ಸಾಹಿತ್ಯ ನಗರಿಯಲ್ಲಿ ಸರಸ್ವತಿ ಪುತ್ರರ ಸ್ನೇಹ
ಈ ಸಂದರ್ಭದಲ್ಲಿ ಆಲೂರು ವೆಂಕಟರಾಯರು, ಮುದವೀಡ್ಕರ್ ಕೃಷ್ಣರಾಯರು, ಪ್ರೊ.ವಿ.ಕೃ.ಗೋಕಾಕ್ ಹಾಗೂ ವರಕವಿ ದ.ರಾ.ಬೇಂದ್ರೆಯವರ ಪ್ರಯತ್ನಗಳನ್ನು ಎಷ್ಟು ಹೊಗಳಿದರೂ ಸಾಲದು. ಇವರುಗಳ ಪ್ರಯತ್ನದಿಂದಲೇ ಕರ್ನಾಟಕ ಒಂದಾಯಿತು. ಇನ್ನೂ ಒಂದು ವಿಶೇಷವೆಂದರೆ ಧಾರಾವಾಡದ ಸಾಹಿತಿಗಳು ಮತ್ತು ಕವಿಗಳು ಮೈಸೂರು ಸಂಸ್ಥಾನದ ಸಾಹಿತಿಗಳೊಡನೆ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿದ್ದರು. ಆಗಾಗ್ಗೆ ಅವರನ್ನು ಕರೆಸಿ ಸನ್ಮಾನಿಸುತ್ತಿದ್ದರು. ನಾನು ಹುಬ್ಬಳ್ಳಿಯಲ್ಲಿ ಪತ್ರಕರ್ತನಾಗಿದ್ದಾಗ ಪ್ರೊ.ಬಿ.ಎಂ. ಶ್ರೀಕಂಠಯ್ಯನವರು, ಅ.ನ. ಕೃಷ್ಣರಾಯರು, ವಿ. ಸೀತಾರಾಮಯ್ಯವರು, ನಾ. ಕಸ್ತೂರಿಯವರು ಮತ್ತು ತೀ.ನಂ. ಶ್ರೀಕಂಠಯ್ಯನವರು ಹುಬ್ಬಳ್ಳಿ ಮತ್ತು ಧಾರಾವಾಡಗಳಿಗೆ ಬಂದು ಭಾಷಣಗಳನ್ನು ಮಾಡಿದ್ದರು. ಅವರಲ್ಲಿ ಕೆಲವರನ್ನು ನಾವು ಸಂಯುಕ್ತ ಕರ್ನಾಟಕ ಕಚೇರಿಗೂ ಕರೆಸಿ ಸಂದರ್ಶಿಸಿ, ಸನ್ಮಾನಿಸಿದ್ದೆವು. ಸಂಪಾದಕರಾದ ಮೊಹರೆಯವರಿಗೆ ಕೇವಲ ಪತ್ರಕರ್ತರಷ್ಟೇ ಅಲ್ಲದೆ ಮೈಸೂರು ಸಂಸ್ಥಾನದ ಸಾಹಿತಿಗಳ ಸ್ನೇಹವೂ ಇತ್ತು. ಅದರಲ್ಲಿಯೂ ಡಿ.ವಿ. ಗುಂಡಪ್ಪನವರು ಮತ್ತು ವಿ. ಸೀತಾರಾಮಯ್ಯನವರ ಬಗ್ಗೆ ಅವರಿಗೆ ತುಂಬಾ ಅಭಿಮಾನ ಇತ್ತು. ತಾಯಿನಾಡು ಪತ್ರಿಕೆಯ ಪಿ.ಆರ್. ರಾಮಯ್ಯನವರು ಮತ್ತು ವಿಶ್ವಕರ್ನಾಟಕ ಪತ್ರಿಕೆಯ ಟಿ.ಟಿ. ಶರ್ಮಾರವರು ಅವರ ಆತ್ಮೀಯರಾಗಿದ್ದರು. ಪ್ರಜಾಮತ ಪತ್ರಿಕೆಯ ಮಾಲೀಕರೂ, ವ್ಯವಸ್ಥಾಪಕ ಸಂಪಾದಕರೂ ಆಗಿದ್ದ ಬಿ.ಎನ್. ಗುಪ್ತರವರು ಸಹ ಹುಬ್ಬಳ್ಳಿಗೆ ಬಂದು ಎಂಟು ದಿನ ನಮ್ಮ ಅತಿಥಿಗೃಹದಲ್ಲಿಯೇ ಉಳಿದುಕೊಂಡಿದ್ದರು.
