ಡೀಲ್ ಮಾಸ್ಟರ್
ನಾವು ಗೂಗಲ್ನಲ್ಲಿ ಮಾಹಿತಿ ಸರ್ಚ್ ಮಾಡಿದರೆ, ಗೂಗಲ್ ಕಂಪನಿಯು ಜಗತ್ತಿನಲ್ಲಿರುವ ಖ್ಯಾತ ಆನ್ಲೈನ್ ಕಂಪನಿಗಳಲ್ಲಿ ಹಣ ಹೂಡುವುದಕ್ಕೆ ಸರ್ಚ್ ಮಾಡುತ್ತಿರುತ್ತದೆ!
ಕಳೆದೊಂದು ದಶಕದಲ್ಲಿ ಗೂಗಲ್ ಸಂಸ್ಥೆಯು ಬರೊಬ್ಬರಿ 238 ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದಕ್ಕಾಗಿ ಗೂಗಲ್ ಐಎನ್ಸಿ ಖರ್ಚು ಮಾಡಿದ್ದು ಬರೋಬ್ಬರಿ 23.7 ಬಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು ಹದಿನಾಲ್ಕು ಮುಕ್ಕಾಲು ಲಕ್ಷ ಕೋಟಿ ರೂಪಾಯಿಯಷ್ಟು! ಫೇಸ್ಬುಕ್ ಮಾಡಿಕೊಂಡಿರುವ ಒಂದೇ ಡೀಲ್ 12 ಲಕ್ಷ ಕೋಟಿಯಾಗಿದ್ದರೂ 2004ರಿಂದಲೇ ಗೂಗಲ್ ಸಂಸ್ಥೆ ಖ್ಯಾತ ಆನ್ಲೈನ್ ಕಂಪನಿಗಳನ್ನು ಖರೀದಿಸುತ್ತಲೇ ಇದೆ.
ನೂತನ ಕಂಪನಿಗಳನ್ನು ಆರಂಭಿಸಲು ಸಹಾಯ ಮಾಡಲೆಂದೇ ಗೂಗಲ್ ವೆಂಚರ್ಸ್ ಎಂಬ ವಿಭಾಗ ಹುಟ್ಟುಹಾಕಲಾಗಿದೆ. ಹೊಸ ಕಂಪನಿಗಳನ್ನು, ಅಪ್ಲಿಕೇಶನ್, ಸಾಫ್ಟ್ವೇರ್ ಆರಂಭಿಸಲು ಈ ಮೂಲಕ ಹಣ ನೀಡಲಾಗುತ್ತದೆ. ನೆಸ್ಟ್ನ್ನು ಗೂಗಲ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೊದಲೇ ಅಲ್ಲಿ ಸಂಶೋಧನೆಗೆ ಬಂಡವಾಳ ಹೂಡಿತ್ತು. ಯಾವಾಗ ಆ ಸಂಸ್ಥೆಯು ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡಿತೋ ಆಗ ಸಂಪೂರ್ಣ ಸಂಸ್ಥೆಯನ್ನೇ ಗೂಗಲ್ ಖರೀದಿಸಿ, ತನ್ನ ಬ್ರಾಂಡ್ ಹೆಸರನ್ನು ನೀಡಿತು. ಇನ್ನು ಗೂಗಲ್ ಕ್ಯಾಪಿಟಲ್ ವಿಭಾಗವು ಈಗಾಗಲೇ ಮಾರುಕಟ್ಟೆಯಲ್ಲಿ ಬೇರು ಬಿಟ್ಟಿರುವ ಸಂಸ್ಥೆಗಳಲ್ಲಿ ಹಣ ಹೂಡುತ್ತಿದೆ. ಮುಂದೊಂದು ದಿನ ಯಾವುದೋ ಕಂಪನಿ ದೊಡ್ಡ ಹೆಸರು ಮಾಡಿದರೆ, ಅದರಲ್ಲಿ ಗೂಗಲ್ ಸಂಸ್ಥೆ ಹಣ ಹೂಡಿ ವರ್ಷಗಳೇ ಕಳೆದಿರುತ್ತವೆ!
ನಾವಿಂದು ಬಹುತೇಕರು ಆನ್ಲೈನ್ಲ್ಲಿ ವಿಡಿಯೋ ವೀಕ್ಷಿಸಲು ಬಳಸುವ ಯೂಟ್ಯೂಬ್ನ್ನು 2006ರಲ್ಲಿಯೇ 1.60 ಬಿಲಯನ್ ಡಾಲರ್ ನೀಡಿ ಗೂಗಲ್ ಖರೀದಿಸಿತ್ತು. ಇಂದು ಯುಟ್ಯೂಬ್ನಿಂದ ಸುಮಾರು 5.60 ಬಿಲಿಯನ್ ಡಾಲರ್ ವಾರ್ಷಿಕ ಆದಾಯವನ್ನು ಗೂಗಲ್ ಗಳಿಸುತ್ತಿದೆ. ಇದೇ ರೀತಿ 2014ರ ವರ್ಷವೊಂದರಲ್ಲಿ ಸುಮಾರು ಇನ್ನು 70ಕ್ಕೂ ಅಧಿಕ ಕಂಪನಿಗಳ ಮೇಲೆ ಗೂಗಲ್ ಕಣ್ಣು ಬಿದ್ದಿದೆ ಎಂದು ಹೇಳಲಾಗುತ್ತಿದೆ. ವರ್ಷದ ಪ್ರಾರಂಭದಲ್ಲಿಯೇ ವಾಟ್ಸ್ಆ್ಯಪ್ನ್ನು 12 ಲಕ್ಷ ಕೋಟಿಗೆ ಖರೀದಿಸಿ ಅಂತರ್ಜಾಲ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಫೇಸ್ಬುಕ್ ನಾಂದಿ ಹಾಡಿದೆ. ಈ ವರ್ಷ ಇಂತಹ ಮತ್ತೊಂದಿಷ್ಟು ಖರೀದಿ ವ್ಯವಹಾರಗಳು ನಡೆಯುವ ಸಾಧ್ಯತೆಗಳಿವೆ.
ಜಗತ್ತಿನ ಅತಿ ದೊಡ್ಡ ಡೀಲಿಂಗ್ ಕಂಪನಿ
ಆದರೆ ಗೂಗಲ್ ಸಂಸ್ಥೆಯ ಡೀಲಿಂಗ್ನ ಕತೆ ರೋಚಕವಾಗಿದೆ. ಕಳೆದ ಮೂರು ವರ್ಷಗಳಲ್ಲಿಯೇ ಸುಮಾರು 176 ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು 11 ಲಕ್ಷ ಕೋಟಿಯನ್ನು ಗೂಗಲ್ ಖರ್ಚು ಮಾಡಿದೆ. ಇದೇ ಕಾರಣದಿಂದ ತಾಂತ್ರಿಕ ಜಗತ್ತಿನ ಅತಿ ದೊಡ್ಡ ಡೀಲಿಂಗ್ ಕಂಪನಿ ಎಂಬ ಖ್ಯಾತಿಗೂ ಗೂಗಲ್ ಒಳಗಾಗಿದೆ.
ಅಂತರ್ಜಾಲ ಮಾರುಕಟ್ಟೆ ಇಂದು ಪಕ್ಕಾ ಜೂಜಾಟವಾಗಿ ಪರಿಣಮಿಸಿದೆ. ಅಂತರ್ಜಾಲವೇ ಭವಿಷ್ಯದ ಮಾಧ್ಯಮವಾಗಿ ರೂಪಗೊಳ್ಳಲಿದೆ ಎಂಬ ವಿಶ್ವಾಸದಿಂದ ಕಣ್ಮುಚ್ಚಿಕೊಂಡು ಅಂತಾರಾಷ್ಟ್ರೀಯ ಕಂಪನಿಗಳು ಹೂಡಿಕೆ ಮಾಡುತ್ತಿವೆ. ವಿಚಿತ್ರವೆಂದರೆ ಅವೆಲ್ಲವೂ ಬಹುತೇಕವಾಗಿ ಅಮೆರಿಕ ಮೂಲದ ಕಂಪನಿಗಳಾಗಿವೆ. ಇಂದು ಅಂತರ್ಜಾಲ ಮಾರುಕಟ್ಟೆಯಲ್ಲಿ ಅತಿ ಪ್ರಮುಖ ಪಾತ್ರವನ್ನು ಹೊಂದಿರುವ ಗೂಗಲ್, ಫೇಸ್ಬುಕ್ ಹಾಗೂ ಯಾಹೂ ಅಮೆರಿಕ ಕೇಂದ್ರಿತವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಮತ್ತೊಂದು ವಿಚಿತ್ರವೆಂದರೆ ಭಾರತದಲ್ಲಿ ಯಾವೊಂದು ಪ್ರಮುಖ ಖರೀದಿಯನ್ನು ಗೂಗಲ್ ಮಾಡಿಲ್ಲ.
ಯಾಹೂ ಹಾಗೂ ಫೇಸ್ಬುಕ್ನ ಕಾಟ ತಾಳಲಾಗದೇ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಂಪನಿಗಳ ಖರೀದಿಗೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಮಾಡಲು ಗೂಗಲ್ ಚಿಂತಿಸಿದೆ. ಸುಮಾರು 110 ಬಿಲಿಯನ್ ಡಾಲರ್ ಆಸ್ತಿ ಹಾಗೂ 59 ಬಿಲಿಯನ್ ಡಾಲರ್ ನಗದು ಹಣವನ್ನು ಹೊಂದಿರುವ ಗೂಗಲ್ ಸಂಸ್ಥೆಯು ದೊಡ್ಡ ಪ್ರಮಾಣದ ಖರೀದಿ ಬಗ್ಗೆ ಆಲೋಚಿಸುತ್ತಿದೆ ಎನ್ನುತ್ತಿವೆ ಅಂತಾರಾಷ್ಟ್ರೀಯ ಮಾಧ್ಯಮಗಳು. ಆದರೆ ಗೂಗಲ್ ಸಂಸ್ಥೆ ಮಾತ್ರ ಈ ಸಂಬಂಧ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಂದಹಾಗೆ 2013ರಲ್ಲಿ ಗೂಗಲ್ ಒಟ್ಟು ಲಾಭದ ಪ್ರಮಾಣವೇ 13 ಬಿಲಿಯನ್ ಡಾಲರ್ನಷ್ಟಿದೆ. ಅಮೆರಿಕದ ಕಾನೂನಿನ ಪ್ರಕಾರ ಅತಿ ದೊಡ್ಡ ಡೀಲ್ಗಳನ್ನಷ್ಟೇ ಸಂಸ್ಥೆ ಬಹಿರಂಗಪಡಿಸಬೇಕಾಗುತ್ತದೆ. ಸಣ್ಣ ಪುಟ್ಟ ಡೀಲ್ಗಳು ಯಾರ ಗಮನಕ್ಕೂ ಬರುವುದಿಲ್ಲ. ಗೂಗಲ್ನ ಪಕ್ಕಾ ವಿರೋಧಿಯೆಂದೇ ಬಿಂಬಿತವಾಗಿರುವ ಆ್ಯಪಲ್ ಕೂಡ ತನ್ನ ಖರೀದಿ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ.
ಅಂತರ್ಜಾಲ ಮಾರುಕಟ್ಟೆಯಲ್ಲಿ ಆಗ ತಾನೆ ಕಣ್ಣು ಬಿಟ್ಟಿರುವ ಹಾಗೂ ವಿಶ್ವಾಸಾರ್ಹತೆ ಗಳಿಸಿಕೊಂಡಿರುವ ಕಂಪನಿಗಳತ್ತ ಗೂಗಲ್ ಕಣ್ಣಿಡುತ್ತದೆ. ಇಂತಹ ಕಂಪನಿಗಳನ್ನು ಖರೀದಿಸುವುದರಿಂದ ಹೂಡಿಕೆಯ ಮೊತ್ತ ಕಡಿಮೆಯಾಗುತ್ತದೆ ಹಾಗೂ ಗೂಗಲ್ ಬ್ರಾಂಡ್ನೊಂದಿಗೆ ಅಭಿವೃದ್ಧಿ ಪಡಿಸಬಹುದು ಎನ್ನುವುದು ಗೂಗಲ್ ಲೆಕ್ಕಾಚಾರ. ಗೂಗಲ್ನ ಮತ್ತೊಂದು ಕ್ರಿಮಿನಲ್ ಮೈಂಡ್ ಎಂದರೆ ಯಾವುದೇ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸದರೆ ಅರ್ಧ ಅಥವಾ ಭಾಗಶಃ ಷೇರುಗಳನ್ನು ಖರೀದಿಸುವತ್ತ ತಲೆಯನ್ನೇ ಹಾಕುವುದಿಲ್ಲ. ಸಂಪೂರ್ಣ ಕಂಪನಿಯನ್ನು ಗೂಗಲ್ ಎತ್ತಿಬಿಡುತ್ತದೆ. ಇದರಿಂದ ಆ ಸಂಸ್ಥೆಯ ಎಲ್ಲ ಹಕ್ಕು ಹಾಗೂ ಸಂಶೋಧನೆಗಳ ಪೇಟೆಂಟ್ ಕೂಡ ಗೂಗಲ್ ಪಾಲಾಗುತ್ತದೆ.
ಇದೊಂದೇ ಕಾರಣಕ್ಕೆ ಮೊಟೊರಲಾ ಕಂಪನಿಯನ್ನು ಹೆಚ್ಚು ದರಕ್ಕೆ ಪಡೆದು, ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದರೂ ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಮೊಟೊರೊಲಾ ಸಂಸ್ಥೆಯ ಎಲ್ಲ ಪೇಟೆಂಟ್ಗಳು ಇಂದಿಗೂ ಗೂಗಲ್ ಕೈನಲ್ಲಿಯೇ ಇವೆ.
ಗೂಗಲ್ ಟಾಪ್-5 ಡೀಲ್
ಮೊಟೊರೊಲಾ ಮೊಬಿಲಿಟಿ
2011ರ ಆಗಸ್ಟ್ನಲ್ಲಿ ಗೂಗಲ್ ಕಂಪನಿಯು ಮೊಟೊರೊಲಾವನ್ನು ಖರೀದಿಸಿದ್ದು ಇಲ್ಲಿಯವರೆಗಿನ ಅತಿ ದೊಡ್ಡ ಡೀಲ್ ಆಗಿದೆ. ಮೊಟೊರೊಲಾ ಕಂಪನಿಯ ಹಾರ್ಡ್ವೇರ್ ಹಾಗೂ ಸಂಪೂರ್ಣ ಪೇಟೆಂಟ್ನ್ನು 12.50 ಬಿಲಿಯನ್ ಡಾಲರ್ಗೆ ಗೂಗಲ್ ಖರೀದಿಸಿತ್ತು. ಆದರೆ ಸತತ 4 ತ್ರೈ ಮಾಸಿಕದ ಬಳಿಕವೂ ಲಾಭವನ್ನು ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಮೊಟೊರೊಲಾವನ್ನು ಚೀನಾದ ಲೆನೊವೊಗೆ 2.91 ಬಿಲಿಯನ್ ಡಾಲರ್ಗೆ ಮಾರಿತು. ಇದಕ್ಕೂ ಮುಂಚೆ ಮೊಟೊರೋಲಾ ಸೆಟ್ಟಾಪ್ ಬಾಕ್ಸ್ನ್ನು 2 ಬಿಲಿಯನ್ ಡಾಲರ್ಗೆ ಮಾರಿತ್ತು. ಮೇಲ್ನೋಟಕ್ಕೆ ಸುಮಾರು ಏಳೂವರೆ ಬಿಲಿಯನ್ ಡಾಲರ್ನಷ್ಟು ನಷ್ಟವನ್ನು ಗೂಗಲ್ ಅನುಭವಿಸಿದೆ ಎಂದು ಲೆಕ್ಕಕ್ಕೆ ಸಿಕ್ಕರೂ, ಕಂಪನಿ ಹೇಳುವ ಪ್ರಕಾರ ಮೊಟೊರೊಲಾದ ಪ್ರಮುಖ ಪೇಟೆಂಟ್ಗಳು ಗೂಗಲ್ ಕೈನಲ್ಲಿರುವುದರಿಂದ ಇದು ದೊಡ್ಡ ನಷ್ಟವಲ್ಲ ಹಾಗೂ ಈ ಪೇಟೆಂಟ್ಗಳಿಗಾಗಿಯೇ ಮೊಟೊರೊಲಾವನ್ನು ಗೂಗಲ್ ಖರೀದಿಸಿತ್ತು.
ನೆಸ್ಟ್
ವಾಟ್ಸ್ಆ್ಯಪ್ ಖರೀದಿಗೆ ಮುಂಚೆ ಈ ವರ್ಷ ಮೊದಲು ಹವಾ ಸೃಷ್ಟಿಸಿದ್ದು ನೆಸ್ಟ್ ಕಂಪನಿಯನ್ನು ಗೂಗಲ್ ಖರೀದಿಸಿದಾಗ. ಗೃಹರಕ್ಷಕ ತಂತ್ರಜ್ಞಾನದಲ್ಲಿ ಖ್ಯಾತವಾಗಿರುವ ನೆಸ್ಟ್ ಕಂಪನಿಯನ್ನು ಮೊನ್ನೆ ಜನವರಿಯಲ್ಲಿ 3.2 ಬಿಲಿಯನ್ ಡಾಲರ್ ನೀಡಿ ಗೂಗಲ್ ಖರೀದಿಸಿತು. ಇಷ್ಟೊಂದು ದೊಡ್ಡ ಪ್ರಮಾಣ ಹಣ ನೀಡಿ ಖರೀದಿಸಲು ಗೂಗಲ್ ಎರಡು ಕಾರಣ ನೀಡಿತ್ತು. ಮೊದಲನೆಯದಾಗಿ ನೆಸ್ಟ್ನಲ್ಲಿರುವ ಡಾಟಾ ಹಾಗೂ ಅದರ ಪೇಟೆಂಟ್ ಆಧಾರಿತ ತಂತ್ರಜ್ಞಾನ. ಎರಡನೆಯದಾಗಿ, 2018ರ ವೇಳೆಗೆ ಹೋಮ್ ಅಟೋಮೇಷನ್ ಮಾರುಕಟ್ಟೆಯ ಗಾತ್ರ 48 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದೆ. ಈ ನೆಸ್ಟ್ ತಂತ್ರಜ್ಞಾನದಿಂದ ಮನೆಯಿಂದ ಹೊರಗಿದ್ದೇ ಮನೆಯಲ್ಲಿನ ತಾಪಮಾನ ಸೇರಿದಂತೆ ಇತರ ಅಂಶಗಳನ್ನು ನಿಯಂತ್ರಿಸಬಹುದು ಹಾಗೂ ಬೆಂಕಿ ಹಾಗೂ ಇತರ ಅವಘಡಗಳ ಮುನ್ಸೂಚನೆಯನ್ನು ಇದು ನೀಡುತ್ತದೆ.
ಡಬಲ್ಕ್ಲಿಕ್
ಖ್ಯಾತ ಆನ್ಲೈನ್ ಜಾಹೀರಾತು ಪ್ರಕಾಶಕ ಸಂಸ್ಥೆಯಾಗಿರುವ ಡಬಲ್ಕ್ಲಿಕ್ ಅನ್ನು 2007ರಲ್ಲಿ 3.1 ಬಿಲಿಯನ್ ಡಾಲರ್ ನೀಡಿ ಗೂಗಲ್ ಖರೀದಿಸಿತ್ತು. ಕಳೆದ 5 ತ್ರೈಮಾಸಿಕದಲ್ಲಿ ಒಟ್ಟು 15 ಬಿಲಿಯನ್ ಡಾಲರ್ ಆದಾಯವನ್ನು ಈ ಸಂಸ್ಥೆ ಗೂಗಲ್ ನೀಡುತ್ತಿದೆ.
ಯೂಟ್ಯೂಬ್
ಗೂಗಲ್ನ ಅತಿ ಪ್ರಮುಖ ಹಾಗೂ ಖ್ಯಾತ ವಿಡಿಯೋ ಬ್ರೌಸರ್ ಆಗಿರುವ ಯೂಟ್ಯೂಬ್ನ್ನು 2006ರಲ್ಲಿ 1.65 ಬಿಲಿಯನ್ ಡಾಲರ್ಗೆ ಖರೀದಿಸಲಾಗಿತ್ತು. ಅಮೆರಿಕದ ಮೂವರು ಎಂಜಿನಿಯರ್ಗಳು 2005ರಲ್ಲಿ ಪ್ರಾರಂಭಿಸಿದ್ದ ಈ ಸಂಸ್ಥೆಯನ್ನು ಗೂಗಲ್ ಒಂದೇ ವರ್ಷದ ಬಳಿಕ ಖರೀದಿಸಿತು. ಆ ಭೂಪರಿಗೆ ಒಂದು ವರ್ಷದಲ್ಲಿ ಕನಸಿನಲ್ಲಿಯೂ ಲೆಕ್ಕಿಸದಷ್ಟು ಹಣ ದೊರೆಯಿತು.
ವೇಝ್
ವಿಶ್ವದ ಅತಿ ದೊಡ್ಡ ನೇವಿಗೇಷನ್ ಅಪ್ಲಿಕೇಷನ್ ಇದಾಗಿದೆ. ಗೂಗಲ್ ಪ್ಲೇ ಹಾಗೂ ಆ್ಯಪ್ ಸ್ಟೋರ್ನಲ್ಲಿ ಇದು ಲಭ್ಯವಿದ್ದು, ಆಡಿಯೋ ಟ್ರಾಫಿಕ್ ಗೈಡ್ನ್ನು ಇದು ನೀಡುತ್ತದೆ. ಇದರ ಜತೆಗೆ ವೈಸ್ ಕಮಾಂಡಿಂಗ್ ಆಪ್ಶನ್ ಹೊಂದಿದೆ. ಇತ್ತೀಚೆಗೆ ಆ್ಯಂಡ್ರಾಯ್ಡ್ 4.3ನೇ ಮಾದರಿಯಲ್ಲಿ ದೊರೆತಿರುವ ಗೂಗಲ್ ನೌ ತಂತ್ರಜ್ಞಾನವನ್ನು ಇದೇ ವೇಝ್ನಿಂದ ಪಡೆದ ವಾಯ್ಸ್ ಕಮಾಂಡಿಂಗ್ ತಂತ್ರಜ್ಞಾನ ಬಳಸಲಾಗಿದೆ.
-ರಾಜೀವ ಹೆಗಡೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.