ಅಲೆಮಾರಿ ಜೀವನಕ್ಕೆ ತೆರೆ ಬಿತ್ತು
ಆದರೆ ಕೆಳದಿ ಮಠದ ಸ್ವಾಮಿ ಲಕ್ಷ್ಮೀನಾರಾಯಣಪ್ಪನವರ ಮೊರೆ ಹೊಕ್ಕರು. ಲಕ್ಷ್ಮೀನಾರಾಯಣಪ್ಪನವರು ನಿಮ್ಮನ್ನು ಉಳಿಸುವುದಾಗಿ ಅವರಿಗೆ ಭರವಸೆಯನ್ನೂ ಕೊಟ್ಟರು. ಇದರಿಂದ ಸಾಗರದ ವೀರಶೈವ ಮುಖಂಡರು ಆಕ್ರೋಶಗೊಂಡರು. ಆದರೆ ಲಕ್ಷ್ಮೀನಾರಾಯಣಪ್ಪನವರು ಜಗ್ಗಲಿಲ್ಲ. ಬೆಂಗಳೂರಿಗೆ ಬಂದು, ನನಗೆ ವಿಷಯ ತಿಳಿಸಿದರು. ಆಗ ನಾನು ನನಗೆ ಚೆನ್ನಾಗಿ ಪರಿಚಯವಿದ್ದ, ಸುಪ್ರಸಿದ್ಧ ವಕೀಲರಾದ ಎಚ್.ಬಿ. ದಾತಾರ ಅವರಿಗೆ ಪರಿಚಯಿಸಿದೆ. ಅವರು ಈ ಪ್ರಕರಣವನ್ನು ಚೆನ್ನಾಗಿ ಅಭ್ಯಾಸ ಮಾಡಿ, ಹೈಕೋರ್ಟಿನಲ್ಲಿ ಅರ್ಜಿ ಹಾಕಿ, ವಾದ ಮಾಡಿ ತಡೆಯಾಜ್ಞೆ ಪಡೆದರು. ಇದರಿಂದ ಸಾಗರದ ವೀರಶೈವ ಮುಖಂಡರಿಗೆ ಮತ್ತಷ್ಟು ಸಿಟ್ಟುಬಂದು, ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಕೆಲವು ವರ್ಷಗಳ ನಂತರ ಈ ಪ್ರಕರಣ ರಾಜಿಯಲ್ಲಿ ಮುಗಿಯಿತೆಂದು ಕೇಳಿದೆ.
ಮತ್ತೊಂದು ಪ್ರಕರಣ ಕಾಗೋಡು ಸತ್ಯಾಗ್ರಹ. ಕಾಗೋಡು ಸಹ ಸಾಗರದ ಬಳಿಯ ಒಂದು ಹಳ್ಳಿ. ಅಲ್ಲಿನ ಗೇಣಿದಾರರನ್ನು ಭೂಮಾಲೀಕರು ಶೋಷಿಸುತ್ತಿರುವರೆಂದೂ, ಇದರಿಂದ ಗೇಣಿದಾರರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆಯೆಂದೂ ಕೇಳಿದ್ದೆ. ಈ ಗೇಣಿದಾರರ ಮುಖಂಡರಾದ ಎಚ್.ಗಣಪತಿಯಪ್ಪನವರನ್ನು ನಾನು ಸಾಗರದಲ್ಲಿ ಕಂಡಾಗ, ಗೇಣಿದಾರರ ಗೋಳನ್ನು ವಿವರಿಸಿದರು. ಮುಂದೆ ಗಜೇಂದ್ರ ವಿಲಾಸ ಎಂಬ ಹೋಟೆಲಿನಲ್ಲಿ ಕುಳಿತು ಇಬ್ಬರೂ ಒಂದು ಗಂಟೆ ಮಾತನಾಡಿದೆವು. ಈ ಬಗ್ಗೆ ಸಂಜಯ ಪತ್ರಿಕೆಯಲ್ಲಿ ಮೂರು ಲೇಖನಗಳನ್ನು ಬರೆದು ಪ್ರಕಟಿಸಿದ್ದೆ. ಅವು ಭೂ ಮಾಲೀಕರ ಪರವಾಗಿ ಇವೆಯೆಂದು ಗೇಣಿದಾರರು, ಗೇಣಿದಾರರ ಪರವಾಗಿ ಇವೆಯೆಂದು ಭೂ ಮಾಲೀಕರೂ ಆರೋಪ - ಪ್ರತ್ಯಾರೋಪಗಳನ್ನು ಮಾಡಿದರು. ಆದರೆ ಇದರಿಂದ ನನಗೆ ಮತ್ತು ಸಂಜಯ ಪತ್ರಿಕೆಗೆ ಪ್ರಚಾರ ಮಾತ್ರ ಸಾಕಷ್ಟು ಸಿಕ್ಕಿತು.
