ಚಿಕಿತ್ಸೆಗೆ ಪೂರಕವಾಗಿರಲಿ ನಿಮ್ಮ ಡಯಟ್
ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರೂ ಡಯಟ್ನಿಂದ ಲಾಭ ಪಡೆಯಬಹುದೇ? ಖಂಡಿತಾ ಸಾಧ್ಯ. ಹಣ್ಣು, ತರಕಾರಿ, ಸೊಪ್ಪುಗಳ ಸೇವನೆ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುವಂತೆ ಶರೀರವನ್ನು ಸಜ್ಜುಗೊಳಿಸುತ್ತದೆ. ಕೆಲವು ಹಣ್ಣು, ತರಕಾರಿಗಳು ಕ್ಯಾನ್ಸರ್ ಬರದಂತೆ ತಡೆಯುವುದು ಮಾತ್ರವಲ್ಲ, ಕ್ಯಾನ್ಸರ್ ಕೋಶಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದನ್ನು, ಕ್ಯಾನ್ಸರ್ ಗೆಡ್ಡೆಗಳು ಬೆಳೆಯುವುದನ್ನು ತಡೆಯಬಲ್ಲವು. ಚಿಕಿತ್ಸೆ ಸಂದರ್ಭದಲ್ಲಿ ಉಂಟಾಗುವ ನೋವಿನ ತೀವ್ರತೆ ಕಡಿಮೆ ಮಾಡುವ ಗುಣವೂ ಹಣ್ಣು, ತರಕಾರಿ, ಸೊಪ್ಪುಗಳಲ್ಲಿ ಇದೆ. ಅವು ಒಂದು ರೀತಿ ನೋವು ನಿವಾರಕಗಳಂತೆಯೂ ಕಾರ್ಯನಿರ್ವಹಿಸುತ್ತವೆ. ನೀವು ನಂಬಲಾರಿರಿ, ಬೆಳ್ಳುಳ್ಳಿಯಲ್ಲಿರುವ ಅಜೊಯಿನ್ ಮತ್ತು ಅಲಿಸಿನ್ ಎಂಬ ಪದಾರ್ಥಗಳು ಕ್ಯಾನ್ಸರ್ ರೋಗಿಗಳಿಗೆ ನೀಡುವ ಕಿಮೊಥೆರಪಿಯಂತೆಯೇ ಕಾರ್ಯ ನಿರ್ವಹಿಸುತ್ತವಂತೆ!
ದಟ್ಟ ಹಸಿರು ತರಕಾರಿಗಳು ಹಾಗೂ ಕಿತ್ತಳೆ, ಮೋಸಂಬಿಯಂಥ ಹಣ್ಣುಗಳಲ್ಲಿನ ಬೀಟಾ ಕ್ಯಾರೊಟಿನ್, ಮೀನೆಣ್ಣೆ ಇವೆಲ್ಲ ಕ್ಯಾನ್ಸರ್ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ಹಣ್ಣು, ತರಕಾರಿ, ಸೊಪ್ಪುಗಳಲ್ಲಿನ ಕೆಲವು ರಾಸಾಯನಿಕಗಳು ಕ್ಯಾನ್ಸರ್ಗೆ ಸನಿಹದಲ್ಲಿರುವ ಕೋಶಗಳನ್ನು ಮತ್ತೆ ಮೊದಲಿನಂತೆ ಮಾಡುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಕ್ಯಾನ್ಸರ್ಗೆ ತುತ್ತಾದವರು ಸಹ ತಮ್ಮ ಚಿಕಿತ್ಸೆಗೆ ಪೂರಕವಾಗಿ ಡಯಟ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಅಂಥವರು ದಿನಕ್ಕೆ ಒಂದು ಅಥವಾ ಎರಡು ಸಲ ಹಣ್ಣು, ತರಕಾರಿ ಸೇವಿಸುವುದಕ್ಕಿಂತ ಐದು ಬಾರಿ ಸೇವಿಸುವುದು ಒಳಿತು ಎನ್ನುವುದು ತಜ್ಞರ ಸಲಹೆ. ಒಂದು ಬಾರಿ ಒಂದರಿಂದ ಒಂದೂವರೆ ಕಪ್ನಷ್ಟು ಬೇಯಿಸಿದ ಇಲ್ಲವೆ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಅಥವಾ ಒಂದು ಗ್ಲಾಸ್ನಷ್ಟು ಅವುಗಳ ಜ್ಯೂಸ್ ಕುಡಿದರೂ ಆದೀತು.
ಇನ್ನು ತರಕಾರಿಗಳನ್ನು ಬೇಯಿಸಿ ಬಳಸಬೇಕೆ, ಹಾಗೆಯೇ ಸೇವಿಸಬೇಕೆ ಎನ್ನುವುದು ಕೆಲವರ ಪ್ರಶ್ನೆ. ಯಾವ ರೂಪದಲ್ಲಿಯಾದರೂ ಬಳಸಬಹುದು. ಆದರೆ ಬೇಯಿಸದೇ ಹಸಿಯಾಗಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ಹಸಿ ತರಕಾರಿಗಳಲ್ಲಿಯೇ ಕ್ಯಾನ್ಸರ್ ನಿರೋಧಕ ಗುಣ ಹೆಚ್ಚು ಎನ್ನುವುದು ರುಜುವಾತಾಗಿರುವ ವಿಚಾರ. ಬೇಯಿಸುವಾಗ ತುಸು ಎಚ್ಚರ ಅಗತ್ಯ. ಅತಿಯಾಗಿ ಬೇಯಿಸುವುದಕ್ಕಿಂತ ಸ್ವಲ್ಪ ಬೇಯಿಸುವುದು ಸೂಕ್ತ. ಅಲ್ಪಮಟ್ಟಿನ ಬಿಸಿ ರಾಸಾಯನಿಕ ಸಂಯೋಜನೆಯಲ್ಲಿ ಆರೋಗ್ಯಕಾರಿ ಬದಲಾವಣೆ ಉಂಟು ಮಾಡಬಲ್ಲದು. ಅತಿಯಾಗಿ ಬೇಯಿಸಿದರೆ ಕೆಲವು ಪೌಷ್ಟಿಕ ಸತ್ವಗಳು ನಾಶವಾಗಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com