ಕೊಡವರ ನಾಡಲ್ಲಿ ನುಡಿ ಸಡಗರ
ದಪ್ಪನೆಯ ಸ್ವೆಟರ್ ಹಾಕಿಕೊಂಡು ಯುದ್ಧಕ್ಕೆ ಹೊರಟವರಂತೆ ವೇಗವಾಗಿ ಶಿಸ್ತಿನಿಂದ ಸಾಗುತ್ತಿರುವವರು, ಬೀಸಿ ಬರುತ್ತಿರುವ ಕುಳಿರ್ಗಾಳಿ, ಆಗಸದಲ್ಲಿ ...
ದಪ್ಪನೆಯ ಸ್ವೆಟರ್ ಹಾಕಿಕೊಂಡು ಯುದ್ಧಕ್ಕೆ ಹೊರಟವರಂತೆ ವೇಗವಾಗಿ ಶಿಸ್ತಿನಿಂದ ಸಾಗುತ್ತಿರುವವರು, ಬೀಸಿ ಬರುತ್ತಿರುವ ಕುಳಿರ್ಗಾಳಿ, ಆಗಸದಲ್ಲಿ ತೇಲಿಬರುವ ಮಂಜಿನ ಅಲೆಗಳು, ಕಿಷ್ಕಿಂಧೆಯಂಥ ಸ್ಥಳದಲ್ಲಿ ಹತ್ತಿಪ್ಪತ್ತು ಬಸ್ಸುಗಳು ಇನ್ನೇನು ಡಿಕ್ಕಿ ಹೊಡೆಯುತ್ತವೆ ಎಂಬಂತಿರುವ ಬಸ್ಸು ನಿಲ್ದಾಣ, ರಸ್ತೆ ಪಕ್ಕದ ಅಂಗಡಿಗಳಲ್ಲಿಯೇ ಶೀಷೆಗಳಲ್ಲಿ ಕಂಗೊಳಿಸುವ ವರ್ಣಮಯ ವೈನ್, ಹೊಟೇಲ್‌ನಿಂದ ಹೊರಹೊಮ್ಮುತ್ತಿರುವ ಬಿಸಿ ಕಾಫಿಯ ಹಬೆ, ಅಲ್ಲಲ್ಲಿ ಕಿವಿಗೆ ಬೀಳುವ ಸೇನೆಯ ರೋಚಕ ಕಥಾಚರ್ಚೆಗಳು, ದಿಕ್ಕೇ ತೋಚದಂತೆ ಎತ್ತರ, ಹಳ್ಳಕ್ಕೆ ಸಾಗಿರುವ ರಸ್ತೆಗಳು, ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು ಎನಿಸುವ ಚೆಂದುಳ್ಳಿಯರು...
ನೀವೀಗ ಮಡಿಕೇರಿಯಲ್ಲಿದ್ದೀರಿ. ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಗೆ ಸ್ವಾಗತ. ನವವಧುವಿನಂತೆ ಕನ್ನಡ ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ಮಂಜಿನೂರು ಸಜ್ಜಾಗಿದೆ. ಜನವರಿ 7ರಿಂದ 9 ರವರೆಗೆ ಮಡಿಕೇರಿಯಲ್ಲಿ ಅಕ್ಷರ ಜಾತ್ರೆ, ನುಡಿಹಬ್ಬದ ಸಂಭ್ರಮ. ಸಾವಿರಾರು ಕನ್ನಡಿಗರು ಮಂಜಿನ ಹೊದಿಕೆಯಲ್ಲಿ ಚಳಿಯ ಅನುಭವದೊಂದಿಗೆ, ನಾಡುನುಡಿಯ ಬಗೆಗಿನ ಸಮಾವೇಶಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಮಡಿಕೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 32 ವರ್ಷ ಬಳಿಕ ನಡೆಯುತ್ತಿದೆ. ರಾಜ್ಯದ ಬೇರೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಮಡಿಕೇರಿ ಇನ್ನೂ ಅಷ್ಟೇನು ಪ್ರಗತಿ ಕಂಡಿಲ್ಲ. ಅದೇ ಕಿರಿದಾದ ರಸ್ತೆಗಳು. ಅದರಲ್ಲಿಯೇ ದಾರಿ ಮಾಡಿಕೊಂಡು ಸಾಗುವ ವಾಹನಗಳು, ಕತ್ತಲು ಕವಿದೊಡನೆ ಭೂಮಿಯೇ ಮುಳುಗಿಹೋಯಿತೇನೋ ಎಂಬಂತೆ ಭರದಿಂದ ಮನೆಯೊಳಕ್ಕೆ ಸೇರಿಕೊಳ್ಳುವ ನಾಗರಿಕರು, ರಾತ್ರಿ 8ಕ್ಕೆಲ್ಲ ನಿರ್ಜನವಾಗುವ ರಸ್ತೆಗಳು, ಬಿಕೋ ಎನ್ನುವ ಬಸ್ ನಿಲ್ದಾಣ. ಹೀಗೆ ಮಡಿಕೇರಿ 32 ವರ್ಷಗಳ ನಂತರವೂ ಹೆಚ್ಚೇನು ಬದಲಾಗಿಲ್ಲ.
ಆದರೆ, ವ್ಯಾಪಾರೀಕರಣದ ಹಿನ್ನೆಲೆಯಲ್ಲಿ ನೋಡಿದರೆ ಮಡಿಕೇರಿ ಸಾಕಷ್ಟು ಬದಲಾಗಿದೆ. ಮಡಿಕೇರಿಯ ಗುಡ್ಡದ ಮೇಲೆ ನಿಂತು ಎಲ್ಲಿ ಬೇಕಾದರೂ ಕಲ್ಲು ಹೊಡೆದು ನೋಡಿ. ಅದು ಬೀಳುವುದು ಯಾವುದಾದರೊಂದು ಹೋಂ ಸ್ಟೇ ಮೇಲೆ. ಮಡಿಕೇರಿಯಲ್ಲಿ ಏನಿಲ್ಲವೆಂದರೂ 800 ಹೋಂ ಸ್ಟೇಗಳಿವೆ. ಕೊಡಗಿನ ಜನ ಆತಿಥ್ಯಕ್ಕೆ ಹೆಸರಾದವರೇನೋ ಹೌದು. ಆದರೆ ಹಲವು ಮನೆ ಮಂದಿಗೇ ತಮ್ಮ ಮನೆ ಮನೆಯಾಗಿ ಉಳಿಯದೆ ಲಾಡ್ಜ್‌ನ ಅನುಭವ ನೀಡುತ್ತಿದೆ. ಅಧಿಕೃತಕ್ಕಿಂತ ಅನಧಿಕೃತ ಹೋಂಸ್ಟೇಗಳೇ ಹೆಚ್ಚಾಗಿದ್ದರೂ ಮಡಿಕೇರಿಯ ಅನೇಕ ಮನೆ ಮಾಲೀಕರ ಆರ್ಥಿಕ ಪ್ರಗತಿಗೆ ನೆರವಾಗಿದೆ.
ಕೊಡಗಿಗೆ ಬಂದವರು ಖಂಡಿತವಾಗಿಯೂ ಈ ಮಣ್ಣಿನ ವೀರ ಸೇನಾನಿಗಳನ್ನು ಮರೆಯದಿರಿ. ಭಾರತೀಯ ಸೇನಾ ಪಡೆಯ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಅಪ್ರತಿಮ ಸೇನಾನಾಯಕ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳನ್ನು ದರ್ಶನ ಮಾಡಿ ನಿಮ್ಮದೊಂದು ಸೆಲ್ಯೂಟ್ ಹಾಕಿದ್ದೇ ಆದಲ್ಲಿ ವೀರರ ನಾಡಿಗೆ ನೀವು ಬಂದದ್ದು ಸಾರ್ಥಕವಾದೀತು. ಅಂತೆಯೇ, ಕೊಡಗು ಎಂಬ ನಿಸರ್ಗದ ವರದಂತಿರುವ ನಾಡನ್ನು ಮಲಿನ ಮಾಡದಿರಿ. ಪ್ಲಾಸ್ಟಿಕ್ ಬಳಕೆ ಇಲ್ಲಿ ನಿಷಿದ್ಧ. ಎಲ್ಲಿಯೂ ಮೋಜುಮಜದ ನೆಪದಲ್ಲಿ ಹಸಿರ ಸಿರಿವಂತಿಕೆಗೆ ಧಕ್ಕೆ ತರದಿರಿ. ಎಲ್ಲಿ ಬೇಕಾದರೂ ಸುತ್ತಾಡಿ. ಆದರೆ ಸಭ್ಯತೆ ಮೀರದಿರಿ. ಕನ್ನಡದ ಹಬ್ಬಕ್ಕೆ ಕೊಡಗಿನ ಮಂಜಿನ ಮಡಿಲಿಗೆ ನಿಮಗೆ ಸ್ವಾಗತ.
ಕೊಡವರ ಬಗ್ಗೆ ಒಂದಿಷ್ಟು...
- ಕೊಡಗಿನ ಜನರ ಮನಸ್ಸು ಕಾಡು ಇದ್ದಂತೆ. ಸುಲಭವಾಗಿ ಒಳಹೋಗಲು ಅಸಾಧ್ಯ ಅಂತ ಕಾಂಪ್ಲಿಮೆಂಟ್ ಜತೆ ಕಂಪ್ಲೇಟ್ ಆಗಿಯೂ ಅನೇಕರು ಹೇಳುವುದಿದೆ.
- ಕಾಫಿ ತೋಟದೊಳಕ್ಕೆ ಕಿತ್ತಳೆ, ಕರಿಮೆಣಸು, ಏಲಕ್ಕಿ, ಬಾಳೆಗಳ ಸಾಂಗತ್ಯದಲ್ಲಿ ತಮ್ಮ ಪಾಡಿಗೆ ತಾವಿರುತ್ತಾ, ತಾವಾಯಿತು ತಮ್ಮ ಜೀವನವಾಯಿತು ಎಂದು ದಿನ ಕಳೆಯುವ ಕೊಡಗಿನ ಜನರಿಗೆ ಲೋಕದ ಕಷ್ಟ ನಷ್ಟಗಳ ಚಿಂತೆ ಕಡಿಮೆಯೇ ಹೌದು.
- ಇಲ್ಲಿನ ಕಾಫಿ ತೋಟದೊಳಕ್ಕೆ ಬೇರೆಯದ್ದೇ ಲೋಕ. ಹಲವು ಮಂದಿ ಕಾಫಿ ಪ್ಲಾಂಟರ್ಗಳು ಇಂದಿಗೂ ಪೇಪರ್ ಓದೋದಿಲ್ಲ ಮತ್ತು ಟಿ.ವಿ. ನೋಡೋದಿಲ್ಲ!
- ವ್ಯಾಪಾರ ವಹಿವಾಟಿನಲ್ಲಿ ಕೊಡಗಿನವರು ಕೊಂಚ ವೀಕ್. ಹೀಗಾಗಿಯೇ ಕೊಡಗಿನ ಮೂಲೆ ಮೂಲೆಗಳಲ್ಲಿ ಸ್ಥಳೀಯರ ಅಂಗಡಿಗಳಿಗಿಂತ ಹೊರ ಊರಿನಿಂದ ಬಂದವರ, ಮುಖ್ಯವಾಗಿ ಪಕ್ಕದ ಕೇರಳದಿಂದ ಬಂದ ಮಲಬಾರಿಗಳ ವ್ಯಾಪಾರವೇ ಜೋರು. ಇದಕ್ಕೇ ಕೊಡಗಿನಲ್ಲಿ ಕೊಡವ ಜತೆಗೇ ಮಲಯಾಳ ಮಾತನಾಡುವವರ ಸಂಖ್ಯೆ ಹೆಚ್ಚಿದೆ.
- ಇಂದಿಗೂ ಕೊಡಗಿನ ಅನೇಕ ಕಾಫಿ ಪ್ಲಾಂಟರ್ಗಳಿಗೆ ಕನ್ನಡ ಓದಲು ಬರೆಯಲು ಹೋಗಲಿ ಮಾತನಾಡಲೂ ಬಾರದು. ಮಕ್ಕಳಂತೂ ಇಂಗ್ಲಿಷ್ನಲ್ಲಿಯೇ ವ್ಯವಹರಿಸುತ್ತಾರೆ.
