ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಿಲ್ಲಿನಿಂದ ಬಿಟ್ಟ ಬಾಣ

Mainashree
Updated On : 18 Feb 2014, 12:44 pm

ಬದುಕೆಂಬುದು ಬಿಲ್ಲಿನಿಂದ ಬಿಟ್ಟ ಬಾಣದಂತೆ. ನೀವು ಎಷ್ಟೇ ಬಿಲ್ವಿದ್ಯಾ ಪರಿಣಿತರಾಗಿರಿ. ನಿಮ್ಮ ಗುರಿ ಅದೆಷ್ಟೇ ಹತ್ತಿರದಲ್ಲಿಯೇ ಇರಲಿ. ನಿಮ್ಮಲ್ಲಿ ತಾಂತ್ರಿಕವಾಗಿ ಅತ್ಯಂತ ಉತ್ತಮ ಬಿಲ್ಲು, ಬಾಣವೇ ಇರಲಿ. ಇವಿಷ್ಟೇ ಪಂದ್ಯದ ಪಲಿತಾಂಶ ನಿರ್ಧರಿಸಿಬಿಡಲು ಸಾಧ್ಯವಿಲ್ಲ. ಬಿಟ್ಟ ಬಾಣ ನಿಖರ ಗುರಿಯನ್ನೇ ತಲುಪಿಬಿಡುತ್ತದೆ ಎಂದು ಹೇಳ ಬರುವುದಿಲ್ಲ. ಹಾಗಿದ್ದರೆ ಇನ್ನೇನು ಬೇಕು?
ಬಾಣ ಪ್ರಯೋಗದ ಸಂದರ್ಭ ಇವೆಲ್ಲಕ್ಕಿಂತ ಮುಖ್ಯವಾದುದು ಏಕಾಗ್ರತೆ. ಎಲ್ಲವೂ ಇದ್ದು ಏಕಾಗ್ರಚಿತ್ತರಾಗಿರಲು ಸಾಧ್ಯವಾಗದೇ ಹೋದರೆ, ಬೇರಿನ್ಯಾವುವೋ ಸಂಗತಿಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದಾದರೆ ಖಂಡಿತಾ ನೀವು ಹೂಡಿದ ಬಾಣ ಗುರಿ ತಲುಪಲು ಸಾಧ್ಯವೇ ಇಲ್ಲ. ತೀರಾ ವಿಚಲಿತವಾಗಿದ್ದರೆ ಕನಿಷ್ಠ ಗುರಿಯ ಸಮೀಪಕ್ಕೂ ಹೋಗಲು ಸಾಧ್ಯವಾಗದು. ಎಷ್ಟೋ ಸಂಗತಿಗಳು ಜೀವನದಲ್ಲಿ ದಿನನಿತ್ಯ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಬೇಕಾದದ್ದು ಬೇಡದ್ದು ಹೀಗೆ ಎಲ್ಲವೂ ಮುತ್ತುತ್ತಿರುತ್ತದೆ. ಹಾಗೆಂದು ಅದೆಲ್ಲವನ್ನೂ ಬಿಟ್ಟು ಏನೂ ಇಲ್ಲದ, ಅತ್ಯಂತ ಪ್ರಶಾಂತ ತಾಣದಲ್ಲಿ ಹೋಗಿ ಇದ್ದುಬಿಡುತ್ತೇನೆ ಎಂಬುದು ಸಾಧ್ಯವಾಗುವುದಿಲ್ಲ. ಒಂದೆರಡು ದಿನದ ಮಟ್ಟಿಗೆ ಇದು ಹಿತವೆನಿಸಿದರೂ ಯಾರೂ ಇಲ್ಲದ, ಏನೂ ಬಾಧಿಸದ ಸ್ಥಳವೇ ಹೆಚ್ಚು ರುಚಿಸುವುದಿಲ್ಲ. ಅಭ್ಯಾಸ ಸಂದರ್ಭದಲ್ಲಿ, ಏಕಾಗ್ರತೆ ಸಾಧನೆಗಾಗಿ ಹೇಗೆ ನೀವು ಪ್ರಶಾಂತ ಸ್ಥಳದಲ್ಲಿ ಬಾಣ ಪ್ರಯೋಗ ಮಾಡುತ್ತೀರೋ ಹಾಗೆಯೇ ಬದುಕು ಸಹ. ಮತ್ತೆ ನಿಮ್ಮ ಪ್ರದರ್ಶನವೇನಿದ್ದರೂ ತುಂಬಿದ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ, ಅವರ ಕೇಕೆ, ಕೂಗಾಟ ಕಿರುಚಾಟದ ಮಧ್ಯೆ, ತೀವ್ರ ಪೈಪೋಟಿಯೊಂದಿಗೇ ಆಗಬೇಕು. ಆಗಲೇ ನೀವು ವಿಜಯಿಯೆಂದು ಘೋಷಣೆಯಾಗುವುದು. ಜೀವನದಲ್ಲೂ ಎಲ್ಲ ರೀತಿಯ ಅಡೆ ತಡೆಗಳನ್ನೂ ಮೀರಿಯೇ ನೀವು ಗುರಿಯೆಡೆಗೆ ಏಗಾಗ್ರತೆ ಸಾಧಿಸಬೇಕು. ಕೆಲವೊಮ್ಮೆ ನಮ್ಮ ಬಾಣ ವಿಫಲವಾಗಬಹುದು. ಸುತ್ತಲಿನಲ್ಲಿ ಯಾರೋ ನಗುತ್ತಾರೆ, ವ್ಯಂಗ್ಯವಾಡುತ್ತಾರೆ, ಕಿಚಾಯಿಸುತ್ತಾರೆ. ಅದರೆಡೆಗೆ ಗಮನ ಕೊಟ್ಟಿರೋ, ಮುಂದಿನ ಬಾಣವೂ ಗುರಿ ತಲುಪಲು ಸಾಧ್ಯವಿಲ್ಲ. ಈ ಬದುಕನ್ನು ನಮಗೆ ಸರಿಯೆನಿಸುವಂತೆ, ನಮ್ಮ ಗುರಿಯೆಡೆಗೆ ಹೆದೆಯೆಳೆದು ಹೂಡಿ ಹೊರಟುಬಿಡಬೇಕು. ಅದು ತಾಕತ್ತು. ತನ್ನಿಂದ ತಾನೇ ನಾವು ಬಾಣಬಿಟ್ಟ ಕಡೆ ಉಳಿದವರ ಕತ್ತು ತಿರುಗುತ್ತದೆ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement