ಆನೆ ಮುಖ, ಆರು ಮುಖ
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಸಲ್ಲಾಪದ ಅಭಿಮಾನಿ ಓದುಗರಲ್ಲೊಬ್ಬರಾದ ಎಸ್.ರಾಘವೇಂದ್ರ ಪತ್ರ ಬರೆದಿದ್ದಾರೆ. 'ಸಲ್ಲಾಪದ ಆಲಾಪ ನಿಜಕ್ಕೂ ಸಖತ್ತಾಗಿರುತ್ತೆ. ಶೃಂಗಾರದಲ್ಲೂ ನಮ್ಮ ಸಂಸ್ಕೃತ ಕವಿಗಳನ್ನು ಮೀರಿಸುವವರಿಲ್ಲ' ಎಂಬುದು ಅವರ ಮೆಚ್ಚುಗೆ. ಅವರೇ ಕಳಿಸಿಕೊಟ್ಟಿರುವ ಒಂದು ಪ್ರಸಂಗ ಓದಿ.
'ಫೆ.16ರ ಮಗುಚಿಟ್ಟ ನಗಾರಿಗಳು ಕುಚೋಪಾಖ್ಯಾನ ಚೇತೋಹಾರಿಯಾಗಿದೆ. ಕುಚದ ಕಳಕಳಿ ಸಾಮಾನ್ಯರಿಗಷ್ಟೇ ಅಲ್ಲ. ದೇವತೆಗಳಿಗೂ ಸಂಬಂಧಿಸಿದೆ. ಶ್ರೀ ವಾದಿರಾಜ ಸ್ವಾಮಿಗಳು ಭಾರತ ಪಾದಯಾತ್ರೆ ಮಾಡುವಾಗ ಕಾಂಚೀಪುರಂನಲ್ಲಿ ಶಿವನ ಮಡದಿ, ಸೌಂದರ್ಯದ ಖನಿ ಕಾಮಾಕ್ಷಿಯನ್ನು ತಮ್ಮ ತೀರ್ಥಪ್ರಬಂಧ ಗ್ರಂಥದಲ್ಲಿ ಹೀಗೆ ಸ್ತುತಿಸಿದ್ದಾರೆ.
ಉತ್ಪಾದಯಂ ಸ್ತ್ವಯಿ ಸುತೌ ಗಿರಿಜೆ ಗಿರೀಶ
ಸೌಂದರ್ಯ ಭಂಗಜಭಿಯೇವ ಭವೋ ಭವತ್ಯಾ
ಕಾಮಾಕ್ಷಿ ವಿಘ್ನ ಹರಮೇಕಮಸಾವ ಕಾರ್ಷೀತ್
ಷಾಣ್ಮಾತರಂ ತ್ವಪರಮಂಗಜ ಭಂಜಕೊ ಅಪಿ
ಹುಟ್ಟುವ ಮಕ್ಕಳು ಸ್ತನ್ಯಪಾನ ಮಾಡಿದರೆ ತನ್ನ ಮಡದಿಯ ವಕ್ಷಸೌಂದರ್ಯಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂಬ ದೂರಾಲೋಚನೆಯಿಂದ ಗಿರೀಶ ತನ್ನ ಒಬ್ಬ ಮಗನನ್ನು ಆನೆ ಮುಖದ ಗಣಪನನ್ನಾಗಿಸಿದನಂತೆ. ಮತ್ತೊಬ್ಬ ಮಗ ಸುಬ್ರಹ್ಮಣ್ಯನನ್ನು ಅನ್ಯ ಆರು ಮಂದಿ ಮಾತೆಯರ ಸ್ತನ್ಯಪಾನ ಮಾಡಿ ಬೆಳೆಯುವ ಷಣ್ಮುಖನನ್ನಾಗಿಸಿದನಂತೆ!'
ರಾಘವೇಂದ್ರರ ತಕರಾರೊಂದಿದೆ. 'ಸಲ್ಲಾಪದಲ್ಲಿ ಅನೇಕ ಸಲ ಶ್ಲೋಕಗಳನ್ನು ಉಲ್ಲೇಖಿಸುವಾಗ ಕರ್ತೃವಿನ ಮಾಹಿತಿಯನ್ನೇ ಕೊಡುವುದಿಲ್ಲ. ಕೊಟ್ಟುಬಿಟ್ಟರೆ ಅವನ್ನೇ ಓದಿಕೊಂಡು ಕನ್ನಡಪ್ರಭ ನೋಡುವುದಿಲ್ಲ ಎಂಬ ದೂರಾಲೋಚನೆಯೇ?' ಹಾಗೇನೂ ಇಲ್ಲ. ಇಲ್ಲಿ ಬಳಸಿರುವ ಹೆಚ್ಚಿನ ಶ್ಲೋಕಗಳ ಮೂಲ ಭರ್ತೃಹರಿ, ಕಾಳಿದಾಸ, ಭಾಸ, ಅಮರುಕ ಮತ್ತು ಭೋಜಪ್ರಬಂಧ. ಅವೇ ಹೆಸರುಗಳನ್ನೇ ಮತ್ತೆ ಮತ್ತೆ ಹೇಳಬೇಕಲ್ಲ. ಇನ್ನುಳಿದವುಗಳೆಲ್ಲ ಅನಾಮಿಕ ಕವಿಗಳದು.
-ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.