ಧಾರಾವಾಡ ಜಿಲ್ಲಾಧಿಕಾರಿಯಾಗಿದ್ದ ಆರ್.ಜೆ. ರೆಬೆಲೊ ಇವರೊಡನೆ ನನಗೆ ಆತ್ಮೀಯ ಸಂಬಂಧ ಇತ್ತು. ಮುಂದೆ ಇವರು ಹೊಸ ಕರ್ನಾಟಕ ರಾಜ್ಯ ಸ್ಥಾಪನೆಯಾದ ಮೇಲೆ ಕೆಲ ಕಾಲ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು. ನನ್ನೊಡನೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದ ಇನ್ನೊಬ್ಬ ವ್ಯಕ್ತಿ ಎಂದರೆ ಸಮಾಜ ಪುಸ್ತಕಾಲಯದ ಮಾಲೀಕರಾದ ಬಾಲಚಂದ್ರ ಪಣೇಕರ್ರವರು. ಹುಟ್ಟಿನಿಂದ ಮಹಾರಾಷ್ಟ್ರೀಯರಾದರೂ ಕನ್ನಡದ ಅಭಿಮಾನಿ. ಕನ್ನಡ ಪುಸ್ತಕಗಳ ಮಾರಾಟಕ್ಕಾಗಿ ಇಡೀ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟವರು. ಕನ್ನಡ ಪುಸ್ತಕಗಳ ಖರೀದಿಗಾಗಿ ನಾನು ವಾರದಲ್ಲಿ ಒಂದೆರಡು ಸಲ ಇವರ ಅಂಗಡಿಗೆ ಹೋಗುತ್ತಿದ್ದೆ. ಅದೇ ರೀತಿ ಮನೋಹರ ಗ್ರಂಥಮಾಲೆಯ ಮಾಲೀಕರಾದ ಜಿ.ಬಿ. ಜೋಷಿಯವರ ಸ್ನೇಹವೂ ನನಗೆ ಇತ್ತು. ಅವರ ಅಂಗಡಿಗೂ ಹೋಗಿ ಗಂಟೆ ಗಟ್ಟಲೆ ಹರಟೆ ಹೊಡೆಯುತ್ತಿದ್ದೆ. ಕನ್ನಡ ಸಾಹಿತ್ಯಕ್ಕಾಗಿ ಮನೋಹರ ಗ್ರಂಥ ಮಾಲೆ ಸಲ್ಲಿಸಿದ ಸೇವೆ ಅನುಪಮವಾದುದುದು. ಅವರು ಪ್ರಕಟಿಸಿರುವ ಮನೋಹರ ಗ್ರಂಥಮಾಲೆ ನಡೆದು ಬಂದ ದಾರಿ ಎಂಬ ಉದ್ಗ್ರಂಥ ಇನ್ನೂ ನನ್ನ ಬಳಿ ಇದೆ.
ಧಾರವಾಡದ ಇನ್ನೂ ಕೆಲವು ಸಾಹಿತಿಗಳ ಪರಿಚಯ ನನಗೆ ಇತ್ತು. ಅದರಲ್ಲಿ ಮುಖ್ಯರಾದವರೆಂದರೆ ದ.ಬಾ. ಕುಲಕರ್ಣಿಯವರು ಮತ್ತು ಅವರ ಮಿತ್ರರಾದ ಗೋವಿಂದರಾವ್ ಚುಳಕಿಯವರು. ಮುಂದೆ ನಾನು 1943ರಲ್ಲಿ ಸಂಯುಕ್ತ ಕರ್ನಾಟಕವನ್ನು ಬಿಟ್ಟು ದಾವಣಗೆರೆಗೆ ಬಂದು ಸಂಜಯ ವಾರಪತ್ರಿಕೆಯನ್ನು ಪ್ರಾರಂಭಿಸಿದಾಗ, ಚುಳಕಿಯವರು ಸಹ ದಾವಣಗೆರೆಗೆ ಬಂದು ಕೆಲವು ತಿಂಗಳು ಇದ್ದು, ನನಗೆ ನೆರವಾಗಿದ್ದರು. ಮುಖ್ಯವಾಗಿ ವಾರಪತ್ರಿಕೆ ನಡೆಸುವ ರೀತಿ ನೀತಿಗಳನ್ನು ಅವರು ನನಗೆ ಹೇಳಿಕೊಟ್ಟರು. ಇದನ್ನು ನಾನು ಎಂದಿಗೂ ಮರೆಯಲಾರೆ. ಅದೇ ರೀತಿ ಮಿಂಚಿನಬಳ್ಳಿ ಗ್ರಂಥಮಾಲೆಯ ವ್ಯವಸ್ಥಾಪಕರಾಗಿದ್ದ ಬಿಂದು ಮಾಧವ ಬುರ್ಲಿಯವರು ನನ್ನ ಆತ್ಮೀಯರಲ್ಲಿ ಒಬ್ಬರು. ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರೂ ಸಾಹಿತ್ಯ ಸೇವೆಯಲ್ಲಿ ಹೆಚ್ಚು ಸಮಯ ಕಲೆಯುತ್ತಿದ್ದರು. ಕನ್ನಡ ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು ಅವುಗಳ ಮಾರಾಟಕ್ಕಾಗಿ ಊರಊುರು ಅಲೆಯುತ್ತಿದ್ದರು. ಅವರನ್ನು ಧಾರವಾಡದ ಜನ 'ಬರಿ ಮೈ ಬುರ್ಲಿ' ಎಂದೇ ಕರೆಯುತ್ತಿದ್ದರು. ದೇಶಕ್ಕಾಗಿ ಕನ್ನಡಕ್ಕಾಗಿ ಕರ್ನಾಟಕ ಏಕೀಕರಣಕ್ಕಾಗಿ ಅವರಂತೆ ನಿಷ್ಠೆಯಿಂದ, ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ದುಡಿದ, ದುಡಿಯಬಲ್ಲ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಕರ್ನಾಟಕದಲ್ಲಿ ಇಂತಹ ವ್ಯಕ್ತಿಗೆ ಯೋಗ್ಯ ಪುರಸ್ಕಾರ ಇಲ್ಲದಿರುವುದು ಕರ್ನಾಟಕಕ್ಕೆ ಅಪಮಾನ ಎಂದು ನನ್ನ ಅಭಿಪ್ರಾಯ. ಅವರ ಹೆಸರಿನಲ್ಲಿ ಧಾರವಾಡದಲ್ಲಿ ಒಂದು ಸ್ಮಾರಕ ಮಂದಿರವನ್ನಾದರೂ ಕಟ್ಟಿಸಬೇಕು ಮತ್ತು ಅವರ ಒಂದು ಪುತ್ಥಳಿಯನ್ನು ಧಾರವಾಡದ ಮುಖ್ಯ ಬೀದಿಯಲ್ಲಿ ಸ್ಥಾಪಿಸಬೇಕೆಂಬುದು ನನ್ನ ಸಲಹೆ.
ವರಕವಿ ಬೇಂದ್ರೆಯವರು ಧಾರವಾಡದಲ್ಲಿದ್ದರೂ, ಹಲವು ಬಾರಿ ನಾನು ಧಾರವಾಡಕ್ಕೆ ಹೋಗುತ್ತಿದ್ದರೂ ಅವರ ಸಂಪರ್ಕ ನನಗೆ ಹೆಚ್ಚಾಗಿರಲಿಲ್ಲ. ಒಂದೆರಡು ಸಮಾರಂಭಗಳಲ್ಲಿ ಮಾತ್ರ ನೋಡಿದ್ದೆ. ಅವರ ಕವನಗಳ ಪುಸ್ತಕ ಹಕ್ಕಿಹಾರುತಿದೆ ನೋಡಿದಿರಾ ಎಂಬುದು ಇನ್ನೂ ನನ್ನ ಸಂಗ್ರಹದಲ್ಲಿದೆ. ಅವರ ಕವನಗಳನ್ನು ಹಾಗೂ ಇತ್ತೀಚೆಗೆ ಆಗಿರುವ ಧ್ವನಿಸುರುಳಿಗಳನ್ನು ಕೇಳಿದ್ದೇನೆ.
