ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರೀಲ್ ಮಾಡೆಲ್

Lingaraj Badiger
Updated On : 21 Feb 2014, 4:10 am

ರಾಮೋಜಿ ಫಿಲಂ ಸಿಟಿ ನಿಮ್ಮ ಕಣ್ಣು ಮನಸ್ಸಿಗೆ ಮಂಕು ಎರಚುವ ಪ್ರದರ್ಶನ ಮಂದಿರವಷ್ಟೇ ಅಲ್ಲ. ಸೂಕ್ಷ್ಮವಾಗಿ ನೋಡಿದರೆ ನಮ್ಮ ಉದ್ಯಮಗಳು ಅಲ್ಲಿಂದ ಕಲಿಯಬಹುದಾದ ಸಾಕಷ್ಟು ಪಾಠಗಳಿವೆ.

'ಫಿಲಂ ಸ್ಕ್ರಿಪ್ಟ್ ಕೈಲಿಟ್ಟುಕೊಂಡು ಒಳಗೆ ಹೆಜ್ಜೆಯಿಡಿ; ಮೂವಿಯ ಫೈನಲ್ ಕಾಪಿ ಹಿಡಿದುಕೊಂಡು ಹೊರಬನ್ನಿ' ಎನ್ನುತ್ತದೆ ರಾಮೋಜಿ ಫಿಲಂ ಸಿಟಿಯ ಒಂದು ಸ್ಲೋಗನ್. ಅದು ಅಕ್ಷರಶಃ ನಿಜ. ಅಲ್ಲಿ ಒಂದು ಫಿಲಂ ಮಾಡಲು ಏನೆಲ್ಲ ಬೇಕೋ ಅದೆಲ್ಲವೂ ಇದೆ. ಹಾಗೇ ಒಂದು ದಿನ ಸಮಯವಿದ್ದರೆ, ಸಾಕಷ್ಟು ಹಣವಿದ್ದರೆ ಇಲ್ಲಿ ಸುತ್ತಾಡಿ ಗಂಧರ್ವ ಲೋಕವನ್ನೇ ಕಣ್ತುಂಬಿಸಿಕೊಳ್ಳಬಹುದು. ಇದು ಮೂವಿ ಎಂಬ ಪರ್ಯಾಯ ಜಗತ್ತು ಸೃಷ್ಟಿಸಿದ ಮಾಯಾಜಾಲ.

