ಭೂತಕಾಲದ ಮಂದಿ
ಕೆಲವರಿದ್ದಾರೆ, ಸದಾ ಭೂತಕಾಲದಲ್ಲೇ ಬದುಕುತ್ತಿರುವವರು. ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು, 'ನಾವು ಮೂರು ಸೇರಿನ ಅನ್ನ ಉಂಡಿದ್ದೆವು, ಇಪ್ಪತ್ತು ಹೋಳಿಗೆ ತಿಂದಿದ್ದೆವು' ಎಂದು ಹೇಳಿಕೊಳ್ಳುತ್ತಿರುತ್ತಾರೆ. ಅದರಲ್ಲೇ ಸದಾ ಸುಖ ಕಾಣುತ್ತಿರುತ್ತಾರೆ. ಇವರು ಹಳೆಕಾಲವನ್ನು ಸದಾ ಅಪ್ಪಿಕೊಂಡಿರುವವರು. ಹೇಳಿಕೊಳ್ಳಲಿ ಪರವಾಗಿಲ್ಲ. ಹಾಗಂತ ವಾಸ್ತವವನ್ನು ಒಪ್ಪಿಕೊಂಡಿದ್ದಾರೆಯೇ ಅಂದರೆ ಅದೂ ಇಲ್ಲ. ಹಾಗೆ ಒಪ್ಪಿಕೊಳ್ಳಲು ನಿರಾಕರಿಸುತ್ತಲೂ ಇರುತ್ತಾರೆ. ಕೇಳುವ ಕಿವಿಗಳಿಲ್ಲದಿದ್ದರೂ ತಮ್ಮ ತುತ್ತೂರಿಯನ್ನು ಊದಲು ಸದಾ ಉತ್ಸುಕರಾಗಿರುತ್ತಾರೆ. ಇಂಥವರು ಬಂದ ಕೂಡಲೇ ಬಂತಪ್ಪ ಭೈರಿಗೆ ಅನ್ನುತ್ತ ಜನ ಅಲ್ಲಿಂದ ಪೇರಿ ಕೀಳುವುದನ್ನು ನಾವು ಕಾಣಬಹುದು.
ಹೌದು, ಹಿಂದೊಂದು ಕಾಲದಲ್ಲಿ ಹಾಗಿತ್ತು, ಸರಿ. ಅದನ್ನೇ ಈಗ ಹೇಳಿಕೊಳ್ಳುವುದರಿಂದ ಪ್ರಯೋಜನವೇನು? ಹಿಂದೆ ಹಾಗಿದ್ದದ್ದರಿಂದ ಇಂದಿಗೆ, ಇಂದಿನವರಿಗೆ ಆಗುವ ಉಪಯೋಗವಾದರೂ ಏನು? ಅದರಿಂದ ಹೊಸ ಮಾರ್ಗದರ್ಶನವೊಂದು ಇಂದಿನ ಜೀವನಕ್ಕೆ ದೊರೆಯುವಂತಿದೆಯೆ? ಅದರಿಂದ ಮೂಡಿದ ಬೆಳಕೊಂದು ಇಂದಿನವರಿಗೆ ದಾರಿ ತೋರಿಸುವಂತಿದೆಯೆ? ಹಾಗಿದ್ದರೆ ಮಾತ್ರವೇ ಹಳೆಯ ಕಾಲದ ಮಾತುಗಳಿಗೊಂದು ಅರ್ಥ. ಇಲ್ಲವಾದರೆ ಅವು ಕೇವಲ ಹಳಹಳಿಕೆಯ, ಬಡಬಡಿಕೆಯ ನುಡಿಗಳು. ನಮ್ಮ ನಡುವೆ ಕಾಣಿಸಿಕೊಳ್ಳುತ್ತಿರುವ ಅನೇಕ ಬಗೆಯ ಮೂಲಭೂತವಾದಗಳಿಗೆ ಕೂಡ ಇದು ಕಾರಣ. ಹಿಂದೆಂದೋ ಇದ್ದಂತೆ ಇಂದು ಕೂಡ ನಾವಿರಬೇಕು ಎನ್ನುವುದು ಹಾಸ್ಯಾಸ್ಪದ. ಇದನ್ನು ಪ್ರತಿಪಾದಿಸುವವರು ಜನರ ಕಣ್ಣಿನಲ್ಲಿ ಕೂಡ ಹಾಸ್ಯಾಸ್ಪದರಾಗುತ್ತಾರೆ. ಹಿಂದಿನ ಅಸ್ತಿಭಾರಗಳ ಮೇಲೆ ಇಂದಿನ ಕಟ್ಟಡಗಳು ನಿಂತಿವೆ, ಭವಿಷ್ಯಕ್ಕೆ ಭೂತಕಾಲದ ತಳಹದಿ ಬೇಕು ಎಂಬುದೆಲ್ಲ ನಿಜ. ಆದರೆ ಅಸ್ತಿಭಾರವು ಕಟ್ಟಡಕ್ಕೆ ಭಾರ ಎನಿಸಬಾರದು. ಭೂತಕಾಲದ ಒಳ್ಳೆಯ ಸಾರವನ್ನು ಹೀರಿ ತೆಗೆದು ವರ್ತಮಾನಕ್ಕೆ ಅನ್ವಯಿಸುವಂತಿರಬೇಕು ನಮ್ಮ ಮಾತು, ನಡತೆ.
- ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.