ಜಯ ಜಯ ರಾಮ ಶ್ರೀರಾಮ
ಅಂದು, ಶ್ರೀರಾಮನವಮಿ, ದಿನತುಂಬಿದ ಮಡದಿ ಗೌರಿಯನ್ನು ತವರಿಗೆ ಕಳುಹಿಸಿ, ತಿರುಮಲೇಶ ಊರಿನ ರಾಮಮಂದಿರದಲ್ಲಿ ಭಜನೆ ಯಲ್ಲಿ ತಲ್ಲೀನನಾಗಿದ್ದ. ಮೊದಲ ಎರಡು ಕೂಸುಗಳು ಹೆಣ್ಣಾಗಿದ್ದು, ಮೂರನೆಯ ಬಾರಿಯಾದರೂ ಗಂಡಾಗಲೆಂದು ದೇವರನ್ನು ಅತಿಭಕ್ತಿಯಿಂದ ಪ್ರಾರ್ಥಿಸುತ್ತಿದ್ದ. ಜೋಯಿಸರು ಕವಡೆಹಾಕಿ, ಬೆರಳು ಎಣಿಸಿ ಗಂಡೇ ಆಗುವುದೆಂದು ಭವಿಷ್ಯ ನುಡಿದಿದ್ದರು.
ಕಾಲಿಗೆ ಗೆಜ್ಜೆ ಕಟ್ಟಿ ದೇವರ ನಾಮ ಹೇಳಿಕೊಂಡು ಕುಣಿಯುತ್ತಿದ್ದ ತಿರುಮಲೇಶನಿಗೆ ಅವನ ಮಡದಿ ಹೆಣ್ಣು ಮಗುವಿನ ತಾಯಿಯಾದಳೆಂದು ತಂತಿ ಸಂದೇಶ ಬಂತು. ಸಂದೇಶ ಓದಿಕೊಂಡು ತಿರುಮಲೇಶ ಬೇಸರಗೊಂಡು 'ನನಗೆ ಯಾವ ದೇವರೂ ಇಲ್ಲ, ಯಾವ ಶಾಸ್ತ್ರವೂ ಇಲ್ಲ' ಎಂದು ಕಾಲಿನ ಗೆಜ್ಜೆ ಬಿಚ್ಚಿ ರಾಮಮಂದಿರದ ಹೊಸಿಲು ದಾಟಿದ.
ಹಿಂದೆಯೇ 'ಹೆಣ್ಣು ಮಗುವಾಗಿದ್ದು ಮತ್ತೊಬ್ಬಳು ಗೌರಿಗಂತೆ ಅವಳ ಗಂಡ ಹನುಮೇಶನಂತೆ, ತಿರುಮಲೇಶ ಮಡದಿಗೆ ಗಂಡು ಮಗು ಆಗಿದೆ' ಎಂಬ ಸಂದೇಶ ಮತ್ತೆ ಬಂತು. ಹೊಸಿಲು ದಾಟಿದ್ದ ತಿರುಮಲೇಶ ಸಂತಸಗೊಂಡು ಮಂದಿರದ ಒಳ ಹೊಕ್ಕು ಗೆಜ್ಜೆಕಟ್ಟಿ ಭಾವಪೂರಿತನಾಗಿ ಜಯ ಜಯ ರಾಮ ಶ್ರೀರಾಮ ಎನ್ನುತ್ತಾ ಕುಣೆಯಲಾರಂಭಿಸಿದ.
- ಶಿವನಾಪುರ ನರಸಿಂಹ ಮೂರ್ತಿ