ಸ್ವಾಧೀನ ಕಥಾ
ಫೇಸ್ಬುಕ್ ಸಂಸ್ಥೆ ವಾಟ್ಸ್ಆ್ಯಪ್ ಖರೀದಿಸಿತು. ಇದು ಸದ್ಯದ ಸಾಫ್ಟ್ವೇರ್ ಲೋಕದ ದೊಡ್ಡ ಸುದ್ದಿ. ದೊಡ್ಡ ಡೀಲ್ ಕೂಡ ಹೌದು. ಒಂದು ಕಂಪನಿಯನ್ನು ಇನ್ನೊಂದು ದೊಡ್ಡ ಕಂಪನಿ ಖರೀದಿಸುವುದು ಹೊಸದೇನಲ್ಲ. ಆದರೆ ವಾಟ್ಸ್ಆ್ಯಪ್ ಮಾರಾಟವಾದ ದರವಿದೆಯಲ್ಲ, ಅದು ಜನರನ್ನು ಬೆಚ್ಚಿಬೀಳಿಸಿದೆ. 19 ಶತಕೋಟಿ ಡಾಲರ್ ಎಂದರೆ 100ರ ನೋಟಿನಲ್ಲಿ ಪೇರಿಸಿಟ್ಟರೆ, 500ರ ನೋಟಿನಲ್ಲಿ ಪೇರಿಸಿಟ್ಟರೆ ಎಷ್ಟಾಗಬಹುದು? ಎಂದೆಲ್ಲ ಜನ ಕಲ್ಪಿಸಿಕೊಳ್ಳಲಾರಂಭಿಸಿದ್ದಾರೆ.
ಫೇಸ್ಬುಕ್- ವಾಟ್ಸ್ಆ್ಯಪ್ ಡೀಲ್ನ ಹಿನ್ನೆಲೆಯಲ್ಲಿ ವಿಶ್ವದ ಇಂತಹ ದೊಡ್ಡ ಡೀಲ್ಗಳನ್ನು ಅಥವಾ ಖರೀದಿಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.
ಅಮೆರಿಕದ ಕಂಪ್ಯೂಟರ್ ಕಂಪನಿ ಹೆವ್ಲೆಟ್- ಪೆಕಾರ್ಡ್ (ಎಚ್ಪಿ) ಕಂಪನಿ ಕಾಂಪ್ಯಾಕ್ ಕಂಪ್ಯೂಟರ್ ಸಂಸ್ಥೆಯನ್ನು 25 ಬಿಲಿಯನ್ ಡಾಲರ್ಗೆ ಖರೀದಿಸಿತ್ತು. ಐಬಿಎಂ ಕಂಪನಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ಈ ಖರೀದಿ ನಡೆದಿತ್ತು.
ಇಂದು ಸ್ವತಃ ಸಂಕಷ್ಟದಲ್ಲಿರುವ ಎಚ್ಪಿ ಕಂಪನಿ ಕಾಂಪ್ಯಾಕ್ ಜತೆಗೆ ಇನ್ನೊಂದು ದೊಡ್ಡ ಖರೀದಿಯಲ್ಲಿ ಭಾಗಿಯಾಗಿತ್ತು ಎಂಬುದು ಕೊಂಚ ಅಚ್ಚರಿಯ ಸಂಗತಿ. ಸಾಫ್ಟ್ವೇರ್ ಕಂಪನಿಯಾಗಿದ್ದ ಅಟೊನೊಮಿಯನ್ನು ಎಚ್ಪಿ 10,24 ಬಿಲಿಯನ್ ಡಾಲರ್ಗಳಿಗೆ ಖರೀದಿಮಾಡಿತ್ತು.
ವೀಡಿಯೋ ಚಾಟ್ನಲ್ಲಿ ಸ್ಕೈಪ್ ಅತ್ಯಂತ ಪ್ರಸಿದ್ಧವಾಗಿತ್ತು. ಅದನ್ನು ಮೈಕ್ರೋಸಾಫ್ಟ್ ಕಂಪನಿ 8.5 ಬಿಲಿಯನ್ ಡಾಲರ್ಗೆ ಖರೀದಿ ಮಾಡಿತು. ಇದು ಮೈಕ್ರೋಸಾಫ್ಟ್ ಕಂಪನಿಯ ದೊಡ್ಡ ಖರೀದಿಯಾಗಿತ್ತು.
ಅಮೆರಿಕದ ಸಾಫ್ಟ್ವೇರ್ ಕಂಪನಿ ಒರಾಕಲ್, ಉದ್ಯಮದಲ್ಲಿ ಮೇಲೇಳಲಾಗದೇ ಹೆಣಗುತ್ತಿದ್ದ ಸನ್ ಮೈಕ್ರೋಸಾಫ್ಟ್ ಸಂಸ್ಥೆಯನ್ನು 7.4 ಬಿಲಿಯನ್ ಡಾಲರ್ಗೆ ಖರೀದಿ ಮಾಡಿತ್ತು.
ಸಾಫ್ಟ್ವೇರ್ ಕ್ಷೇತ್ರದಲ್ಲಿ ದಿಗ್ಗಜನಾಗಿದ್ದ ಮೈಕ್ರೋಸಾಫ್ಟ್ ಕಂಪನಿ, ಒಂದು ಕಾಲದಲ್ಲಿ ಮೊಬೈಲ್ ಕ್ಷೇತ್ರದಲ್ಲಿ ದಿಗ್ಗಜ ಎನಿಸಿಕೊಂಡಿದ್ದ ನೋಕಿಯಾ ಕಂಪನಿಯನ್ನು ಖರೀದಿಸಿದ್ದು ಕೂಡ ಜಗತ್ತಿನ ದೊಡ್ಡ ಖರೀದಿಗಳಲ್ಲಿ ಒಂದು. ಈ ಖರೀದಿಯ ಮೊತ್ತ 7.2 ಬಿಲಿಯನ್ ಡಾಲರ್.
ಆನ್ಲೈನ್ ಮಾರುಕಟ್ಟೆಯಲ್ಲಿ ಇಬೇ ಹೆಸರು ಕೇಳಿರುತ್ತೀರಿ. ಇಬೇನಲ್ಲಿ ಖರೀದಿ ಮಾಡಿದ್ದರೆ ಪೇಪಲ್ ಹೆಸರನ್ನೂ ನೋಡಿರುತ್ತೀರಿ. ಆದರೆ ಪೇಪಲ್ ಸಂಸ್ಥೆಯನ್ನು ಇಬೇ ಕಂಪನಿ 1.5 ಬಿಲಿಯನ್ಗೆ ಖರೀದಿ ಮಾಡಿದೆ ಎಂಬುದು ಮಾತ್ರ ನಮಗೆ ಗೊತ್ತಿಲ್ಲ.
ಟಂಬ್ಲರ್ ಎಂಬುದು ಬ್ಲಾಗಿಂಗ್ ವೇದಿಕೆಯ ಸಾಫ್ಟ್ವೇರ್ ಕಂಪನಿಯನ್ನು ಯಾಹೂ ಕಂಪನಿ 1.1 ಬಿಲಿಯನ್ ಡಾಲರ್ಗೆ ಖರೀದಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.