ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆಳ್ಳುಳ್ಳಿಯಿಂದಲೂ ಅಲ್ಸರ್ ಮಾಯ!

Vishwanath S
Updated On : 2 Jan 2014, 11:38 am

ಬೆಳ್ಳುಳ್ಳಿ ಕುರಿತಾಗಿ ಹಿಂದೊಮ್ಮೆ ಸಾಕಷ್ಟು ವಿವರವಾಗಿಯೇ ಚರ್ಚಿಸಿದ ನೆನಪು. ನಿತ್ಯ ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದೊಂದು ಬೆಳ್ಳುಳ್ಳಿ ಸೇವಿಸುತ್ತಿದ್ದರೆ ಗ್ಯಾಸ್ಟ್ರಿಕ್ ಸೇರಿದಂತೆ ಜೀರ್ಣಾಂಗಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಲ್ಲಿರಿ. ಆರಂಭದಲ್ಲಿ ಹಸಿ ಬೆಳ್ಳುಳ್ಳಿ ನುಂಗುವುದು ಕೊಂಚ ಕಷ್ಟ ಆಗಬಹುದು ಅಥವಾ ಅದರ ವಾಸನೆ ಖುದ್ದು ನಿಮಗೇ ಕಿರಿಕಿರಿ ಅನ್ನಿಸಬಹುದು. ರೂಢಿಯಾದರೆ ಎಲ್ಲವೂ ಸಲೀಸು. ಈಗಿನ ಸಮಾಚಾರ ಏನೆಂದರೆ ಅಲ್ಸರ್ ಹೋಗಲಾಡಿಸುವ ಗುಣವೂ ಬೆಳ್ಳುಳ್ಳಿಗೆ ಇದೆ ಎನ್ನುವುದು. ಉದರ ಸಂಬಂಧಿತ ತೊಂದರೆಗಳನ್ನು ಹೋಗಲಾಡಿಸುವುದರ ಜತೆಗೆ ಜೀರ್ಣಾಂಗ ವೃಣವನ್ನೂ ಇದು ಗುಣಪಡಿಸಬಲ್ಲದು ಎನ್ನುವುದು ಸಂಶೋಧನೆಗಳಿಂದ ರುಜುವಾತಾಗಿದೆ. ಅದನ್ನು ನಿರೂಪಿಸಿದವರು ಕೊರಿಯನ್ನರು.
ಬೆಳ್ಳುಳ್ಳಿಯಲ್ಲಿ ಮೂಲತಃ ಎರಡು ಅಂಶಗಳಿರುತ್ತವೆ. ಗಂಧಕ ಅಧಿಕವಾಗಿರುವ ಅಮಿನೊ ಆಮ್ಲವಾದ ಅಲಿಸಿನ್ ಮತ್ತು ಪ್ರೊಟೀನ್‌ನಿಂದ ಶ್ರೀಮಂತವಾಗಿರುವ ಕಿಣ್ವ ಅಲಿನೇಸ್. ಇದಲ್ಲದೆ ಸುಮಾರು ಹತ್ತು ಬಗೆಯ ಶರ್ಕರಗಳು, ಫ್ರುಕ್ಟೋಸ್‌ಗಳು, ಗ್ಲುಕೋಸ್, ಇನ್ಸುಲಿನ್, ಸತು, ಕಬ್ಬಿಣ ಮತ್ತಿತರ ಖನಿಜಗಳು, ಕ್ಯಾಲ್ಶಿಯಂ ಇರುತ್ತವೆ. ಅಲಿಸಿನ್ ಹಸಿ ಬೆಳ್ಳುಳ್ಳಿಯಲ್ಲಿ ಮಾತ್ರ ಇರುತ್ತದೆ. ಬೇಯಿಸಿದಾಗ ಈ ಅಂಶ ಇರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಹಸಿ ಬೆಳ್ಳುಳ್ಳಿಯನ್ನೇ ಬಳಸುವುದು ಸೂಕ್ತ. ಬೆಳ್ಳುಳ್ಳಿ ಅತ್ಯುತ್ತಮ ಆ್ಯಂಟಿ ಬಯಾಟಿಕ್, ಶೀಲೀಂಧ್ರ (ಫಂಗಸ್) ಮತ್ತು ವೈರಸ್ ನಿರೋಧಕ ಕೂಡ. ಅತ್ಯಂತ ಶಕ್ತಿಶಾಲಿ ಪೆನ್ಸಿಲಿನ್ ಕೂಡ! ಅಲ್ಸರ್‌ಗೆ ಸಂಬಂಧಿಸಿದ ಹಾಗೆ ಹಾರ್ಮೋನ್ ರೀತಿಯ ದ್ರಾವಣದ (ಪ್ರೊಸ್ಟಾಗ್ಲಾಂಡಿನ್ಸ್) ಸ್ರಾವಕ್ಕೆ ಬೆಳ್ಳುಳ್ಳಿ ಉತ್ತೇಜನ ನೀಡುತ್ತದೆ. ಇದು ಉದರ ಮತ್ತು ಜೀರ್ಣಾಂಗಗಳ ಗೋಡೆಗುಂಟ ಪ್ರಬಲ ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ. ಅಲ್ಸರ್ ಆದವರು ಬೆಳ್ಳುಳ್ಳಿ ತಿಂದಾಗ ನೋವು ಕಡಿಮೆಯಾದ ಅನುಭವ ಆಗಲೂ ಪ್ರೊಸ್ಟಾಗ್ಲಾಂಡಿನ್ಸ್ ಕಾರಣ ಎನ್ನುವುದು ಸಂಶೋಧಕರ ಅಭಿಪ್ರಾಯ.
ಕಾಫಿ ಕುಡಿಯಬಹುದು!
ವಾಸ್ತವವಾಗಿ ಕೆಫೀನ್ ಕೆಲವು ಗ್ಯಾಸ್ಟ್ರಿಕ್ ಆ್ಯಸಿಡ್‌ಗಳ ಸ್ರಾವಕ್ಕೆ ಉತ್ತೇಜನ ನೀಡುತ್ತವೆ. ಹೀಗಾಗಿ ಅಲ್ಸರ್ ಆದವರು ಕಾಫಿ ಕುಡಿಯಬೇಡಿ ಎಂದು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಕೆಫೀನ್ ಇರುವ ಅಥವಾ ಇಲ್ಲದಿರುವ ಕಾಫಿ ಕುಡಿಯುವುದರಿಂದ ಅಲ್ಸರ್ ಹೆಚ್ಚಾಗುವುದಿಲ್ಲ ಎನ್ನುವುದು ಪಾಶ್ಚಿಮಾತ್ಯ ಸಂಶೋಧಕರ ಅಭಿಪ್ರಾಯ. ಅಲ್ಸರ್‌ನಿಂದ ಬಳಲುತ್ತಿರುವವರಿಗೆ ಕೆಫೀನ್ ಇರುವ ಮತ್ತು ಕೆಫೀನ್‌ರಹಿತ ಕಾಫಿ ಕುಡಿಯಲು ಹೇಳಿ, ಕಾಫಿ ಕುಡಿದ ನಂತರ 'ಹೊಟ್ಟೆಯಲ್ಲಿ ತೊಂದರೆಯಾಗುತ್ತಿದೆಯೇ? ನೋವಾಗುತ್ತಿದೆಯೇ' ಎಂದು ಪ್ರಶ್ನಿಸಿದಾಗ, ಎಲ್ಲರೂ 'ಇಲ್ಲ' ಎಂದೇ ಉತ್ತರಿಸಿದರಂತೆ. ಕಾಫಿ ಅಲ್ಸರ್ ಅನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ಎನ್ನುವುದು ಸಂಶೋಧಕರ ಸ್ಪಷ್ಟ ನಿಲುವು.

(ಮುಂದುವರಿಯುವುದು)

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement