ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮರಳು ಮರಳು ಚಾರುಲತೆ

ಚಾರುಲತಾ ಬೆಂಗಳೂರಿಗೆ ಮರಳಿ ಬಂದಿದ್ದಾರೆ. ಅವರು ಮರಳಿ ಬರುತ್ತಿರುವುದು ಇದು ಎರಡನೇ ಬಾರಿ. ಆದರೆ ಈ ಬಾರಿಯ ...

Vishwanath S
Updated On : 26 Feb 2014, 2:12 am

ಚಾರುಲತಾ ಬೆಂಗಳೂರಿಗೆ ಮರಳಿ ಬಂದಿದ್ದಾರೆ. ಅವರು ಮರಳಿ ಬರುತ್ತಿರುವುದು ಇದು ಎರಡನೇ ಬಾರಿ. ಆದರೆ ಈ ಬಾರಿಯ ಪುನರಾಗಮನದಲ್ಲಿ ಒಂದು ವಿಶೇಷವಿದೆ. ಅವರು ಕಾಣಿಸಿಕೊಳ್ಳುತ್ತಿರುವುದು ಕಿರಿತೆರೆಯ ಮೇಲೆ. ಸುವರ್ಣ ವಾಹಿನಿಯಲ್ಲಿ ಇದೇ ಸೋಮವಾರದಿಂದ ಶುರುವಾಗಿರುವ ಕಾರಂಜಿ ಎಂಬ ನೂತನ ಧಾರಾವಾಹಿಯಲ್ಲಿ ಅತಿ ಮುಖ್ಯ ಪಾತ್ರವೊಂದನ್ನು ಒಪ್ಪಿಕೊಂಡಿರುವ ಚಾರುಲತಾ ತವರುಮನೆಗೆ ಬಂದಂತೆ ಖುಷಿ ಅನುಭವಿಸುತ್ತಿದ್ದಾರೆ.

ಇಷ್ಟು ದಿನ ಎಲ್ಲಿ ಕಾಣೆಯಾಗಿ ಹೋಗಿದ್ದಿರಿ?
ಕಾಣೆಯಾಗಿ ಹೋಗಿಲ್ಲ. ದಿಲ್ಲಿಯಲ್ಲಿ ಅಮ್ಮನ ಜೊತೆ ಇದೀನಿ. ಅಲ್ಲಿ ಜಾಹೀರಾತುಗಳು, ಮಾಡೆಲಿಂಗ್ ಅಂತ ಸ್ವಲ್ಪ ಬ್ಯುಸಿಯಾಗಿದೀನಿ ಅಷ್ಟೇ.

ಇಲ್ಲಿ ಕೈ ತುಂಬಾ ಸಿನಿಮಾಗಳಿದ್ದಾಗಲೇ ದಿಲ್ಲಿಗೆ ಹೋಗಿ ಸೆಟ್ಲ್ ಆಗಿದ್ಯಾಕೆ?
ಹೌದು ಒಳ್ಳೆ ಆಫರ್‌ಗಳಿದ್ದವು. ಅದ್ಯಾವುದೋ ಗ್ಯಾಪಲ್ಲಿ ನನ್ನ ಮದುವೆ ಆಗಿ ಹೋಯ್ತು, ನಾನು ವಿದೇಶಕ್ಕೆ ಹಾರಿಬಿಟ್ಟೆ, ಇನ್ಮೇಲೆ ಸಿನಿಮಾ ಮಾಡೋಲ್ಲ ಅಂತೆಲ್ಲ ಗುಸುಗುಸುಗಳು ಹುಟ್ಟಿ ಹೀಗಾಯ್ತು ಅಷ್ಟೇ.

ಓಹ್ ಇನ್ನೂ ಮದುವೆ ಆಗಿಲ್ವಾ?
ಇಲ್ಲ. ಮನೆಯಲ್ಲಿ ನೋಡ್ತಾ ಇದಾರೆ. ಸದ್ಯದಲ್ಲಿ ಆಗೋ ಯೋಜನೆ ಇದೆ.
ವ್ಯಾಲೆಂಟೈನ್ಸ್ ಡೇ ದಿನ ಶೂಟಿಂಗ್ ಇತ್ತಂತೆ. ಅವತ್ತಿನ ಪ್ಲಾನ್ಸ್‌ಗೆ ತೊಂದರೆ ಆಗಲಿಲ್ವಾ?
(ನಕ್ಕು) ಇಲ್ಲ ಇಲ್ಲ. ನನಗೆ ಕೆಲಸಾನೇ ಮೊದಲ ಲವ್. ಮದುವೆ ಅಮ್ಮ ಅಪ್ಪನ ಇಚ್ಛೆಯಂತೆ.

ನಿಮ್ಮ ಮೊದಲ ಹೆಸರು ಕುಕೂಸಿಂಗ್ ಅಂತ ನೆನಪು. ನೀವು ಕೇರಳದವ್ರೋ, ಉತ್ತರಭಾರತದವ್ರೋ?
ಹೌದು, ಅದು ನನ್ನ ಮೊದಲ ಹೆಸರು. ವಿ.ಮನೋಹರ್, ಚಾರುಲತ ಅಂತ ನಾಮಕರಣ ಮಾಡಿದ್ದು. ಆಗ ನಾ ಕೇರಳದಲ್ಲಿ ಇದ್ದಿದ್ದು ಹೌದು. ಆದರೆ ನಾನು ಪಂಜಾಬಿ. ಕೇರಳದಲ್ಲಿ ಇದ್ದು ಮಲಯಾಳಂ ಸ್ವಲ್ಪ ಕಲಿತಿದ್ದೇನೆ.

ಕಳೆದ ವರ್ಷ ಒಂದು ಚಿತ್ರದಲ್ಲಿ ಅಭಿನಯಿಸಿದ್ರಿ ಅಲ್ವಾ?
ಹೌದು. ಸಾಯಿಪ್ರಕಾಶ್ ನಿರ್ದೇಶನದಲ್ಲಿ ಕಲಿಗಾಲ ಚಿತ್ರದಲ್ಲಿ ನಟಿಸಿದೆ.

ಈ ನಡುವೆ ಬೇರೆ ಭಾಷೆಯಲ್ಲೇನಾದ್ರೂ ಬ್ಯುಸಿ ಆಗಿದ್ರಾ?
ಕನ್ನಡದಲ್ಲಿ ಅವಕಾಶ ದೊರಕಿದಷ್ಟು ಬೇರೆಲ್ಲೂ ಸಿಗಲೂ ಇಲ್ಲ, ನಾನು ಹುಡುಕಿಕೊಂಡು ಹೋಗಲೂ ಇಲ್ಲ. ಆದರೂ ಒರಿಯಾ, ತಮಿಳು ಹೀಗೆ ಸುಮಾರು ಚಿತ್ರದಲ್ಲಿ ನಟಿಸಿದೆ. ಕನ್ನಡದಲ್ಲಿ ಒಟ್ಟು ಎಪ್ಪತ್ತು ಚಿತ್ರಗಳಾಗಿವೆ.

ಅದ್ಯಾಕೆ ಧಾರಾವಾಹಿ ಮಾಡೋ ನಿರ್ಧಾರ?
ನಾನು ಕಿರುತೆರೆ ಗಮನಿಸ್ತಾ ಇದೀನಿ. ಇದು ಸಿನಿಮಾದಷ್ಟೇ ದೊಡ್ಡ ಇಂಡಸ್ಟ್ರಿ ಆಗಿ ಬೆಳೆದಿದೆ. ಸಿನಿಮಾಗಿಂತ ಹೆಚ್ಚಿನ ವೀಕ್ಷಕರು ಕಿರುತೆರೆಗೆ ಇದ್ದಾರೆ. ಒಳ್ಳೆ ಪಾತ್ರ ಸಿಕ್ಕರೆ ಯಾಕೆ ಅಭಿನಯಿಸಬಾರದು ಅಂತ ಯೋಚಿಸಿದ್ದೆ. ಕಳೆದ ವರ್ಷ ಒಂದು ರಿಯಾಲಿಟಿ ಶೋಗೆ ಜಡ್ಜ್ ಆಗಿ ಭಾಗವಹಿಸಿದ್ದೆ ಕೂಡ.