ಅಂತೂ 1948 ರಿಂದ 1958 ರವರೆಗೆ ಸುಮಾರು ಹತ್ತು ವರ್ಷ ಕಾಲ ದಾವಣಗೆರೆಯಲ್ಲಿ ನಾನು ಹೆಸರಿಗೆ ಪತ್ರಕರ್ತನಾಗಿ ನಡೆಸಿದ ಅಲೆಮಾರಿ ಜೀವನವನ್ನು ನೆನೆಪಿಸಿಕೊಂಡಾಗ ಮನಸ್ಸು ಭಾರವಾಗುತ್ತದೆ. ತಲೆತುಂಬ ಅನೇಕ ವಿಚಾರಗಳು ತುಂಬಿಕೊಂಡು ನನ್ನನ್ನು ಚಿಂತಾಕ್ರಾಂತನನ್ನಾಗಿ ಮಾಡುತ್ತದೆ. ಈ ಅವಧಿಯಲ್ಲಿ ನಾನು ಗಳಿಸಿದ್ದೇನು, ಸಾಧಿಸಿದ್ದೇನು, ಕಳೆದುಕೊಂಡಿದ್ದು ಏನು, ಎಷ್ಟು ಎಂಬ ಪ್ರಶ್ನೆಗಳು ಹುಟ್ಟಿಕೊಂಡರೂ ಉತ್ತರಗಳು ಮಾತ್ರ ಸಿಗುವುದಿಲ್ಲ.
ಒಂದು ಮಾತು ಮಾತ್ರ ನಿಜ. ಈ ಅವಧಿಯಲ್ಲಿ ನಾನು ಹೆಚ್ಚು ಹಣ ಸಂಪಾದಿಸದೇ ಇರಬಹುದು. ಆದರೆ ಜನರನ್ನು ಮಾತ್ರ ಸಾಕಷ್ಟು ಸಂಪಾದಿಸಿದೆ. ಒಬ್ಬೊಬ್ಬರಿಂದ ಒಂದೊಂದು ಪಾಠ ಕಲಿತಿದ್ದೇನೆ. ಬಾಳ ಸಂಜೆಯಲ್ಲಿರುವಾಗ ಈ ಹಿನ್ನೋಟದಿಂದ ನನಗೆ ಎಷ್ಟೋ ಪ್ರಯೋಜನವಾಗಿದೆ.
ಮತ್ತೆ ಸಂಯುಕ್ತ ಕರ್ನಾಟಕಕ್ಕೆ..!
ಅಲೆಮಾರಿ ಜೀವನವನ್ನು ಸಾಕು ಮಾಡಿ, ಎಲ್ಲಿಯಾದರೂ, ಯಾವುದಾದರೂ ಒಂದು ನಿರ್ದಿಷ್ಟ ಕೆಲಸ ಹುಡುಕಲು ನನ್ನ ಪತ್ನಿ ಮೇಲಿಂದ ಮೇಲೆ ಹೇಳುತ್ತಿದ್ದಳು. ನನಗೂ ದಾವಣಗೆರೆಯ ಜೀವನ ಸಾಕಾಗಿತ್ತು. ಏನು ಮಾಡಲಿ ಎಂದು ಯೋಚಿಸುತ್ತಿದ್ದೆ.
ಅದೇ ಸಮಯದಲ್ಲಿ ದಾವಣಗೆರೆಯಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನ ನಡೆಯಿತು. ರಾಜ್ಯದ ಎಲ್ಲಾ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಬಂದಿದ್ದರು. ಹುಬ್ಬಳ್ಳಿಯಿಂದ ಡಾ. ನಾ.ಸು.ಹರಡೀಕರರೂ ಬಂದಿದ್ದರು. ಹುಬ್ಬಳ್ಳಿಯಲ್ಲಿದ್ದಾಗ ನಾನು ಅವರ ಶಿಷ್ಯನಾಗಿದ್ದೆ. ಅವರ ಸೇವಾ ದಳದಲ್ಲಿ ಒಬ್ಬ ಸ್ವಯಂ ಸೇವಕನಂತಿದ್ದೆ. ಅವರು ಕಟ್ಟಿದ ಅನೇಕ ಸಂಘ ಸಂಸ್ಥೆಗಳಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದೆ. ಆದ್ದರಿಂದ ದಾವಣಗೆರೆಗೆ ಬಂದಾಗ ಅವರನ್ನು ಕಂಡು ನನ್ನ ಪರಿಸ್ಥಿತಿಯನ್ನು, ತೊಂದರೆಗಳನ್ನು ಹೇಳಿಕೊಂಡೆ. ಆಗ ಅವರು ತಮ್ಮ ಮಿತ್ರರಾದ ಡಾ. ಕೇಸ್ಕರ್ ಅವರಿಗೆ ಪತ್ರ ಬರೆದು ನನಗೆ ನೌಕರಿ ಕೊಡಿಸುವುದಾಗಿ ಭರವಸೆ ಕೊಟ್ಟರು. ಡಾ. ಕೇಸ್ಕರ್ ಅವರು ಆಗ ನೆಹರು ಮಂತ್ರಿ ಮಂಡಲದಲ್ಲಿ ವಾರ್ತಾ ಸಚಿವರಾಗಿದ್ದರು. ಡಾ. ಹರಡೀಕರರ ಮಾತನ್ನು ಅಲಕ್ಷಿಸುವವರಲ್ಲ. ನೌಕರಿ ಸಿಗುವುದು ಖಂಡಿತ ಎಂಬ ವಿಶ್ವಾಸ ನನ್ನಲ್ಲಿ ಮೂಡಿತು. ಮುಂದೆ ಕೆಲವೇ ದಿನಗಳಲ್ಲಿ ನನ್ನನ್ನು ನಾಗಪುರದಲ್ಲಿ ಎ.ಪಿ.ಐ. ಸುದ್ದಿಗಾರರನ್ನಾಗಿ ನೇಮಕ ಮಾಡಿರುವ ಆದೇಶ ಪತ್ರವೂ ಬಂದಿತು.
ಅಷ್ಟರಲ್ಲಿ ಇನ್ನೊಂದು ಘಟನೆ ನಡೆಯಿತು. ದಿವಾಕರರು ಬಿಹಾರದ ರಾಜ್ಯಪಾಲರಾಗಿದ್ದರು. ಅವರು ಲೋಕ ಶಿಕ್ಷಣ ಟ್ರಸ್ಟಿನ ಏಕೈಕ ಧರ್ಮದರ್ಶಿಗಳಾಗಿದ್ದರು. ಹೊಸ ಕರ್ನಾಟಕ ರಾಜ್ಯ ಸ್ಥಾಪನೆಯಾದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕದ ಆವೃತ್ತಿಯನ್ನು ಪ್ರಾರಂಭಿಸಬೇಕೆಂಬ ಇಚ್ಛೆ ಅವರಿಗೆ ಬಲವಾಗಿತ್ತು. ಆದ್ದರಿಂದ 1956ನೇ ನವೆಂಬರ್ ಒಂದನೇ ತಾರೀಖು ಹೊಸ ಕರ್ನಾಟಕ ರಾಜ್ಯ ಸ್ಥಾಪನೆಯಾದ ನಂತರ, ಅವರು ಬೆಂಗಳೂರಿಗೆ ಬಂದು ರೆಸಿಡೆನ್ಸಿ ಎಂದು ಆಗ ಕರೆಯುತ್ತಿದ್ದ ರಾಜಭವನದಲ್ಲಿ ಇಳಿದುಕೊಂಡಿದ್ದರು. ಬೆಂಗಳೂರಿನಲ್ಲಿ ಪತ್ರಿಕೆ ಪ್ರಾರಂಭಿಸುವ ಬಗ್ಗೆ ಆಲೋಚನೆಯನ್ನು ಮಾಡಿದ್ದರು. ಆ ಬಗ್ಗೆ ತಮ್ಮ ಕೆಲವು ಸ್ನೇಹಿತರೊಡನೆ ಸಮಾಲೋಚನೆ ಮಾಡುತ್ತಿದ್ದರು. ಆಗ ಅವರಿಗೆ ನನ್ನ ನೆನಪಾಯಿತು. ತಮ್ಮ ಕಾರ್ಯದರ್ಶಿ ಆರ್. ಶ್ರೀನಿವಾಸರಾಯರ ಬಳಿ ನನ್ನ ವಿಳಾಸವನ್ನು ತಿಳಿದುಕೊಂಡು, ನನಗೆ ಬೆಂಗಳೂರಿಗೆ ಬಂದು ತಮ್ಮನ್ನು ನೋಡುವಂತೆ ಪತ್ರ ಬರೆದರು. ಅದೇ ರೀತಿ ನಾನು ಬೆಂಗಳೂರಿಗೆ ಬಂದು, ರೆಸಿಡೆನ್ಸಿಯಲ್ಲಿ ದಿವಾಕರರನ್ನು ಕಂಡೆ. ನನ್ನ ಯೋಗಕ್ಷೇವು ವಿಚಾರಿಸಿದರು. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕದ ಆವೃತ್ತಿ ಪ್ರಾರಂಭಿಸುವ ಬಗ್ಗೆ ಮಾತನಾಡಿ, 'ನೀನೇ ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳಬೇಕು' ಎಂದು ಹೇಳಿದರು ಮತ್ತು ಹುಬ್ಬಳ್ಳಿಗೆ ಹೋಗಿ ಮೊಹರೆಯವರನ್ನು ಕಂಡು ಆದೇಶ ಪತ್ರವನ್ನು ತೆಗೆದುಕೊಳ್ಳುವಂತೆ ತಿಳಿಸಿದರು.