'ಮುಂದೆಂದೋ ಒಂದು ದಿನ, ನಾನು ಇರಲಿಕ್ಕಿಲ್ಲ. ಆದರೆ ನಾನು ಸೃಷ್ಟಿಸಿದ ಈ ಜಗತ್ತು ಇರುತ್ತದೆ. ಇದು ಭಾರತದ ವಿಶಿಷ್ಟ ತಾಣಗಳಲ್ಲಿ ಒಂದಾಗಿ ಉಳಿಯಲಿದೆ' ಎನ್ನುವುದು ಈ ಫಿಲಂಲ್ಯಾಂಡ್‌ನ ನಿರ್ಮಾತೃ ರಾಮೋಜಿ ರಾವ್ ಹೇಳಿಕೊಂಡ ಮಾತು. ಅದು ಸಾಹಸೀ ಉದ್ಯಮಶೀಲ, ಕನಸುಗಾರನೊಬ್ಬನ ದೊಡ್ಡದೊಂದು ದರ್ಶನವೇ ಸೈ.
ರಾಮೋಜಿ ಫಿಲಂ ಸಿಟಿಯಲ್ಲಾಗುವ ಬೆರಗುಗಳು, ಜ್ಞಾನೋದಯಗಳು, ನಿಜ ಮತ್ತು ವಾಸ್ತವ ಕಲೆಸಿಹೋಗಿ ಉಂಟಾಗುವ ಹೈಪರ್‌ರಿಯಾಲಿಟಿಗಳು ಒಂದೆರಡಲ್ಲ. ಅಲ್ಲಿ ನಿಮ್ಮ ಕಣ್ಮುಂದೆಯೇ ನಿಮ್ಮಲ್ಲೊಬ್ಬರನ್ನೇ ಆರಿಸಿ ತೆಗೆದು ಸಿನೆಮಾ ಮಾಡಿ ನಿಮಗೇ ತೋರಿಸುವ ಚಮಕ್ ಇದೆ. ನಿಮ್ಮ ಕಣ್ಮುಂದೆಯೇ ನಿಜ ಸಿನೆಮಾದ ಸ್ಟಂಟ್‌ಗಳನ್ನು ಮಾಡಿ ತೋರಿಸುವ ಪಡೆಯೇ ಇದೆ. ಇದ್ದಕ್ಕಿದ್ದಂತೆ ರಾಮೋಜಿ ಫಿಲಂ ಸಿಟಿ ಧೂಳೀಪಟವಾಗುವ ಭ್ರಮೆ ಹುಟ್ಟಿಸುವ 4ಡಿ ಪ್ರದರ್ಶನವಿದೆ. ನೀವು ನಡೆದಾಡಿದಲ್ಲೆಲ್ಲ ಕುಣಿತ, ಹಾಡು, ವಿಸ್ಮಯಗಳಿರುತ್ತವೆ. ಅಲ್ಲಿ ರೈಲ್ವೆ ಸ್ಟೇಶನ್‌ನಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಎಲ್ಲವೂ ಇವೆ. ಇದೆಲ್ಲ ಎಲ್ಲರಿಗೂ ಗೊತ್ತಿದ್ದದ್ದೇ.

ನಾವೂ ಉದ್ಯಮಶೀಲತೆಯ ಮಾತಾಡುತ್ತೇವೆ. ನಮ್ಮಲ್ಲೂ ಬಗೆಬಗೆಯ ಇಂಡಸ್ಟ್ರಿ ಅಭಿವೃದ್ಧಿ ಆಗಬೇಕೆಂಬ ಉದ್ದೇಶ ಆಳುಗರದು. ಆದರೆ ಇರುವ ಇಂಡಸ್ಟ್ರಿಗಳು ಹೇಗಿವೆ? ಅವುಗಳಲ್ಲಿ ಹೊಸ ಆವಿಷ್ಕಾರಗಳು, ಬೆಳವಣಿಗೆಗಳು ಆಗುತ್ತಿವೆಯಾ? ಒಂದು ಯಶಸ್ವಿ ಉದ್ಯಮವಾಗಿ ಬೆಳೆದು ನಿಂತಿರುವ, ಗಿನ್ನೆಸ್ ದಾಖಲೆ ಬರೆದುಕೊಂಡಿರುವ ರಾಮೋಜಿ ಫಿಲಂ ಸಿಟಿಯಿಂದ ನಮ್ಮ ಉದ್ಯಮಿಗಳು, ಸರ್ಕಾರಗಳು ಕಲಿಯಬಹುದಾದ ಪಾಠಗಳು ಯಾವುವು?

ಡ್ರೀಮ್ ಬಿಗ್: ದೊಡ್ಡ ಗುರಿ ಇಟ್ಟುಕೊಳ್ಳಿ
'ಪ್ರತಿದಿನ ನಮ್ಮಲ್ಲಿಗೆ 3500 ಮಂದಿ ಭೇಟಿ ನೀಡುತ್ತಾರೆ. ಉತ್ಸವದ ಸಂದರ್ಭಗಳಲ್ಲಿ ಇನ್ನೂ ಹೆಚ್ಚು. ಆದರೆ ನಮ್ಮ ಉದ್ದೇಶ, ಪ್ರತಿದಿನ ಹತ್ತು ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡಿ ಖುಷಿ ಪಡೆಯಬೇಕೆಂಬುದು. ಅದಕ್ಕಾಗಿಯೇ ವರ್ಷದಲ್ಲಿ ನೂರಕ್ಕೂ ಹೆಚ್ಚು ದಿನ ಯಾವುದಾದರೊಂದು ಉತ್ಸವ ಇಟ್ಟುಕೊಳ್ಳುತ್ತಿದ್ದೇವೆ. ಈ ಬಾರಿ ಪ್ರೇಮಿಗಳ ದಿನ ವಿಶೇಷ ಆಕರ್ಷಣೆ.' ಅನ್ನುತ್ತಾರೆ ಫಿಲಂ ಸಿಟಿಯ ಡೆಪ್ಯುಟಿ ಮ್ಯಾನೇಜರ್ ಎ.ಶ್ರೀಕುಮಾರ್. ತಲಾ 800 ರು. ಫೀಸು, ದಿನಕ್ಕೆ 10,000 ಮಂದಿ, 365 ದಿನಕ್ಕೆ ಎಷ್ಟಾಯ್ತು? ನೀವೇ ಲೆಕ್ಕ ಹಾಕಿ!

ಉದ್ಯಮದ ತಳಪಾಯ ವಿಶಿಷ್ಟವಾಗಿರಲಿ
ರಾಮೋಜಿ ಫಿಲಂ ಸಿಟಿ ಪರಿಕಲ್ಪನೆ ಆರಂಭವಾದದ್ದು ಒಂದು ಸರಳ ಕಲ್ಪನೆಯಿಂದ: ಚಲನಚಿತ್ರವನ್ನೇ ಆಧರಿಸಿದ ಮನರಂಜನೆ ಇಲ್ಲಿ ಪ್ರವಾಸಿಗನಿಗೆ ಸಿಗಬೇಕು. ಅಂದರೆ ಇಲ್ಲಿ ಸಿಗುವ ಎಲ್ಲಾ ಮೋಜು ಮಜಾಗಳಿಗೂ ಫಿಲ್ಮಿಲ್ಯಾಂಡಿನ ಹಿನ್ನೆಲೆಯಿದೆ. ಪ್ರತಿ ವ್ಯಕ್ತಿಯೂ ಇಂದು ಸಿನೆಹೋಕನೇ ಆಗಿರುವುದರಿಂದ, ಒಂದಲ್ಲ ಒಂದು ರೀತಿಯಲ್ಲಿ ಪ್ರತಿ ಪ್ರೇಕ್ಷಕನೂ ಇಲ್ಲಿನ ಸಂದರ್ಭಕ್ಕೆ ತನ್ನನ್ನು ರಿಲೇಟ್ ಮಾಡಿಕೊಳ್ಳುತ್ತಾನೆ. ಈ ಚೇತೋಹಾರಿ ರಿಫ್ರೆಶ್‌ಮೆಂಟ್ ಅನ್ನು ಮತ್ತೆ ಮತ್ತೆ ಬಯಸುತ್ತಾನೆ.

ಆಲ್ ಇನ್ ವನ್: ಎಲ್ಲವೂ ಒಂದೆಡೆ ಸಿಗಲಿ
ಫಿಲಂ ಶೂಟಿಂಗ್‌ಗೆಂದು ಬಂದವನಿಗೆ, ಕಲಾವಿದರೂ ಇಲ್ಲೇ ಸಿಗುತ್ತಾರೆ. ಹಳ್ಳಿಯ ಪಂಚಾಯ್ತಿ ಕಟ್ಟೆಯಿಂದ ಹಿಡಿದು ಯುರೋಪಿನ ಬೀದಿಯವರೆಗೆ, ಮಹಾಭಾರತದ ಆಸ್ಥಾನದಿಂದ ಹಿಡಿದು ಜಪಾನೀ ಪಾರ್ಕಿನವರೆಗೆ ಬೇಕಾದ ಶೂಟಿಂಗ್ ಸ್ಪಾಟ್‌ಗಳೆಲ್ಲಾ ಇವೆ. ಎಡಿಟಿಂಗ್, ಧ್ವನಿ ಸಂಕಲನ ವ್ಯವಸ್ಥೆ ಕೂಡ ಇಲ್ಲೇ ಇದೆ. ಇನ್ನೇನು, ಫೈನಲ್ ಕಾಪಿ ಕೈಯಲ್ಲಿಟ್ಟುಕೊಂಡೇ ಹೊರಬರಬೇಕು. ಫಿಲಂ ಮೇಕಿಂಗ್ ಕೋರ್ಸ್ ಮಾಡಬೇಕೆ? ಕಾಲೇಜು ಕೂಡ ಇದೆ. ದೊಡ್ಡ ದೊಡ್ಡ ಕಂಪನಿಗಳ ಸಮಾರಂಭ, ಥೀಮ್ ಮದುವೆಗಳಿಗೆಲ್ಲಾ ಇದು ಆಕರ್ಷಕ ತಾಣ.

ಹೊಸ ಸಾಧ್ಯತೆಗಳನ್ನು ಶೋಧಿಸಿ
ಪ್ರತಿವರ್ಷವೂ ಫಿಲಂ ಸಿಟಿಯಲ್ಲಿ ಏನಾದರೊಂದು ಹೊಸತು ಆವಿಷ್ಕಾರವಿರುತ್ತದೆ. ಕಳೆದ ವರ್ಷ ಅಲ್ಲಿ ಚಿತ್ರೀಕರಿಸಿದ ಸಿನೆಮಾಗಳ ಶೂಟಿಂಗ್ ಸ್ಪಾಟ್‌ಗಳು ಕಾಯ್ದಿಡಲ್ಪಡುತ್ತವೆ. ಕಳೆದ ಕೆಲ ವರ್ಷಗಳಿಂದ ಅಲ್ಲಿ ದೊಡ್ಡ ಥೀಮ್ ಮದುವೆಗಳು ನಡೆಯುತ್ತಿವೆ. ಎಲ್ಲ ಶ್ರೀಮಂತರಿಗಷ್ಟೇ, ಕೆಳ ಮಧ್ಯಮ ವರ್ಗದವರಿಗೆ ಏನೂ ಇಲ್ಲವೇ ಎಂದು ಕೇಳುತ್ತೀರ? ಸಾವಿರದೈನೂರು ರುಪಾಯಿಗೆ ಹೊಸ ಪ್ಯಾಕೇಜ್ ಬಂದಿದೆ.

ಸ್ಪರ್ಧೆಗೆ ಸಜ್ಜಾಗಿರಿ
'ಡಿಸ್ನಿಲ್ಯಾಂಡ್‌ನವರು ಭಾರತದ ಅಮ್ಯೂಸ್‌ಮೆಂಟ್ ಉದ್ಯಮಕ್ಕೆ ಲಗ್ಗೆ ಹಾಕುತ್ತಾರೆಂಬ ಸುದ್ದಿಯಿದೆ. ಗುರ್‌ಗಾಂವ್, ಗೋವಾಗಳಲ್ಲಿ ಫಿಲಂ ಸಿಟಿ ಶುರುವಾಗುವ ಸಾಧ್ಯತೆಗಳಿವೆ. ಇವೆಲ್ಲ ನಿಮ್ಮ ವ್ಯಾಪಾರಕ್ಕೆ ಧಕ್ಕೆ ತರಲಾರದೆ?' ಎಂಬ ಪ್ರಶ್ನೆಗೆ ರಾಮೋಜಿ ಟೀಮ್ ಉತ್ತರ ಸಿದ್ಧವಿದೆ. 'ನಮ್ಮದು ಅಪ್ಪಟ ದೇಸಿ, ಸ್ಥಳೀಯ. ಅದೇ ನಮ್ಮ ಬಲ. ಮತ್ತೆ ಅವುಗಳೆಲ್ಲ ಹುಟ್ಟಿಕೊಳ್ಳುವ ಮೊದಲೇ ನಾವು ಇನ್ನಷ್ಟು ವಿಸ್ತರಿಸಿರುತ್ತೇವೆ!' ಅದೀಗ ನಿಜವಾದ ಕ್ರೀಡಾಸ್ಫೂರ್ತಿ.

ಹೊಸ ಕನಸುಗಳಿರಲಿ
ಭಾರತದ ಎಲ್ಲ ದೇವಸ್ಥಾನಗಳನ್ನೂ ಒಂದೇ ಕಡೆ ನೋಡಬಹುದೆ? ಮುಂದಿನ ವರ್ಷಗಳಲ್ಲಿ ಅದೂ ಸಾಧ್ಯ. ದೇಶದ ಎಲ್ಲ ಪ್ರಮುಖ ದೇವಾಲಯಗಳ ನಿಜಗಾತ್ರದ, ನಿಜರೂಪದ ಪ್ರತಿಕೃತಿಗಳು ರಾಮೋಜಿಯಲ್ಲಿರುತ್ತವೆ. ಅಂದರೆ ಗೋಲ್ಡನ್ ಟೆಂಪಲ್ ಹೊಕ್ಕು ಹೊರಬಂದು ನೇರವಾಗಿ ಕನ್ಯಾಕುಮಾರಿ ದೇವಾಲಯ ಪ್ರವೇಶಿಸಬಹುದು! ದೇಶದ ಎಲ್ಲ ಬಗೆಯ ಸಾಹಸಕ್ರೀಡೆಗಳನ್ನು ಒಂದೆಡೆ ಆಡಬಹುದೆ? ಅದೂ ಸಾಧ್ಯ. ಅಡ್ವೆಂಚರ್ ಪಾರ್ಕ್ ಸಿದ್ಧಗೊಳ್ಳುತ್ತಿದೆ. ಫಿಲಂ ಸ್ಟುಡಿಯೋದಲ್ಲಿ ಹಕ್ಕಿಗಳ ಪಾರ್ಕ್ ನಿರೀಕ್ಷಿಸಬಹುದೆ? ಕಾದು ನೋಡಿ.

ಉದ್ಯಮಕ್ಕೆ ಹೊಸ ವ್ಯಾಖ್ಯೆ ಕೊಡಿ
'ಸ್ಟುಡಿಯೋ ಪ್ರವಾಸೋದ್ಯಮ' ಎಂಬ ಪರಿಕಲ್ಪನೆಯೇ ರಾಮೋಜಿ ಫಿಲಂ ಸಿಟಿಗೂ ಮುನ್ನ ಇರಲಿಲ್ಲ. ಆರಂಭಿಸಿದಾಗ ಇದರ ಉದ್ದೇಶ, ಫಿಲಂಗಳಿಗೆ ಶೂಟಿಂಗ್ ಸ್ಟುಡಿಯೋ ಆಗಿರುವುದಷ್ಟೇ ಇರಲಿಲ್ಲ. ಸ್ಟುಡಿಯೋವನ್ನು ಕೂಡ ಜನಾಕರ್ಷಣೆಯ ತಾಣ ಆಗಿಸಬಹುದು ಎಂಬ ಒನ್‌ಲೈನ್ ಯೋಜನೆಯೂ ಇತ್ತು. ಅದನ್ನು ಜಾರಿಮಾಡಲು ಮಾಸ್ಟರ್‌ಪ್ಲಾನ್ ಕೂಡ ತಯಾರಾಯ್ತು. ಇಂದು ರಾಮೋಜಿ ಫಿಲಂ ಸಿಟಿ, ಸ್ಟುಡಿಯೋ ಮಾತ್ರವಲ್ಲ, ದೇಶದಲ್ಲೇ ಅತಿ ದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ. ನಮ್ಮ ಕಂಠೀರವ ಸ್ಟುಡಿಯೋ ಪ್ರೇಕ್ಷಣೀಯ ತಾಣ ಆಗುವುದನ್ನು ಕಲ್ಪಿಸಿಕೊಳ್ಳಿ!
- ಚಿತ್ರ, ಬರಹ: ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments