ಕ್ಯಾನ್ಸರ್ಗೆ ಮದ್ದು ಇಡ್ಲಿ!
ನನಗೆ ಗೊತ್ತು, ನೀವಿದನ್ನು ಸುಲಭದಲ್ಲಿ ನಂಬಲಾರಿರಿ. ಒಂದು ತಿಂಗಳು ಇಡ್ಲಿ ತಿಂದರೆ ನಿಮಗೆ ಕ್ಯಾನ್ಸರ್ ಬರುವುದೇ ಇಲ್ಲ. ಕ್ಯಾನ್ಸರ್ನಿಂದ ಬಳಲುತ್ತಿರುವವರು ತಿಂದರೂ ಶೀಘ್ರ ಗುಣಮುಖರಾಗುವಿರಿ ಎಂದು ಹೇಳಿದರೆ ಯಾರು ತಾನೆ ನಂಬುತ್ತಾರೆ? ಆದರೆ ಕೇವಲ ಮೂರೇ ಮೂರು ತಿಂಗಳು. ಇಂಥ ಮಾಯಾವಿ ಶಕ್ತಿ ಇರುವ ಇಡ್ಲಿಯನ್ನು ನಾನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇನೆ!
ನ್ಯಾನೊ ತಂತ್ರಜ್ಞಾನದಿಂದ ಇದು ಸಾಧ್ಯವಾಗಲಿದೆ. ನಮ್ಮ ಮೈಯ್ಯಾಸ್ ಬೆವರೇಜಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಔಷಧೀಯ ಇಡ್ಲಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅಮೆರಿಕದಲ್ಲಿ ಕೆಲವರ್ಷ ಹಿಂದೆ ನಾನು ಆಹಾರೋದ್ಯಮದಲ್ಲಿ ನ್ಯಾನೊ ತಂತ್ರಜ್ಞಾನ ಕುರಿತು ಸಂಶೋಧನೆ ನಡೆಸುತ್ತಿದ್ದಾಗ ಚಿಗುರೊಡೆದ ಕನಸು ಇದು. ಅಫ್ಕೋರ್ಸ್, ಅಲ್ಲಿನ ಸಂಶೋಧಕ ಮಿತ್ರರ ಸಹಕಾರವೂ ಇದರ ಹಿಂದಿದೆ. ಅದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು. ಯಾವ್ಯಾವ ಕಾಯಿಲೆಗೆ ಎಂತೆಂಥ ತಿನಿಸು ಎನ್ನುವುದು ಬಹುತೇಕ ಅಖೈರಾಗಿದೆ. ಅಗತ್ಯ ಪ್ರಕ್ರಿಯೆಗಳನ್ನೂ ಪೂರೈಸಿಯಾಗಿದೆ. ಇನ್ನು ಬಾಕಿ ಇರುವುದು ಎಂದರೆ ಮಾರುಕಟ್ಟೆ ಮಟ್ಟದಲ್ಲಿ ಉತ್ಪನ್ನವನ್ನು ಸಿದ್ಧಪಡಿಸುವುದಷ್ಟೆ.
ಸ್ವಲ್ಪ ನಮ್ಮ, ಅಲ್ಲಲ್ಲ... ನಿಮ್ಮ ಅಡುಗೆ ಮನೆಗೆ ಹೋಗೋಣ. ಇಡ್ಲಿ ಹಿಟ್ಟು ರುಬ್ಬುವಾಗ ಮನೆ ಹೆಂಗಸರು ಏನು ಮಾಡುತ್ತಾರೆ? ಅದಕ್ಕೆ ಒಂಚೂರು ಎಣ್ಣೆ, ಒಂದು ಚಮಚ ಅರಿಶಿಣಪುಡಿ ಸೇರಿಸುತ್ತಾರೆ. ಇದರ ಹಿಂದಿನ ಕಾರಣವೇನಾದರೂ ನಿಮಗೆ ಗೊತ್ತಾ? 'ನಮ್ಮಮ್ಮ ಹೀಗೆಯೇ ಮಾಡುತ್ತಿದ್ದಳು. ನಾನೂ ಅದನ್ನು ಪಾಲಿಸುತ್ತಿದ್ದೇನೆ' ಎಂದು ಕೆಲವರು ಹೇಳಿಯಾರು. ಅಮ್ಮ ಹಾಗೆ ಮಾಡುವುದರ ಹಿಂದೆ ಉದ್ದೇಶವಿತ್ತು. ಬೇಳೆಗಳಲ್ಲಿ ಆಕ್ಸಿಡೆಂಡ್ಗಳು ತುಸು ಜಾಸ್ತಿ. ಅದೇ ಅರಿಶಿಣಪುಡಿ ಅಪ್ಪಟ ಆ್ಯಂಟಿಆಕ್ಸಿಡೆಂಟ್. ಉದ್ದಿನ ಬೇಳೆಯ ಆಕ್ಸಿಡೆಂಟ್ ಗುಣವನ್ನು ಕಡಿಮೆ ಮಾಡುತ್ತದೆ! ಎಂಥಾ ಜಾಣರಿದ್ದರು ನಮ್ಮ ಹಿರಿಯರು ಅಲ್ಲವೆ? ನಾವೀಗ ತಯಾರಿಸುತ್ತಿರುವ ಕ್ಯಾನ್ಸರ್ ನಿರೋಧಕ ಇಡ್ಲಿ, ಮುಂದೆ ಬರಲಿರುವ ಹೃದ್ರೋಗ ತಡೆಯುವ ಮತ್ತೊಂದು ತಿನಿಸು, ಮೂತ್ರಪಿಂಡ ಸಮಸ್ಯೆಗಳಿಗೆ ರಾಮಬಾಣವಾಗುವ ಇನ್ಯಾವುದೋ ತಿಂಡಿ... ಇಂಥ ರೋಗನಿರೋಧಕ, ಮದ್ದಿನ ತಿನಿಸುಗಳ ಹಿಂದೆ ಕೆಲಸ ಮಾಡಿರುವುದೂ ಇದೇ ತತ್ವ!
ಆ್ಯಂಟಿಆಕ್ಸಿಡೆಂಟ್ಗಳ ಗುಣ ಎಂದರೆ ನಮ್ಮ ದೇಹದಲ್ಲಿ ಪೂರ್ಣವಾಗಿ ಜೀರ್ಣವಾಗಲು 8-10 ತಾಸು ಬೇಕು. ಅಲ್ಲದೆ ಬಹುಬೇಗ ಶಕ್ತಿ ಕಳೆದುಕೊಳ್ಳುತ್ತವೆ. ನಾವೀಗ ಮಾಡಲು ಹೊರಟಿರುವುದು ಏನೆಂದರೆ ಐದಾರು ಬಗೆಯ ಆ್ಯಂಟಿಆಕ್ಸಿಡೆಂಟ್ಗಳನ್ನು ನ್ಯಾನೊ ತಂತ್ರಜ್ಞಾನದ ಮೂಲಕ ನ್ಯಾನೊ ಹಂತಕ್ಕೆ ಮಾರ್ಪಡಿಸುತ್ತೇವೆ. ಇದನ್ನು ಸೇವಿಸಿದ ಒಂದು ಗಂಟೆಯೊಳಗಾಗಿ ದೇಹ ಸೇರಿಕೊಳ್ಳುತ್ತದೆ. ಅದಕ್ಕಿಂತ ಮುಖ್ಯವಾಗಿ ಒಂದು ವರ್ಷದವರೆಗೂ ಈ ಆ್ಯಂಟಿಆಕ್ಸಿಡೆಂಟ್ಗಳು ತಮ್ಮ ಶಕ್ತಿ ಉಳಿಸಿಕೊಳ್ಳುತ್ತವೆ. ಒಂದು ತಿಂಗಳು ನಿರಂತರವಾಗಿ ಈ ಇಡ್ಲಿ ಸೇವಿಸಿದಿರಿ ಅಂತಾದರೆ ಕ್ಯಾನ್ಸರ್ನಿಂದ ನೀವು ಸಂಪೂರ್ಣ ಬಚಾವಾಗಬಲ್ಲಿರಿ. ಕ್ಯಾನ್ಸರ್ ನಿಮ್ಮ ಬಳಿ ಬರುವುದಿಲ್ಲ, ದುರದೃಷ್ಟವಶಾತ್ ಬಂದಿದ್ದರೂ ಜಾಸ್ತಿ ದಿನ ನಿಮ್ಮ ಬಳಿ ನಿಲ್ಲುವುದಿಲ್ಲ!
ಇದು ಎಂಥ ಕ್ರಾಂತಿ ಉಂಟುಮಾಡಬಲ್ಲದು ಎನ್ನುವುದನ್ನು ಊಹಿಸಿಕೊಳ್ಳಲು, ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಅಲ್ಲವೆ? ಈಗಿನ ದಿನಮಾನದಲ್ಲಿ ಔಷಧಗಳೇ ಆಹಾರಗಳಾಗಿವೆ. ಇನ್ನುಮುಂದೆ ನೋಡಿ, ನ್ಯಾನೊ ತಂತ್ರಜ್ಞಾನದ ಫಲವಾಗಿ ಆಹಾರವೇ ಔಷಧವಾಗುತ್ತದೆ. ಒಂದರ್ಥದಲ್ಲಿ ಮತ್ತೆ ನಮ್ಮ ಹಿರೀಕರ ನಿಲುವಿಗೆ ಮರಳುತ್ತಿದ್ದೇವೆ.
ಸಂಶೋಧನೆಯೇ ಜೀವಾಳ
ನಿಮಗೆ ಗೊತ್ತಿರಬಹುದು, ನಾನು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಸಂಗತಿ ಎಂದರೆ ಆಹಾರವೂ ಒಂದು ವಿಜ್ಞಾನ ಎನ್ನುವುದು. ಹೇಗೆ ವಿಜ್ಞಾನದ ಬೇರೆ ವಿಭಾಗಗಳಲ್ಲಿ ಸಂಶೋಧನೆ ನಿರಂತರವೋ, ಆಹಾರ ವಿಜ್ಞಾನದಲ್ಲಿಯೂ ಹಾಗೆಯೇ. ಅದರಲ್ಲೂ ಆಹಾರೋದ್ಯಮದಲ್ಲಿ ಇರುವವರು ಆಹಾರ ಉತ್ಪನ್ನವೊಂದರ ತಯಾರಿಕೆ ಮತ್ತು ಮಾರಾಟದ ಬಗ್ಗೆ ಮಾತ್ರ ಗಮನ ನೀಡಿದರೆ ಸಾಲದು. ಆಹಾರ ವಿಜ್ಞಾನ, ಆಹಾರೋದ್ಯಮಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಬಗ್ಗೆ ಸದಾ ಅಪ್ಡೇಟ್ ಆಗುತ್ತಿರಬೇಕು. ಮುಖ್ಯವಾಗಿ ಆತ ಒಬ್ಬ ಒಳ್ಳೆಯ ಬಾಣಸಿಗ, ಎಂಜಿನಿಯರ್ ಮತ್ತು ತಾಂತ್ರಿಕವಾಗಿ ನುರಿತವನಾಗಿರಬೇಕು! ನನಗೆ ಅಡುಗೆಯಲ್ಲಿ ಪರಿಣಿತಿ ವಂಶಪಾರಂಪರ್ಯವಾಗಿ ಬಂದಿದೆ. ನಾನು ಓದಿದ್ದು ಎಂಜಿನಿಯರಿಂಗ್. ಆದ್ದರಿಂದ ನಾನೊಬ್ಬ ಎಂಜಿನಿಯರ್ ಮತ್ತು ಹೀಗಾಗಿಯೇ ನುರಿತ ತಂತ್ರಜ್ಞ ಕೂಡ ಎಂದು ಹೇಳಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ.
ಸಂಶೋಧನೆ ನನ್ನ ಆಸಕ್ತಿಯ ಕ್ಷೇತ್ರ ಮತ್ತು ಈ ಆಸಕ್ತಿ ನನ್ನ ವೃತ್ತಿಗೆ ಪೂರಕವಾಗಿಯೇ ಇದೆ. ನಮ್ಮ ಮೈಯ್ಯಾಸ್ ಹಿಂದಿರುವ ಶಕ್ತಿಯೇ ಸಂಶೋಧನೆ, ಸಂಶೋಧನೆ ಮತ್ತು ಸಂಶೋಧನೆ. ನಮ್ಮಲ್ಲಿ ಸುಸಜ್ಜಿತ ಲ್ಯಾಬ್ ಇದೆ. ಆರು ಜನ ನುರಿತ, ಕ್ವಾಲಿಫೈಡ್ ವ್ಯಕ್ತಿಗಳನ್ನು ಒಳಗೊಂಡ ಆರ್ ಆ್ಯಂಡ್ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ತಂಡವಿದೆ.
ಶೀಘ್ರವೇ ಈ ತಂಡದ ಸದಸ್ಯರ ಸಂಖ್ಯೆ 20ಕ್ಕೆ ಏರಲಿದೆ. ಗುಣಮಟ್ಟ ನಿಯಂತ್ರಣಕ್ಕೂ ಉತ್ತಮ ತಂಡವಿದೆ. ನನ್ನ ತಲೆಯಲ್ಲಿ ಏನೇ ಯೋಚನೆ ಬಂದರೂ ಖುದ್ದು ನಾನೇ ಮೊದಲು ಪ್ರಯೋಗಕ್ಕೆ ಇಳಿಯುತ್ತೇನೆ. ಅದು ಒಂದು ಹಂತಕ್ಕೆ ಬರುತ್ತಿದ್ದಂತೆ ಮುಂದಿನದನ್ನು ನಮ್ಮ ತಂಡ ನೋಡಿಕೊಳ್ಳುತ್ತದೆ. ಮೈಯ್ಯಾಸ್ ಪ್ರಯೋಗಾಲಯ ಎಂದರೆ ಅದು ಇಡ್ಲಿ, ವಡೆ ಮಾಡುವ ಕೋಣೆಯಲ್ಲ. 'ಮೇಡ್ ವಿತ್ ಲವ್' ಎನ್ನುವುದು ನಮ್ಮ ಧ್ಯೇಯವಾಕ್ಯ. ಈ ವಾಕ್ಯದ ಹಿಂದಿನ ಶಕ್ತಿಯೂ ಸಂಶೋಧನೆಯೇ. ನಮ್ಮ ಗ್ರಾಹಕರ ಬಗ್ಗೆ ನಮಗಿರುವ ಅಪರಿಮಿತ ಪ್ರೇಮದಿಂದಲೇ ಅವರ ಆರೋಗ್ಯಕ್ಕೆ ಕಿಂಚಿತ್ತೂ ಧಕ್ಕೆಯಾಗದ ರೀತಿಯಲ್ಲಿ ಪ್ರತಿ ಉತ್ಪನ್ನವನ್ನೂ ಜಾಗರೂಕತೆಯಿಂದ ಸಿದ್ಧಪಡಿಸುತ್ತೇವೆ. ನಮ್ಮ ಒಂದೊಂದು ಉತ್ಪನ್ನವೂ ಸ್ವತಃ ನಾನೇ ರುಚಿ ನೋಡಿ ಪರೀಕ್ಷಿಸಿದ ಬಳಿಕವಷ್ಟೇ ಮುಂದಿನ ಹಂತದ ಪರೀಕ್ಷೆಗಳಿಗೆ ಅಂದರೆ ಕೆಮಿಕಲ್ ಮತ್ತು ಮೈಕ್ರೊಬಯಾಲಜಿಕಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದೊಂದು ಉತ್ಪನ್ನದ ಹಿಂದೆಯೂ ನನ್ನ ಮತ್ತು ನನ್ನ ತಂಡದ ಏನಿಲ್ಲವೆಂದರೂ ಆರೆಂಟು ತಿಂಗಳ ಪರಿಶ್ರಮ ಇರುತ್ತದೆ!
ನಮ್ಮ ಯಾವುದೇ ಉತ್ಪನ್ನವನ್ನು ನೀವು ತೆಗೆದುಕೊಳ್ಳಿ. ಎಣ್ಣೆ ಅಂಶ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಉದಾಹರಣೆಗೆ ಕೋಡುಬಳೆ, ಬೂಂದಿ. ಕೈಯ್ಯಲ್ಲಿ ಐದು ನಿಮಿಷ ಹಾಗೆಯೇ ಇಟ್ಟುಕೊಂಡರೂ ಎಣ್ಣೆ ಅಂಶದ ಅನುಭವ ಆಗದು. ಅದು ನನ್ನದೇ ಸಂಶೋಧನೆಯ ಫಲ. ಸಾಮಾನ್ಯವಾಗಿ ಕರಿದ ತಿನಿಸುಗಳಲ್ಲಿ ಎಷ್ಟೇ ಪ್ರಯತ್ನಿಸಿದರೂ ಶೇ 48-50ರಷ್ಟು ಎಣ್ಣೆ ಅಂಶ ಇರುತ್ತದೆ. ಸಾಕಷ್ಟು ಪ್ರಯೋಗಗಳ ನಂತರ ಆ ಪ್ರಮಾಣವನ್ನು ಶೇ. 25ಕ್ಕೆ ಉಳಿಸಲು ಸಫಲನಾದೆ. ಮದ್ದೂರು ವಡೆ ಎಂದರೆ ಎಣ್ಣೆಯಲ್ಲಿ ಕರಿದದ್ದು ತಾನೆ? ನಮ್ಮಲ್ಲಿ ಅದಕ್ಕೆ ಎಣ್ಣೆ ತಾಗಿಸುವುದೇ ಇಲ್ಲ, ಬೇಯಿಸುತ್ತೇವೆ! ಇದು ಸಂಶೋಧನೆ ಅಲ್ಲವೆ? ಬಾಳೆಕಾಯಿ, ಹಲಸಿನ ಕಾಯಿ ಚಿಪ್ಸ್ ನಿಮಗೆಲ್ಲ ಗೊತ್ತು. ಆದರೆ ಬಾಳೆಹಣ್ಣಿನ, ಹಲಸಿನ ಹಣ್ಣಿನ, ಮಾವಿನ ಹಣ್ಣಿನ, ಸೇಬುಹಣ್ಣಿನ, ಅನಾನಸ್ ಹಣ್ಣಿನ ಚಿಪ್ಸ್ ತಿಂದಿದ್ದೀರಾ? ಅದನ್ನು ನಾವು ಮಾಡುತ್ತಿದ್ದೇವೆ. ಸಂಶೋಧನೆಗೆ ಸಾಕಷ್ಟು ಬೆವರು ಹರಿಸದಿದ್ದರೆ ಹಣ್ಣಿನ ಚಿಪ್ಸ್ ಮಾಡುವುದು ಸಾಧ್ಯವಾ? ಮೈಯ್ಯ ಎಂದರೆ ಸಂಶೋಧನೆ ಎನ್ನುವ ಪರ್ಯಾಯ ಆಹಾರೋದ್ಯಮದಲ್ಲಿ ಏಕೆ ಹುಟ್ಟಿಕೊಂಡಿದೆ ಎನ್ನುವುದನ್ನು ತಿಳಿಸಲು ಇದನ್ನೆಲ್ಲ ಹೇಳಬೇಕಾಯಿತು ಅಷ್ಟೆ.
ಒಂದೇ ಒಂದು ಮಾತು. ನಮ್ಮಲ್ಲಿ ಯಾವ ತಿನಿಸನ್ನೂ ಬಾಣಸಿಗರು ಖುದ್ದು ಸಿದ್ಧಪಡಿಸುವ ಮ್ಯಾನ್ಯುಯಲ್ ವಿಧಾನ ಇಲ್ಲ. ನಮ್ಮದೇನಿದ್ದರೂ ಹೈಟೆಕ್, ಸಂಪೂರ್ಣ ಗಣಕೀಕೃತ, ಯಾಂತ್ರೀಕೃತ ಮತ್ತು ಹೈಜೆನಿಕ್. ಸಾಂಬಾರ್ ಪುಡಿಗೆ ಬೇಕಾದ ಪದಾರ್ಥಗಳನ್ನು ಇಂತಿಂಥ ಪದಾರ್ಥ ಇಷ್ಟಿಷ್ಟು ಪರಿಮಾಣದಲ್ಲಿರಬೇಕು ಎಂದು ಕಂಪ್ಯೂಟರ್ಗೆ ಫೀಡ್ ಮಾಡಿದರೆ ಆಯಾ ಪದಾರ್ಥಗಳಿರುವ ಕಂಟೇನರ್ಗಳಿಂದ ಆ ಪರಿಮಾಣಕ್ಕಿಂತ ಒಂದು ಮಿಲಿಗ್ರಾಂ ಕೂಡ ಹೆಚ್ಚು ಬೀಳುವುದಿಲ್ಲ. ಧನಿಯಾ, ಜೀರಿಗೆ, ಮೆಂತ್ಯ ಇತ್ಯಾದಿ ಎಲ್ಲ ಪದಾರ್ಥಗಳೂ ಬೆರೆತ ಬಳಿಕ ಐಬಿಸಿ ಎನ್ನುವ ಮತ್ತೊಂದು ಕಂಟೇನರ್ಗೆ ಹೋಗಿ, ಆ ಕಂಟೇನರ್ ತಿರುವುಮುರುವಾಗಿ ಎಲ್ಲವೂ ಸರಿಯಾಗಿ ಮಿಕ್ಸ್ ಆಗುತ್ತವೆ. ಸಂಬಂಧಿಸಿದ ಕಂಟೇನರ್ಗಳಿಗೆ ಹಾಕುವ ಮುನ್ನ ಆ ಪದಾರ್ಥಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ, ಅದೂ ನೀರು ಬಳಸದೇ! ಮಾತ್ರವಲ್ಲ, ಅದರಲ್ಲಿನ ರಾಸಾಯನಿಕಗಳನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ತಾಂತ್ರಿಕವಾಗಿ ನಾವು ಅಷ್ಟು ಮುಂದಿದ್ದೇವೆ!
ಆಹಾರೋದ್ಯಮಕ್ಕೆ ಸಂಬಂಧಿಸಿದ ಅತ್ಯಾಧುನಿಕ ಯಂತ್ರೋಪಕರಣಗಳು ಜಪಾನ್, ತೈವಾನ್, ಕೊರಿಯಾ, ಅಮೆರಿಕ ಮೊದಲಾದ ದೇಶಗಳಲ್ಲಿವೆ. ನಾವೂ ಅಲ್ಲಿಂದ ಯಂತ್ರಗಳನ್ನು ತರಿಸಿಕೊಂಡಿದ್ದೇವೆ. ಅವು ಅಲ್ಲಿನ ಆಹಾರ ಶೈಲಿಗೆ ಅನುಗುಣವಾಗಿ ರೂಪುಗೊಂಡಿರುತ್ತವೆ. ನಮ್ಮ ರವೆ ಇಡ್ಲಿ, ಜಾಮೂನ್, ಬಿಸಿಬೇಳೆ ಬಾತ್, ದೋಸೆ, ಚಕ್ಕುಲಿ, ಕೋಡುಬಳೆಗಳನ್ನು ಮಾಡುವ ರೀತಿಯಲ್ಲಿ ಮರುವಿನ್ಯಾಸ ಮಾಡಿಕೊಳ್ಳುವುದು; ಆ ಯಂತ್ರಗಳ ಜತೆಗೆ ಕೋ ಮಿಲ್ಗಳನ್ನು ಅಂದರೆ ನಮ್ಮ ಅಗತ್ಯಕ್ಕೆ ತಕ್ಕಂತ ಪೂರಕ ಉಪಕರಣಗಳನ್ನು ವಿನ್ಯಾಸಗೊಳಿಸಿಕೊಳ್ಳುವುದು ಇವೆಲ್ಲ ಸಾಧ್ಯವಾಗುವುದು ಸಂಶೋಧನೆಯಿಂದ ಮಾತ್ರ. ಪ್ರತಿ ತಿನಿಸಿಗೂ ಒಂದೊಂದು ಎಫ್ ಜೀರೋ (ಋ0) ಮಟ್ಟ ಎನ್ನುವುದು ಇರುತ್ತದೆ. ಹಾಗೆಂದರೆ 121 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಎಷ್ಟು ವೇಗ, ಎಷ್ಟು ಒತ್ತಡವನ್ನು ಎಷ್ಟು ಅವಧಿಯಲ್ಲಿ ಬಳಸಬೇಕು ಎನ್ನುವುದು. ನಮ್ಮ ತಿನಿಸುಗಳಿಗೆ ಅಗತ್ಯ ಎಫ್ಜೀರೋ ಮಟ್ಟವನ್ನು ಕಂಡುಕೊಳ್ಳುವುದು ನಮ್ಮ ಕೈಯ್ಯಲ್ಲಿಯೇ ಇದೆ. ಮೈಯ್ಯಾಸ್ ರುಚಿಯ ಗುಟ್ಟೇ ಅದು.
ಬರಲಿದೆ ಪುಡಿ!
ಕ್ಯಾನ್ಸರ್ ಇಡ್ಲಿಯಷ್ಟೇ ರೋಚಕ ಅನ್ನಿಸುವ ಮತ್ತೊಂದಿಷ್ಟು ಪದಾರ್ಥಗಳನ್ನು ಮೈಯ್ಯಾಸ್ ಶೀಘ್ರವೇ ಹೊರತರಲಿದೆ. 20 ಗ್ರಾಂ ಪುಡಿಯನ್ನು ನೀರಿನಲ್ಲಿ ಬೆರೆಸಿಕೊಂಡರೆ ಮಜ್ಜಿಗೆ, 100 ಗ್ರಾಂ ನೀರಿನೊಂದಿಗೆ ಬೆರೆಸಿ ಫ್ರಿಡ್ಜ್ನಲ್ಲಿಟ್ಟರೆ ಮೊಸರು! ವಾರದವರೆಗೂ ಕೆಡದ ಪುಳಿಯೋಗರೆ, ಲೆಮಲ್ ರೈಸ್ ಮತ್ತು ವಾಂಗಿಬಾತ್. ಕುದಿಸುವ ಅಗತ್ಯವಿಲ್ಲದ, ಕೇವಲ ಬಿಸಿನೀರು ಹಾಕಿದರೆ ಕ್ಷಣಮಾತ್ರದಲ್ಲಿ ಸಿದ್ಧವಾಗುವ ಫಟಾಫಟ್ ರಸಂ, ಕಷಾಯ... ಇನ್ನೂ ಬಹಳಷ್ಟು. ನಾವು ಏನೇ ಮಾಡಿದರೂ 'ಪ್ರೀತಿಯಿಂದಲೇ ಮಾಡುತ್ತೇವೆ' (ಮೇಡ್ ವಿತ್ ಲವ್) ಮತ್ತು ಅದರ ಹಿಂದೆ ನನ್ನ ಮತ್ತು ನನ್ನ ತಂಡದ ಹತ್ತಾರು ತಿಂಗಳ ಸಂಶೋಧನೆ, ಪ್ರಯೋಗಗಳ ಪರಿಶ್ರಮ ಇರುತ್ತದೆ!
- ಡಾ. ಪಿ.ಸದಾನಂದ ಮೈಯ್ಯ
ನಿರೂಪಣೆ: ರಾಜೇಶ ಮುಂಡಿಗೇಸರ