- ಯಾರನ್ನೂ ಸುಲಭಕ್ಕೆ ಹಚ್ಚಿಕೊಳ್ಳದ, ನಂಬಿಕೆ ಹೊಂದದ ಸ್ಥಳೀಯರು ಹೇಗೋ ಏನೋ, ಒಮ್ಮೆ ಒಬ್ಬನನ್ನು ನಂಬಿದರೆ ಆತನಿಗೋಸ್ಕರ ಪ್ರಾಣ ಕೊಡಲೂ ಸಿದ್ಧ ಎಂಬಂತೆ ಆತನನ್ನು ನಂಬಿಬಿಡುತ್ತಾರೆ.
- ಸೇನಾ ಪರಂಪರೆಯ ಪರಿಣಾಮ ತೀವ್ರವಾಗಿರುವ ಹಿನ್ನೆಲೆಯೇ ಇರಬೇಕು. ಇಂದಿಗೂ ಕೊಡಗಿನ ಬಹುತೇಕ ಜನರದ್ದು ಅತ್ಯಂತ ಶಿಸ್ತಿನ ಜೀವನ ಕ್ರಮ, ಬೆಳಗ್ಗೆ 5 ಗಂಟೆಗೆದ್ದು ಬಿಸಿಯಾದ ಕಾಫಿ ಚಪ್ಪರಿಸುವ ಮೂಲಕ ಆರಂಭ. ಮಧ್ಯಾಹ್ನ 12.30ಕ್ಕೆಲ್ಲಾ ಭೋಜನ. ಮತ್ತೆ ಕಾಫಿ ಸೇವನೆ, ಸಂಜೆಯೂ ಕಾಫಿ, ಕತ್ತಲು ಕವಿದ ಕೂಡಲೇ ಮೈ ಬಿಸಿಯಾಗಿರಿಸಿಕೊಳ್ಳಲು ಒಂದೆರಡು ಪೆಗ್ ಮದ್ಯ. ರಾತ್ರಿ 8 ಗಂಟೆಗೆಲ್ಲಾ ಊಟ, 9 ಗಂಟೆಗೆ ಮಲಗಿ ನಿದ್ದೆ.
- ಕೋವಿ ಹೆಗಲಿಗಿಟ್ಟುಕೊಂಡು ಹೋಗುವ ಅನೇಕ ಕೊಡವರನ್ನು ಕಂಡು ಗಾಬರಿಯಾಗಬಾರದು. ಕೊಡವ ಕುಲಕ್ಕೆ ಕೋವಿ ಹೊಂದುವ ರಿಯಾಯಿತಿ ಜನ್ಮಸಿದ್ಧ ಹಕ್ಕಾಗಿ ಬಂದಿದೆ. ತಮ್ಮ ವಿಶಿಷ್ಟ ಉಡುಗೆಯೊಂದಿಗೆ ಕೋವಿಯನ್ನೂ ಹೊಂದಿ ಪ್ರತಿಷ್ಠೆ ಮೆರೆಯುವುದು ಕೊಡವರ ಪಾಲಿಗೆ ಹೆಮ್ಮೆಯ ದ್ಯೋತಕ.
- ಕೊಡವರ ವಿವಾಹ ಸಮಾರಂಭವಂತೂ ಭೂಲೋಕಕ್ಕೆ ಸ್ವರ್ಗವೇ ಬಂದಂಥ ವೈಭವ. ಕಾಫಿಗೆ ರೇಟಿಲ್ಲ ಎಂದು ಗೊಣಗುತ್ತಲೇ ಲಕ್ಷಗಟ್ಟಲೆ ವೆಚ್ಚ ಮಾಡಿ ಕೌಟುಂಬಿಕ ಕಾರ್ಯಕ್ರಮ ಆಯೋಜಿಸುವುದು ಕೂಡ ಅಚ್ಚರಿ ಹುಟ್ಟಿಸುತ್ತದೆ.
- ಮಕ್ಕಳು ಚಿಕ್ಕದಿರುವಾಗಲೇ ಉತ್ತಮ ಶಿಕ್ಷಣಕ್ಕಾಗಿ ಊಟಿ, ಮಂಗಳೂರು, ಬೆಂಗಳೂರು ಹಾಸ್ಟೆಲ್ಗೆ ಬಿಟ್ಟು ಬರುವ ಅಮ್ಮಂದಿರಿಗೆ ಮಗು ದೊಡ್ಡದಾಗಿ ಕೆಲಸಕ್ಕೆ ಸೇರಿದ ನಂತರವೂ ಮನೆಯಲ್ಲಿಯೇ ಇರದ ಬೇಸರ. ತೋಟದೊಳಗಿನ ಒಂಟಿ ಬಂಗಲೆಯಲ್ಲಿ ಅಪ್ಪ- ಅಮ್ಮಂದಿರ ಮನಸುಗಳು ಬೇಸರದ ಹೊದಿಕೆಯಲ್ಲಿ ಮುದುರಿರುತ್ತದೆ.
- -ಮಡಿಕೇರಿಯ ರಾಜಾಸೀಟ್ ಪುಷ್ಪವನ ಬ್ರಿಟಿಷರ ಕಾಲದ ಸ್ಮಶಾನದ ಮೇಲೆ ಅರಳಿ ನಿಂತಿದೆ. ಅಬ್ಬಿ ಜಲಪಾತ ಮಡಿಕೇರಿಯ ಕೊಚ್ಚೆನೀರನ್ನೇ ಬೆಳ್ನೊರೆಯಾಗಿ ಹೊರಹಾಕುತ್ತಿದೆ. ಗುಡ್ಡದ ಮೇಲೆ ಮನೆ ಕಟ್ಟಲು ಬಯಸುವ ಜೀವಿಗಳು ಮಳೆಗಾಲದಲ್ಲಿ ಬೆಟ್ಟ ಕುಸಿದು ಪ್ರಪಾತ ಸೇರುವ ಆತಂಕದಲ್ಲಿದ್ದಾರೆ. ಹೋಂಸ್ಟೇಗಳೆಂಬ ಪರಿಕಲ್ಪನೆ ದಿಕ್ಕುದೆಸೆಯಿಲ್ಲದೆ ಬೆಳೆದು ಕುಟುಂಬದ ಸಂಬಂಧಗಳನ್ನೇ ನಾಶಮಾಡುತ್ತಿದೆ.
- ಕೊಡಗಿನಿಂದ ಬೆಂಗಳೂರು, ಮೈಸೂರು, ಚೆನ್ನೈ ಅಂತೆಲ್ಲಾ ವಲಸೆ ಹೆಚ್ಚುತ್ತಿದೆ. ಕೊಡಗಿನಲ್ಲಿ ಆಂಧ್ರದ ರೆಡ್ಡಿಗಳು, ತಮಿಳುನಾಡಿನ ಚೆಟ್ಟಿಯಾರ್ಗಳು, ಕೇರಳದ ಟಿಂಬರ್ ಉದ್ಯಮಿಗಳ ಭೂಮಿಗಳು ಹೆಚ್ಚುತ್ತಿವೆ. ಕೊಡಗು ಮುಂದಿನ ದಿನಗಳಲ್ಲಿ ಕೊಡಗಾಗಿ ಉಳಿಯುವುದು ಕಷ್ಟವೇನೋ ಎಂಬ ಕಳವಳ.
- ಒಂದೇ ಒಂದು ಪುಸ್ತಕ ಮಾರಾಟದ ಅಂಗಡಿಯೇ ಇಲ್ಲದ ಕೊಡಗಿನಲ್ಲಿ, ಯಾರಾದರೂ ಪುಸ್ತಕದಂಗಡಿ ತೆರೆಯುವ ಯತ್ನಕ್ಕೆ ಮುಂದಾದಲ್ಲಿ, ಒಂದಿಷ್ಟು ಪುಸ್ತಕ ಪ್ರಿಯರು ಸಮ್ಮೇಳನದ ಹೆಸರಿನಲ್ಲಿ ಹುಟ್ಟಿಕೊಂಡಾರು.
-ಅನಿಲ್ ಎಚ್.ಟಿ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.