ದಿವಾಕರರ ಆದೇಶದಂತೆ ಹುಬ್ಬಳ್ಳಿಗೆ ಹೋಗಿ ಮೊಹರೆಯವರನ್ನು ಕಂಡೆ. ಅವರೂ ನನ್ನನ್ನು ಸಂತೋಷದಿಂದ ಸ್ವಾಗತಿಸಿ ಬೆಂಗಳೂರಿನಲ್ಲಿ ನನ್ನನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರನಾಗಿ ನೇಮಿಸಿ ಆದೇಶ ಕೊಟ್ಟರು. ಮತ್ತು ಒಂದೆರಡು ತಿಂಗಳು ನನಗೆ ನೆರವಾಗಲು ಹುಬ್ಬಳ್ಳಿ ಸಂಪಾದಕೀಯ ವಿಭಾಗದ ಆರ್.ಬಿ. ಕುಲಕರ್ಣಿ (ರಾವ್ ಬಹದ್ದೂರ್) ಅವರನ್ನು ಕಳಿಸುವುದಾಗಿ ತಿಳಿಸಿದರು. ನಾನೂ ಒಪ್ಪಿದೆ. ತಿಂಗಳಿಗೆ 250 ರೂ. ಸಂಬಳ ಕೊಡುವುದಾಗಿ ಹೇಳಿದರು. ಆಗ ನನಗೆ ಮತ್ತು ನನಗಿಂತ ಹೆಚ್ಚಾಗಿ ನನ್ನ ಪತ್ನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಸಂಬಳದಲ್ಲಿ ಕನಿಷ್ಠ ಅರ್ಧದಷ್ಟಾದರೂ ಹೆಣ್ಣು ಮಕ್ಕಳ ಮದುವೆಗೆ ಮೀಸಲಾಗಿಡಬಹುದೆಂದು ಅವಳು ಅಂದಾಜು ಮಾಡಿದ್ದಳು.
ಮುಂದೆ ಕೆಲವೇ ದಿನಗಳಲ್ಲಿ ನಾವಿಬ್ಬರೂ ಬೆಂಗಳೂರಿಗೆ ಬಂದೆವು. ಕೆಂಪೇಗೌಡ ರಸ್ತೆಯಲ್ಲಿದ್ದ ರೇಷಂ ಮಹಲ್ ಕಟ್ಟಡದಲ್ಲಿ ಸಂಯುಕ್ತ ಕರ್ನಾಟಕ ಕಚೇರಿ ಇತ್ತು. ಅದು ಸಾಗರ್ ಟಾಕೀಸ್ ಎಂಬ ಚಿತ್ರಮಂದಿರದ ಎದುರಿಗೆ ಇತ್ತು. ಕೆ.ಪಿ.ರಾವ್ ಎಂಬುವರು ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ನಾವು ಬಂದ ಮೇಲೆ ಅವರು ಆಫೀಸಿಗೆ ಬರುವುದನ್ನೇ ನಿಲ್ಲಿಸಿದರು. ಮುಂದೆ ನಾವೇ ಕಚೇರಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಸುದ್ದಿಗಾರರಾಗಿ ಕೆಲಸ ಮಾಡಲಾರಂಭಿಸಿದೆವು.
ಹೊಸ ರಾಜ್ಯ ಸ್ಥಾಪನೆಯಾದ ನಂತರ ಕೆಲವೇ ತಿಂಗಳಲ್ಲಿ ವಿಧಾನಸಭೆಯ ಚುನಾವಣೆಗಳು ಪ್ರಾರಂಭವಾದವು. ಅದು ಅಭ್ಯರ್ಥಿಗಳನ್ನು ಆರಿಸುವ ಕಾಲ. ರಾಜ್ಯದ ನಾನಾ ಊರುಗಳಿಂದ ಸಾವಿರಾರು ಜನರು ಕಾಂಗ್ರೆಸ್ ಅಭ್ಯರ್ಥಿಗಳಾಗ ಬಯಸಿ ಬೆಂಗಳೂರಿಗೆ ಬರುತ್ತಿದ್ದರು. ಅವರಲ್ಲಿ ಹೆಚ್ಚು ಜನರು ಉತ್ತರ ಕರ್ನಾಟಕದವರಾದ್ದರಿಂದ ನನಗೆ ಅವರ ಪರಿಚಯ ಇತ್ತು. ಇದರಿಂದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೆಚ್ಚಿನ ವರದಿಗಳನ್ನು ತಿಳಿಸಲು ನನಗೆ ಸಾಧ್ಯವಾಯಿತು. ಇದರಿಂದ ಪತ್ರಿಕೆಯ ಪ್ರತಿಷ್ಠೆಯೂ ಹೆಚ್ಚಿತು.
(ಮುಂದುವರಿಯುವುದು)
-ಕೆ.ಶಾಮರಾವ್