ಆದರೂ ಕಿರುತೆರೆ ಅಂದ್ರೆ ಒಂಥರಾ ಹಿಂಬಡ್ತಿ ಇದ್ದ ಹಾಗೆ ಅಲ್ವ?
ಇಲ್ಲ. ಇಲ್ಲಿಯೂ ನಾನು ಗ್ಲಾಮರಸ್ ಆಗಿ ಕಾಣಿಸಿಕೊಳ್ತೀನಿ. ಸುವರ್ಣ ಟಿವಿ ಧಾರಾವಾಹಿಗಳು ಯಾವತ್ತಿಗೂ ಯಾವ ಸಿನಿಮಾಗೂ ಕಮ್ಮಿ ಇಲ್ಲದಂತೆ ನಿರ್ಮಾಣ ಆಗುತ್ತಿವೆ. ಇದೆಲ್ಲದರ ಜೊತೆಗೆ ನಿರ್ದೇಶಕ ಎ.ಜಿ.ಶೇಷಾದ್ರಿ ಅವರ ಬಗ್ಗೆ ತುಂಬಾ ಕೇಳಿದ್ದೇನೆ. ಅವರೊಬ್ಬ ಯಶಸ್ವಿ ಹಾಗೂ ಅನುಭವಿ ನಿರ್ದೇಶಕ. ಅವರ ಧಾರಾವಾಹಿ ನನಗೆ ಖಂಡಿತ ಒಳ್ಳೆ ಹೆಸರು ತಂದುಕೊಡುತ್ತದೆ ಅನ್ನೋ ನಂಬಿಕೆ ಇದೆ.

ಹಾಗಾದ್ರೆ ಇನ್ನು ಮುಂದೆ ನೀವು ಕಿರುತೆರೆಗೆ ಸೀಮಿತವಾ?
ಚಿತ್ರಗಳಲ್ಲಿ ಆಫರ್ ಬಂದರೆ ಅದರಲ್ಲೂ ನಟಿಸಲು ಸಿದ್ಧ. ಆದರೆ ಸ್ವಲ್ಪ ಚೂಸಿ ಆಗಿದ್ದೇನೆ. ಬೆಂಗಳೂರಿಗೆ ಬಂದದ್ದು ಗೊತ್ತಾದ ಕೂಡಲೇ ಒಂದಷ್ಟು ಆಫರ್ ಬಂದವು. ಒಳ್ಳೆ ಪಾತ್ರ ಹಾಗೂ ಕಥೆ ಇಲ್ಲದ ಕಾರಣ ನಿರಾಕರಿಸಿದೆ.

ಧಾರಾವಾಹಿ ಅಭಿನಯ ಹೇಗನಿಸುತ್ತಿದೆ?
ಒಳ್ಳೆಯ ಕಥೆ, ನಿರ್ದೇಶನ ಹಾಗೂ ಸಂಭಾಷಣೆ ಇದೆ. ಸಿನಿಮಾದಲ್ಲಿ ನನಗೆ ಕಂಠದಾನ ಮಾಡುತ್ತಿದ್ದರು. ಶೂಟಿಂಗ್‌ನಲ್ಲಿ ಸಂಭಾಷಣೆಯನ್ನು ಪ್ರಾಂಪ್ಟ್ ಮಾಡುತ್ತಿದ್ದರು. ಆದರೆ ಇಲ್ಲಿ ಹಾಗಲ್ಲ. ನಾನೇ ಮಾತನಾಡಬೇಕು. ಉದ್ದುದ್ದ ಸಂಭಾಷಣೆಯನ್ನು ಬಾಯಿಪಾಠ ಮಾಡಿ ನೆನಪಲ್ಲಿಟ್ಕೊಂಡು ಅಭಿನಯಿಸಬೇಕು. ಆದರೆ ಅದನ್ನು ಛಾಲೆಂಜ್ ಎಂಬಂತೆ ಸ್ವೀಕರಿಸಿ ಮಾಡುತ್ತಿದ್ದೇನೆ. ನನ್ನ ಕನ್ನಡ ಇನ್ನಷ್ಟು ಇಂಪ್ರೂವ್ ಆಗುತ್ತಿದೆ.

ಕನ್ನಡದಲ್ಲಿ ನಿಮ್ಮ ಫೇವರಿಟ್ ನಟ ಯಾರು?
ನಾನು ಅತಿಯಾಗಿ ಗೌರವಿಸುವ ಹಾಗೂ ಇಷ್ಟಪಡುವ ನಟ ಶಿವರಾಜ್‌ಕುಮಾರ್. ಅವರ ಸರಳತೆ ಹಾಗೂ ಒಳ್ಳೆಯತನಕ್ಕೆ ಅವರೇ ಸಾಟಿ. ಸೆಟ್‌ನಲ್ಲಿ ಅವರ ಎನರ್ಜಿ ನೋಡುತ್ತಿದ್ದರೆ ನಮ್ಮಲ್ಲಿ ಸ್ಫೂರ್ತಿ ಹೆಚ್ಚುತ್ತದೆ.


-ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement