ಕುದಿಯುವ ಬಿಸಿ ಕುಡಿಯುವುದು ನಿಲ್ಲಿಸಿ!
ನೀವೂ ನೋಡಿರಬಹುದು, ಕೆಲವರಿಗೆ ವಿಪರೀತ ಬಿಸಿ ಕುಡಿಯುವ ಅಭ್ಯಾಸ. ಎಷ್ಟು ಬಿಸಿ ಎಂದರೆ ಚಹಾ, ಕಾಫಿಗಳನ್ನು ಸ್ಟವ್‌ನಿಂದ ನೇರವಾಗಿ ಅವರ ಲೋಟಕ್ಕೆ ಹಾಕಬೇಕು. ನೀವು ಇನ್ನೂ 'ಉಫ್...ಉಫ್...' ಎಂದು ಆರಿಸುತ್ತಿರುತ್ತೀರಿ, ಅವರಿಗೆ ಕುಡಿದು ಮುಗಿದಿರುತ್ತದೆ! ಇಷ್ಟು ಬಿಸಿ ಕುಡಿಯುವುದು ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ. ಕುದಿಯುವ ಬಿಸಿಯ ಚಹಾ ಕುಡಿಯುವುದರಿಂದ ಅನ್ನನಾಳ ಕ್ಯಾನ್ಸರ್ ಬರುತ್ತದೆ ಎಂದು ಜಪಾನ್ ಕೆಲವು ವರ್ಷಗಳ ಹಿಂದೆಯೇ ಘೋಷಿಸಿದೆ.
ತಮಾಷೆ ಗೊತ್ತಾ? ಅಲ್ಸರ್‌ನಿಂದ ಬಳಲುವವರಿಗೆ ಬಿಸಿ ಎಂದರೆ ಪಂಚಪ್ರಾಣ! ವೈದ್ಯರು ಬೇಡ ಎಂದರೂ ಇವರು ಬಿಡಲು ತಯಾರಿಲ್ಲ! ಇತ್ತೀಚೆಗೆ ವೈದ್ಯಕೀಯ ಜರ್ನಲ್ ಒಂದರ ಲೇಖನ ನನ್ನ ಗಮನ ಸೆಳೆಯಿತು. ಇಂಗ್ಲೆಂಡ್‌ನ ಸರ್ಜನ್ ಒಬ್ಬರು ಅಲ್ಸರ್‌ನಿಂದ ಬಳಲುತ್ತಿದ್ದವರೂ ಸೇರಿದಂತೆ ಸ್ವಯಂಸೇವಕರ ತಂಡವೊಂದನ್ನು ಆರಿಸಿಕೊಂಡರು. ಎಷ್ಟು ಸಾಧ್ಯವೊ ಅಷ್ಟು ಬಿಸಿ ಕುಡಿಯಲು ಸೂಚಿಸಿದರು. ಯಾರು ಜಾಸ್ತಿ ಬಿಸಿ ಕುಡಿದಿರಬಹುದು ಎನ್ನುವುದನ್ನು ನೀವು ಈಗ ಸುಲಭವಾಗಿ ಊಹಿಸಬಲ್ಲಿರಿ. ಆದರೆ ಫಲಿತಾಂಶದಿಂದ ಆ ಸರ್ಜನ್ ದಂಗಾಗಿಬಿಟ್ಟರಂತೆ! ಜೀರ್ಣಾಂಗ ವೃಣಕ್ಕೆ ತುತ್ತಾಗಿದ್ದವರು 144 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಬಿಸಿಬಿಸಿಯಾದ ಚಹಾ ಕುಡಿದಿದ್ದರು. ನಿಮಗೆ ಗೊತ್ತಾ? ಆರೋಗ್ಯವಂತ ವ್ಯಕ್ತಿಯ ದೇಹದ ಸರಾಸರಿ ಉಷ್ಣತೆಯೇ 98.6 ಡಿಗ್ರಿ ಫ್ಯಾರನ್‌ಹೀಟ್! ಅಂದರೆ ಅವರು ಎಷ್ಟು ಬಿಸಿ ಕುಡಿದಿರಬಹುದು ಲೆಕ್ಕ ಹಾಕಿ! ಆದರೆ ಅವರಿಗೆ ನೋವಿನ ಅನುಭವ ಆಗಲೇ ಇಲ್ಲವಂತೆ. ಆರೋಗ್ಯವಂತರು 100 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಬಿಸಿ ಚಹಾ ಕುಡಿದಿದ್ದರು ಮತ್ತು ಅಷ್ಟು ಬಿಸಿ ಕುಡಿಯುವಾಗ ಅವರಿಗೆ ಏನೋ ಸಂಕಟ ಆಗುತ್ತಿತ್ತಂತೆ.
ಅತಿಯಾದ ಬಿಸಿ ಕುಡಿಯುವಾಗ ಅಥವಾ ತಿನ್ನುವಾಗ ಸುಖ ನೀಡಬಹುದು. ಆದರೆ, ಅದರಿಂದ ಅನ್ನನಾಳಕ್ಕೆ ಘಾಸಿಯಾಗುತ್ತದೆ. ಸಣ್ಣದೊಂದು ಕಲ್ಪನೆ ಮಾಡಿಕೊಳ್ಳಿ. ಕುದಿಯುವ ನೀರನ್ನು ನಿಮ್ಮ ಮೈಮೇಲೆ ಸುರಿದುಕೊಂಡರೆ ಬೊಬ್ಬೆಗಳು ಏಳುವುದಿಲ್ಲವೆ? ಹಾಗಿದ್ದಾಗ ಅಷ್ಟೇ ಬಿಸಿ ದೇಹ ಸೇರಿದರೆ ಏನಾಗಬಹುದು? ಹಲವು ಪದರಗಳನ್ನು ಹೊಂದಿರುವ ಚರ್ಮದಲ್ಲಿಯೇ ಬೊಬ್ಬೆಗಳು ಏಳುತ್ತವೆ ಅಂತಾದರೆ ಅನ್ನನಾಳದ ಕಥೆ ಏನಾಗಬೇಡ? ಅನ್ನನಾಳ ಮಾತ್ರವಲ್ಲ, ಉದರ ಸೇರಿದಂತೆ ಜೀರ್ಣಾಂಗಗಳೂ ಗಾಯಗೊಳ್ಳುತ್ತವೆ. ಗಂಟಲಿನಿಂದಲೇ ಸುಟ್ಟ ಗಾಯಗಳು ಶುರುವಾಗುತ್ತವೆ ಎನ್ನುತ್ತಾರೆ ತಜ್ಞರು. ಆದರೂ ಬಹಳಷ್ಟು ಮಂದಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.
ಅಲ್ಸರ್ ಆದವರು ಮಾತ್ರವಲ್ಲ, ಆರೋಗ್ಯವಂತರು ಕೂಡ ಅತಿಯಾದ ಬಿಸಿ ಕುಡಿಯುವುದು ಮತ್ತು ತೀರಾ ಬಿಸಿಬಿಸಿ ತಿನಿಸುಗಳನ್ನು ಸೇವಿಸುವುದು ಒಳ್ಳೆಯದಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಹದವಾದ ಬಿಸಿ ಅಪಾಯಕಾರಿ ಯಲ್ಲ, ಆದರೆ ಕುದಿಯುವ ಬಿಸಿ ಉತ್ತಮವಲ್ಲ. ಕುದಿಯುವ ಬಿಸಿ ಕುಡಿಯುವ, ಅತಿ ಬಿಸಿ ಪದಾರ್ಥ ತಿನ್ನುವ ಅಭ್ಯಾಸ ನಿಮಗಿದ್ದರೆ ದಯವಿಟ್ಟು ಇಂದಿನಿಂದಲೇ ಅದನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com