ಹಣ್ಣು, ತರಕಾರಿಗಳನ್ನು ಏಕೆ ತಿನ್ನಬೇಕು?
ಹಣ್ಣು ಮತ್ತು ತರಕಾರಿಗಳನ್ನು ಜಾಸ್ತಿ ತಿಂದಷ್ಟೂ ಒಳ್ಳೆಯದು. ಅವು ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಕ್ಯಾನ್ಸರ್ ತಡೆಯಬಲ್ಲವು. ಅವುಗಳಲ್ಲಿ ಅಡಗಿರುವ 'ರಹಸ್ಯ ಶಕ್ತಿ' ಎಂದರೆ ಬೀಟಾ ಕೆರೋಟಿನ್. ಇದು ಕ್ಯಾನ್ಸರ್ ಬರದಂತೆ ತಡೆಯುವುದು ಮಾತ್ರವೇ ಅಲ್ಲ, ಕ್ಯಾನ್ಸರ್ ಬಂದಿದ್ದರೆ ಅದರ ವಿರುದ್ಧ ಸೆಣಸುವ ಶಕ್ತಿ ನೀಡಬಲ್ಲದು ಸಹ.
ಇತ್ತೀಚಿನ ಸಂಶೋಧನೆಗಳ ಪ್ರಕಾರ, ಗಡ್ಡೆಗಳನ್ನು ನಾಶಪಡಿಸುವ ಸಾಮರ್ಥ್ಯ ಬೀಟಾ ಕೆರೋಟಿನ್‌ನಲ್ಲಿ ಇದೆ. ಹಲವಾರು ರಾಸಾಯನಿಕ ಪ್ರಕ್ರಿಯೆಗಳನ್ನು ಇದು ಏಕಕಾಲದಲ್ಲಿ ನಿರ್ವಹಿಸಬಲ್ಲದು ಎನ್ನುವುದನ್ನೂ ಸಂಶೋಧಕರು ಕಂಡುಕೊಂಡಿದ್ದಾರೆ. ಗಡ್ಡೆಗಳನ್ನು ನಿರ್ಮೂಲನೆ ಮಾಡುವುದರ ಜತೆಯಲ್ಲಿಯೇ ಕ್ಯಾನ್ಸರ್‌ಕಾರಕ ಕೋಶಗಳನ್ನೇ ನಿರ್ನಾಮ ಮಾಡಬಲ್ಲದು. ಇದು ಬೀಟಾ ಕೆರೋಟಿನ್ ಕಾರ್ಯವೈಖರಿ ಕುರಿತಾದ ಸಣ್ಣ ಉದಾಹರಣೆಯಷ್ಟೆ. ಬೀಟಾ ಕೆರೋಟಿನ್ ಕುರಿತಾಗಿ ತಿಳಿದುಬಂದಿರುವ ಸಂಗತಿಗಳಲ್ಲಿ ಮಹತ್ವವಾದದ್ದು ಎಂದರೆ ಆಹಾರದ ಮೂಲಕ ಒಳಸೇರುವ ವಿಷಕಾರಿ ಅಂಶಗಳನ್ನು ಇದು ಶರೀರದಿಂದ ಹೊರದಬ್ಬುತ್ತದೆ ಎನ್ನುವುದು. ಕ್ಯಾನ್ಸರ್ ಗಡ್ಡೆಗಳು ಉಂಟಾದಾಗ ಅವುಗಳಲ್ಲಿನ ಕಾರ್ಸಿನೋಮಾ ಕೋಶಗಳನ್ನು ಹೊರ ತೆಗೆಯುವ ಮೂಲಕ ಕೀಮೋಥೆರಪಿ ಏಜೆಂಟ್ ರೀತಿಯಲ್ಲಿಯೂ ಬೀಟಾ ಕೆರೋಟಿನ್ ವ್ಯವಹರಿಸುತ್ತದೆ. ಶ್ವಾಸಕೋಶ ಕ್ಯಾನ್ಸರ್ ವಿರುದ್ಧ ಪಾರಾಗಲು ಹಣ್ಣು, ತರಕಾರಿಗಳೇ ರಾಮಬಾಣ.
ಚೀನಾದ ಡಾ.ಕ್ಸಿಯಾಂಗ್-ಡಾಂಗ್ ವಾಂಗ್ ಎನ್ನುವವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೀಟಾ ಕೆರೋಟಿನ್ ಶರೀರದಲ್ಲಿನ ಕೆಲವು ಪದಾರ್ಥಗಳನ್ನು ರೆಟೆನೊಯಿಕ್ ಆ್ಯಸಿಡ್ ಆಗಿ ಪರಿವರ್ತಿಸುತ್ತದೆ ಎನ್ನುವುದನ್ನು ಅವರು ಪತ್ತೆ ಮಾಡಿದ್ದಾರೆ. ಇನ್ನೂ ಸೋಜಿಗ ಎಂದರೆ ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ, ಬೊಜ್ಜು ಉಂಟಾಗುವ ಕಡೆಗಳಲ್ಲಿ ಸೇರಿಕೊಳ್ಳುವ ಬೀಟಾ ಕೆರೋಟಿನ್, ಅಗತ್ಯಕ್ಕೆ ಅನುಗುಣವಾಗಿ ರೆಟಿನೊಯಿಕ್ ಆ್ಯಸಿಡ್ ಅನ್ನು ಬಿಡುಗಡೆ ಮಾಡುತ್ತದೆಯಂತೆ. ಅಂದರೆ ನೀವು ಬೀಟಾ ಕೆರೋಟಿನ್ ಅನ್ನು ಸೇವಿಸಿದಾಗಲೆಲ್ಲ ಅದರಲ್ಲಿನ ಕೆಲವು ಅಂಶ ಶರೀರದಲ್ಲಿ ದಾಸ್ತಾನಾಗಿರುತ್ತದೆ! ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಅತ್ಯಂತ ಪ್ರಮುಖವಾದ ರಾಸಾಯನಿಕಗಳಲ್ಲಿ ಇದೂ ಒಂದು. ಅದರಲ್ಲಿಯೂ ರಕ್ತ ಮತ್ತು ಮೂತ್ರಕೋಶ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಈ ಆ್ಯಸಿಡ್ ಇಂದು ಅತ್ಯಗತ್ಯ ಎನ್ನುವಂತಾಗಿದೆ. ವಿಶೇಶವಾಗಿ ಕರುಳಿನ ಭಾಗದಲ್ಲಿ ಹಾದು ಹೋಗಿರುವ ರಕ್ತನಾಳಗಳಲ್ಲಿ ಅಲ್ಪಪ್ರಮಾಣದ ಬೀಟಾ ಕೆರೋಟಿನ್ ಸೇರಿದರೂ ಸಾಕು, ಅದರ ಪರಿಣಾಮ ದೊಡ್ಡದು ಎನ್ನುವುದು ಈಗ ಬೆಳಕಿಗೆ ಬಂದಿರುವ ಸಂಗತಿ ಏನಲ್ಲ.
ಹಣ್ಣು, ತರಕಾರಿಗಳನ್ನು ಅಧಿಕವಾಗಿ ಸೇವಿಸಬೇಕು ಎನ್ನುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಾ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com