ಐಸ್ಸಾ!
ಬೆಂಗಳೂರು ಈ ಬಾರಿ ಥಂಡಾ ಥಂಡಾ ಕೂಲ್ ಕೂಲ್. ಈ ಚಳಿ ಕೆಲವರಿಗೆ ಇಷ್ಟ ಕೆಲವರಿಗೆ ಕಷ್ಟ. ಇಲ್ಲಿ 'ಈ ವರ್ಷ ಚಳಿ ಜೋರು' ಎಂದು ಸಂಜೆ ಆಗ್ತಿದ್ದ ಹಾಗೆಯೇ ಗೂಡು ಸೇರಿಕೊಳ್ಳೋ ಮಂದಿ ಇರುವಂತೆಯೇ 'ಈ ಚಳಿಗಾಲದಲ್ಲಿ ಐಸ್‌ಕ್ರೀಂ ತಿನ್ನೋಕ್ ಮಸ್ತಾಗಿರತ್ತೆ ಅಲ್ವಾ?' ಅನ್ನುವವರೂ ಇದ್ದಾರೆ. ಐಸ್ ಕ್ರೀಂ ಪ್ರಿಯರಿಗಾಗಿ ಹಾಗೂ ಬೆಂಗಳೂರನ್ನು ಇನ್ನಷ್ಟು ತಂಪು ಮಾಡಲಿಕ್ಕಾಗಿ ಮಲ್ಲೇಶ್ವರದ ಮಂತ್ರಿ ಸ್ಕ್ವೇರಲ್ಲಿ ಹೊಸದೊಂದು ಐಸ್ ಅಂಗಡಿ ತಲೆಯೆತ್ತಿದೆ. ಅದು 'ರಾಕ್ ಸ್ಟೋನ್ ಐಸ್ ಫ್ಯಾಕ್ಟರಿ'!
ಹೆಸರೇ ಹೇಳುವಂತೆ ಇದು ಐಸ್ ಫ್ಯಾಕ್ಟರಿ. ಬೆಂಗಳೂರಲ್ಲಿ ಸಾವಿರಾರು ಐಸ್ ಅಂಗಡಿ ಇದೆ. ಜ್ಯೂಸ್ ಷಾಪಲ್ಲೂ ಐಸ್ ಕ್ರೀಂ ಸಿಗತ್ತೆ. ಹೋಟೆಲ್‌ಗೆ ಹೋದ್ರೆ ತರಹೇವಾರಿ ಐಸ್ ಕ್ರೀಂ ಸಿಗತ್ತೆ. ಐಸ್‌ಫ್ಯಾಕ್ಟರಿಗಳೂ ಬೇಕಾದಷ್ಟಿವೆ. ಇದರಲ್ಲೇನು ವಿಶೇಷ ಅಂತೀರಾ?
ವಿಶೇಷ ಇದೆ! ಇದು ಬೆಂಗಳೂರಿನ ಮೊದಲ ಲೈವ್ ಐಸ್ ಫ್ಯಾಕ್ಟರಿ! ನಿಮ್ಮ ಕಣ್ಣೆದುರಲ್ಲೇ ಹಾಡ್ತಾ, ಕುಣೀತಾ, ನಗ್ತಾ, ನಗಿಸ್ತಾ, ನಿಮಗಿಷ್ಟ ಆಗೋ ರುಚಿಯ ಐಸ್ ಕ್ರೀಂ ತಯಾರು ಮಾಡಿಕೊಡುವಂಥಾ ಬೆಂಗಳೂರಿನ ಮೊತ್ತಮೊದಲ ಐಸ್ ಫ್ಯಾಕ್ಟರಿ ಇದು. ಇದೇನಿದು ಮ್ಯಾಜಿಕ್ಕಾ, ಸಿನಿಮಾನಾ ಅಂತ ಅಚ್ಚರಿಪಡೋ ಸರದಿ ನಿಮ್ಮದು.
ಮಂತ್ರಿ ಮಾಲಿನ ಎರಡನೇ ಅಂತಸ್ತಿನಲ್ಲಿ ರಾಕ್ ಸ್ಟೋನ್ ಐಸ್ ಫ್ಯಾಕ್ಟರಿ ಮಳಿಗೆಯನ್ನು ಉದ್ಘಾಟಿಸಿದ್ದು ಬಿಗ್‌ಬಾಸ್ ಖ್ಯಾತಿಯ ನಟಿ ಶ್ವೇತಾ ಪಂಡಿತ್. ಕೌಂಟರ್ ಒಳಗಿದ್ದ ರಾಕ್ ಸ್ಟೋನ್ ಫ್ಯಾಕ್ಟರಿಯ ಐಸ್‌ವರ್ಯರೆಲ್ಲರ ಜೊತೆ ಸೇರಿ ಅಂದು ಶ್ವೇತಾ ಕೂಡ ಐಸ್‌ಕ್ರೀಂ ತಯಾರಿಸಿದರು. ರುಚಿ ಹೇಗಿದೆ ಅಂತ ಟೆಸ್ಟ್ ಕೂಡ ಮಾಡಿದರು. ರಾಕ್ ಸ್ಟೋನ್ ಕಂಪನಿಯವರ ಸ್ಟೈಲಿನಲ್ಲಿ ಹಾಡುತ್ತ ಕುಣಿಯುತ್ತಾ ತಲೆಬಿಸಿ ಇಲ್ಲದಂತೆ ತಂಪು ಐಸ್‌ಕ್ರೀಂ ರೆಡಿ ಮಾಡಿ ಅಲ್ಲಿದ್ದ ಅತಿಥಿಗಳಿಗೆ ಸರ್ವ್ ಕೂಡ ಮಾಡಿದರು.
ರಾಕ್ ಸ್ಟೋನ್ ಐಸ್‌ಕ್ರೀಂ ಫ್ಯಾಕ್ಟರಿ ಬೆಂಗಳೂರಿಗೆ ಹೊಸತು. ಆದರೆ ಭಾರತದಲ್ಲಿ ಇದು ನಾಲ್ಕನೆಯದು. ಸಿಲಿಕಾನ್ ಸಿಟಿಯಲ್ಲಿ ಐಸ್‌ಕ್ರೀಂ ಪ್ರಿಯರ ಸಂಖ್ಯೆ ಹಾಗೂ ಇಲ್ಲಿನವರ ಟೇಸ್ಟ್ ಅರ್ಥ ಮಾಡಿಕೊಂಡಿರುವ ರಾಕ್ ಸ್ಟೋನ್ ಕಂಪನಿ ಬೆಂಗಳೂರಿನಲ್ಲೇ ಇನ್ನೂ ಮೂರು ಮಳಿಗೆ ತೆರೆಯುವ ಇರಾದೆ ಇಟ್ಟುಕೊಂಡಿದೆ ಎಂದು ಸಂಸ್ಥಾಪಕ ಆರಿಫ್ ಹಾಗೂ ಪಾಲುದಾರ ಶ್ರವಣ್‌ಕುಮಾರ್ ಖುಷಿಯಿಂದ ಹೇಳಿಕೊಂಡರು.
ಫ್ರೂಟ್ಸ್, ನಟ್ಸ್, ಬ್ರೌನೀಸ್, ಕುಕೀಸ್ ಹೀಗೆ ಒಟ್ಟು ನಲವತ್ತೆರಡು ಸ್ವಾದದ ಐಸ್‌ಕ್ರೀಂಗಳನ್ನ ನಿಮ್ಮೆದುರಲ್ಲೇ ನಿಮ್ಮನ್ನು ಕಾಯಿಸದೇ ರೆಡಿ ಮಾಡಿ ಕೊಟ್ಟು ಕೂಲಾಗಿಸುತ್ತಾರೆ ಇಲ್ಲಿ. ಇದರೊಂದಿಗೆ ಈ ಐಸ್ ಕ್ರೀಂ ಫ್ಯಾಕ್ಟರಿಯ ಟ್ರೇಡ್ ಮಾರ್ಕ್ ಎನ್ನುವಂಥ ಕೆಲವು ವೆರೈಟಿಗಳಿವೆ. ಅವುಗಳೇ ಹೆಸರೇ ಮಜವಾಗಿವೆ. ಆಲ್ ಚಾಕೊಲೆಟ್ ನೋ ನಾನ್‌ಸೆನ್ಸ್, ಡೇಟಿಂಗ್ ವಿಥ್ ಸ್ಟ್ರಾಬೆರ್ರಿ ಬ್ಯೂಟಿ, ಹಾಟ್ ಚಾಕೊಲೆಟ್ ನೋ ಮರ್ಸಿ, ಹೀಗೆ ಒಂದಕ್ಕಿಂತ ಒಂದು ಕುತೂಹಲಕಾರಿ ಹೆಸರುಗಳಿರೋ ಐಸ್ ಕ್ರೀಂಗಳು. ಕಡೆಯಪಕ್ಷ ಈ ಥರ ಹೆಸರ್ಯಾಕೆ ಅಂತ ತಿಳ್ಕೊಳೋಕಾದ್ರೂ ತಿನ್ನಬೇಕು ಅನಿಸುವಂತೆ ಮಾಡುತ್ತವೆ. ಕೆಲವು ಫ್ಲೇವರ್‌ಗಳನ್ನು ಇಟಲಿ, ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ.
ಹಾಗಾದ್ರೆ ತಡ ಯಾಕೆ? ಚಳಿಗಾಲ ಮುಗಿಯೋ ಮೊದಲು ಒಮ್ಮೆ ಐಸ್‌ಕ್ರೀಂ ರುಚಿ ನೋಡಿಬನ್ನಿ. ರುಚಿಕಂಡ ಮೇಲೆ ಬೇಸಿಗೆಯಲ್ಲಿ ಅಲ್ಲೇ ಅಡ್ಡಾ ಹಾಕೋದ್ ಇದ್ದೇ ಇದೆಯಲ್ಲ!!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.