ಡಾ. ದ.ರಾ. ಬೇಂದ್ರೆಯವರು ಒಂದೆರಡು ಸಲ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಕಚೇರಿಗೂ ಬಂದಿದ್ದರು. ಆದರೆ ಅವರೊಡನೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಮುಂದೆ ಬೆಂಗಳೂರು ಆವೃತ್ತಿ ಪ್ರಾರಂಭವಾದ ಮೇಲೆ ದಿವಾಕರರು ಒಮ್ಮೆ ಅವರನ್ನು ಸಂಯುಕ್ತ ಕರ್ನಾಟಕ ಕಚೇರಿಗೆ ಆಮಂತ್ರಿಸಿದ್ದರು. ಆಗ ನಾವು ಪ್ರತಿವಾರ ಓರ್ವ ಗಣ್ಯವ್ಯಕ್ತಿಯ ಸಂದರ್ಶನ ಮಾಡಿ ಸೌರಭದಲ್ಲಿ ಪ್ರಕಟಿಸುತ್ತಿದ್ದೆವು ಮತ್ತು ಅದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದೆವು. ಆ ಸಮಯದಲ್ಲಿ ನಾನು ಬೇಂದ್ರೆಯವರ ಸಂದರ್ಶನ ಮಾಡಿ ಅನೇಕ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳನ್ನೊಳಗೊಂಡ ಸಚಿತ್ರ ಲೇಖನ ಪ್ರಕಟಿಸಿದ್ದೇನೆ. ಅವರು ಅದೇ ತಾನೇ ಪಾಂಡಿಚೇರಿಯಿಂದ ಬಂದಿದ್ದರಿಂದ ಅವರು ಮಾತನಾಡಿದ ವಿಷಯಗಳು ಹೆಚ್ಚಾಗಿ ಅರವಿಂದರು, ಅವರ ಆಶ್ರಮ, ಅರವಿಂದರ ತತ್ವಗಳ ಬಗ್ಗೆ ಮಾತ್ರ ಇದ್ದವು. ಧಾರವಾಡದಲ್ಲಿ ನನಗೆ ಇನ್ನೊಬ್ಬ ಸ್ನೇಹಿತರಿದ್ದರು. ಇವರ ಹೆಸರು ಬಾಲಚಂದ್ರ ಫಾಣೀಕರ್ ಎಂದು. ಇವರ ಬಗ್ಗೆ ಈಗಾಗಲೇ ಹೇಳಿದ್ದೇನೆ. ನನ್ನ ಕೆಲವು ಪುಸ್ತಕಗಳನ್ನು (ಮುಸೊಲೋನಿ, ಜಪಾನವು ಎತ್ತ ಸಾಗುತ್ತಿದೆ? ರೂಪಾಯಿಯ ಕತೆ) ಅವರೇ ಪ್ರಕಟಿಸಿದ್ದರು.
ಸಮಾಜ ಪುಸ್ತಕಾಲಯ ಕೇವಲ ಪುಸ್ತಕಗಳನ್ನು ಮಾರುವ ಅಂಗಡಿಯಾಗಿರಲಿಲ್ಲ. ಪ್ರತಿದಿನ ಸಾಯಂಕಾಲ ಧಾರವಾಡದ ಹಲವು ಹಿರಿಯ ಹಾಗೂ ಕಿರಿಯ ಸಾಹಿತಿಗಳು ಅಲ್ಲಿ ಸೇರುತ್ತಿದ್ದರು. ಚಹಾ, ಚೂಡ ಮತ್ತು ಸಂಯುಕ್ತ ಕರ್ನಾಟಕವನ್ನು ಮುಂದಿಟ್ಟುಕೊಂಡು ತಾಸುಗಟ್ಟಲೇ ಹರಟೆ ಹೊಡೆಯುತ್ತಿದ್ದರು. ಕನ್ನಡ ಸಾಹಿತ್ಯದ ಬಗ್ಗೆ, ಸಾಹಿತಿಗಳ ಬಗ್ಗೆ, ಹೊಸದಾಗಿ ಪ್ರಕಟವಾದ ಪುಸ್ತಕಗಳ ಬಗ್ಗೆ ವಿಮರ್ಶಾತ್ಮಕ ಚರ್ಚೆ ನಡೆಸುತ್ತಿದ್ದರು. ಒಮ್ಮೊಮ್ಮೆ ತಮ್ಮ ಮತ್ತು ಇತರರ ಕವನಗಳನ್ನೂ ಓದುತ್ತಿದ್ದರು. ಒಂದೆರಡು ಬಾರಿ ನಾನು ಈ ಸಾಹಿತಿಗಳ ಚಹಾ ಕೂಟದಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಕವಿಯೂ ಅಲ್ಲ, ಸಾಹಿತಿಯೂ ಅಲ್ಲವಾದ್ದರಿಂದ ಅವರ ಚರ್ಚೆಗಳಲ್ಲಿ ಭಾಗವಹಿಸುವ ಧೈರ್ಯ ಬರಲಿಲ್ಲ.
ಡಾ. ಶಂ.ಬಾ. ಜೋಶಿಯವರನ್ನು ನಾನು ಬೆಳಗಾವಿಯಲ್ಲಿದ್ದಾಗಲೇ ನೋಡಿದ್ದೆ. ಒಮ್ಮೆ ಅವರು ಸಂಯುಕ್ತ ಕರ್ನಾಟಕ ಕಚೇರಿಗೂ ಬಂದಿದ್ದರು. ಅದೇ ತಾನೇ ಅವರು ಸಂಪಾದಿಸಿ ಪ್ರಕಟಿಸಿದ್ದ 'ಕನ್ನಡ ನುಡಿಯ ಗುಟ್ಟು' ಎಂಬ ಚಿಕ್ಕ ಪುಸ್ತಕವನ್ನು ನನಗೆ ಕೊಟ್ಟಿದ್ದರು. ಅದರಲ್ಲಿ ಸಾಮಾನ್ಯವಾಗಿ ನಾವು ಪತ್ರಿಕೆಯಲ್ಲಿ ಉಪಯೋಗಿಸುವ ಕನ್ನಡ ಶಬ್ದಗಳನ್ನೇ ಬಳಸಲು ಸಾಧ್ಯವಾಯಿತು. ನಾನು ಲೇಖನಗಳನ್ನು ಬರೆಯುವಾಗ ಹೆಚ್ಚಾಗಿ ಕನ್ನಡ ಶಬ್ದಗಳನ್ನೇ ಬಳಸಲು ಸಾಧ್ಯವಾಯಿತು. ಒಂದೆರಡು ಸಲ ನಾನು ಧಾರವಾಡದಲ್ಲಿ ಅವರ ಮನೆಗೂ ಹೋಗಿ ನನಗೆ ತಿಳಿಯದ ಕೆಲವು ಕನ್ನಡ ಶಬ್ದಗಳ ಅರ್ಥವನ್ನು ಕೇಳಿಕೊಂಡು ಬಂದಿದ್ದೆ. ಆದರೆ ಮುಂದೆ ನಾನು ಹುಬ್ಬಳ್ಳಿ ಬಿಟ್ಟು ದಾವಣಗೆರೆಗೆ ಬಂದಿದ್ದರಿಂದ ಅವರ ಸಂಪರ್ಕ ತಪ್ಪಿತು. ಇತ್ತೀಚೆಗೆ ಅಂದರೆ 1997ರಲ್ಲಿ ನಾನು ಅಮೆರಿಕಕ್ಕೆ ಹೋಗಿದ್ದಾಗ ಅಥೆನ್ಸ್ ಎಂಬ ನಗರದಲ್ಲಿ ನನ್ನ ಮಗನ ಮನೆಯಲ್ಲಿ ಒಂದು ತಿಂಗಳು ಇದ್ದೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಜೋಶಿ ಎಂಬುವವರು ಇರುವುದಾಗಿ ನನ್ನ ಮಗನಿಂದ ತಿಳಿದು ಬಂದಿತು. ಒಂದು ದಿನ ಅವನು ಆ ಜೋಶಿಯವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದ. ನಾನು ಮಾತನಾಡುತ್ತಿರುವಾಗ ಅವರು ಡಾ.ಶಂ.ಬಾ. ಜೋಶಿಯವರ ಹಿರಿಯ ಮಗನೆಂದು ತಿಳಿಯಿತು. ಆಗ ನಾನು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕದಲ್ಲಿದ್ದಾಗ ಡಾ.ಶಂ.ಬಾ.ಜೋಶಿಯವರ ಪರಿಚಯ ಹಾಗೂ ಅವರೊಡನೆ ನಾನು ಮಾಡಿದ ಚರ್ಚೆಗಳ ಬಗ್ಗೆ ತಿಳಿಸಿದೆ. ಅವರೂ ತಮ್ಮ ತಂದೆಯ ಕೃತಿಗಳ ಬಗ್ಗೆ ಹೇಳಿದರು.
ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ಉತ್ತರ ಕರ್ನಾಟಕದ ಜನರಿಗೆ ಹಿಂದಿ ಭಾಷೆಯನ್ನು ಕಲಿಯುವ ಆಸೆ ಉಂಟಾದದ್ದು ಆಶ್ಚರ್ಯವೇನಲ್ಲ. ಮುಂದೆ ಈ ಭಾಷೆ ಇಡೀ ದೇಶದ ಭಾಷೆಯಾಗುವುದೆಂಬ ನಂಬಿಕೆಯನ್ನು ಹಲವರು ಇಟ್ಟುಕೊಂಡಿದ್ದರು. ನಾನು ಚಿತ್ರದುರ್ಗದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಹಿಂದಿಯನ್ನು ಕಲಿಯಲು ಪ್ರಾರಂಭಿಸಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಪರೀಕ್ಷೆಗಳಲ್ಲಿ ಪಾಸಾಗಿದ್ದೆ. ಆದ್ದರಿಂದ ನನಗೂ ಹಿಂದಿಯನ್ನು ಕಲಿಯುವ ಆಸೆ ಇತ್ತು. ಆ ಕಾಲದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯವರು ಅನೇಕ ಶಾಲೆ ಕಾಲೇಜುಗಳಲ್ಲಿ ಹಿಂದಿ ಭಾಷೆ ಕಲಿಯುವುದಕ್ಕೆ ವ್ಯವಸ್ಥೆ ಮಾಡಿದ್ದರು. ಆ ಸಮಯದಲ್ಲಿ ಧಾರವಾಡದ ಗುರುನಾಥ ಜೋಶಿಯವರು ಧಾರವಾಡದ ಅನೇಕ ವಿದ್ಯಾಸಂಸ್ಥೆಗಳಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮತ್ತು ಅವರ ಮಿತ್ರರಾದ ಸಿದ್ದನಾದ ಪಂತ್ರವರು ಆಗಾಗ್ಗೆ ನಮ್ಮ ಕಚೇರಿಗೂ ಬರುತ್ತಿದ್ದರಿಂದ ಅವರ ಪರಿಚಯವಾಯಿತಲ್ಲದೆ ಮುಂದೆ ನಾವು ಮೂವರು ಆತ್ಮೀಯ ಗೆಳೆಯರಾದೆವು. ಗುರುನಾಥ್ ಜೋಶಿಯವರು ಕೇವಲ ಹಿಂದಿ ಶಿಕ್ಷಕರಷ್ಟೇ ಅಲ್ಲ, ಅನೇಕ ಹಿಂದಿ ಕೃತಿಗಳನ್ನು ಅದರಲ್ಲಿಯೂ ಮುಖ್ಯವಾಗಿ ಬಂಗಾಳದ ಶರತ್ ಚಂದ್ರವರ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿ ಸಾಹಿತ್ಯ ಸಾಮ್ರಾಟರೆನಿಸಿದ ಪ್ರೇಮಚಂದ್ರನ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿ ಕಲಿಯುವ ಕನ್ನಡಿಗರ ಅನುಕೂಲಕ್ಕಾಗಿ ಸುಲಭ ಹಿಂದಿ ವ್ಯಾಕರಣ, ಹಿಂದಿ-ಕನ್ನಡ ವ್ಯಾಕರಣ, ಹಿಂದಿ- ಕನ್ನಡ ಶಬ್ದಕೋಶ ಮತ್ತು ಕನ್ನಡ-ಕನ್ನಡ- ಹಿಂದಿ ಶಬ್ದಕೋಶಗಳನ್ನು ರಚಿಸಿದ್ದಾರೆ. ಸಿದ್ದನಾಥ ಪಂತ್ ಮತ್ತು ಗುರುನಾಥ ಜೋಶಿಯವರು ಉತ್ತರ ಕರ್ನಾಟಕದಲ್ಲಿ ಹಿಂದು ಭಾಷೆಯ ಪ್ರಚಾರಕ್ಕೆ ಬಹಳ ದುಡಿದಿದ್ದಾರೆಂದು ಹೇಳಿದರೆ ಅತಿಶಯೋಕ್ತಿಯಾಗುವುದಿಲ್ಲ.
(ಮುಂದುವರಿಯುವುದು)
-ಕೆ. ಶಾಮರಾವ್