓದಲು ಮತ್ತು ಬರೆಯಲು ಕಲಿತದ್ದು ಹೀಗೆ.
ಬೆಳಗಾವಿಗೆ ಹೋದಾಗ ನನಗೆ ಇಂಗ್ಲೀಷಿಲ್ಲಿ ಒಂದು ವಾಕ್ಯ ಸಹ ಬರೆಯಲು ಬರುತ್ತಿರಲಿಲ್ಲ. ಆದರೆ ಪತ್ರಿಕಾಲಯದಲ್ಲಿ ಬರುತ್ತಿದ್ದ ಹಿಂದೂ, ಟೈಮ್ಸ್, ಮೊದಲಾದ ಪತ್ರಿಕೆಗಳನ್ನು ಓದಿ, ಇಂಗ್ಲೀಷ್ ಭಾಷೆಯ ಸುದ್ದಿಗಳನ್ನು, ಲೇಖನಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಕನ್ನಡದಲ್ಲಿ ಓದುಗರಿಗೆ ಅರ್ಥವಾಗುವಂತೆ ಬರೆಯಲು ಸಮರ್ಥನಾದೆ. ನನ್ನ ಈ ಶಕ್ತಿಯನ್ನು ನನ್ನ ಹಿರಿಯ ಸಹೋದ್ಯೋಗಿಗಳು ಬಹಳ ಮೆಚ್ಚಿಕೊಂಡು, ದೊಡ್ಡ ದೊಡ್ಡ ಇಂಗ್ಲೀಷ್ ಲೇಖನಗಳನ್ನು ಭಾಷಾಂತರಿಸಲು ನನಗೆ ಕೊಡುತ್ತಿದ್ದರು. ಮಹಾತ್ಮಾ ಗಾಂಧಿಯವರು ಪ್ರಕಟಿಸುತ್ತಿದ್ದ 'ಹರಿಜನ' ಎಂಬ ಇಂಗ್ಲೀಷ್ ವಾರಪತ್ರಿಕೆಯ ಲೇಖನಗಳನ್ನು ಭಾಷಾಂತರಿಸುವ ಜವಾಬ್ದಾರಿಯನ್ನು ನನಗೆ ಕೊಟ್ಟರು. ಈ ವಾರಪತ್ರಿಕೆಯಲ್ಲಿ ಸ್ವತಃ ಮಹಾತ್ಮಾ ಗಾಂಧಿಯವರಲ್ಲದೆ, ಮಹಾದೇವದೇಸಾಯಿ, ಜವಾಹರಲಾಲ್ ನೆಹರು, ಪ್ಯಾರೆಲಾಲ್ ಮೊದಲಾದವರೂ ಲೇಖನಗಳನ್ನು ಬರೆಯುತ್ತಿದ್ದರು. ಈ ಲೇಖನಗಳನ್ನು ಓದಿ, ಭಾಷಾಂತರ ಮಾಡುತ್ತಿದ್ದುದರಿಂದ ನನ್ನ ತಿಳುವಳಿಕೆ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಭಾಷಾಜ್ಞಾನ ಹೆಚ್ಚಲು ಅವಕಾಶವಾಯಿತು.
ಮೊದಲನೆಯ ಮಹಾಪರಾಧ
ಆದರೆ ಆಗಾಗ್ಗೆ ಅನೇಕ ಪ್ರಮಾದಗಳೂ ಆಗುತ್ತಿದ್ದವು. ನಾನು ಮಾಡಿದ ಭಾಷಾಂತರವನ್ನು ನನ್ನ ಹಿರಿಯ ಸಹೋದ್ಯೋಗಿ ಎಚ್.ಆರ್.ಪುರೋಹಿತರು ತಿದ್ದಿ ಮುದ್ರಣಕ್ಕೆ ಕೊಡುತ್ತಿದ್ದರು. ಆದರೆ ಒಮ್ಮೆ ಅವರು ಊರಿನಲ್ಲಿರಲಿಲ್ಲ. ಧಾರವಾಡದಿಂದ ಹಿರಿಯ ಕಾಂಗ್ರೆಸ್ ನಾಯಕ ಆರ್.ಎಸ್.ಹುಕ್ಕೇರಿಕರರು ಬಸವೇಶ್ವರರ ಬಗ್ಗೆ ಇಂಗ್ಲೀಷಿನಲ್ಲಿ ಬಸವ ಜಯಂತಿಯ ನಿಮಿತ್ತ ಒಂದು ಲೇಖನ ಬರೆದು ಪ್ರಕಟಣೆಗೆ ಕಳುಹಿಸಿದ್ದರು. ಅದು ಬಸವ ಜಯಂತಿಯ ದಿನ ಪ್ರಕಟವಾಗಬೇಕಾಗಿತ್ತು. ಆ ಲೇಖನವನ್ನು ನಾನು ಭಾಷಾಂತರ ಮಾಡಿದೆ ಮತ್ತು ಅಂದು ಹಿರಿಯ ಸಹೋದ್ಯೋಗಿಗಳು ಯಾರೂ ಇಲ್ಲದಿದ್ದರಿಂದ ನಾನೇ ಮುದ್ರಣಕ್ಕೆ ಕೊಟ್ಟೆ. ಆ ಲೇಖನದಲ್ಲಿ 'ಲಾರ್ಡ್ ಬಸವೇಶ್ವರ ಮ್ಯಾರಿಡ್ ದಿ ಡಾಟರ್ ಆಫ್ ಹಿಸ್ ಮೆಟರ್ನಲ್ ಅಂಕಲ್' ಎಂಬ ಒಂದು ವಾಕ್ಯವಿತ್ತು. ಕಾಲೇಜಿನಿಂದ ಆಗತಾನೇ ಬಂದಿದ್ದ ನನಗೆ ಮೆಟರ್ನಲ್ ಅಥವಾ ಪೆಟರ್ನಲ್ ಶಬ್ದಗಳ ವ್ಯತ್ಯಾಸ ಗೊತ್ತಿರಲಿಲ್ಲ. ಆದರೆ ಅಂಕಲ್ ಎಂದರೆ ಚಿಕ್ಕಪ್ಪ ಅಥವಾ ದೊಡ್ಡಪ್ಪ ಎಂದು ಮಾತ್ರ ಗೊತ್ತಿತ್ತು. ಆದ್ದರಿಂದ ಭಾಷಾಂತರಿಸುವಾಗ ಬಸವಣ್ಣನವರು ತಮ್ಮ ಚಿಕ್ಕಪ್ಪನ ಮಗಳನ್ನು ಮದುವೆಯಾದರು ಎಂದು ಬರೆದೆ. ಈ ಲೇಖನ ಬಸವ ಜಯಂತಿಯ ದಿನವೇ ಪ್ರಕಟವಾಯಿತು. ಇದನ್ನು ಓದಿ ಇಡೀ ಉತ್ತರ ಕರ್ನಾಟಕದ ವೀರಶೈವ ಸಮಾಜ ಆಕ್ರೋಶಗೊಂಡಿತು. ಅನೇಕ ವೀರಶೈವ ಮುಖಂಡರು ಹೇಳಿಕೆಗಳನ್ನು ಕೊಟ್ಟು, ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಖಂಡಿಸಿದರಲ್ಲದೆ, ಕೆಲವು ಊರುಗಳಲ್ಲಿ, ಮುಖ್ಯವಾಗಿ ಹುಬ್ಬಳ್ಳಿ, ಹಾವೇರಿ, ಗದಗ ನಗರಗಳಲ್ಲಿ ಪತ್ರಿಕೆಯನ್ನು ಮತ್ತು ದಿವಾಕರರ ಭಾವಚಿತ್ರಗಳನ್ನು ಸುಡಲಾಯಿತು. ಪತ್ರಿಕೆಯ ವಿರುದ್ದ ಚಳುವಳಿ ದಿನದಿನಕ್ಕೆ ಹೆಚ್ಚಾಗುತ್ತಿತ್ತು. ನಾನಂತೂ ಹೆದರಿಕೆಯಿಂದ ಹೌಹಾರಿದ್ದೆ, ಇದೇ ಸಮಯದಲ್ಲಿ ಹುಕ್ಕೇರಿಕರರು ಒಂದು ಹೇಳಿಕೆ ಕೊಟ್ಟು, ತಾವು ಇಂಗ್ಲೀಷಿನಲ್ಲಿ ಲೇಖನ ಕಳುಹಿಸಿದ್ದು, ಆಫೀಸಿನಲ್ಲಿ ಭಾಷಾಂತರಕಾರನ ತಪ್ಪಿನಿಂದ ಆ ಪ್ರಮಾದವಾಗಿದೆಯೆಂದೂ ಹೇಳಿದ್ದರು. ಇದರಿಂದ ಮತ್ತಷ್ಟು ಕುಪಿತರಾದ ವೀರಶೈವ ಮುಖಂಡರ ಒಂದು ನಿಯೋಗ ಬೆಳಗಾವಿಗೆ ಬಂದು, ಪತ್ರಿಕೆಯ ಸಂಪಾದಕರಾಗಿದ್ದ ಮೊಹರೆ ಹನುಂತರಾಯರನ್ನು ಈ ಲೇಖನದ ಬಗ್ಗೆ ವಿಚಾರಿಸಿತು. ಈ ಚರ್ಚೆಯನ್ನು ಮರೆಯಲ್ಲಿ ನಿಂತು ಕೇಳುತ್ತಿದ್ದ ನನಗೆ ಕೈಕಾಲುಗಳು ನಡುಗುತ್ತಿದ್ದವು. ಸಂಯುಕ್ತ ಕರ್ನಾಟಕ ಕಚೇರಿಯಿಂದ ಅಂದೇ ನನಗೆ ಉಚ್ಚಾಟನೆಯಾಗುವುದೆಂದು ಭಾವಿಸಿದೆ. ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಹನುಮಂತರಾಯರು ತಮ್ಮಿಂದಲೇ ಈ ಭಾಷಾಂತರವಾಗಿದೆಯೆಂದು ಹೇಳಿ, ಈ ವೀರಶೈವ ಮುಖಂಡರನ್ನು ಸಮಾಧಾನಪಡಿಸಿದರು. ಎಷ್ಟು ಒತ್ತಾಯ ಮಾಡಿದರೂ ನನ್ನ ಹೆಸರನ್ನು ಹೇಳಲಿಲ್ಲ. ನಾನು ಮಾಡಿದ ತಪ್ಪನ್ನು ತಮ್ಮ ಮೇಲೆ ಹಾಕಿಕೊಂಡರು. ಮೊಹರೆ ಹನುಮಂತರಾಯರು ಓರ್ವ ಅಪೂರ್ವ ಆದರ್ಶ ವ್ಯಕ್ತಿ ಎಂದು ಹೇಳಿದರೆ ತಪ್ಪಾಗಲಾರದು. ಪತ್ರಿಕೋದ್ಯಮದಲ್ಲಿ ಅವರಿಗೆ ಆಳವಾದ ಅನುಭವ ಇತ್ತು. ಅದಕ್ಕಿಂತ ಹೆಚ್ಚಾಗಿ ಅವರ ಮಾನವೀಯತೆ ಅನುಕರಣೀಯ. ಅವರ ಧ್ವನಿ ಮತ್ತು ಮಾತು ಒರಟು. ಆದರೆ ಹೃದಯ ವಿಶಾಲವಾಗಿತ್ತು. ಅವರಲ್ಲಿ ಸದಾ ಅನುಕಂಪ, ಅಂತಃಕರಣ ತುಂಬಿರುತ್ತಿತ್ತು. ಅವರ ವಿಶಾಲ ಹೃದಯವನ್ನು ಸಹೋದ್ಯೋಗಿಗಳ ಬಗ್ಗೆ ಅವರಿಗೆ ಇದ್ದ ಪ್ರೀತಿ ವಾತ್ಸಲ್ಯಗಳನ್ನು ನಾನು ಖಂಡಿತ ಮರೆಯಲಾರೆ. ಮುಂದೆ ನಾನು ಅವರ ಕೈಕೆಳಗೆ ಅನೇಕ ವರ್ಷ ಕೆಲಸ ಮಾಡಿ, ಅನೇಕ ಪಾಠಗಳನ್ನು ಕಲಿತಿದ್ದೇನೆ. ಅವುಗಳಲ್ಲಿ ಇದೂ ಒಂದು. ಈ ಸಮಯದಲ್ಲಿ ಮೊಹರೆ ಹನುಮಂತರಾಯರ ಪರಿಚಯವನ್ನು, ಅವರ ಸಾರ್ವಜನಿಕ ಜೀವನವನ್ನೂ ನಾಲ್ಕು ಮಾತುಗಳಲ್ಲಿ ಹೇಳುವುದು ಅಗತ್ಯ.
(ಮುಂದುವರಿಯುವುದು)
ಕೆ.ಶಾಮರಾವ್